ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೊರೋನಾ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ತಮ್ಮ ಬಹುನಿರೀಕ್ಷಿತ ಸಿನಿಮಾ ಬೆಲ್ ಬಾಟಮ್ ಚಿತ್ರೀಕರಣ ಆರಂಭಿಸಿದ್ದರು. ಇನ್ನು ಲಾಕ್ಡೌನ್ ಸಂಪೂರ್ಣವಾಗಿ ಅಂತ್ಯಗೊಳ್ಳುವ ಮುನ್ನವೇ ಈ ಸಿನಿಮಾದ ಚಿತ್ರೀರಕಣ ಸಹ ಪೂರ್ಣಗೊಳಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಅಕ್ಷಯ್ ಅವರ 'ಬೆಲ್ಬಾಟಂ' ಸಿನಿಮಾ ಲಾಕ್ಡೌನ್ನಲ್ಲೇ ಸೆಟ್ಟೇರಿತ್ತು. ಈಗ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಹಿಂದೆ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಕೂಡಲೇ ಅಕ್ಷಯ್ ಕುಮಾರ್ ತಮ್ಮ ಕುಟುಂಬ ಚಿತ್ರೀಕರಣದ ತಂಡದೊಂದಿಗೆ ಬ್ರಿಟನ್ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ತಮ್ಮ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ನಂತರ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಲಂಡನ್ಗೆ ಬಂದರು. ಲಂಡನ್ನಲ್ಲಿ ಶೂಟಿಂಗ್ ಮುಗಿಸಿ ಈ ತಂಡ ಮುಂಬೈಗೆ ಮರಳಿದೆ. ಅಲ್ಲದೆ ಲಾಕ್ಡೌನ್ನಲ್ಲೇ ಚಿತ್ರೀಕರಣ ಆರಂಭಿಸಿ, ಶೂಟಿಂಗ್ ಪೂರ್ಣಗೊಳಿಸಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಸಹ ಬೆಲ್ಬಾಟ್ ಚಿತ್ರದ್ದಾಗಿದೆ.
ಅಕ್ಷಯ್ ಕುಮಾರ್ ಅವರ ಬೆಲ್ ಬಾಟಮ್ ಸಿನಿಮಾದ ರಿಲೀಸ್ ದಿನಾಂಕ ನಿಗದಿಯಾಗಿದೆ. ಮುಂದಿನ ವರ್ಷ ಅಂದರೆ 2021ರ ಏ.2ಕ್ಕೆ ಈ ಸಿನಿಮಾ ತೆರೆ ಕಾಣಲಿದೆ. ಜೊತೆಗೆ ಚಿತ್ರತಂಡ ಈಗ ಸಿನಿಮಾದ ಟೀಸರ್ ಸಹ ರಿಲೀಸ್ ಮಾಡಿದೆ.
ರಂಜಿತ್ ಎಂ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ರಾ ಏಜೆಂಟ್ ಆಗಿ ನಟಿಸಿದ್ದಾರಂತೆ. ಅಲ್ಲದೆ 80ರ ದಶಕದ ಥ್ರಿಲ್ಲರ್ ಕತೆ ಹೇಳುವ ಚಿತ್ರ ಇದಾಗಿದೆ. ಇತ್ತೀಚೆಗಷ್ಟೆ ಸ್ಕಾಟ್ಲೆಂಡ್ನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ವಾಪಸ್ಸಾಗುತ್ತಿದ್ದಂತೆಯೇ, ಈ ಕುರಿತು ಚಿತ್ರತಂಡ ಸಂತಸ ಹಂಚಿಕೊಂಡಿದೆ. ಅಕ್ಷಯ್ ಕುಮಾರ್ ಮಾತ್ರವಲ್ಲ ನಾಯಕಿಯರಾದ ವಾಣಿ ಕಪೂರ್, ಹುಮಾ ಖುರೇಷಿ ಹಾಗೂ ಲಾರಾ ದತ್ತ ಸಹ ಈ ಬಗ್ಗೆ ಸಂಭ್ರಮಪಟ್ಟಿದ್ದಾರೆ.
ಬಾಲಿವುಡ್ನ ದೊಡ್ಡ ದೊಡ್ಡ ಸೂಪರ್ಸ್ಟಾರ್ಗಳು ವರ್ಷಕ್ಕೊಂದು ಸಿನಿಮಾ ಮಾಡಿದರೆ ಹೆಚ್ಚು. ಆದರೆ, ಅಕ್ಷಯ್ ಕುಮಾರ್ ಪ್ರತಿ ವರ್ಷ ಹ್ಯಾಟ್ರಿಕ್ ಬಾರಿಸುತ್ತಲೇ ಬಂದಿದ್ದಾರೆ. ಆ ದಾಖಲೆ ಈ ವರ್ಷ ಬ್ರೇಕ್ ಆಗಲಿದೆ ಎನ್ನಲಾಗಿತ್ತು. ಆದರೆ, ಖಿಲಾಡಿ ಲಾಕ್ಡೌನ್ ಸಡಿಲಿಕೆ ಬಳಿಕ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಬ್ಯಾಕ್ ಟು ಬ್ಯಾಕ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಅಕ್ಷಯ್ ಕುಮಾರ್ ನಟಿಸಿರುವ ರಾಘವ ಲಾರೆನ್ಸ್ ನಿರ್ದೇಶನದ 'ಕಾಂಚನಾ 2' ಹಿಂದಿ ರಿಮೇಕ್ ಲಕ್ಷ್ಮಿ ಬಾಂಬ್ ಇನ್ನು ಕೆಲವೇ ದಿನಗಳಲ್ಲಿ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಅದರ ಬೆನ್ನಲ್ಲೇ ಅಕ್ಷಯ್ ಮತ್ತೊಮ್ಮೆ ಸೂಪರ್ ಕಾಪ್ ಪಾತ್ರದಲ್ಲಿ ನಟಿಸಿರುವ ರೋಹಿತ್ ಶೆಟ್ಟಿ ನಿರ್ದೇಶನದ 'ಸೂರ್ಯವಂಶಿ' ಕೂಡ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ.
ಇದನ್ನೂಓದಿ: ವೈರಲ್ ಆಗುತ್ತಿದೆ ಸಂಜಯ್ ದತ್ರ ಲೆಟೆಸ್ಟ್ ಫೋಟೋ: ಚಿಂತೆಗೀಡಾದ ಅಭಿಮಾನಿಗಳು..!
ಆ ಬಳಿಕ 2021ರ ಏಪ್ರಿಲ್ ತಿಂಗಳಲ್ಲಿ 'ಬೆಲ್ ಬಾಟಮ್' ತೆರೆಗೆ ಬರಲಿದೆ. ಇನ್ನು ಅಕ್ಷಯ್ ಕುಮಾರ್ ನಟಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ಪೃಥ್ವಿರಾಜ್' ಹಾಗೂ 'ಅತರಂಗಿ ರೇ' ಸಿನಿಮಾಗಳ ಚಿತ್ರೀಕರಣ ಕೂಡ ಭರದಿಂದ ಸಾಗಿದೆ. ಮಾತ್ರವಲ್ಲ ಲಾಕ್ಡೌನ್ ಸಂಪೂರ್ಣವಾಗಿ ಅನ್ಲಾಕ್ ಆದ ಬಳಿಕ ಇನ್ನೂ ಕೆಲ ಸಿನಿಮಾಗಳು ಸೆಟ್ಟೇರಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ