ಮುನ್ನೆಲೆಗೆ ಬಂದ ಬಿಗ್ ಬಾಸ್ ಸ್ಪರ್ಧಿಗಳ ಕಿತ್ತಾಟ: ಸಂಬರಗಿ ವಿರುದ್ಧ ದೂರು ದಾಖಲಿಸಿದ ಚಂದ್ರಚೂಡ್; ದೂರಲ್ಲೇನಿದೆ?

Chandrachud vs Sambargi – ಪ್ರಶಾಂತ್ ಸಂಬರ್ಗಿ ಒಬ್ಬ ಸುಳ್ಳುಗಾರ, ಬ್ಲ್ಯಾಕ್ ಮೇಲರ್. ಅವರ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಕೋರಿ ಚಕ್ರವರ್ತಿ ಚಂದ್ರಚೂಡ್ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದಾಗ ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರ್ಗಿ

ಬಿಗ್ ಬಾಸ್ ಮನೆಯಲ್ಲಿದ್ದಾಗ ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರ್ಗಿ

  • Share this:
ಬೆಂಗಳೂರು, ಸೆ. 15: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಎಂದು ಹೇಳಿಕೊಂಡು ಓಡಾಡುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಂಗಿ (Prashant Sambargi) ವಿರುದ್ಧ ನಿರ್ದೇಶಕ ಹಾಗೂ ಬರಹಗಾರ ಚಕ್ರವರ್ತಿ ಚಂದ್ರಚೂಡ್ (Chakravarti Chandrachud) ಕೆಂಡಮಂಡಲವಾಗಿದ್ದಾರೆ. ರಾಜಕಾರಣಿ ಹಾಗೂ ಸಿನಿರಂಗದ ನಟ-ನಟಿಯರ ವಿರುದ್ಧ ಸೂಕ್ತ ಸಾಕ್ಷ್ಯಧಾರವಿಲ್ಲದೆ ಸುಳ್ಳು ಆರೋಪ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಪ್ರಶಾಂತಿ ಸಂಬರ್ಗಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಚಕ್ರವರ್ತಿ ಚಂದ್ರಚೂಡ್ ಮನವಿ ಮಾಡಿದ್ದಾರೆ.

ಪ್ರಶಾಂತ್ ಸಂಬರಗಿ ವಿರುದ್ಧ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಚೂದ್, ಕಳೆದ ಮೂರು ವರ್ಷಗಳಿಂದಲೂ ರಾಜಕಾರಣಿ, ಸಿನಿಮಾ ನಟ-ನಟಿಯರು ಸೇರಿ ಇನ್ನಿತರ ಪ್ರಭಾವಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರವಿಲ್ಲದಿದ್ದರೂ ಅವಹೇಳನಕಾರಿ ಮಾತನಾಡಿ ಇಲ್ಲಸಲ್ಲದ ಆರೋಪ ಮಾಡುತ್ತಾ ಬಂದಿದ್ದಾರೆ‌. ಈ ಮೂಲಕ ಮಾಧ್ಯಮಗಳ ಮುಖಾಂತರ ಪ್ರಚಾರ ಗಿಟ್ಟಿಸಿಕೊಂಡು ಪರೋಕ್ಷವಾಗಿ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.‌ ಪ್ರಶಾಂತ್ ಸಂಬರಂಗಿ ಬಳಿ ನಿಜವಾದ ದಾಖಲಾತಿ ಇದ್ದರೆ ಅದನ್ನು‌ ಪೊಲೀಸರಿಗೆ ನೀಡಲಿ. ಅದು ಬಿಟ್ಟು ಸುಖಾಸುಮ್ಮನೆ‌ ಆಪಾದನೆ ಮಾಡುವುದು ಸರಿಯಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರ ಮನೆ ಮೇಲೆ ದಾಳಿ ನಡೆಸಿ ದಾಖಲಾತಿ ಇರುವ ಶೋಧ ನಡೆಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದೇನೆ. ಆಯುಕ್ತರು ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಸಂಬರಗಿ ವಿರುದ್ಧ ನೀಡಿದ ದೂರಿನಲ್ಲಿ ಏನಿದೆ?:

ಯಾವುದೇ ಆಧಾರವಿಲ್ಲದೆ ನಟ- ನಟಿಯರನ್ನು ಟಾರ್ಗೆಟ್ ಮಾಡುವ ಸಂಬರಂಗಿ 3 ವರ್ಷಗಳ ಹಿಂದೆ ಶೃತಿ ಹರಿಹರನ್ ಅವರಿಗೆ ಕ್ರೈಸ್ತ ಮಿಷನರಿಯಿಂದ ಕೊಟ್ಯಂತರ ಹಣ ಸಂದಾಯವಾಗಿದೆ. ಅದೇ ಹಣ ಬಳಸಿಕೊಂಡ ದೇಶದ್ರೋಹ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿ ಪೊಲೀಸ್ ಠಾಣೆಗೆ ದೂರು ನೀಡದೆ ನುಣುಚಿಕೊಂಡಿದ್ದರು‌. ಈ ಸಂಬಂಧ ನಟಿ ಶೃತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದೇ ರೀತಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಅವರು ತೆರಿಗೆ ಹಣದಲ್ಲಿ ಶ್ರೀಲಂಕಾದ ಕ್ಯಾಸಿನೋಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಾಖಲಾತಿ ನೀಡದೆ ಪರೋಕ್ಷವಾಗಿ ಬ್ಲ್ಯಾಕ್ ಮೇಲ್ ತಂತ್ರ ಪ್ರಯೋಗಿಸಿದ್ದರು. ಸ್ಯಾಂಡಲ್ ವುಡ್​ನಲ್ಲಿ‌ ಕೆಲ ನಟಿಯರು ಡ್ರಗ್ಸ್ ನಿಂದಲೇ ಹಣ ಸಂಪಾದನೆ ಮಾಡುತ್ತಾರೆ. ಅದರ ಮೂಲ ಗೊತ್ತು ಎಂದು ಹೇಳಿದ್ದರು. ಇದರಿಂದ ಕನ್ನಡ ಸಿನಿಮಾರಂಗದ ಮಾನ ದೇಶಾದ್ಯಂತ ಹರಾಜು ಹಾಕಿದ ಹಾಗೆ ಆಗಿದೆ. ಇದುವರೆಗೂ ಮಾಧ್ಯಮಗಳ ಮುಂದೆ ಮಾಡಿದ ಆರೋಪಗಳು ಹೇಳಿಕೆಗಳಿಗೆ ಸೂಕ್ತ. ಆರೋಪಕ್ಕೆ ದಾಖಲೆಗಳನ್ನು ಕೊಟ್ಟಿಲ್ಲ ಎಂದು ಸಂಬರಗಿ ವಿರುದ್ಧ ಚಂದ್ರಚೂಡ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Siddaramaiah- ತನ್ನ ಬಳಿ ಮೊಬೈಲ್ ಯಾಕಿಲ್ಲವೆಂದು ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ; ಸದನದ ಸ್ವಾರಸ್ಯಗಳು

ನಿರೂಪಕಿ ಅನುಶ್ರೀ ಮಂಗಳೂರು ಹಾಗೂ ಬೆಂಗಳೂರಿನಲ್ಲಿ  ಕೋಟ್ಯಂತರ ರೂ. ಮೌಲ್ಯದ ಮನೆ ಕಟ್ಟಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಇತ್ತೀಚೆಗೆ ಆರೋಪಿಸಿದ್ದರು. ಇದರ ಹಿಂದೆ ರಾಜಕೀಯ ಪ್ರಭಾವ ಅಡಗಿದೆ. ಶುಗರ್ ಡ್ಯಾಡಿ ಎಂದು ಹೇಳುವ ಮೂಲಕ‌ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿಯೊಬ್ಬರ ಆಡಿಯೊ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ಬಗ್ಗೆಯೂ ದಾಖಲೆಗಳನ್ನು ಯಾವೊಬ್ಬ ಅಧಿಕಾರಿಗಳಿಗೂ ನೀಡಿಲ್ಲ. ಅದರ ಕುರಿತಾಗಿಯೂ ದಾಖಲೆಗಳು ನೀಡಿಲ್ಲ. ಈ ಎಲ್ಲಾ ಪ್ರಕರಣ ಗಮನಿಸಿದಾಗ ಅವರು ಬ್ಲಾಕ್ ಮೇಲ್ ದಂಧೆಯಲ್ಲಿ ತೊಡಗಿದ್ದಾರೆ ಅಂತ ಅನುಮಾನ ಮೂಡಿಸಿದೆ.‌ ಸಾಮಾಜಿಕ‌ ಪಿಡುಗು ಹಾಗೂ ಅನೈತಿಕತೆ ವಿಚಾರವನ್ನು ಸ್ವಂತ ಪ್ರಚಾರಕ್ಕೆ ಬಳಸಿಕೊಂಡು, ಬ್ಲ್ಯಾಕ್ ಮೇಲ್ ದಂಧೆಗೆ ಬಳಸಿಕೊಂಡು ಪೊಲೀಸರ ತನಿಖೆ ವೇಳೆಯಲ್ಲಿ ತನಿಖೆ ದಿಕ್ಕು ತಪ್ಪಿಸುವ ಕೆಲಸ ಕಳೆದ‌ ಮೂರು ವರ್ಷಗಳಿಂದ ಮಾಡುತ್ತಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ‌.‌ ಈ ನಿಟ್ಟಿನಲ್ಲಿ‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ದೂರಿನಲ್ಲಿ ಆಯುಕ್ತರಿಗೆ ಚಂದ್ರಚೂಡ್ ಮನವಿ ಮಾಡಿದರು.

ಕುತೂಹಲವೆಂದರೆ ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರಗಿ ಅವರು ಈ ಬಾರಿಯ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು.

ವರದಿ: ಮಂಜುನಾಥ್ ಎನ್
Published by:Vijayasarthy SN
First published: