Avane Srimannarayana Review: ಅಮರಾವತಿಯ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ ಶ್ರೀಮನ್ನಾರಾಯಣ

ASN Review: ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ರಕ್ಷಿತ್​ ಶೆಟ್ಟಿ ಕನಸು. ರಕ್ಷಿತ್​ ಶೆಟ್ಟಿ, ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ಆ್ಯಂಡ್ ಟೀಂ ಈ ಸಿನಿಮಾಗಾಗಿ ಮೂರು ವರ್ಷ ಶ್ರಮ ಪಟ್ಟಿದೆ. ಈ ಶ್ರಮ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಮೇಕಿಂಗ್​, ಹಿನ್ನೆಲೆ ಸಂಗೀತ, ಡೈಲಾಗ್​ ವಿಚಾರದಲ್ಲಿ ಸಿನಿಮಾ ಅಂಕ ಗಿಟ್ಟಿಸಿಕೊಳ್ಳುತ್ತದೆ.

Rajesh Duggumane | news18-kannada
Updated:December 27, 2019, 9:43 AM IST
Avane Srimannarayana Review: ಅಮರಾವತಿಯ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ ಶ್ರೀಮನ್ನಾರಾಯಣ
ಅವನೇ ಶ್ರೀಮನ್ನಾರಾಯಣ ಪೋಸ್ಟರ್​
  • Share this:
ಚಿತ್ರ: ಅವನೇ ಶ್ರೀಮನ್ನಾರಾಯಣ
ನಿರ್ದೇಶನ: ಸಚಿನ್​ ರವಿ
ಪಾತ್ರ ವರ್ಗ: ರಕ್ಷಿತ್​ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ಅಚ್ಯುತ್​ ಕುಮಾರ್, ಬಾಲಾಜಿ ಮನೋಹರ್​, ಪ್ರಮೋದ್​ ಶೆಟ್ಟಿ

ನಿರ್ಮಾಣ: ಪುಷ್ಕರ್​ ಮಲ್ಲಿಕಾರ್ಜುನಯ್ಯ
ಅಂಕ : **** /5


ಒಂದು ಊರು. ಅಲ್ಲಿ ಗೂಂಡಾಗಳ ಹಾವಳಿ. ಇದನ್ನು ತಡೆಯಲು ಬರೋ ಪೊಲೀಸ್​. ಆರಂಭದಲ್ಲಿ ಪೊಲೀಸ್ ತೆಪ್ಪಗಿರುತ್ತಾನೆ. ನಂತರ ಗೂಂಡಾಗಳು ಮಾಡುವ ಉಪಟಳ ತಾಳಲಾರದೆ ವೈಲೆಂಟ್​ ಆಗುತ್ತಾನೆ. ಈ ಮಧ್ಯೆ ಒಂದು ಲವ್​ ಸ್ಟೋರಿ. ಇದು ಸಾಮಾನ್ಯ ಚಿತ್ರಗಳಲ್ಲಿರುವ ಕಥೆ. ಆದರೆ, ‘ಅವನೇ ಶ್ರೀಮನ್ನಾರಾಯಣ’ದಲ್ಲಿ ಎಲ್ಲವೂ ಭಿನ್ನ. ಇಲ್ಲಿ, ಗೂಂಡಾಗಳಿದ್ದಾರೆ, ಪೊಲೀಸ್ ಕೂಡ ಇದ್ದಾನೆ. ಆದರೆ, ಈ ಪೊಲೀಸ್​ ಎಲ್ಲರಂತಲ್ಲ. ಡಕಾಯಿತರೂ ಕೂಡ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇಡೀ ಚಿತ್ರವೇ ಕನ್ನಡ ಪ್ರೇಕ್ಷಕರಿಗೆ ಒಂದು ಹೊಸ ಅನುಭವ.

ಅಮರಾವತಿ ಎನ್ನುವ ಊರು. ಅಲ್ಲಿ ನಾಟಕ ಕಂಪನಿಯರವು ಲೂಟಿ ಮಾಡಿ ತಂದ ನಿಧಿಯ ಮೇಲೆ ಆ ಊರಿನ ಡಕಾಯಿತ ಗುಂಪಿನ ನಾಯಕ ಕಣ್ಣಿಡುತ್ತಾನೆ. ನಾಟಕ ಕಂಪನಿಯವರು ಲೂಟಿ ಮಾಡಿದ್ದ ಚಿನ್ನವನ್ನು ಸಾಗಿಸುತ್ತಿರುವ ಟ್ರಕ್​ ಅಡ್ಡಗಟ್ಟಿ ಡಕಾಯಿತ ಗುಂಪಿನ ನಾಯ ಅವರೆಲ್ಲರನ್ನೂ ಕೊಂದು ಬಿಡುತ್ತಾನೆ, ವಾದ್ಯ ಊದುವನನ್ನು ಹೊರತುಪಡಿಸಿ. ನಂತರ ಲಾರಿಯ ಬಾಗಿಲು ತೆಗೆದು ನೋಡಿದಾಗ ಅಲ್ಲಿ ಬಾಕ್ಸ್​​ ಇರುವುದೇನೋ ಹೌದು, ಆದರೆ ಚಿನ್ನ ಇರುವುದಿಲ್ಲ! ರಹಸ್ಯ ಗೊತ್ತಿದ್ದ ವಾದ್ಯ ಊದುವವನು ಶಾಕ್​ಗೆ ಒಳಗಾಗುತ್ತಾನೆ. ಈ ಮೂಲಕ ಲೂಟ್​ ಮಾಡಿದ ಚಿನ್ನ ಎಲ್ಲಿಟ್ಟಿದ್ದಾರೆಂಬುದು ಚಿದಂಬರ ರಹಸ್ಯವಾಗಿ ಬಿಡುತ್ತದೆ.ಇದೇ ಕೊರಗಲ್ಲಿ ಅಮರಾವತಿಯ ಡಕಾಯಿತ ಮುಖ್ಯಸ್ಥ​ ಹಾಸಿಗೆ ಹಿಡಿಯುತ್ತಾನೆ. ತಂದೆ ಹಾಸಿಗೆ ಹಿಡಿದ ಕೂಡಲೇ ಇಬ್ಬರು ಮಕ್ಕಳು ಜಯರಾಮ್​ (ಬಾಲಾಜಿ ಮನೋಹರ್​) ಹಾಗೂ ತುಕಾರಾಮ್​ (ಪ್ರಮೋದ್​ ಶೆಟ್ಟಿ) ತಂದೆಯ ಸ್ಥಾನಕ್ಕೆ ಪೈಪೋಟಿ ನಡೆಸುತ್ತಾರೆ. ಡಾನ್​ ಸತ್ತ ನಂತರ ಜಯರಾಮ್​ ಹಾಗೂ ತುಕಾರಾಮ್​ ಕಾಣೆಯಾದ ಲೂಟ್​ಗೆ ಹುಡುಕಾಟ ಆರಂಭಿಸುತ್ತಾರೆ. ಈ ಆರಂಭದಿಂದಲೇ ಸಿನಿಮಾದ ಕಥೆ ಶುರುವಾಗುತ್ತದೆ.

ಲೂಟಿ ಹುಡುಕಲು ಹೊರಟು ನಿಂತ ಜಯರಾಮ್​ ಹಾಗೂ ತುಕಾರಾಮ್​ಗೆ ಎದುರಾಗುವುದು ಗಂಭೀರತೆಯೇ ಇಲ್ಲದ ಪೊಲೀಸ್​ ನಾರಾಯಣ (ರಕ್ಷಿತ್​ ಶೆಟ್ಟಿ). ಈ ನಾರಾಯಣ ಪಕ್ಕಾ ಡಬಲ್​ಗೇಮ್​. ‘ಮೂರು ಕೊಟ್ಟರೆ ಅತ್ತೆ ಕಡೆ, ಆರು ಕೊಟ್ಟರೆ ಸೊಸೆ ಕಡೆ’ ಎನ್ನುವ ಮಾತನ್ನು ಶಿರಸಾ ಪಾಲಿಸುತ್ತಾ ಬಂದವನು ನಾರಾಯಣ. ಈ ಮಧ್ಯೆ ಆತನಿಗೆ ಎದುರಾಗುವ ಲಕ್ಷ್ಮಿ (ಶಾನ್ವಿ) ಕಥೆಗೆ ಒಂದು ಟ್ವಿಸ್ಟ್​ ಕೊಡುತ್ತಾಳೆ. ಅಷ್ಟಕ್ಕೂ ಆ ಟ್ವಿಸ್ಟ್​ ಏನು? ಯಾರು ಆ ಲೂಟಿಯನ್ನು ಹುಡುಕುತ್ತಾರೆ? ಕೊನೆಗೆ ಅದು ಯಾರ ಪಾಲಾಗುತ್ತದೆ? ಜಯರಾಮ್​ ಹಾಗೂ ತುಕಾರಾಮ್​ ಏನಾಗುತ್ತಾರೆ? ಎನ್ನುವುದುನ್ನು ಚಿತ್ರದಲ್ಲಿ ಕಣ್ತುಂಬಿಕೊಳ್ಳಬೇಕು.

‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ರಕ್ಷಿತ್​ ಶೆಟ್ಟಿಯ ಕನಸು. ರಕ್ಷಿತ್​ ಶೆಟ್ಟಿ, ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ಆ್ಯಂಡ್ ಟೀಂ ಈ ಸಿನಿಮಾಗಾಗಿ ಮೂರು ವರ್ಷ ಶ್ರಮ ಪಟ್ಟಿದೆ. ಈ ಶ್ರಮ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಮೇಕಿಂಗ್​, ಹಿನ್ನೆಲೆ ಸಂಗೀತ, ಡೈಲಾಗ್​ ವಿಚಾರದಲ್ಲಿ ಸಿನಿಮಾ ಅಂಕ ಗಿಟ್ಟಿಸಿಕೊಳ್ಳುತ್ತದೆ. ರಕ್ಷಿತ್ ನಟನೆಯ ಎಲ್ಲಾ​ ಸಿನಿಮಾದಲ್ಲಿ ಹಾಡು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಈ ಚಿತ್ರದಲ್ಲೂ ಹಾಡುಗಳು ಗುನುಗುವಂತಿವೆ. ಇಮ್ರಾನ್​ ಸರ್ದಾರಿಯಾ ಕೊರಿಯೋಗ್ರಫಿ ಕಣ್ಣಿಗೆ ವೈಭವ ನೀಡುತ್ತದೆ. ಸಿನಿಮಾದ ಪ್ರತಿ ಫ್ರೇಮ್​ಗಳೂ ಅದ್ದೂರಿತನದಿಂದ ಕೂಡಿದ್ದು, ಕನ್ನಡ ಪ್ರೇಕ್ಷಕರ ಪಾಲಿಗೆ ಹೊಸ ಅನುಭವ ನೀಡುವುದಂತೂ ಸುಳ್ಳಲ್ಲ.

ನಾಯಕ ರಕ್ಷಿತ್​ ಶೆಟ್ಟಿ ಪೊಲೀಸ್​ ಪಾತ್ರದಲ್ಲಿ ಮಿಂಚಿದ್ದಾರೆ. ಗಂಭೀರತೆ ಇಲ್ಲದ ಪೊಲೀಸ್​ ಆಗಿ ಕಾಣಿಸಿಕೊಂಡ ರಕ್ಷಿತ್​ ಶೆಟ್ಟಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಇಡೀ ಸಿನಿಮಾದಲ್ಲಿ ಅವರೇ ತುಂಬಿಕೊಂಡಿದ್ದು, ನಟನೆ, ಸ್ಟೈಲ್​, ಡಾನ್ಸ್​​, ಫೈಟಿಂಗ್​ನಲ್ಲಿ ಅವರು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಇನ್ನು, ನಟನೆಯಲ್ಲಿ ಶಾನ್ವಿ ಶ್ರೀವಾಸ್ತವ ಅಂಕ ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕನ್ನಡದಲ್ಲಿ ಡಬ್​ ಮಾಡಿದ್ದು, ಈ ನಟಿ ಕರ್ನಾಟಕದಲ್ಲೇ ಹುಟ್ಟಿ ಬೆಳೆದಿದ್ದರೇನೋ ಎನ್ನುವ ಫೀಲ್​ ಕೊಡುತ್ತದೆ. ಇನ್ನು, ಕಾನ್​​ಸ್ಟೇಬಲ್​ ಅಚ್ಯುತಣ್ಣನಾಗಿ ಕಾಣಿಸಿಕೊಳ್ಳುವ ಅಚ್ಯುತ್​ ಕುಮಾರ್ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ. ಜಯರಾಮ್​ ಹಾಗೂ ತುಕಾರಾಮ್​ ಆಗಿ ಕಾಣಿಸಿಕೊಂಡ ಬಾಲಾಜಿ ಮನೋಹರ್​ ಹಾಗೂ ಪ್ರಮೋದ್​ ಶೆಟ್ಟಿ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಹಾಗಾದರೆ ಈ ಸಿನಿಮಾ ಅಷ್ಟೊಂದು ಫರ್ಪೆಕ್ಟಾ? ಎಂದು ಪ್ರಶ್ನೆ ಮಾಡಬೇಡಿ. ಸಿನಿಮಾ ಎಂದಮೇಲೆ ಅದಕ್ಕೆ ಕೆಲವೊಂದು ಮೈನಸ್​ ಪಾಯಿಂಟ್​ ಇದ್ದೇ ಇರುತ್ತದೆ. ಈ ಸಿನಿಮಾ ಹಾಲಿವುಡ್​ನ ‘ಪೈರೇಟ್ಸ್​ ಆಫ್​ ದಿ ಕೆರೇಬಿಯನ್​’ ಹಾಗೂ ‘ಶರ್ಲಾಕ್​​ ಹೋಮ್ಸ್​’ನ ಸ್ಫೂರ್ತಿ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಕೆಲ ದೃಶ್ಯಗಳು ಇದನ್ನು ನೆನಪಿಸುತ್ತವೆ. ಆರಂಭದಲ್ಲಿ ಕೊಂಚ ನಿಧಾನ ಎನಿಸಿದರೂ ನಂತರ ಸಿನಿಮಾ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಕಾಣೆಯಾದ ಲೂಟ್​ ಹುಡುಕುವಾಗ ಕೆಲ ದೃಶ್ಯಗಳು ನಿಮ್ಮನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತವೆ.

ಅಂದಹಾಗೆ, 'ಅವನೇ ಶ್ರೀಮನ್ನಾರಾಯಣ' ಸಿನಿಮಾ 3 ಗಂಟೆ 6 ನಿಮಿಷಗಳ ಕಾಲ ಇದೆ. ಹೀಗಾಗಿ, ಅಲ್ಲಲ್ಲಿ ಸ್ವಲ್ಪ ಕತ್ತರಿ ಪ್ರಯೋಗ ಮಾಡಿದ್ದರೆ ಸಿನಿಮಾ ಇನ್ನಷ್ಟು ಬಿಗಿಯಾಗುತ್ತಿತ್ತು.  ಇದು ಫ್ಯಾಂಟಸಿ ಸಿನಿಮಾವಾದ್ದರಿಂದ ನೀವಿಲ್ಲಿ ಲಾಜಿಕ್​ಗಳನ್ನು ಹುಡುಕುವ ಗೋಜಿಗೆ ಹೋಗಬಾರದು. ಸಿನಿಮಾವನ್ನು ಸಿನಿಮಾವಾಗಿ ಮಾತ್ರ ನೋಡಿ ಎಂಜಾಯ್ ಮಾಡುತ್ತೀರಿ ಎಂದಾದರೆ 'ಅವನೇ ಶ್ರೀಮನ್ನಾರಾಯಣ' ನಿಮಗೆ ಹೇಳಿಮಾಡಿಸಿದ್ದು.

‘ನಾಳೆ ದಿನ ಯಾರಾದರೂ ಇತಿಹಾಸ ಬರೆದರೆ ಅದರಲ್ಲಿ ಎರಡು ಭಾಗ ಇರುತ್ತದೆ. ಒಂದು ನೀವು ಅವರನ್ನು ಭೇಟಿ ಆಗುವ ಮೊದಲು. ಮತ್ತೊಂದು ನೀವು ಅವನನ್ನು ಭೇಟಿ ಆದ ನಂತರ’ ಎನ್ನುವ ಡೈಲಾಗ್​ನಂತೆ, ಈ ಸಿನಿಮಾ ಇತಿಹಾಸ ಸೃಷ್ಟಿಸುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ಕೆಲ ಚಿಕ್ಕಪುಟ್ಟ ಋಣಾತ್ಮಕ ಅಂಶವನ್ನು ಕಡೆಗಣಿಸಿ ಸಿನಿಮಾ ನೋಡಿದರೆ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿಮಗೆ ಇಷ್ಟವಾಗಲಿದೆ.

 
First published:December 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ