ಬಿಗ್ ಬಾಸ್ ಸೀಸನ್ 8ರ ಫಿನಾಲೆಗೆ ಇನ್ನು ಎರಡು ವಾರಗಳು ಉಳಿದಿವೆ. ಹೀಗಾಗಿಯೇ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಮನೆಯಲ್ಲಿ ಒಂದು ರೀತಿಯ ಒತ್ತಡದ ವಾತಾವರಣ ನಿರ್ಮಾಣವಾಗಿದೆ. ಮನೆಯಲ್ಲಿ ಬಿಗ್ ಬಾಸ್ ಕೊಡುತ್ತಿದ್ದ ಟಾಸ್ಕ್ಗಳಿಂದ ದೂರ ಉಳಿಯುತ್ತಿದ್ದವರು ಈಗ ಟಾಸ್ಕ್ ಆಡಲೇಬೇಕೆಂದು ಪಟ್ಟು ಹಿಡಿದು ಕೂರುತ್ತಿದ್ದಾರೆ. ಇನ್ನು ಕೆಲವರು ಏನಾದರೂ ಟಾಸ್ಕ್ ಆಡುವುದರಿಂದ ನಾವು ದೂರ ಸರಿಯುವುದಿಲ್ಲ ಎನ್ನುತ್ತಿದ್ದಾರೆ. ಒಟ್ಟಾರೆ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ ಸ್ಪರ್ಧೆಯ ಜೊತೆಗೆ ವೈಯಕ್ತಿಕ ಆಟ ಬಿಗುವಾಗುತ್ತಿದೆ. ಹೀಗಿರುವಾಗಲೇ ಮನೆಯ ಹೊಸ ಕ್ಯಾಪ್ಟನ್ ಆಯ್ಕೆಯ ಸಮಯ ಬಂದೇ ಬಿಟ್ಟಿತು. ವಾರ ಪೂರ್ತಿ ಮನೆಯಲ್ಲಿ ಕೊಟ್ಟ ಸಾಲು ಸಾಲು ಟಾಸ್ಕ್ಗಳಲ್ಲಿ ಗೆದ್ದು ಹೆಚ್ಚು ಅಂಕಗಳಿಸುವ ಮೂಲಕ ದಿವ್ಯಾ ಉರುಡುಗ ಅವರು ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಎರಡನೇ ಸಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಯ್ಕೆಯಾಗುತ್ತಿದ್ದಂತೆಯೇ ಆ ವಾರದ ಉತ್ತಮ ಹಾಗೂ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಹೌದು, ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿ ಆಯ್ಕೆಯಾದ ಖುಷಿಯಲ್ಲಿದ್ದರೆ, ಮನೆಯಲ್ಲಿ ಪ್ರಶಾಂತ್ ಸಂಬರಗಿ ಈ ಸಲ ಕಳಪೆ ಪ್ರದರ್ಶನ ತೋರಿದ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.
View this post on Instagram
ಇದನ್ನೂ ಓದಿ: ಮತ್ತೆ ಕ್ಯಾಪ್ಟನ್ ಆದ ದಿವ್ಯಾ ಉರುಡುಗ: ಫಿನಾಲೆಗೆ ಸಿಕ್ತು ಎಂಟ್ರಿ..!
ಕ್ಯಾಪ್ಟನ್ ಈ ಮನೆಯಲ್ಲಿ ಸರ್ವಾಧಿಕಾರಿಯಲ್ಲ. ಇಬ್ಬರಿಗೆ ಮೂರು ಮೂರು ಮತಗಳು ಬಿದ್ದಾಗ, ಹೇಗೆ ಕ್ಯಾಪ್ಟನ್ ಒಬ್ಬರನ್ನು ಕಳಪೆ ಎಂದು ನಿರ್ಧರಿಸುತ್ತಾರೆ. ಅಲ್ಲದೆ ವೈಷ್ಣವಿ ತನಗೆ ಕಳಪೆ ಎನ್ನಲು ಕೊಟ್ಟ ಕಾರಣ ನನಗೆ ಸರಿ ಎನಿಸಲಿಲ್ಲ ಎಂದಿದ್ದಾರೆ. ಇನ್ನು ಟಾಸ್ಕ್ ಆಡುವಾಗ ನನ್ನ ಮೇಲೆ ಕೈ ಎತ್ತಿ ನಂತರ ತನ್ನ ಬಳಿ ಬಂದು ಕ್ಷಮೆ ಕೇಳಿದವರೇ ಈಗ ಕಳಪೆ ಕೊಡುತ್ತಿದ್ದಾರೆ ಎಂದು ವೈಷ್ಣವಿ ಮೇಲೆ ಕೂಗಾಡುತ್ತಾರೆ.
ಈ ವಾರದ ಅತ್ಯುತ್ತಮಕ್ಕೆ ನಾನು ಮತ ಹಾಕುವುದಿಲ್ಲ. ಯಾರ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ. ಯಾವ ಶಿಕ್ಷೆ ಕೊಟ್ಟರೂ ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ನಂತರ ಮನೆಯವರು ಮನವೊಲಿಸಿ ಅತ್ಯುತ್ತಮಕ್ಕೆ ಹೆಸರು ಹೇಳುವಂತೆ ಮಾಡುತ್ತಾರೆ. ಈ ಸಲ ಪ್ರಶಾಂತ್ ಅವರು ತಾನು ಕಳಪೆ ಪಟ್ಟ ಸ್ವೀಕರಿಸುವುದಿಲ್ಲ. ಜೈಲಿಗೆ ಹೋಗುವುದೂ ಇಲ್ಲ. ಏನು ಬೇಕಾದರೂ ಆಗಲಿ ಎಂದು ಹೊರಗೆ ಹೋಗುತ್ತಾರೆ. ಕಡೆಗೆ ಚಕ್ರವರ್ತಿ ಅವರು ಬಂದು ಪ್ರಶಾಂತ್ ಅವರ ಮನವೊಲಿಸಿ ಜೈಲಿಗೆ ಕಳುಹಿಸುತ್ತಾರೆ.
ಪ್ರಶಾಂತ್ ಸಂಬರಗಿಗೆ ಕಳಪೆ ಪಟ್ಟ ಕೊಡಲು ಇಲ್ಲಿದೆ ಕಾರಣ
ಪ್ರಶಾಂತ್ ಅವರು ಈ ವಾರ ಬಿಗ್ ಬಾಸ್ ಕೊಟ್ಟಿದ್ದ ಟಾಸ್ಕ್ನಲ್ಲಿ ತಾನೇ ಆಡಬೇಕೆಂದು ಪಟ್ಟು ಹಿಡಿದು ಹೋಗಿದ್ದರು. ಆದರೆ ಟಾಸ್ಕ್ ಆರಂಭವಾಗುತ್ತಿದ್ದಂತೆಯೇ ಅದರಲ್ಲಿ ಭಾಗಿಯಾಗಿ ಪ್ರಯತ್ನಿಸುವುದನ್ನು ಬಿಟ್ಟು, ಹಾಗೆಯೇ ಹಿಂತಿರುಗುತ್ತಾರೆ. ಇದರಿಂದಾಗಿ ಬೇರೆಯವರು ಭಾಗಿಯಾಗಿ ಅಂಕ ಗಳಿಸಬಹುದಾಗಿದ್ದ ಅವಕಾಶವನ್ನು ಕಸಿದುಕೊಂಡಿದ್ದರು.
ಪ್ರಶಾಂತ್ ಸಂಬರಗಿ ಅವರ ಈ ವರ್ತನೆಯಿಂದಾಗಿ ಮನೆಯಲ್ಲಿ ಕೆಲವರಿಗೆ ಬೇಸರವಾಗಿತ್ತು. ಟಾಸ್ಕ್ ನಡೆದ ದಿನವೇ ಪ್ರಶಾಂತ್ ಸಂಬರಗಿ ಅವರಿಗೆ ಅರವಿಂದ್ ನೀವು ಬೇರೆ ಸ್ಪರ್ಧಿಗಳ ಅವಕಾಶ ಕಿತ್ತುಕೊಂಡಿದ್ದಿರಿ ಎಂದು ಟೀಕಿಸಿದ್ದರು. ಇನ್ನು ಈ ವಿಷಯ ವೈಷ್ಣವಿ ಅವರಿಗೂ ಬೇಸರ ತಂದಿತ್ತು.
View this post on Instagram
ಕಳೆದ ವಾರ ಕಳಪೆಯಾಗಿ ಆಯ್ಕೆಯಾಗಿದ್ದ ಚಕ್ರವರ್ತಿ ಚಂದ್ರಚೂಡ ಅವರು ಜೈಲಿನಲ್ಲೇ ಕುಳಿತು ಪ್ರತಿಭಟಿಸಿದ್ದರು. ಕಳಪೆ ಎಂದು ತನ್ನನ್ನು ಆಯ್ಕೆ ಮಾಡಿದ್ದವರು ಕೊಟ್ಟಿದ್ದ ಕಾರಣಗಳು ನನಗೆ ಸೂಕ್ತವೆನಿಸಲಿಲ್ಲ ಅಂತ ಚಕ್ರವರ್ತಿ ತರಕಾರಿ ಕತ್ತರಿಸದೆ ಪ್ರತಿಭಟಿಸಿದ್ದರು. ಜೊತೆಗೆ ಇದೇ ವಿಷಯವಾಗಿ ಶಮಂತ್ ಅವರ ಜೊತೆ ಜಗಳ ಸಹ ಮಾಡಿದ್ದರು. ಇನ್ನು ಪ್ರಿಯಾಂಕಾ, ಶುಭಾ ಪೂಂಜಾ ಹಾಗೂ ಶಮಂತ್ ಹೆಸರಿನಲ್ಲಿ ಪೋಸ್ಟರ್ ಸಹ ರಿಲೀಸ್ ಮಾಡಿದ್ದರು.
ಇದನ್ನೂ ಓದಿ: Priya Varrier: ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾ ಪ್ರಕಾಶ್ ವಾರಿಯರ್ ಸಿಟ್ಟಾಗಿದ್ದೇಕೆ ಗೊತ್ತಾ..?
ಚಕ್ರವರ್ತಿ ಅವರು ತರಕಾರಿ ಕತ್ತರಿಸದೆ ಮಾಡಿದ್ದ ಪ್ರತಿಭಟನೆಯಿಂದಾಗಿ ಮನೆಯಲ್ಲಿ ತರಕಾರಿ ಕತ್ತರಿಸದಂತೆಯೇ ಹಾಕಿ ಅಡುಗೆ ಮಾಡಲಾಗಿತ್ತು. ಈ ವಿಷಯ ಕಡೆಗೆ ಕಿಚ್ಚನ ಅಂಗಳಕ್ಕೆ ಬಂದ ನಂತರ ಪರಿಹಾರವಾಯಿತು. ಈಗ ಪ್ರಶಾಂತ್ ಸಂಬರಗಿ ಜೈಲಿಗೆ ಹೋಗಿದ್ದಾರೆ, ಆದರೆ ತರಕಾರಿ ಕತ್ತರಿಸುವುದಿಲ್ಲ ಅಂತ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಅವರ ಈ ನಿರ್ಧಾರದಿಂದ ಯಾವ ಬೆಳವಣಿಗೆಯಾಗಲಿದೆ ಅನ್ನೋದು ನಾಳಿನ ಸಂಚಿಕೆಯಲ್ಲಿ ತಿಳಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ