news18-kannada Updated:June 1, 2020, 7:53 AM IST
ಬಾಲಿವುಡ್ ನಟಿ
ಕಳೆದ ವರ್ಷಾಂತ್ಯದಲ್ಲಿ ಚೀನಾದ ವುಹಾನ್ನಲ್ಲಿ ಕೊರೊನಾ ವೈರಸ್ ಅರ್ಥಾತ್ ಕೋವಿಡ್ 19 ಸೋಂಕು ಪ್ರಾರಂಭವಾಯ್ತು. ಇವತ್ತು ವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 60 ಲಕ್ಷ ದಾಟಿದೆ. ವೈರಸ್ಗೆ ಬಲಿಯಾದವರ ಸಂಖ್ಯೆ 3.70 ಲಕ್ಷ ಮುಟ್ಟಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಆರ್ಥಿಕ ವ್ಯವಸ್ಥೆ ನೆಲಕಚ್ಚಿದೆ. ಹೀಗೆ ವಿಶ್ವವನ್ನೇ ಕಣ್ಣಿಗೆ ಕಾಣದ ವೈರಸ್ ತಲ್ಲಣಗೊಳಿಸಿದೆ.
ಭಾರತ ಲಾಕ್ಡೌನ್ ಘೋಷಿಸಿ ಕೊರೋನಾ ಸೋಂಕು ಹಬ್ಬದಂತೆ ಹೋರಾಟ ನಡೆಸಿದ್ದರೆ, ಅತ್ತ ಹಿಮಾಲಯದ ತಪ್ಪಲಿನಲ್ಲಿ ಚೀನಾ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದೆ. 14 ಸಾವಿರ ಅಡಿ ಎತ್ತರದಲ್ಲಿ ಸೇನಾ ಜಮಾವಣೆ ಮಾಡುತ್ತಿದೆ.ಹಾಗಾದ್ರೆ ಚೀನಾವನ್ನು ಹತ್ತಿಕ್ಕಲು ಏನು ಮಾಡಬೇಕು ಅಂತ ಯೋಚಿಸಿದ ಶಿಕ್ಷಣತಜ್ಞ ಸೋನಮ್ ವಾಂಗ್ಚುಕ್ ಚೀನಾ ಉತ್ಪನ್ನಗಳನ್ನು ಖರೀದಿಸದಿರಲು ಕರೆ ನೀಡಿದ್ದಾರೆ. ಗಡಿಯಲ್ಲಿ ಸೈನಿಕರು ಬುಲೆಟ್ ಮೂಲಕ, ಗಡಿಯೊಳಗೆ ನಾವು ವ್ಯಾಲೆಟ್ ಮೂಲಕ ಉತ್ತರಿಸೋಣ ಎಂದಿದ್ದಾರೆ. ಅಲ್ಲಿಂದ ಆಮದಾಗುವ ವಸ್ತುಗಳನ್ನು ಇಲ್ಲಿಯೇ ಉತ್ಪಾದಿಸಲು ಉತ್ತೇಜಿಸೋಣ ಎಂದು ಹುರಿದುಂಬಿಸಿದ್ದಾರೆ.
ಅವರ ಮಾತುಗಳನ್ನು ಕೇಳಿ ಬಾಲಿವುಡ್ ತಾರೆಯರೂ ಸಹ ಚೀನಾ ವಿರುದ್ಧ ತೊಡೆ ತಟ್ಟಿದ್ದಾರೆ.ನಾನು ಇನ್ನುಮುಂದೆ ಟಿಕ್ಟಾಕ್ ಬಳಸುವುದಿಲ್ಲ ಅಂತ ಅಪ್ಲಿಕೇಷನ್ ಡಿಲೀಟ್ ಮಾಡಿರುವ ಸೂಪರ್ ಮಾಡೆಲ್, ಬಾಲಿವುಡ್ ನಟ ಮಿಲಿಂದ್ ಸೋಮನ್, ಸೋನಮ್ ವಾಂಗ್ಚುಕ್ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಹಾಗೇ ಖ್ಯಾತ ನಟ ಅರ್ಷದ್ ವಾರ್ಸಿ ಕೂಡ ಇನ್ನುಮುಂದೆ ನಾನೂ ಚೀನಾದ ಯಾವುದೇ ವಸ್ತು ಅಥವಾ ಅಪ್ಲಿಕೇಷನ್ಅನ್ನು ಬಳಸುವುದಿಲ್ಲ ಎಂದಿದ್ದಾರೆ. ಸಂಪೂರ್ಣವಾಗಿ ಒಂದೇ ಬಾರಿಗೆ ಬಳಸದಿರಲು ಸಮಯ ಬೇಕು. ಆದರೆ ಹಂತಹಂತವಾಗಿ ನಾನು ಚೀನಾ ವಸ್ತುಗಳಿಂದ ಮುಕ್ತನಾಗುತ್ತೇನೆ. ನೀವೂ ಪ್ರಯತ್ನಿಸಿ ಎಂದು ಕರೆ ನೀಡಿದ್ದಾರೆ ಇನ್ನು ನಟಿ ಅಮೃತಾ ರಾವ್ ಸಹ ತಮ್ಮ ಮೊಬೈಲ್ನಿಂದದ ಟಿಕ್ಟಾಕ್ ಅಪ್ಲಿಕೇಷನ್ ಡಿಲೀಟ್ ಮಾಡಿ, ತಾವೂ ಧ್ವನಿಗೂಡಿಸಿದ್ದಾರೆ.
ಇದನ್ನೂ ಓದಿ: ಬೆರಳು ಮುರಿದುಕೊಂಡ ದಂಗಲ್ ಚೆಲುವೆ! ಕುಸ್ತಿ ಕಾರಣವಲ್ಲ!; ಮತ್ತೇನು?
ಏಪ್ರಿಲ್ನಲ್ಲೇ ಕರೆ ನೀಡಿದ್ದ ಕನ್ನಡದ ಸೆಲೆಬ್ರಿಟಿಗಳು!
ಇನ್ನು ಕೊರೋನಾ ವೈರಸ್ ಹಬ್ಬುವಿಕೆಗೆ ಚೀನಾ ಸರ್ಕಾರವೇ ಕಾರಣ ಅಂತ ತಿಳಿದಿದ್ದೇ ತಡ ಕಳೆ ಏಪ್ರಿಲ್ನಲ್ಲೇ ಕನ್ನಡದ ಸೆಲೆಬ್ರಿಟಿಗಳು ಚೀನಾ ಉತ್ಪನ್ನಗಳನ್ನು ಬ್ಯಾನ್ ಮಾಡಲು ಕರೆ ನೀಡಿದ್ದರು. ಹೆಬ್ಬುಲಿ ಹಾಗೂ ಪೈಲ್ವಾನ್ ಖ್ಯಾತಿಯ ನಿರ್ದೇಶಕ ಕೃಷ್ಣ ಭಾರತದಲ್ಲಿ ಮತ್ತೊಂದು ಸ್ವದೇಶಿ ಚಳುವಳಿಗೆ ಇದು ಸರಿಯಾದ ಸಮಯ ಎಂದಿದ್ದರು. ಚೀನಾ ಉತ್ಪನ್ನ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನೇ ಹೆಚ್ಚಾಗಿ ಖರೀದಿಸೋಣ ಆ ಮೂಲಕ ಭಾರತೀಯ ಆರ್ಥಿಕತೆಯನ್ನು ಗಟ್ಟಿಗೊಳಿಸೋಣ ಎಂದಿದ್ದರು. ಈಗ ಸ್ಯಾಂಡಲ್ವುಡ್ ಜತೆಗೆ ಬಾಲಿವುಡ್ ಸೆಲೆಬ್ರಿಟಿಗಳೂ ಸಹ ಧ್ವನಿಗೂಡಿಸಿದ್ದು, ಮುಂದೆ ಭಾರತದಾದ್ಯಂತ ಈ ಕರೆ ಪ್ರತಿಧ್ವನಿಸುವ ನಿರೀಕ್ಷೆಯಿದೆ.
Published by:
Rajesh Duggumane
First published:
June 1, 2020, 7:43 AM IST