• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rajinikanth: ರಜನಿಕಾಂತ್​ಗೆ ಭಾರತದಲ್ಲಿ ಚಿಕಿತ್ಸೆ ಸಿಗೋದಿಲ್ವ?; ತಲೈವಾ ಅಮೆರಿಕ ಪ್ರಯಾಣದ ಬಗ್ಗೆ ಪ್ರಶ್ನೆಯೆತ್ತಿದ ಖ್ಯಾತ ನಟಿ!

Rajinikanth: ರಜನಿಕಾಂತ್​ಗೆ ಭಾರತದಲ್ಲಿ ಚಿಕಿತ್ಸೆ ಸಿಗೋದಿಲ್ವ?; ತಲೈವಾ ಅಮೆರಿಕ ಪ್ರಯಾಣದ ಬಗ್ಗೆ ಪ್ರಶ್ನೆಯೆತ್ತಿದ ಖ್ಯಾತ ನಟಿ!

ರಜನಿಕಾಂತ್- ಕಸ್ತೂರಿ

ರಜನಿಕಾಂತ್- ಕಸ್ತೂರಿ

Rajinikanth Health: ಭಾರತದ ವಿಮಾನಗಳಿಗೆ ಅಮೆರಿಕದಲ್ಲಿ ನಿರ್ಬಂಧ ವಿಧಿಸಿದ್ದರೂ ರಜನಿಕಾಂತ್ ಈ ವೇಳೆ ಅಮೆರಿಕಕ್ಕೆ ಚಿಕಿತ್ಸೆ ಹೋಗುತ್ತಿರುವುದೇಕೆ? ಅವರಿಗೆ ಮಾತ್ರ ಹೇಗೆ ಅನುಮತಿ ಸಿಕ್ಕಿತು? ಎಂದು ನಟಿ ಕಸ್ತೂರಿ ಶಂಕರ್ ಪ್ರಶ್ನಿಸಿದ್ದಾರೆ.

  • Share this:

ಚೆನ್ನೈ (ಜು. 1): ಕೊರೋನಾದಿಂದಾಗಿ ಹಲವು ದೇಶಗಳಲ್ಲಿ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ನಡುವೆ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ವೈದ್ಯಕೀಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಇದಕ್ಕೆ ನಟಿ ಕಸ್ತೂರಿ ಶಂಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೇರೆಯವರಿಗೆ ವಿಮಾನ ಪ್ರಯಾಣಕ್ಕೆ ಸಿಗದ ಅನುಮತಿ ರಜನಿಕಾಂತ್​ಗೆ ಹೇಗೆ ಸಿಕ್ಕಿತು? ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.


ಭಾರತದಲ್ಲಿ ಕೊರೋನಾ ಕೇಸುಗಳು ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಮೆರಿಕ ಭಾರತದ ವಿಮಾನಗಳ ಮೇಲೆ ನಿರ್ಬಂಧ ಹೇರಿದೆ. ಅಮೆರಿಕದಿಂದ ಭಾರತಕ್ಕೆ ವಿಮಾನ ಬರುವಂತೆಯೂ ಇಲ್ಲ, ಇಲ್ಲಿಂದಲೂ ಅಮೆರಿಕಕ್ಕೆ ವಿಮಾನ ಸಂಚರಿಸುವಂತಿಲ್ಲ. ಆದರೆ, ಅನಾರೋಗ್ಯದಿಂದ ಈ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ರಜನಿಕಾಂತ್ ವೈದ್ಯಕೀಯ ತಪಾಸಣೆಗಾಗಿ ಅಮೆರಿಕಕ್ಕೆ ಹೋಗಲು ಅನುಮತಿ ಹೇಗೆ ಸಿಕ್ಕಿತು? ಅಮೆರಿಕಕ್ಕೆ ಹೋಗಿಯೇ ಚಿಕಿತ್ಸೆ ಪಡೆಯಬೇಕಾದಷ್ಟು ರಜನಿಕಾಂತ್ ಆರೋಗ್ಯ ಹದಗೆಟ್ಟಿದೆಯೇ? ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ನಟಿ ಕಸ್ತೂರಿ ಒತ್ತಾಯಿಸಿದ್ದಾರೆ.ಮೇ ತಿಂಗಳಿನಿಂದ ಭಾರತದ ವಿಮಾನಗಳಿಗೆ ಅಮೆರಿಕದಲ್ಲಿ ನಿರ್ಬಂಧ ವಿಧಿಸಲಾಗಿದೆ. ಇಂತಹ ಸಮಯದಲ್ಲಿ ರಜನಿಕಾಂತ್ ಯಾಕೆ ಅಮೆರಿಕಕ್ಕೆ ಪ್ರಯಾಣ ಮಾಡುತ್ತಿದ್ದಾರೆ? ಇತ್ತೀಚೆಗಷ್ಟೆ ರಾಜಕೀಯದಿಂದಲೂ ಹಿಂದೆ ಸರಿದಿದ್ದ ಅವರು ಇದೀಗ ಇದ್ದಕ್ಕಿದ್ದಂತೆ ಅಮೆರಿಕಕ್ಕೆ ಆರೋಗ್ಯ ತಪಾಸಣೆಗೆ ತೆರಳುತ್ತಿರುವುದಕ್ಕೆ ಏನು ಕಾರಣ? ಇದರಿಂದ ಅನೇಕ ಜನರಲ್ಲಿ ಅವರ ಆರೋಗ್ಯದ ಬಗ್ಗೆ ಗೊಂದಲ ಉಂಟಾಗಿದೆ ಎಂದು ನಟಿ ಕಸ್ತೂರಿ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: Murder News: ಪ್ರೇಯಸಿಯನ್ನು ಕೊಂದು ಅಡುಗೆಮನೆಯಲ್ಲೇ ಸಮಾಧಿ; ಪೇಂಟಿಂಗ್​ನಿಂದ ಬಯಲಾಯ್ತು ಕೊಲೆ ರಹಸ್ಯ!


ನಟ ರಜನಿಕಾಂತ್ ಅವರಿಗೆ ನಿಯಮಗಳು ಅನ್ವಯವಾಗುವುದಿಲ್ಲ ಎಂದು ದಯವಿಟ್ಟು ಅವರ ಅಭಿಮಾನಿಗಳು ಹೇಳಬೇಡಿ. ಇದನ್ನು ಕೇಳಲು ಬಹಳ ವಿಷಾದವೆನಿಸುತ್ತದೆ. ಈ ರೀತಿಯ ದೊಡ್ಡ ಸೆಲೆಬ್ರಿಟಿಗಳು ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವಾಗಲೂ ಬಹಳ ಎಚ್ಚರಿಕೆಯಿಂದ ಇರಬೇಕು. ಇದರಿಂದ ಅವರ ಅಭಿಮಾನಿಗಳಿಗೆ, ಜನಸಾಮಾನ್ಯರಿಗೆ ಬೇರೆ ರೀತಿಯ ಸಂದೇಶ ರವಾನೆಯಾಗುವ ಸಾಧ್ಯತೆಗಳಿರುತ್ತವೆ. ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಅಮೆರಿಕದ ವಿಮಾನ ಸಂಚಾರಕ್ಕೆ ಮೆಡಿಕಲ್ ಎಮರ್ಜೆನ್ಸಿಗೂ ಅನುಮತಿ ನೀಡಿಲ್ಲ. ಹೀಗಿದ್ದರೂ ರಜನಿಕಾಂತ್​ಗೆ ಹೇಗೆ ಅನುಮತಿ ಸಿಕ್ಕಿದೆ? ದೊಡ್ಡ ಸೆಲೆಬ್ರಿಟಿಗಳು, ವಿಐಪಿಗಳು, ಅವರ ಕುಟುಂಬದವರಿಗೆ ಎಲ್ಲದಕ್ಕೂ ಸುಲಭವಾಗಿ ಅನುಮತಿ ಸಿಕ್ಕಿಬಿಡುತ್ತದೆ! ಎಂದಿದ್ದಾರೆ.ಕೇಂದ್ರ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ರಜನಿಕಾಂತ್ ವೈದ್ಯಕೀಯ ತಪಾಸಣೆಗೆ ಅಮೆರಿಕ್ಕೆ ಹಾರಲಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಹಾಗಾದರೆ, ಭಾರತದ ಬೆಸ್ಟ್ ಆಸ್ಪತ್ರೆಗಳಲ್ಲಿ ಕೂಡ ಸಿಗದ ಚಿಕಿತ್ಸೆಯನ್ನು ಅಮೆರಿಕದಲ್ಲಿ ಪಡೆಯುವಂಥದ್ದು ರಜನಿಕಾಂತ್ ಅವರಿಗೆ ಏನಾಗಿದೆ? ಕೇವಲ ತಪಾಸಣೆಗಾದರೆ ನಮ್ಮ ದೇಶದಲ್ಲೇ ಅತ್ಯುತ್ತಮ ಆಸ್ಪತ್ರೆಗಳಿಲ್ಲವೇ? ಬೇರೆ ದೇಶದವರೂ ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿಲ್ಲವೇ? ಹಾಗಾದರೆ, ರಜನಿಕಾಂತ್ ತಮ್ಮ ಆರೋಗ್ಯದ ಬಗ್ಗೆ ಏನಾದರೂ ಮುಚ್ಚಿಡುತ್ತಿದ್ದಾರಾ? ಎಂಬ ಪ್ರಶ್ನೆಗಳನ್ನು ನಟಿ ಕಸ್ತೂರಿ ಎತ್ತಿದ್ದಾರೆ.


ಇದಾದ ಬಳಿಕ ಮತ್ತೆ ಟ್ವೀಟ್ ಮಾಡಿರುವ ನಟಿ ಕಸ್ತೂರಿ, ರಜನಿಕಾಂತ್ ಆರೋಗ್ಯದ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರ ಆಪ್ತ ಮೂಲಗಳೇ ನನಗೆ ತಿಳಿಸಿವೆ ಎಂದಿದ್ದಾರೆ. ಆದರೆ, ಈ ಬಗ್ಗೆ ರಜನಿಕಾಂತ್ ಕುಟುಂಬಸ್ಥರು, ಸ್ನೇಹಿತರು ಯಾವುದೇ ಸ್ಪಷ್ಟನೆ ನೀಡಿಲ್ಲ.


ಕಿಡ್ನಿ ವೈಫಲ್ಯದಿಂದ 4 ವರ್ಷಗಳ ಹಿಂದೆ ಅಮೆರಿಕದ ಆಸ್ಪತ್ರೆಗೆ ತೆರಳಿದ್ದ ರಜನಿಕಾಂತ್ ಅವರಿಗೆ ಅಲ್ಲಿ ಕಿಡ್ನಿ ರಿಪ್ಲೇಸ್ಮೆಂಟ್ ಸರ್ಜರಿ ಮಾಡಲಾಗಿತ್ತು. ಅದರ ರೊಟೀನ್ ತಪಾಸಣೆಗಾಗಿ ಮತ್ತೆ ರಜನಿಕಾಂತ್ ಅಮೆರಿಕಕ್ಕೆ ತೆರಳಲಿದ್ದಾರೆ.


ಅಂದಹಾಗೆ, ರಜನಿಕಾಂತ್ ಅವರ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾ ಅನ್ನಾತೆ ಶೂಟಿಂಗ್ ಮುಗಿದಿದ್ದು, ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಲಾಕ್ಡೌನ್ನಿಂದ ಮನೆಯಲ್ಲೇ ವಿಶ್ರಾಂತಿಯಲ್ಲಿರುವ ರಜನಿಕಾಂತ್ ವೈದ್ಯಕೀಯ ತಪಾಸಣೆಗೆ ಅಮೆರಿಕಕ್ಕೆ ಹಾರಲಿದ್ದಾರೆ.


ನಟಿ ಕಸ್ತೂರಿ ಶಂಕರ್ ಯಾರೆಂದು ಹೊಸದಾಗಿ ಪರಿಚಯಿಸಬೇಕಾದ ಅಗತ್ಯವೇನಿಲ್ಲ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿರುವ ಕಸ್ತೂರಿ ಶಂಕರ್ ಈಗ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಹಬ್ಬ, ತುತ್ತಾ ಮುತ್ತಾ, ಪ್ರೇಮಕ್ಕೆ ಸೈ, ಜಾಣ ಮುಂತಾದ ಸಿನಿಮಾಗಳಲ್ಲಿ ಕಸ್ತೂರಿ ನಟಿಸಿದ್ದಾರೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು