ವಿಷ್ಣುವರ್ಧನ್ ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಪ್ರಮುಖರು. ಹಲವು ವರ್ಷಗಳಿಂದ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿ ಅಭಿಮಾನಿಗಳು ಹಾಗೂ ವಿಷ್ಣುವರ್ಧನ್ ಅವರ ಕುಟುಂಬದವರು ಹೋರಟ ನಡೆಸಿದ್ದರು. ಅದರ ಫಲವಾಗಿ ಇಂದು ನಟನ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆಂದು ಮೈಸೂರಿನ ಹಾಲಾಳು ಗ್ರಾಮದಲ್ಲಿ 5 ಏಕರೆ ಭೂಮಿ ನೀಡಲಾಗಿದ್ದು, ಅಲ್ಲೇ ಶಂಕು ಸ್ಥಾಪನೆ ಕಾರ್ಯ ನೆರವೇರಿದೆ. ಕೊರೋನಾ ಕಾರಣದಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಿಗ್ಗೆ 10-45ಕ್ಕೆ ವಿಷ್ಣುವರ್ಧನ್ ಸ್ಮಾರಕದ ಅಡಿಗಲ್ಲು ಇಡುವ ಪೂಜಾ ಕಾರ್ಯಕ್ಕೆ ಆನ್ಲೈನ್ ಮೂಲಕ ಚಾಲನೆ ನೀಡಿದರು. 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಭಾರತಿ ವಿಷ್ಣುವರ್ಧನ್ ಹಾಗೂ ಅವರ ಕುಟುಂಬದವರು ಶಂಕುಸ್ಥಾಪನೆ ಮಾಡುವ ಸ್ಥಳದಲ್ಲಿದ್ದರು. ಆನ್ಲೈನ್ನಲ್ಲಿ ಶಂಕುಸ್ಥಾಪನೆ ಕೆಲಸಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ಭಾರತಿ ವಿಷ್ಣುವರ್ಧನ್ ಅವರು ಭೂಮಿ ಪೂಜೆ ಮಾಡಿ ಅಡಿಗಲ್ಲು ಇಟ್ಟಿದ್ದಾರೆ.
11 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕ ನಿರ್ಮಾಣದ ಗುತ್ತಿಗೆಯನ್ನು ಪೊಲೀಸ್ ವಸತಿ ನಿಗಮಕ್ಕೆ ನೀಡಲಾಗಿದೆ. ಎಂ-9 ಡಿಸೈನ್ ಸ್ಟುಡಿಯೋದಿಂದ ಆರ್ಕಿಟೆಕ್ ಡಿಸೈನ್ ಮಾಡಿಸಲಾಗುತ್ತಿದೆ. ಈ ಸ್ಮಾರಕ ಭವನದಲ್ಲಿ ವಿಷ್ಣು ಪುತ್ಥಳಿ, ಆಡಿಟೋರಿಯಂ , ಫೋಟೋ ಗ್ಯಾಲರಿ, ಉದ್ಯಾನವನ, ನೀರಿನ ಕಾರಂಜಿ ಸಹ ಇರಲಿದೆ.
ಕೇವಲ ಅರ್ಧ ಘಂಟೆಯಲ್ಲಿ ಮುಗಿದ ಈ ಕಾರ್ಯಕ್ರಮವನ್ನು ವಾರ್ತಾ ಇಲಾಖೆಯಿಂದ ಆಯೋಜಿದ್ದು, ಶಾಸಕ ಜಿ.ಟಿ.ದೇವೆಗೌಡ ಅಧ್ಯಕ್ಷತೆ ವಹಿಸಿದ್ದರು.
ವಿಷ್ಣುವರ್ಧನ್ ಅವರ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಿಸಬೇಕೆಂದು ಮೊದಲಿನಿಂದ ವಿಷ್ಣು ಕುಟುಂಬದವರ ಬೇಡಿಕೆ ಇತ್ತು. ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಬೇಕೆಂದು ಅಭಿಮಾನಿಗಳು ರಸ್ತೆಗಿಳಿದು ಪ್ರತಿಭಟಿಸಿದ್ದರು. ಆದರೆ ಅದು ಆಗಲಿಲ್ಲ. ನಂತರ ಕಂಠೀರವ ಸ್ಟುಡಿಯೋದಲ್ಲಿ ಮಾಡುವಂತೆ ಅಭಿಮಾನಿಗಳು ಒತ್ತಡ ಹೇರಲಾರಂಭಿಸಿದರು. ಅದೂ ಆಗಲಿಲ್ಲ. ಇದೇ ಕಾರಣದಿಂದಾಗಿ ವಿಷ್ಣು ಸ್ಮಾರಕವನ್ನು ಮೈಸೂರಿನಲ್ಲಿ ಮಾಡಲು ನಿರ್ಧರಿಸಲಾಯಿತು. ಕೊನೆಗೂ ವಿಷ್ಣು ಸ್ಮಾರಕ ನಿರ್ಮಾಣ ಕೆಲಸಕ್ಕೆ ಈಗ ಚಾಲನೆ ಸಿಕ್ಕಿದೆ. ಇದರಿಂದಾಗಿ ಅಭಿಮಾನಿಗಳಿಗೆ ಕೊಂಚ ನಿರಾಳವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ