ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಅವರು ಅಗಲಿದಾಗಿನಿಂದ ಇನ್ನೂ ಸಹ ಸ್ಯಾಂಡಲ್ವುಡ್ ಸೇರಿದಂತೆ ಅವರ ಕುಟುಂಬ ನೋವಿನಿಂದ ಹೊರ ಬಂದಿಲ್ಲ. ಇದರ ನಡುವೆಯೇ ಮೇಘನಾ ರಾಜ್ ಅವರ ಸೀಮಂತ ಸಹ ನಡೆಯಿತು. ಪತಿ ಇಲ್ಲ ನೋವು ಒಂದು ಕಡೆಯಾದರೆ, ಮನೆಗೆ ಹೊಸ ಅತಿಥಿಯ ಆಗಮನ ಖುಷಿ. ಈ ನೋವು ಆನಂದದ ಕ್ಷಣದಲ್ಲಿ ಚಿರು ಹಾಗೂ ಮೇಘನಾ ಅವರ ಕುಟುಂಬ ಭಾಗಿಯಾಗಿತ್ತು. ಒಂದು ಕಡೆ ಮೇಘನಾ ಅವರ ಸೀಮಂತ ಕಾರ್ಯಕ್ರಮದ ಫೋಟೋಗಳು ವೈರಲ್ ಆಗುತ್ತಿವೆ. ಮೇಘನಾ ಅವರ ಸೀಮಂತದಂದು ಚಿರು ಅವರ ಉದ್ದದ ಕಟೌಟ್ ಅನ್ನು ನಿಲ್ಲಿಸಲಾಗಿತ್ತು. ಅದನ್ನು ಮೇಘನಾ ಅವರ ಪಕ್ಕದಲ್ಲೇ ನಿಲ್ಲಿಸಲಾಗಿತ್ತು. ಈ ಫೋಟೋಗಳನ್ನು ನೆಟ್ಟಿಗರು ಚಿರು ಅವರ ಬೇರೆ ಫೋಟೋಗಳನ್ನು ಮೇಘನಾ ಅವರ ಸೀಮಂತದ ಫೋಟೋಗಳಿಗೆ ಸೇರಿಸಿ ಫೋಟೋಶಾಪ್ನಲ್ಲಿ ಎಡಿಟ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ನಿಜಕ್ಕೂ ಚಿರು ಮೇಘನಾರ ಸೀಮಂತದಲ್ಲಿ ಎಷ್ಟು ಖುಷಿಯಿಂದ ಭಾಗಿಯಾಗಿದ್ದರು ಎಂದೆನಿಸುವಂತಿವೆ ಈ ಫೋಟೋಗಳು.
ಮೇಘನಾ ಅವರ ಸೀಮಂತದ ಫೋಟೋಗೆ ಚಿರು ಅವರ ಹಳೆಯ ಫೋಟೋಗಳನ್ನು ಫೋಟೋಶಾಪ್ನಲ್ಲಿ ಸೇರಿಸಿ ಎಡಿಟ್ ಮಾಡಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ಈಗಲೂ ನೋಡಬಹುದು. ಆ ಫೊಟೋಗಳನ್ನು ನೋಡಿದರೆ, ಕರಳು ಕಿತ್ತು ಬರುವಂತಾಗುತ್ತದೆ. ಇನ್ನು ಕೆಲವು ಫೋಟೋಗಳನ್ನು ನೋಡಿದರೆ, ಚಿರು ನಮ್ಮೊಂದಿಗಿಲ್ಲ ಎಂದೆನಿಸುವುದೇ ಇಲ್ಲ. ಇಂತಹ ಫೋಟೋಗಳ ಪಟ್ಟಿಗೆ ಈಗ ಕಲಾವಿದ ಕರಣ್ ಆಚಾರ್ಯ ಅವರ ಕುಂಚದಲ್ಲಿ ಅರಳಿದ ಫೋಟೋ ಸಹ ಸೇರಿಕೊಂಡಿದೆ.
ಆ್ಯಂಗ್ರಿ ಹನುಮಾನ್ ಫೋಟೋದ ಮೂಲಕ ಗುರುತಿಸಿಕೊಂಡ ಕಲಾವಿದ ಆಚಾರ್ಯ ಈಗ ಮೇಘನಾ ಅವರ ಸೀಮಂತದ ಫೋಟೋಗೆ ಜೀವ ತುಂಬಿದ್ದಾರೆ. ಹೌದು, ಕರಣ್ ಆಚಾರ್ಯ ಅವರ ಅಭಿಮಾನಿಯೊಬ್ಬರು ಮೇಘನಾ ಅವರ ಫೋಟೋವನ್ನು ಕರಣ್ ಅವರಿಗೆ ಕಳುಹಿಸಿದ್ದಾರೆ. ಅದಕ್ಕೆ ಏನಾದರೂ ಮ್ಯಾಜಿಕ್ ಮಾಡಿ ಎಂದು ಮನವಿ ಮಾಡಿದ್ದಾರೆ.
ಅಭಿಮಾನಿ ಅಶೋಕ್ ಕುಮಾರ್ ಅವರ ಮನವಿಯ ಮೇರೆಗೆ ಕಲಾವಿದ ಕರಣ್ ಆಚಾರ್ಯ ಅವರು ಈ ಮ್ಯಾಜಿಕ್ ಮಾಡಿದ್ದಾರೆ. ಸದ್ಯ ಕರಣ್ ಅವರ ಕುಂಚದಲ್ಲಿ ಅರಳಿರುವ ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ