ಬಾಲಿವುಡ್ ಕಿಂಗ್ ಖಾನ್ ಶಾರುಖ್ (Shah Rukh Khan) ಅಭಿನಯದ ಪಠಾಣ್ ಸಿನಿಮಾ ಹೇಗಿದೆ? ಈ ಚಿತ್ರದಲ್ಲಿ ದೇಶ ಭಕ್ತಿಯ ಕಥೆ ಇದೆಯೇ? ಶಾರುಖ್ ಖಾನ್ ಈ ಚಿತ್ರದಲ್ಲಿ ಏನು ಪಾತ್ರ ಮಾಡಿದ್ದಾರೆ? ದೀಪಿಕಾ ಪಡುಕೋಣೆ (Deepika Padukone) ಈ ಚಿತ್ರದಲ್ಲಿ ಪಾಕಿಸ್ತಾನಿ ಹುಡುಗಿಯಾ? ಜಾನ್ ಅಬ್ರಹಾಂ ಚಿತ್ರದಲ್ಲಿ ರಾ ಏಜೆಂಟ್ ಅಲ್ವೇ? ಹಾಗಾದ್ರೆ, ಶಾರುಖ್ ಖಾನ್ ಇಲ್ಲಿ ಐಎಸ್ಐ ಏಜೆಂಟ್ ಪಾತ್ರ ಮಾಡಿದ್ದಾರಾ? ನಿಜವಾಗ್ಲೂ ಪಠಾಣ್ (Pathaan Cinema) ಚಿತ್ರದಲ್ಲಿ ಏನಿದೆ? ಸಲ್ಮಾನ್ ಖಾನ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರಂತೆ. ಹೌದು? ಈ ಎಲ್ಲ ವಿಷಯಗಳನ್ನು ತಿಳಿಯಲು ಪಠಾಣ್ ಚಿತ್ರದ (Pathaan Cinema Review) ರಿವ್ಯೂ ಇಲ್ಲಿದೆ.
ಪಠಾಣ್ ದಿ Smallpox ವಾರ್ ಸಿನಿಮಾ
ಪಠಾಣ್ ಸಿನಿಮಾ ಮೇಲ್ನೋಟಕ್ಕೆ ಒಂದು ಎಂಟರ್ಟೈನಿಂಗ್ ಸಿನಿಮಾ ರೀತಿ ಕಾಣುತ್ತದೆ. ಆದರೆ ಈ ಚಿತ್ರದ ಕಥೆ ತುಂಬಾ ಆಳಕ್ಕಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಬೇಕಿಲ್ಲ. ಎಲ್ಲವನ್ನೂ ಇಲ್ಲಿ ಎಳೆ ಎಳೆಯಾಗಿಯೇ ಬಿಚ್ಚಿಡಲಾಗಿದೆ. ಪಕ್ಕದ ರಾಷ್ಟ್ರ ಪಾಕಿಸ್ತಾನ ನಡೆಸೋ biological war ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಪಠಾಣ್ ಒಂದು ವಿಶೇಷ ಸಿನಿಮಾ ಆಗಿ ನಿಮ್ಮ ಮುಂದೆ ಬಂದಿದೆ. ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಈ ಚಿತ್ರದಲ್ಲಿ ಭಾರತ ಮತ್ತು ಪಾಕಿಸ್ತಾನದ biological war ಮೇಲೆ ಕಥೆ ಮಾಡಿದ್ದಾರೆ. ಈ ಕಥೆ ನಿಜಕ್ಕೂ ನಮ್ಮಲ್ಲಿ ಭಯ ಹುಟ್ಟಿಸುತ್ತದೆ. ಸಣ್ಣ ಆತಂಕವನ್ನೂ ಹುಟ್ಟಿಸುತ್ತದೆ.
370 ಮಸೂದೆ ರದ್ದು-ಸಿಟ್ಟಿಗೆದ್ದ ಪಾಕ್ ಕುತಂತ್ರ
ಪಠಾಣ್ ಚಿತ್ರದಲ್ಲಿ ಈ ಒಂದು ವಿಷಯವೇ ಇಡಿ ಕಥೆಗೆ ಮೂಲ ಆಗಿದೆ. ಕಾಶ್ಮೀರ ಬೇಕು ಅನ್ನೋ ಪಾಕಿಸ್ತಾನ ಏನೆಲ್ಲ ಮಾಡುತ್ತದೆ ಅನ್ನೋದನ್ನು ಈ ಕಥೆಯಲ್ಲಿ ಚಿತ್ರಿಸಲಾಗಿದೆ. ನಿಜ, ಈ ಒಂದು ಕಥೆಯಲ್ಲಿ ಪಾಕಿಸ್ತಾನ biological war ಮಾಡುತ್ತದೆ. ಅದಕ್ಕಾಗಿಯೇ Smallpox ವೈರಸ್ನ್ನ ಇನ್ನಷ್ಟು ಪ್ರಬಲ ಅಸ್ತ್ರವನ್ನಾಗಿಸುತ್ತದೆ. ರಷ್ಯಾ ದೇಶದಲ್ಲಿರೋ ಈ ವೈರಸ್ ತಂದು ದೆಹಲಿ ಮೇಲೆ ಬಯಲಾಜಿಕಲ್ ವಾರ್ ಶುರು ಮಾಡುತ್ತದೆ. ಇದು ಪಠಾಣ್ ಚಿತ್ರದ ಒಟ್ಟು ತಿರುಳು.
ಪಠಾಣ್ ಅನಾಥ-ಭಾರತವೇ ಈತನ ತಾಯಿ-ತಂದೆ
ಪಠಾಣ್ ಒಬ್ಬ ಅನಾಥ ಹುಡುಗ. ಈತನಿಗೆ ದೇಶವೇ ಎಲ್ಲ. ಸೇನೆ ಸೇರೋ ಪಠಾಣ್, ಮುಂದೆ RAW ಏಜೆಂಟ್ ಆಗುತ್ತಾನೆ. ಈ ಪಠಾಣ್ ಹೋರಾಡೋದು ಪಾಕಿಸ್ತಾನದ ವಿರುದ್ಧ, ಪಾಕ್ ಕುತಂತ್ರದ ವಿರುದ್ಧ.
ಶಾರುಖ್ ಖಾನ್ ಇಲ್ಲಿ ದೇಶ ಭಕ್ತ ಪಠಾಣ್ ಆಗಿದ್ದಾರೆ. ದೇಶ ನಮಗೆ ಏನು ಮಾಡಿದೆ ಅನ್ನೋದಲ್ಲ, ನಾವು ದೇಶಕ್ಕೆ ಏನು ಮಾಡುತ್ತೇವೆ ಅನ್ನೋದೇ ಈತನ ಮುಖ್ಯ ಧ್ಯೇಯ. ಇದು ಈ ಪಠಾಣ್ ಮನಸ್ಥಿತಿ. ಇಂತಹ ಮನಸ್ಥಿತಿಯ ಪಠಾಣ್ಗೆ ಇಲ್ಲಿ ಪಾಕಿಸ್ತಾನ ಐಎಸ್ಐ ಏಜೆಂಟ್ ಲವರ್ ಅನ್ನೋದೇ ಗಮನಾರ್ಹ.
ರುಬಾಯಿ ಎಂಬ ಪಾಕಿಸ್ತಾನ ಐಎಸ್ಐ ಏಜೆಂಟ್ ದೀಪಿಕಾ
ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಪಾಕಿಸ್ತಾನದ ನಿವಾಸಿಯ ಪಾತ್ರ ನಿರ್ವಹಿಸಿದ್ದಾರೆ. ಇದಕ್ಕೂ ಹೆಚ್ಚಾಗಿಯೇ ಪಾಕ್ ಪರ ಐಎಸ್ಐ ಏಜೆಂಟ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಈಕೆ ಈ ಚಿತ್ರದಲ್ಲಿ ಪಠಾಣ್ ಪ್ರೀತಿಸೋ ಪ್ರೇಯಸಿಯೂ ಆಗಿದ್ದಾರೆ.
ಪಠಾಣ್ ಪ್ರೀತಿಯಲ್ಲಿ ಬೀಳೋ ಕಥೆ ಇಲ್ಲಿ ಸ್ಪೆಷಲ್ ಅನಿಸೋದಿಲ್ಲ. ಈ ಹಿಂದಿನ ಟೈಗರ್ ಜಿಂದಾ ಹೈ ಮತ್ತು ವಾರ್ ಚಿತ್ರದ ರೀತಿಯಲ್ಲಿಯೇ ಇಲ್ಲೂ ಲವ್ ಸ್ಟೋರಿ ಇದೆ ಅಷ್ಟೆ. ಆದರೆ ಇಲ್ಲಿ ಇಂಡಿಯಾದ ರಾ ಏಜೆಂಟ್ ಪಠಾಣ್ ಮತ್ತು ಐಎಸ್ಐ ಏಜೆಂಟ್ ರುಬಾಯಿ ಒಟ್ಟಿಗೆ ಒಂದು ಮಿಷನ್ ಮೇಲೆ ಕೆಲಸ ಮಾಡೋದೇ ವಿಶೇಷ.
ಪಠಾಣ್ ಚಿತ್ರದಲ್ಲಿ "ರಕ್ತಬೀಜ" ಎಂಬ ವೈರಸ್ ವಾರ್
ಪಠಾಣ್ ಚಿತ್ರದಲ್ಲಿ ರಕ್ತಬೀಜ ವೈರಸ್ ಕಥೆ ಇದೆ. ಇದು ಇಡೀ ಚಿತ್ರದ ಪ್ರಮುಖ ಅಂಶವೂ ಆಗಿದೆ. ಪಾಕಿಸ್ತಾನ ನೇಮಿಸಿರೋ ಕಾಂಟ್ರ್ಯಾಕ್ಟ್ ಟೆರರಿಸ್ಟ್ಗಳು ಮಾಡೋ ಪ್ಲಾನ್ ಇದಾಗಿದೆ. ಇದನ್ನ ಭೇದಿಸೋದೇ ಇಡೀ ಚಿತ್ರದ ಕಥೆ ಅಂತಲೇ ಹೇಳಬಹುದು.
ರಕ್ತಬೀಜ ಎಂಬುದು ಇಲ್ಲಿ Smallpox ವೈರಸ್ ಆಗಿದೆ. ಇದನ್ನ ಕನ್ನಡದ ನಟ ಪ್ರಕಾಶ್ ಬೆಳವಾಡಿ ಇಲ್ಲಿ ಒಬ್ಬ ಸೈಂಟಿಸ್ಟ್ ಆಗಿಯೇ ಡೆವೆಲಪ್ ಮಾಡುತ್ತಾರೆ. ಆದರೆ ಇವರು ಇಲ್ಲಿ ವಿಲನ್ ಅಲ್ವೇ ಅಲ್ಲ. ಈ ಕೆಲಸ ಮಾಡುವಂತೆ ಜಿಮ್ ಹೇಳಿರುತ್ತಾನೆ.
ಭಾರತದ ವಿರುದ್ಧ ತಿರುಗಿ ಬೀಳೋ RAW ಏಜೆಂಟ್ ಜಿಮ್
ಜಾನ್ ಅಬ್ರಹಾಂ ಇಲ್ಲಿ ಜಿಮ್ ಪಾತ್ರ ನಿರ್ವಹಿಸಿದ್ದಾರೆ. RAW ಮೂಲಕ ಭಾರತಕ್ಕೆ ಕೆಲಸ ಮಾಡೋ ವೀರಸೇನಾನಿ ಪಾತ್ರ ಮಾಡಿದ್ದಾರೆ. ದೇಶ ತನಗೆ ಏನೂ ಮಾಡಲೇ ಇಲ್ಲ ಎಂದು ತಿರುಗಿ ಬೀಳೋ ಪಾತ್ರದಲ್ಲಿ ಜಾನ್ ಇಲ್ಲಿ ಅಭಿನಯಿಸಿದ್ದಾರೆ.
ಪಠಾಣ್ ಚಿತ್ರದಲ್ಲಿ ಈ ಒಂದು ಅಂಶ ಹೆಚ್ಚು ಗಮನಕ್ಕೆ ಬರುತ್ತದೆ. ದೇಶಕ್ಕಾಗಿ ಜೀವ ಕೊಡುವ ಸೇನಾನಿಗಳಿಗೆ ಬೆಲೆಯೇ ಇಲ್ವೇ ಅನ್ನೋದನ್ನು ಇಲ್ಲಿ ತೋರಿಸಲಾಗಿದೆ. ಅದರ ಜೊತೆಗೆ ವೀರಸೇನಾನಿ ತಿರುಗಿ ಬಿದ್ದರೆ ಏನಾಗುತ್ತದೆ ಅನ್ನೋ ಆತಂಕವನ್ನೂ ಇಲ್ಲಿ ತೋರಿಸಲಾಗಿದೆ.
ಪಠಾಣ್ ಚಿತ್ರದಲ್ಲಿ ಕರಣ್ ಅರ್ಜುನ್ ಸಖತ್ ಓಟ
ಪಠಾಣ್ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಇದ್ದಾರೆ. ಈ ಹಿಂದಿನ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್ ವೀರಸೇನಾನಿ ಆಗಿ ಕಾಣಿಸಿಕೊಂಡಿದ್ದರು. ಅದೇ ಪಾತ್ರವೇ ಈ ಕಥೆಗೂ ಕನೆಕ್ಟ್ ಮಾಡಲಾಗಿದೆ.
ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಈ ಚಿತ್ರದಲ್ಲಿ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ. ರಷ್ಯಾದ ಸೋಲ್ಜರ್ಗಳನ್ನ ಹೊಡೆದು ಹಾಕೋ ಟ್ರೈನ್ ಫೈಟ್ ಇಲ್ಲಿ ನೋಡಗರಲ್ಲಿ ರೋಮಾಂಚನ ಮೂಡಿಸುತ್ತದೆ.
ಇದನ್ನೂ ಓದಿ: Pathaan Row: ಪಠಾಣ್ ಸಿನಿಮಾ ವಿರೋಧಿಸಿ ಪ್ರತಿಭಟನೆ, ಥಿಯೇಟರ್ ಮೇಲೆ ಕಲ್ಲು ತೂರಾಟ
ಡಿಂಪಲ್ ಕಪಾಡಿಯಾ ಈ ಚಿತ್ರದಲ್ಲಿ ಪಠಾಣ್ ಬಾಸ್ ಆಗಿ ಅಭಿನಯಿಸಿದ್ದಾರೆ. ಇವರ ಪಾತ್ರವೂ ಇಲ್ಲಿ ವಿಶೇಷವಾಗಿದೆ. ದೇಶ ಉಳಿಸಲು ಹೋರಾಡುವ ಬಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ, ಪಠಾಣ್ ಒಂದು ದೇಶ ಭಕ್ತಿಯ ಸಿನಿಮಾನೇ ಆಗಿದೆ. ಆದರೆ ಇದನ್ನ ಎಲ್ಲರೂ ಒಪ್ಪಿಕೊಳ್ತಾರಾ ಅನ್ನೋದೇ ಪ್ರಶ್ನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ