ಜಮೀರ್ ಅಹಮದ್ ಖಾನ್ ಅವರ ಮಗ ಝೈದ್ ಖಾನ್ (Zaidkhan) ಹಾಗೂ ನಟಿ ಸೋನಾಲ್ ಮಾಂಟೆರೊ (Sonal Monteiro) ನಾಯಕ,-ನಾಯಕಿಯಾಗಿ ನಟಿಸಿರುವ ಸಿನಿಮಾ ಬನಾರಸ್. ಜಯತೀರ್ಥ (Jayathirtha) ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಬನಾರಸ್ನ ಫಸ್ಟ್ ಲುಕ್ (Banaras First Look Poster) ಹಾಗೂ ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ವಿಶೇಷ ಅಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿಯ (Puneeth Rajkumar Memorial) ಮುಂದೆ ಪೋಸ್ಟರ್ ಅನ್ನು ರಿಲೀಸ್ ಮಾಡಿರುವುದು. ಇದಕ್ಕೂ ಮುನ್ನ ಚಿತ್ರತಂಡ ಡಾ. ರಾಜಕುಮಾರ್ (Rajkumar), ಪಾರ್ವತಮ್ಮ ರಾಜ್ಕುಮಾರ್ (Pravathamma Rajkumar), ಅಂಬರೀಷ್ (Ambareesh) ಹಾಗೂ ಪುನೀತ್ ರಾಜ್ಕುಮಾರ್ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿತು. ಕಂಠೀರವ ಸ್ಟುಡಿಯೋದಿಂದ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ (Vishnuvardhan) ಅವರ ಸಮಾಧಿಗೂ ಪೂಜೆ ಸಲ್ಲಿಸಿ, ಲಕ್ಷ್ಮೀ ಪೂಜೆ ಮಾಡಿ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಸಂಸ್ಥೆಯ ಕಡೆಯಿಂದ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಬನಾರಸ್ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್ಕ್ಗೆ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ.
ಇಡೀ ಚಿತ್ರದ ಅದ್ಧೂರಿತನ ಮತ್ತು ವಿಭಿನ್ನ ಕಥಾನಕದ ಸುಳಿವನ್ನು ಈ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ನೀಡಿದೆ. ಹಲವಾರು ಅದ್ಭುತಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಈ ಚಿತ್ರದ 90ರಷ್ಟು ಭಾಗದ ಚಿತ್ರೀಕರಣವನ್ನು ಬನಾರಸ್ನ ಮನಮೋಹಕ ಪರಿಸರದಲ್ಲಿ ನಡೆಸಲಾಗಿದೆ. ಇಲ್ಲಿನ 84 ಘಾಟ್ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿರುವುದು ಬನಾರಸ್ನ ಮತ್ತೊಂದು ಪ್ರಧಾನ ಅಂಶ.
ಇದನ್ನೂ ಓದಿ: ವಿಭಿನ್ನ ಪಾತ್ರದೊಂದಿಗೆ ನಾಲ್ಕು ವರ್ಷಗಳ ನಂತರ ಬಣ್ಣದ ಲೋಕಕ್ಕೆ ಮರಳಿದ ನಟಿ Prema
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಯಾರೂ ನಿರೀಕ್ಷಿಸದಂತ ದುರಂತ ಘಟಿಸದಿದ್ದರೆ ಈ ದಿನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರೇ ಖುದ್ದಾಗಿ ಬನಾರಸ್ನ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ಕನ್ನು ಬಿಡುಗಡೆಗೊಳಿಸ ಬೇಕಿತ್ತು. ದುರಾದೃಷ್ಟವಶಾತ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಅವರು ತೋರಿದ ಪ್ರೀತಿಯನ್ನು ಮನಸಲ್ಲಿಟ್ಟುಕೊಂಡು ಅವರ ಪುಣ್ಯಭೂಮಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಲಿಂದಲೇ ಅಪ್ಪು ಖುಷಿಯಾಗಿ ಹರಸುತ್ತಾರೆಂಬ ತುಂಬು ನಂಬಿಕೆ ಚಿತ್ರ ತಂಡಕ್ಕಿದೆ.
![]()
ಬನಾರಸ್ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ಚಿತ್ರತಂಡ
ಪೂಜೆ ಮತ್ತು ಫಸ್ಟ್ ಲುಕ್ ಬಿಡುಗಡೆಯ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಜಯತೀರ್ಥ, ನಾಯಕ ನಾಯಕಿಯರಾದ ಝೈದ್ ಖಾನ್, ಸೋನಲ್ ಮಾಂಟೆರೊ, ಖ್ಯಾತ ಹಾಸ್ಯ ನಟ ಸುಜಯ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: Sandalwood: 'ಇನ್' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರಾಗಿರುವ ಬನಾರಸ್, ದೇಶವ್ಯಾಪಿ ಸದ್ದು ಮಾಡಲಿದೆ. ಈಗಾಗಲೇ ಈ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದೆ. ಅದೆಲ್ಲಕ್ಕೂ ಕಳಶವಿಟ್ಟಂತೆ ಈಗ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ಇದಕ್ಕೆ ಸಿಗುತ್ತಿರುವ ಭರಪೂರ ಪ್ರತಿಕ್ರಿಯೆ ಚಿತ್ರತಂಡದಲ್ಲಿ ಹೊಸಾ ಹುರುಪು ಮೂಡಿಸಿದೆ. ಹೊಸ ಪ್ರತಿಭೆ ಮತ್ತು ಹೊಸತನದ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಕಾಲವೂ ಇರಲಿ ಎನ್ನುವುದು ಚಿತ್ರತಂಡದ ಮನವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ