ಚಾಮರಾಜನಗರ (ಜುಲೈ 27): ನಟ ದರ್ಶನ್ ಸಿನಿಮಾ ಜತೆ ಜತೆಗೆ ಅರಣ್ಯ ಹಾಗೂ ಪ್ರಾಣಿಗಳ ರಕ್ಷಣೆ ಕಾಯಕದಲ್ಲೂ ತೊಡಗುತ್ತಾರೆ. ಈ ಮೊದಲು ಸಮಯ ಸಿಕ್ಕಾಗೆಲ್ಲ ವನ್ಯಜೀವಿ ಛಾಯಾಗ್ರಹಣಕ್ಕೆ ತೆರಳುತ್ತಿದ್ದರು. ಆದರೆ, ಕೊರೋನಾ ವೈರಸ್ ಇರುವುದರಿಂದ ಅದ್ಯಾವುದೂ ಸಾಧ್ಯವಾಗುತ್ತಿಲ್ಲ. ಹಾಗಂತ ದರ್ಶನ್ ಸುಖಾ ಸುಮ್ಮನೆ ಕೂತಿಲ್ಲ. ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಲೆಮಹದೇಶ್ವರಬೆಟ್ಟದ ಕಳ್ಳಭೇಟೆ ತಡೆ ಶಿಬಿರವೊಂದಕ್ಕೆ ಭೇಟಿ ನೀಡಿ ಗಿಡ ನೆಟ್ಟು ಅರಣ್ಯ ಸಿಬ್ಬಂದಿಯಲ್ಲಿ ಹುರುಪು ತುಂಬಿದ್ದಾರೆ
ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ವನ್ಯಧಾಮದ ಕೊಳ್ಳೇಗಾಲ ಬಫರ್ ಝೋನಿನ ಸತ್ತೇಗಾಲ ಬಳಿ ಇರುವ ದೊಡ್ಡಮಾಕಳ್ಳಿ ಕಳ್ಳಭೇಟೆ ತಡೆ ಭೇಟೆ ಶಿಬಿರಕ್ಕೆ ನಿನ್ನೆ ದಿಡೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ ನಟ ದರ್ಶನ್. ಅರಣ್ಯ ಸಿಬ್ಬಂದಿಯೊಂದಿಗೆ ವನ್ಯಸಂಪತ್ತು ಸಂರಕ್ಷಣೆಯ ಬಗ್ಗೆ ಕೆಲ ಹೊತ್ತು ಸಂವಹನ ನಡೆಸಿದ್ದಾರೆ. ಇದೇ ವೇಳೆ ಶಿಬಿರದ ಬಳಿ ಗಿಡ ನೆಟ್ಟು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಭೇಟಿ ವೇಳೆ ಹಾಸ್ಯನಟ ಚಿಕ್ಕಣ್ಣ ಕೂಡ ದರ್ಶನ್ ಗೆ ಸಾಥ್ ನೀಡಿದ್ದಾರೆ.
ರೈತರನ್ನು ಅರಣ್ಯ ಕೃಷಿಯತ್ತ ಆಕರ್ಷಿಸಲು ಅರಣ್ಯ ಇಲಾಖೆ ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿದೆ. ಅರಣ್ಯ ಇಲಾಖೆಯ ಯೋಜನೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ನಟ ದರ್ಶನ್ ಗೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪಅರಣ್ಯಸಂರಕ್ಷಣಾಧಿಕಾರಿ ಯೇಡುಕೊಂಡಲು ಧನ್ಯವಾದ ಹೇಳಿದ್ದಾರೆ.
ಅತ್ಯುತ್ತಮ ವನ್ಯಜೀವಿ ಫೋಟೋಗ್ರಾಫರ್ ಕೂಡ ಆಗಿರುವ ನಟ ದರ್ಶನ್ ತಾವು ತೆಗೆದ ಛಾಯಾಚಿತ್ರಗಳನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಅರಣ್ಯಸಿಬ್ಬಂದಿಯ ಕ್ಷೇಮ ನಿಧಿಗೆ ನೀಡುತ್ತಾ ಬಂದಿದ್ದಾರೆ. ತಮ್ಮ ಬಿಡುವಿಲ್ಲದ ಶೂಟಿಂಗ್ ನಡುವೆಯು ಆಗಾಗ್ಗೆ ಅರಣ್ಯ ಪ್ರದೇಶಗಳಿ ಭೇಟಿ ನೀಡುವ ದರ್ಶನ್ ಅರಣ್ಯ ಸಿಬ್ಬಂದಿಯೊಂದಿಗೆ ಚರ್ಚೆ ಸಂವಾದ ನಡೆಸುತ್ತಾ ಅವರ ಕಷ್ಟ ಸುಖ ವಿಚಾರಿಸುತ್ತಾ ಸಹಾಯ ಹಸ್ತ ಚಾಚುತ್ತಾ ನೈತಿಕ ಸ್ಥೈರ್ಯ ತುಂಬುತ್ತಾ ಬಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ