ಈ ಸಿನಿಮಾ ಮಂದಿಗಳ ಪ್ರೀತಿ ಮತ್ತು ಮದುವೆಗಳು ಯಾವಾಗ ಶುರುವಾಗುತ್ತವೆ ಮತ್ತು ಯಾವಾಗ ಕೊನೆಗೊಳ್ಳುತ್ತವೆ ಅಂತ ಬಹುಶಃ ಯಾರಿಂದಾನೂ ಊಹಿಸುವುದಕ್ಕೆ ಸಾಧ್ಯವಾಗುವುದಿಲ್ಲ.ಕೆಲವೊಂದು ಬಾಲಿವುಡ್ನ ಹಳೆಯ ಜೋಡಿಗಳು (Bollywood Oldest Couple) ಅನೇಕ ವರ್ಷಗಳ ಉತ್ತಮ ವೈವಾಹಿಕ ಜೀವನವನ್ನು (Married Life) ಹೊಂದಿದ್ದರೆ, ಇನ್ನೂ ಕೆಲವು ಸ್ಟಾರ್ ಜೋಡಿಗಳು ಮದುವೆಯಾಗಿ ವರ್ಷ ತುಂಬುವಷ್ಟರಲ್ಲಿ ಜಗಳವಾಡಿ, ವಿಚ್ಛೇದನಕ್ಕೆ (Divorce) ಅಂತ ಕೋರ್ಟ್ ಮೆಟ್ಟಿಲು ಹತ್ತಿರುತ್ತಾರೆ ಅಂತ ಹೇಳಬಹುದು.
ಒಟ್ಟಿನಲ್ಲಿ ಹೇಳುವುದಾದರೆ, ಇತ್ತೀಚೆಗೆ ಈ ಬಾಲಿವುಡ್ ನಲ್ಲಿ ಎಷ್ಟು ಬೇಗನೆ ತಮ್ಮ ಸಹನಟ ಅಥವಾ ಸಹನಟಿಯ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೋ, ಮದುವೆ ಆಗುತ್ತಾರೋ, ಅಷ್ಟೇ ವೇಗವಾಗಿ ಆ ಸಂಬಂಧದಿಂದ ಹೊರ ಬಂದಿರುವ ಅನೇಕ ಸ್ಟಾರ್ ಜೋಡಿಗಳ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇವೆ ಅಂತ ಹೇಳಬಹುದು.
ಸೆಲೆಬ್ರಿಟಿಗಳ ನಿಜ ಜೀವನದ ಪ್ರೇಮಕಥೆಗಳು ಮತ್ತು ವಿವಾಹಗಳು ಕೆಲವೊಮ್ಮೆ ಜೀವಿತಾವಧಿಯವರೆಗೆ ಇರುತ್ತವೆ ಮತ್ತು ಇನ್ನೂ ಕೆಲವು ಸಂದರ್ಭಗಳಲ್ಲಿ ಅವು ಒಂದು ವರ್ಷದಲ್ಲಿಯೇ ಮುರಿದು ಬೀಳುತ್ತವೆ.
‘ನೀ ಇಲ್ಲದೆ ನಾನಿರಲು ಸಾಧ್ಯವಿಲ್ಲ’ ಅಂತ ಶುರುವಾದ ಪ್ರೀತಿ ಕೇವಲ ಒಂದು ವರ್ಷದೊಳಗೆ ‘ನಿನ್ನ ಜೊತೆ ಇನ್ನೂ ಇರಲು ಸಾಧ್ಯವಿಲ್ಲ’ ಅನ್ನೋವಷ್ಟರ ಮಟ್ಟಿಗೆ ಸಂಬಂಧ ಹಾಳಾಗಿರುತ್ತದೆ. ಬನ್ನಿ ಹಾಗಾದರೆ ಯಾವ್ಯಾವ ಸ್ಟಾರ್ ಜೋಡಿಗಳು ಒಂದೇ ವರ್ಷದಲ್ಲಿ ಬೇರೆ ಬೇರೆ ಆಗಿವೆ ಅಂತ ನೋಡೋಣ.
ನಟ ಕರಣ್ ಇಲ್ಲಿಯವರೆಗೆ ಮೂವರನ್ನ ಮದುವೆ ಆಗಿದ್ದಾರಂತೆ..
ಈ ಪಟ್ಟಿಯಲ್ಲಿ ಮೊದಲ ನಟ ಕರಣ್ ಸಿಂಗ್ ಗ್ರೋವರ್ ಅಂತ ಹೇಳಬಹುದು. ಇವರು ಮೂರು ಬಾರಿ ವಿವಾಹವಾದರು. ಶ್ರದ್ಧಾ ನಿಗಮ್ ಅವರೊಂದಿಗಿನ ನಟನ ಮೊದಲ ಮದುವೆ 10 ತಿಂಗಳು ಸಹ ಉಳಿಯಲಿಲ್ಲ. ಜೆನ್ನಿಫರ್ ವಿಂಗೆಟ್ ಅವರನ್ನು ವಿವಾಹವಾದರು, ಆದರೆ ಅವರ ಈ ವಿವಾಹವೂ ಹೆಚ್ಚು ಕಾಲ ಉಳಿಯಲಿಲ್ಲ. ಈಗ ನಟ ಹಾಟ್ ನಟಿ ಬಿಪಾಶಾ ಬಸು ಅವರನ್ನು ಮದುವೆಯಾಗಿದ್ದಾರೆ ಮತ್ತು ಇದು ಅವರ ಮೂರನೇ ವಿವಾಹವಾಗಿದೆ.
ಸಾರಾ ಮತ್ತು ಅಲಿ ಮದುವೆಯಾದ ಎರಡು ತಿಂಗಳ ನಂತರ ಬೇರೆಯಾದ್ರು
ಟಿವಿ ಶೋ ಬಿದಾಯಿಯಲ್ಲಿ ಪಾತ್ರ ಮಾಡಿ ಸೈ ಎನಿಸಿಕೊಂಡಿರುವ ನಟಿ ಸಾರಾ ಖಾನ್ 2010 ರಲ್ಲಿ ಬಿಗ್‌ಬಾಸ್ ಶೋ ನಲ್ಲಿ ಅದೇ ಮನೆಯೊಳಗೆ ಇಡೀ ರಾಷ್ಟ್ರದ ಮುಂದೆ ಅಲಿ ಮರ್ಚೆಂಟ್ ಅವರನ್ನು ವಿವಾಹವಾದರು. ಅವರಿಬ್ಬರ ದಾಂಪತ್ಯವು ಕೇವಲ ಎರಡು ತಿಂಗಳ ನಂತರ ಸಮಸ್ಯೆಗಳನ್ನು ಎದುರಿಸಿತು ಮತ್ತು ಇಬ್ಬರು ದಂಪತಿಗಳು ಬೇರ್ಪಟ್ಟರು.
ಮದುವೆಯಾದ ವರ್ಷವೇ ಬೇರೆಯಾದ್ರು ಮಂದನಾ-ಗೌರವ್
ಇನ್ನೂ ನಟಿ ಮಂದನಾ ಕರಿಮಿ, ಅವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚು ವೈಯಕ್ತಿಕ ಜೀವನಕ್ಕೆ ಹೆಸರುವಾಸಿಯಾದವರು. ಮಂದನಾ ಕರಿಮಿ ಮತ್ತು ಗೌರವ್ ಗುಪ್ತಾ 2017 ರಲ್ಲಿ ಅದ್ದೂರಿ ಮದುವೆ ಸಮಾರಂಭದಲ್ಲಿ ವಿವಾಹವಾದರು. ಕಂಗನಾ ರನೌತ್ ಅವರ ಲಾಕ್ ಅಪ್ ಶೋ ನಲ್ಲಿ ಬಂದ ಮಂದನಾ ಕರಿಮಿ ತನ್ನ ಪತಿ ಗೌರವ್ ಗುಪ್ತಾ ಹಲವಾರು ಮಹಿಳೆಯರೊಂದಿಗೆ ವ್ಯಭಿಚಾರ ಸಂಬಂಧ ಹೊಂದಿದ್ದರು ಎಂದು ಬಹಿರಂಗಪಡಿಸಿದರು.
2017 ರಲ್ಲಿ ಮಂದನಾ ಕರಿಮಿ ಮತ್ತು ಗೌರವ್ ಗುಪ್ತಾ ಬೇರ್ಪಟ್ಟರು. ನಾಲ್ಕು ವರ್ಷಗಳ ಪ್ರತ್ಯೇಕತೆಯ ನಂತರ, ದಂಪತಿಗಳು 2021 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.
ಮದುವೆಯಾದ ಒಂದು ವರ್ಷದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪುಲ್ಕಿತ್- ಶ್ವೇತಾ
ನಟ ಪುಲ್ಕಿತ್ ಸಾಮ್ರಾಟ್ 2014 ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರಿ ಶ್ವೇತಾ ರೋಹಿರಾ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಕೇವಲ ಒಂದು ವರ್ಷದ ನಂತರ, ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ನಟಿ ಯಾಮಿ ಗೌತಮ್ ಅವರೊಂದಿಗಿನ ಪುಲ್ಕಿತ್ ಅವರ ಸಂಬಂಧವೇ ಈ ಜೋಡಿಯ ವಿಚ್ಛೇದನಕ್ಕೆ ಕಾರಣ ಎಂದು ವರದಿಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ