Malavika Avinash: ಬರ್ತ್ ಡೇ ಸಂಭ್ರಮದಲ್ಲಿ ಮಾಳವಿಕಾ, ಪ್ರತಿಭಾನ್ವಿತ ನಟಿಗೆ ಅಭಿಮಾನಿಗಳಿಂದ ಶುಭಾಶಯ

ನಟಿ, ರಾಜಕಾರಣಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಅವರು ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲನಟಿಯಾಗಿ ಸಿನಿರಂಗ ಪ್ರವೇಶಿಸಿದ ಅವರು, ನಟಿಯಾಗಿ, ಪೋಷಕನಟಿಯಾಗಿ ಜನಪ್ರಿಯರಾದವರು. ಇದೀಗ ರಾಜ್ಯ ರಾಜಕಾರಣದಲ್ಲೂ ಮಾಳವಿಕ ಸಕ್ರಿಯರಾಗಿದ್ದಾರೆ.

ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್

ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್

  • Share this:
ಮಾಳವಿಕಾ ಅವಿನಾಶ್ (Malavika Avinash) ಕನ್ನಡ ಚಿತ್ರರಂಗ (Sandalwood) ಕಂಡ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು. ಬಾಲ ನಟಿಯಾಗಿ, ನಾಯಕ ನಟಿಯಾಗಿ ಬಳಿಕ ಪೋಷಕ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ನೆನಪಿನಲ್ಲುಳಿಯುವ ಪಾತ್ರ ಮಾಡಿದವರು ಮಾಳವಿಕಾ. ಬರೀ ಸಿನಿಮಾಗಳಲ್ಲಷ್ಟೇ ಅಲ್ಲ, ಕಿರುತೆರೆಯಲ್ಲೂ ತಮ್ಮ ಛಾವು ಮೂಡಿಸಿದವರು. ಧಾರಾವಾಹಿಗಳಲ್ಲಿ ನಟಿಯಾಗಿ, ರಿಯಾಲಿಟಿ ಶೋಗಳ (Reality Show) ಜಡ್ಜ್ ಆಗಿ. ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ ‘ಬಿಗ್‌ ಬಾಸ್‌’ನ (Big Boss) ಸ್ಪರ್ಧಿಯಾಗಿ ಮಾಳವಿಕಾ ಕನ್ನಡಿಗರ ಮನೆ-ಮನವನ್ನು ತಲುಪಿದವರು. ರಾಜಕಾರಣಿಯಾಗಿ (Politician) ತಮ್ಮದೇ ಛಾಪು ಮೂಡಿಸಿದವರು. ಕನ್ನಡದ ಜನಪ್ರಿಯ ಪತ್ರಿಕೆಗಳ ಅಂಕಣಕಾರ್ತಿಯಾಗಿಯೂ ಓದುಗರನ್ನು ತಲುಪಿದವರು. ಕನ್ನಡದಲ್ಲಷ್ಟೇ ಅಲ್ಲ ತಮಿಳು ಹಾಗೂ ಮಲಯಾಳಂ ಸಿನಿಮಾ, ಧಾರಾವಾಹಿಗಳಲ್ಲೂ ಮಾಳವಿಕಾ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಇಂತಹ ಪ್ರತಿಭಾನ್ವಿತ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಮಾಳವಿಕಾ ಅವಿನಾಶ್‌ಗೆ ಶುಭಾಶಯಗಳ ಮಹಾಪೂರ

45 ವರ್ಷಗಳನ್ನು ಕಳೆದಿರುವ ಮಾಳವಿಕಾ, ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟಿ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿರೋ ಮಾಳವಿಕಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಖ್ಯಾತ ಪೋಷಕ ನಟರೂ ಆಗಿರುವ ಪತಿ ಅವಿನಾಶ್ ಪತ್ನಿಗೆ ಶುಭಕೋರಿದ್ದಾರೆ. ನಟಿಯರಾದ ಶ್ರುತಿ, ಸುಧಾರಾಣಿ ಸೇರಿದಂತೆ ಚಿತ್ರರಂಗದ ಸ್ನೇಹಿತೆಯರು, ಸಿನಿರಂಗದ ಗಣ್ಯರು, ರಾಜಕಾರಣಿಗಳು, ಬಿಜೆಪಿ ನಾಯಕರು ಹಾರೈಸಿದ್ದಾರೆ. ಜೊತೆಗೆ ಅಭಿಮಾನಿಗಳೂ ಸಹ ತಮ್ಮ ನೆಚ್ಚಿನ ನಟಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.

ತಮಿಳು ಮೂಲ, ಬೆಳೆಸಿದ್ದು ಕನ್ನಡದ ನೆಲ

ಮಾಳವಿಕಾ ಅವರು 28 ಜನವರಿ 1976 ರಂದು ತಮಿಳು ಮೂಲದ ಕುಟುಂಬದಲ್ಲಿ ಜನಿಸಿದರು. ತಂದೆ ಗಣೇಶನ್ ಬ್ಯಾಂಕ್‌ನಲ್ಲಿ ಕೆಲಸ ಮಾಡ್ತಿದ್ರೆ, ತಾಯಿ ಸಾವಿತ್ರಿ ಗಾಯಕಿ ಮತ್ತು ನೃತ್ಯಗಾರ್ತಿಯಾಗಿದ್ದರು. ಹೀಗಾಗಿ ಕಲೆ, ಸಾಹಿತ್ಯ, ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಮಾಳವಿಕಾ, ಚಿಕ್ಕ ವಯಸ್ಸಲ್ಲಿ ಕಲೆಯಲ್ಲಿ ಸಾಧನೆ ಮಾಡಿದವರು.

ಇದನ್ನೂ ಓದಿ: Rashmika Mandanna: ಬ್ಲ್ಯಾಕ್​ ಡ್ರೆಸ್​ನಲ್ಲಿ ಕೊಡಗಿನ ಕುವರಿ ಮಿಂಚಿಂಗ್​.. ನ್ಯಾಷನಲ್​ ಕ್ರಶ್​ಗೆ ಲೈಕ್ಸ್​​ಗಳ ಸುರಿಮಳೆ!

ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶ

ಒಮ್ಮೆ ಕೃಷ್ಣನ ವೇಷತೊಟ್ಟು ನೃತ್ಯ ಪ್ರದರ್ಶನ ಮಾಡಿದ ಮಾಳವಿಕಾರನ್ನು ಖ್ಯಾತ ನಿರ್ದೇಶಕ ಜಿ.ವಿ.ಅಯ್ಯರ್ ಗುರುತಿಸಿದ್ರು. ಬಳಿಕ ತಮ್ಮ ಕೃಷ್ಣಾವತಾರ ಸಿನಿಮಾದಲ್ಲಿ ಕೃಷ್ಣನ ಪಾತ್ರ ನೀಡಿದರು. ಅಲ್ಲಿಂದ ಮಾಳವಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಮತ್ತೊಂದೆಡೆ ವಿದ್ಯಾಭ್ಯಾಸ ಮುಂದುವರೆಸಿ, ಕಾನೂನು ಪದವಿಯನ್ನೂ ಪಡೆದರು.

ನಟಿಯಾಗಿ ಬಡ್ತಿ, ಪೋಷಕ ನಟಿಯಾಗಿಯೂ ಹೆಜ್ಜೆ ಗುರುತು

ಬಾಲನಟಿಯಾಗಿ ಗುರುತಿಸಿಕೊಂಡ ಮಾಳವಿಕಾ ಬಹುಬೇಗನೆ ನಾಯಕಿ ಸ್ಥಾನಕ್ಕೆ ಬಡ್ತಿ ಪಡೆದರು. ರವಿತೇಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಿರೋಯಿನ್ ಆದ್ರು. ಬರೀ ಕನ್ನಡ ಸಿನಿಮಾದಲ್ಲಷ್ಟೇ ಅಲ್ಲದೇ, ಮಲಯಾಳಂ, ತಮಿಳು ಸಿನಿಮಾಗಳಲ್ಲೂ ನಾಯಕಿ ಸ್ಥಾನ ಪಡೆದರು. ಅದಾದ ಮೇಲೆ ಸ್ವಲ್ಪ ಸಮಯದ ನಂತರ ಪೋಷಕ ನಟಿಯಾಗಿಯೂ ನಟಿಸಿದರು. ಸೈನೈಡ್, ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ, ಕೆಜೆಎಫ್-1 ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ, ಪಾತ್ರಕ್ಕೆ ಜೀವ ತುಂಬಿದರು.

ಕಿರುತೆರೆಯನ್ನೂ ಆವರಿಸಿಕೊಂಡ ಮಾಳವಿಕಾ

ಹಿರಿತೆರೆಯಿಂದ ಕಿರುತೆರೆಗೆ ಬಂದ ಮಾಳವಿಕಾ, ಇಲ್ಲಿಯೂ ಸಕ್ರಿಯರಾದರು. ದೂರದರ್ಶನದಲ್ಲಿ ಬಂದ ಮಾಯಾಮೃಗ ಅವರಿಗೆ ಬಹುದೊಡ್ಡ ಹಿಟ್ ತಂದುಕೊಟ್ಟಿತು. ಬಳಿಕ ಕನ್ನಡ, ತಮಿಳು ಹಾಗೂ ಮಲಯಾಳಂನ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲೇ ಮಾಳವಿಕಾ ನಟಿಸಿದರು. ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾಗಲೇ ಅವಿನಾಶ್ ಅವರೊಂದಿಗೆ ಸಪ್ತಪದಿ ತುಳಿದ ಮಾಳವಿಕಾ, ಇದೀಗ ಪತಿ, ಪುತ್ರನ ಜೊತೆ ಸುಖ ಸಂಸಾರ ಸಾಗಿಸುತ್ತಿದ್ದಾರೆ.

ಇದನ್ನೂ ಓದಿ: Shivanna: ಸೆಂಚುರಿ ಸ್ಟಾರ್ ಮೇಲೆ ಕಣ್ಣಿಟ್ಟ ಹೊಂಬಾಳೆ ಫಿಲ್ಮ್ಸ್​, ಸಂತೋಷ್​ ಆನಂದ್​ರಾಮ್​ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ!

ನಿರೂಪಕಿಯಾದರು, ಶೋ ಸ್ಪರ್ಧಿಯೂ ಆದರು

ಕನ್ನಡದ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮಕ್ಕೆ ಮಾಳವಿಕಾ ಸಾರಥ್ಯ ವಹಿಸಿದ್ದರು. ನೊಂದ ಜೀವಗಳ ಕಣ್ಣೀರು ಒರೆಸೋ ಆ ಕಾರ್ಯಕ್ರಮ ಜನಪ್ರಿಯವೂ ಆಯಿತು. ಬಳಿಕ ಕಲರ್ಸ್ ಕನ್ನಡದ ಬಿಗ್ ಬಾಸ್-4ರಲ್ಲಿ ಸ್ಪರ್ಧಿಯಾಗಿಯೂ ತಮ್ಮ ನೇರ ನಡೆಯ ಮೂಲಕ ವೀಕ್ಷಕರ ಮೆಚ್ಟುಗೆ ಗಳಿಸಿದರು.

ರಾಜಕಾರಣಿಯಾಗಿ, ಹೋರಾಟಗಾರ್ತಿಯಾಗಿ ಮಾಳವಿಕಾ

ಮಾಜಿ ಕೇಂದ್ರ ಸಚಿವೆ, ದಿವಂಗತ ಸುಷ್ಮಾ ಸ್ವರಾಜ್ ಪರ ಬಳ್ಳಾರಿಯಲ್ಲಿ ಪ್ರಚಾರ ಮಾಡುವ ಮೂಲಕ ಮಾಳವಿಕಾ ರಾಜಕೀಯ ಪ್ರವೇಶಿಸಿದರು. ಬಳಿಕ 2013ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದರು. ಇದೀಗ ಕರ್ನಾಟಕ ರಾಜ್ಯ ಬಿಜೆಪಿಯ ವಕ್ತಾರೆಯಾಗಿರೋ ಅವರು, ಮಹಿಳಾ ಪರ ಹೋರಾಟಗಳಲ್ಲೂ ಗುರುತಿಸಿಕೊಂಡಿದ್ದಾರೆ.

ಹೀಗೆ ನಟಿಯಾಗಿ, ರಾಜಕಾರಣಿಯಾಗಿ, ಹೋರಾಟಗಾರ್ತಿಯಾಗಿ ಮಾಳವಿಕಾ ಸದಾ ಸಕ್ರಿಯರಾಗಿದ್ದಾರೆ. ತಮ್ಮ ನಟನೆ, ಹೋರಾಟಗಳಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಳವಿಕಾ ಅವಿನಾಶ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
Published by:Annappa Achari
First published: