ಗಾಂಜಾ ಸಾಂಗ್: ನನ್ನದೇನು ತಪ್ಪಿದೆ? ಸಿಸಿಬಿ ನೋಟೀಸ್ ಬಗ್ಗೆ ಚಂದನ್ ಶೆಟ್ಟಿ ಬೇಸರ


Updated:August 28, 2018, 1:04 PM IST
ಗಾಂಜಾ ಸಾಂಗ್: ನನ್ನದೇನು ತಪ್ಪಿದೆ? ಸಿಸಿಬಿ ನೋಟೀಸ್ ಬಗ್ಗೆ ಚಂದನ್ ಶೆಟ್ಟಿ ಬೇಸರ

Updated: August 28, 2018, 1:04 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 28): ‘ಅಂತ್ಯ’ ಎಂಬ ಇನ್ನೂ ಬಿಡುಗಡೆಯಾಗದ ಸಿನಿಮಾಕ್ಕಾಗಿ ಚಂದನ್ ಶೆಟ್ಟಿ ಹಾಡಿದ “ಗಾಂಜಾ” ಹಾಡು ಈಗ ಕನ್ನಡ ರ‍್ಯಾಪರ್​ನ ಕುತ್ತಿಗೆಗೆ ಬಂದಿದೆ. ಮಾದಕ ವ್ಯಸನಕ್ಕೆ ಪ್ರಚೋದನೆ ನೀಡಿ ಸಮಾಜ ಸ್ವಾಸ್ಥ್ಯಕ್ಕೆ ಕಾರಣವಾಗಿದೆ ಎಂಬ ಆರೋಪವೊಡ್ಡಿ ಸಿಸಿಬಿ ಪೊಲೀಸರು ಚಂದನ್ ಶೆಟ್ಟಿ ಅವರಿಗೆ ನೋಟೀಸ್ ನೀಡಿದ್ಧಾರೆ. ಈ ಬಗ್ಗೆ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಚಂದನ್ ಶೆಟ್ಟಿ ತನಗ್ಯಾಕೆ ನೋಟೀಸ್ ನೀಡಲಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಹಾಡಿದ ಹಾಡಿದು. ಆಗ ತನಗೆ ಇಂಥ ನಿಯಮಗಳ ಬಗ್ಗೆ ಅರಿವಿರಲಿಲ್ಲ. ಅಲ್ಲದೆ, ಈ ಹಾಡಲ್ಲಿ ತಾನು ಸಾಹಿತ್ಯ ಬರೆದಿಲ್ಲ, ವಿಡಿಯೋದಲ್ಲಿ ಎಲ್ಲಿಯೂ ತಾನು ಕಾಣಿಸಿಕೊಂಡಿಲ್ಲ. ತಾನು ಕೇವಲ ಹಾಡಿದ್ದೇನಷ್ಟೇ. ವೈದ್ಯರು ಯಾವುದೇ ಪೇಷೆಂಟ್ಸ್​ಗೆ ಟ್ರೀಟ್ಮೆಂಟ್ ಕೊಡುವಂತೆ ತಾನು ಯಾವುದೇ ಡೈರೆಕ್ಟರ್ ಬಂದು ಕೇಳಿದ್ರೂ ಹಾಡುತ್ತೇನೆ. ಎಲ್ಲರನ್ನೂ ಬಿಟ್ಟು ತನಗೆ ಮಾತ್ರ ಯಾಕೆ ನೋಟೀಸ್ ನೀಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಸುಮ್ಮನೆ ಬ್ಲೈಂಡ್ ಆಗಿ ನೋಟೀಸ್ ಕೊಟ್ಟಿದ್ದಾರೆ ಎಂದು ಮಾಜಿ ಬಿಗ್ ಬಾಸ್ ಸ್ಪರ್ಧಿ ಚಂದನ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ವಿವಾದಕ್ಕೆ ಗುರಿಯಾಗಿರುವ ಗಾಂಜಾ ಹಾಡನ್ನು ಚಂದನ್ ಶೆಟ್ಟಿ ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ.

“ಯೂಟ್ಯೂಬ್​ನಲ್ಲಿ ಹುಡುಕಿದರೆ ವಿವಿಧ ಭಾಷೆಯಲ್ಲಿ ಇಂಥ ಹಲವು ಹಾಡುಗಳು ಕಾಣಿಸುತ್ತವೆ. ಪ್ರಚೋದನೆಗೆಂದು ಯಾರೂ ಮಾಡಿರುವುದಿಲ್ಲ. ಎಂಟರ್ಟೈನ್ಮೆಂಟ್ ದೃಷ್ಟಿಯಿಂದ ಮಾತ್ರ ಈ ಹಾಡುಗಳನ್ನ ಮಾಡಿರುತ್ತಾರೆ. ಹಿಂದಿನ ಕಾಲದಿಂದಲೂ ಇಂಥ ಹಾಡುಗಳು ಇದ್ದವು. ಶಿಶುನಾಳ ಷರೀಫರ ಕಾಲದಲ್ಲೂ ಇದನ್ನ ಬಳಸಲಾಗಿತ್ತು. ಎಷ್ಟೋ ಸಿನಿಮಾಗಳಲ್ಲಿ ಮರ್ಡರ್, ರಾಬರಿ ಸೀನ್​ಗಳು ಇರುತ್ತವೆ. ಅವನ್ನು ನೋಡಿ ಜನರು ಪ್ರಚೋದನೆಗೆ ಯಾಕೆ ಒಳಗಾಗಲ್ಲ. ಅಂಥ ದೃಶ್ಯಗಳಿಗೆ ಯಾಕೆ ಕತ್ತರಿ ಹಾಕುವುದಿಲ್ಲ?” ಎಂದು ಚಂದನ್ ಶೆಟ್ಟಿ ಪ್ರಶ್ನಿಸುತ್ತಾರೆ.

ಅಂತ್ಯ ಎಂಬ ಸಿನಿಮಾಕ್ಕಾಗಿ ನಿರ್ದೇಶಕ ಮುತ್ತು ಎಂಬುವರು ಸಾಹಿತ್ಯ ರಚಿಸಿದ್ದ ಈ ಹಾಡು ಮೂರು ವರ್ಷಗಳ ಹಿಂದೆ ರಿಲೀಸ್ ಆಗಿತ್ತಂತೆ. ಚಂದನ್ ಶೆಟ್ಟಿ ಅವರು ಹೇಳುವಂತೆ ಈ ಸಿನಿಮಾದಲ್ಲಿ ಮಾದಕ ವ್ಯಸನದ ವಿರುದ್ಧ ಒಳ್ಳೆಯ ಸಾಮಾಜಿಕ ಸಂದೇಶ ಇದೆ. ಆದರೆ, ಈ ಸಿನಿಮಾ ಇನ್ನೂ ಬಿಡುಗಡೆಯ ಭಾಗ್ಯ ಕಂಡಿಲ್ಲ. ಚಿತ್ರೀಕರಣ ಕೂಡ ಪೂರ್ಣಗೊಂಡಿಲ್ಲವಂತೆ.
Loading...

ಯಾರೂ ಭಯಪಡಬೇಡಿ. ತನ್ನನ್ನು ಯಾರೂ ಅರೆಸ್ಟ್ ಮಾಡಿಲ್ಲ. ಸಿಸಿಬಿ ಪೊಲೀಸರಿಂದ ಕೇವಲ ನೋಟೀಸ್ ಬಂದಿದೆ. ಕಾನೂನು ಪ್ರಕಾರ ವಿಚಾರಣೆಗೆ ಹೋಗಿ ಬರುತ್ತೇನೆ. ಈ ಹಾಡನ್ನು ಕೇವಲ ಎಂಟರ್ಟೈನ್ಮೆಂಟ್ ದೃಷ್ಟಿಯಿಂದ ನೋಡಿ. ಇದರಿಂದ ಯಾರೂ ಪ್ರಚೋದನೆಗೆ ಒಳಗಾಗಬೇಡಿ ಎಂದು ಚಂದನ್ ಶೆಟ್ಟಿ ಅವರು ಇದೇ ವೇಳೆ, ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಚಂದನ್ ಶೆಟ್ಟಿ ಅವರು ಕನ್ನಡದ ಬಹುಬೇಡಿಕೆಯ ರ‍್ಯಾಪರ್ ಆಗಿದ್ದಾರೆ. ಟೆಕಿಲಾ, ಪಕ್ಕಾ ಚಾಕೊಲೇಟ್ ಗರ್ಲ್, ಲೌಡ್​ಸ್ಪೀಕರ್, ಗಾಂಚಾಲಿ ಬಿಡಿ, ಮೂರೇ ಮೂರು ಪೆಗ್ಗಿಗೆ ಇತ್ಯಾದಿ ಅವರ ಕನ್ನಡ ರ‍್ಯಾಪ್​ಗಳು ಬಹಳ ಜನಪ್ರಿಯವಾಗಿವೆ. ಕಳೆದ ಸೀಸನ್​ನ ಬಿಗ್ ಬಾಸ್​ನಲ್ಲೂ ಅವರು ಪಾಲ್ಗೊಂಡಿದ್ದರು. ಈಗ ಸಾಕಷ್ಟು ಸಿನಿಮಾಗಳಿಗೆ ಸಂಗೀತ ಮತ್ತು ಹಾಡು ಹಾಡುತ್ತಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ