ಅಮರೀಶ್ ಪುರಿ, ಇರ್ಫಾನ್ ಖಾನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಬಳಿಕ ಮತ್ತೊಬ್ಬ ಬಾಲಿವುಡ್ ಸೆಲೆಬ್ರಿಟಿ ಹಾಲಿವುಡ್ನತ್ತ ಮುಖ ಮಾಡಿದ್ದಾರೆ. ಹೌದು, ಕೆಲ ವರ್ಷಗಳಿಂದ ಬಾಲಿವುಡ್ನಲ್ಲಿ ಮಿಂಚುತ್ತಿರುವ ಶ್ರೀಲಂಕಾ ಸುಂದರಿ ಜಾಕ್ಲೀನ್ ಫರ್ನಾಂಡಿಸ್ ಹಾಲಿವುಡ್ ಸಿನಿಮಾವೊಂದಕ್ಕೆ ಆಯ್ಕೆಯಾಗಿದ್ದಾರೆ.
ಆದರೆ ಈ ಕುರಿತು ಜಾಕ್ಲೀನ್ ಫರ್ನಾಂಡಿಸ್ ಮೌನವಹಿಸಿದ್ದಾರೆ. ಹಾಲಿವುಡ್ ಸಿನಿಮಾದ ನಿರ್ಮಾಣ ಸಂಸ್ಥೆಯವರು ಅಧಿಕೃತವಾಗಿ ಘೋಷಣೆ ಆಗುವವರೆಗೂ ಆ ಕುರಿತು ತುಟಿ ಪಿಟಕ್ ಎನ್ನದಿರಲು ನಿರ್ಧರಿಸಿದ್ದಾರೆ. ಆದರೆ ಮೂಲಗಳ ಪ್ರಕಾರ ಆ ಹಾಲಿವುಡ್ ಸಿನಿಮಾ ದೊಡ್ಡ ಬಜೆಟ್ನಲ್ಲಿ ಮೂಡಿಬರಲಿದ್ದು, ಆಕ್ಷನ್ ಎಂಟರ್ಟೈನರ್ ಆಗಿರಲಿದೆ ಎನ್ನಲಾಗಿದೆ. ಹಾಗೂ ಅದರಲ್ಲಿ ಖುದ್ದು ಜಾಕ್ಲೀನ್ ಫರ್ನಾಂಡಿಸ್ ಸಹ ಫೈಟ್ಸ್ ಹಾಗೂ ಆಕ್ಷನ್ ಸೀನ್ಗಳಲ್ಲಿ ಮಿಂಚಲಿದ್ದಾರಂತೆ. ಈಗಾಗಲೇ ಈ ಚಿತ್ರಕ್ಕೆ ಜಾಕ್ಲೀನ್ ಸೈನ್ ಮಾಡಿದ್ದು ಇದೇ ಬೇಸಗೆ ರಜೆಯಲ್ಲೇ ಸಿನಿಮಾ ಅನೌನ್ಸ್ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಈ ಹೈ ಬಜೆಟ್ ಆಕ್ಷನ್ ಸಿನಿಮಾ ಮಾತ್ರವಲ್ಲ, ಈಗಾಗಲೇ ಜಾಕ್ಲೀನ್ ಫರ್ನಾಂಡಿಸ್ ಒಂದು ಹಾಲಿವುಡ್ ಪ್ರಾಜೆಕ್ಟ್ನಲ್ಲಿ ನಟಿಸುತ್ತಿದ್ದಾರೆ. ವುಮೆನ್ ಸ್ಟೋರೀಸ್ ಎಂಬ ಆರು ಸಣ್ಣ ಕಥೆಗಳಿರುವ ಸಿನಿಮಾದ ಒಂದು ಕಥೆಯಲ್ಲಿ ಜಾಕ್ಲೀನ್ ನಟಿಸುತ್ತಿದ್ದಾರೆ. ಆದರೆ ಈಗ ಸದ್ದು ಮಾಡುತ್ತಿರುವ ಹೊಸ ಪ್ರಾಜೆಕ್ಟ್ನಲ್ಲಿ ಜಾಕ್ಲೀನ್ ಫರ್ನಾಂಡಿಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಅಭಿಮಾನಿಗಳನ್ನು ಥ್ರಿಲ್ ಆಗಿಸಿದೆ.
2009ರಲ್ಲಿ ಅಲಾದಿನ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಮಿಸ್ ಶ್ರೀಲಂಕಾ ಜಾಕ್ಲೀನ್ ಫರ್ನಾಂಡಿಸ್ ನಂತರ ಮತ್ತೆ ಹಿಂದಿರುಗಿ ನೋಡಿಲ್ಲ. ಬದಲಾಗಿ ಬಿಟೌನ್ನಲ್ಲೇ ಸೆಟಲ್ ಆಗಿದ್ದಾರೆ. ಇದುವರೆಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಜಾಕ್ಲೀನ್ ಫರ್ನಾಂಡಿಸ್. ಹೌಸ್ಫುಲ್ ಸರಣಿಯ ಮೂರೂ ಚಿತ್ರಗಳಲ್ಲಿ ಮಿಂಚಿರುವ ಅವರು ರೇಸ್ 2, ಮರ್ಡರ್ 2, ಜುಡ್ವಾ 2, ಎ ಜೆಂಟಲ್ಮ್ಯಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೇ ತಲಾ ಒಂದೊಂದು ಬ್ರಿಟನ್ ಹಾಗೂ ಶ್ರೀಲಂಕಾದ ಸಿಂಹಳೀ ಭಾಷೆಯ ಚಿತ್ರದಲ್ಲೂ ಜಾಕ್ಲೀನ್ ಕಾಣಿಸಿಕೊಂಡಿದ್ದಾರೆ.
ಇಂತಹ ಜಾಕ್ಲೀನ್ ಕೈಯಲ್ಲಿ ಈಗಲೂ ಅರ್ಧ ಡಜನ್ನಷ್ಟು ಅವಕಾಶಗಳಿವೆ. ಕಳೆದ ವರ್ಷ ಮಿಸಸ್ ಸೀರಿಯಲ್ ಕಿಲ್ಲರ್ ಎಂಬ ಓಟಿಟಿ ಚಿತ್ರದಲ್ಲಿ ನಟಿಸಿದ್ದ ಅವರು ಸದ್ಯ ಜಾನ್ ಅಬ್ರಹಾಂಗೆ ನಾಯಕಿಯಾಗಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಅಟ್ಯಾಕ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಬಳಿಕ ಅರ್ಜುನ್ ಕಪೂರ್ಗೆ ನಾಯಕಿಯಾಗಿ ಹಾರರ್ ಕಾಮಿಡಿ ಭೂತ್ ಪೊಲೀಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂತರ ರಣವೀರ್ ಸಿಂಗ್ಗೆ ನಾಯಕಿಯಾಗಿ ಸರ್ಕಸ್ ಎಂಬ ಔಟ್ ಆಂಡ್ ಔಟ್ ಕಾಮಿಡಿ ಚಿತ್ರದಲ್ಲಿ ನಟಿಸಲಿದ್ದಾರೆ. ಬಳಿಕ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ಗೆ ನಾಯಕಿಯಾಗಿ ಆಕ್ಷನ್ ಕಾಮಿಡಿ ಬಚ್ಚನ್ ಪಾಂಡೇ ಹಾಗೂ ರಾಮ್ ಸೇತು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಜೊತೆ ಜೊತೆಗೇ ವುಮೆನ್ ಸ್ಟೋರೀಸ್ ಹಾಗೂ ಮತ್ತೊಂದು ಹೊಸ ಹಾಲಿವುಡ್ ಪ್ರಾಜೆಕ್ಟ್ ಬೇರೆ ಇದೆ. ಹೀಗೆ 2021 35 ವರ್ಷದ ಜಾಕ್ಲೀನ್ ಫರ್ನಾಂಡಿಸ್ ಅವರಿಗೆ ತುಂಬಾ ಲಕ್ಕಿಯಾಗಿರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ