Rachel David: ಮಲಯಾಳಂನಲ್ಲಿ ಬೆಂಗಳೂರು ಚೆಲುವೆ ರಚೆಲ್ ಡೇವಿಡ್ ಮಿಂಚಿಂಗ್; ಕನ್ನಡದಲ್ಲೂ ನಟಿಸುವ ಕನಸು ಕಾಣುತ್ತಿದ್ದಾರೆ

ಮಲಯಾಳಂ ಚಿತ್ರರಂಗದಲ್ಲಿ ಒಂದರ ಹಿಂದೊಂದು ಅವಕಾಶ ಪಡೆಯುತ್ತಿರುವ ರಚೆಲ್ ಅವರಿಗೆ ಕನ್ನಡ ಸೇರಿದಂತೆ ಇತರೆ ಭಾಷೆಗಳ ಸಿನಿಮಾಗಳಲ್ಲೂ ನಟಿಸುವ ಬಯಕೆಯಂತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ಜಾಹೀರಾತೊಂದರಲ್ಲಿ ರಚೆಲ್ ಕಾಣಿಸಿಕೊಂಡಿದ್ದಾರೆ.

news18-kannada
Updated:July 31, 2020, 1:09 PM IST
Rachel David: ಮಲಯಾಳಂನಲ್ಲಿ ಬೆಂಗಳೂರು ಚೆಲುವೆ ರಚೆಲ್ ಡೇವಿಡ್ ಮಿಂಚಿಂಗ್; ಕನ್ನಡದಲ್ಲೂ ನಟಿಸುವ ಕನಸು ಕಾಣುತ್ತಿದ್ದಾರೆ
Rachel David
  • Share this:
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹಲವರು ಕೇರಳಕ್ಕೆ ಹೋಗಿ, ಅಲ್ಲಿನ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ನಟಿ ರಚೆಲ್ ಡೇವಿಡ್ ಕೂಡಾ ಬೆಂಗಳೂರಿನ ನಂಟು ಹೊಂದಿದ್ದಾರೆ.  ತೀರಾ ಇತ್ತೀಚೆಗೆ ರಚೆಲ್ ಮಲಯಾಳಂನ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಎರಡು ಚಿತ್ರಗಳು ಅದಾಗಲೇ ತೆರೆಗೆ ಬಂದಿವೆ. ಈ ಸಿನಿಮಾಗಳನ್ನು ನೋಡಿದ ಜನ ಮತ್ತು ವಿಮರ್ಶಕರು ರಚೆಲ್ ಅಭಿನಯವನ್ನು ಅಪಾರವಾಗಿ ಮೆಚ್ಚಿದ್ದಾರೆ. ಈ ಕಾರಣದಿಂದ ಮಲಯಾಳಂ ಜೊತೆಗೆ ನೆರೆಯ ಭಾಷೆಗಳಿಂದಲೂ ಈಕೆಗೆ ಅವಕಾಶಗಳು ಅರಸಿ ಬರುತ್ತಿವೆ.

ಮಲಯಾಳಂ ಸೂಪರ್ ಸ್ಟಾರ್  ಮೋಹನ್ ಲಾಲ್ ಅವರ ಪುತ್ರ ಪ್ರಣವ್ ಮೋಹನ್ ಲಾಲ್ ಜೊತೆಗೆ ಇರುಪತಿಯೊನ್ನಮ್ ನೂಟ್ರಾಂಡು ಚಿತ್ರದಲ್ಲಿ ನಟಿಸುವ ಮೂಲಕ ರಚೆಲ್ ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡರು. ನಂತರ ಒರೊನ್ನನರ ಪ್ರಣಯಕದಾ ಚಿತ್ರ ಕೂಡಾ ರಚೆಲ್ ಗೆ ಉತ್ತಮ ಹೆಸರು ತಂದು ಕೊಟ್ಟಿದೆ. 2019ರಲ್ಲಿ ಬಿಡುಗಡೆಯಾದ ಈ ಚಿತ್ರಗಳ ಜೊತೆಗೆ ಕಬೀರಿಂದೆ ದಿವಸಂಗಳ್ ಮತ್ತು ಕಾವಲ್ ಚಿತ್ರಗಳಲ್ಲೂ ರಚೆಲ್ ನಟಿಸಿದ್ದಾರೆ.

ಮಲಯಾಳಂನ ಮತ್ತೊಬ್ಬ ಪ್ರಸಿದ್ಧ ನಟ ಸುರೇಶ್ ಗೋಪಿ ಅವರೊಟ್ಟಿಗೆ ನಟಿಸಿದ ಕಾವಲ್ ಸಿನಿಮಾದಲ್ಲಿ ಕೂಡಾ ರಚೆಲ್ ಅವರಿಗೆ ಚೆಂದದ ಪಾತ್ರ ದೊರೆತಿದೆ. ಶಾಲಾ ವಿದ್ಯಾಭ್ಯಾಸ ಮುಗಿಸಿ ಕಾಲೇಜು ಮೆಟ್ಟಿಲೇರುತ್ತಿದ್ದಂತೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟವರು ರಚೆಲ್.  ಇವರ ತಂದೆ ಡೇವಿಡ್ ಮೂಲತಃ ಕೇರಳದವರು. ಬಹುಕಾಲದಿಂದ ಕರ್ನಾಟಕದಲ್ಲೇ ನೆಲೆಸಿ ಮೈಸೂರಿನಲ್ಲಿ ಗಾರ್ಮೆಂಟ್ಸ್ ಉದ್ಯಮ ನಡೆಸುತ್ತಿದ್ದಾರೆ. ತಾಯಿ ಕೂಡಾ ಖಾಸಗಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ರಚೆಲ್ ಅವರಿಗೆ ಒಬ್ಬ ಸಹೋದರಿ ಇದ್ದು, ಅವರೂ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿಷಪ್ ಕಾಟನ್ ಶಾಲೆಯಲ್ಲಿ ಓದು ಮುಗಿಸಿದ ರಚೆಲ್ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿದರು. ನಂತರ ಸಂತ ಜೋಸೆಫರ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದರು. ಅಷ್ಟೊತ್ತಿಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ರಚೆಲ್ ಸಾಕಷ್ಟು ಟೀವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದಾಗಿ ಚಿತ್ರರಂಗದಿಂದಲೂ ಅವಕಾಶಗಳು ಅರಸಿಬಂದವು. ಛಾನ್ಸು ಸಿಕ್ಕ ಕೂಡಲೇ ಹೋಗಿ ನಟಿಸಿದರೆ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಆಗುತ್ತದೋ ಇಲ್ಲವೋ ಎನ್ನುವ ಕಾರಣಕ್ಕೆ ತಕ್ಷಣಕ್ಕೆ ಬಂದ ಅವಕಾಶಗಳನ್ನು ಒಪ್ಪಿಕೊಳ್ಳದ ರಚೆಲ್ ಮುಂಬೈನಲ್ಲಿರುವ ಅನುಪಮ್ ಕೇರ್ ಅವರ ಇನ್ಸ್ಟಿಟ್ಯೂಟಿಗೆ ಸೇರಿದರು. ಅಲ್ಲಿ ಕಲಿತು ಬಂದ ನಂತರ ಸಿನಿಮಾ ಅವಕಾಶಗಳನ್ನು ಒಪ್ಪಿಕೊಂಡರು. ಆ ಮೂಲಕ ಶುರುವಾದ ಸಿನಿಮಾ ಇರುಪತಿಯೊನ್ನಮ್ ನೂಟ್ರಾಂಡು.

ಮಲಯಾಳಂ ಚಿತ್ರರಂಗದಲ್ಲಿ ಒಂದರ ಹಿಂದೊಂದು ಅವಕಾಶ ಪಡೆಯುತ್ತಿರುವ ರಚೆಲ್ ಅವರಿಗೆ ಕನ್ನಡ ಸೇರಿದಂತೆ ಇತರೆ ಭಾಷೆಗಳ ಸಿನಿಮಾಗಳಲ್ಲೂ ನಟಿಸುವ ಬಯಕೆಯಂತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ಜಾಹೀರಾತೊಂದರಲ್ಲಿ ರಚೆಲ್ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ರಂಥ ಸ್ಟಾರ್ ನಟನ ಜೊತೆಗೆ ಜಾಹೀರಾತಿನಲ್ಲಿ ನಟಿಸಿದ್ದು, ಅವರೊಟ್ಟಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಇಷ್ಟು ದೊಡ್ಡ ನಟನಾದರೂ ತೀರಾ ಸರಳವಾಗಿರುವ ಅವರ ವ್ಯಕ್ತಿತ್ವ ಮಾದರಿಯಾಗಿದೆ ಎನ್ನುತ್ತಾರೆ ರಚೆಲ್.

ಕನ್ನಡ ನೆಲದಲ್ಲಿ ಹುಟ್ಟಿಬೆಳೆದ ರಚೆಲ್ ಕೇರಳ ಚಿತ್ರರಂಗದಲ್ಲಿ ಈಗಾಗಲೇ ಎಲ್ಲರಿಗೂ ಪರಿಚಿತರಾಗಿದ್ದಾರೆ. ಪ್ರತಿಭಾವಂತೆ  ಎನ್ನುವ ಹೆಸರು ಮಾಡಿದ್ದಾರೆ. ಕನ್ನಡ ಚಿತ್ರರಂಗದಿಂದ ಉತ್ತಮ ಅವಕಾಶಗಳು ಬಂದರೆ ಪಾತ್ರ ನಿರ್ವಹಿಸಬೇಕು ಎನ್ನುವ ಹಂಬಲ ಈಕೆಯದ್ದು. ಅತಿ ಶೀಘ್ರದಲ್ಲೇ ರಚೆಲ್ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಡಿಗೆ ಪರಿಚಯಗೊಳ್ಳಲಿದ್ದಾರೆ.
Published by: Rajesh Duggumane
First published: July 31, 2020, 12:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading