news18-kannada Updated:August 28, 2020, 8:42 AM IST
ಗುಲಾಂ ನಬಿ ಆಜಾದ್
ನವದೆಹಲಿ (ಆಗಸ್ಟ್ 28): ನಾಯಕತ್ವ ಬದಲಾವಣೆ ಕುರಿತು ಕಾಂಗ್ರೆಸ್ನ 23 ಹಿರಿಯ ನಾಯಕರು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆ ನಡೆದು ನಾಲ್ಕು ದಿನ ಕಳೆದಿದೆ. ಪತ್ರ ಬರೆದ 23 ನಾಯಕರಲ್ಲಿ ಒಬ್ಬರಾದ ಗುಲಾಮ್ ನಬಿ ಆಜಾದ್ ಈ ಬಗ್ಗೆ ಮೌನ ಮುರಿದಿದ್ದು, ಈಗಿರುವ ಅಧ್ಯಕ್ಷರಿಗೆ ಶೇಕಡಾ ಒಂದರಷ್ಟು ಬೆಂಬಲವೂ ಇರಲಿಕ್ಕಿಲ್ಲ ಎಂದಿದ್ದಾರೆ. ಈ ಮೂಲಕ ಸೋನಿಯಾ ಗಾಂಧಿ ಬಗ್ಗೆ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಗುಲಾಮ್ ನಬಿ ಆಜಾದ್, ಈಗ ಆಯ್ಕೆ ಆಗಿರುವ ಅಧ್ಯಕ್ಷರಿಗೆ ಯಾರ ಬೆಂಬಲವೂ ಇಲ್ಲ. ಬಹುಶಃ ಅವರಿಗೆ ಶೇ.1 ಮತ ಬೀಳಬಹುದು ಎಂದು ಹೇಳುವ ಮೂಲಕ ಸೋನಿಯಾ ಗಾಂಧಿ ವಿರುದ್ಧ ಹರಿಹಾಯ್ದರು.
“ಅಧ್ಯಕ್ಷರನ್ನು ಬದಲಾಯಿಸಬೇಕು ಎನ್ನುವ ನಮ್ಮ ಪತ್ರಕ್ಕೆ ರಾಜ್ಯ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಕಿಡಿಕಾರಿದ್ದಾರೆ. ದುರಾದೃಷ್ಟ ಎಂದರೆ ಚುನಾವಣೆ ನಡೆಯುವಾಗ ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಯಾರು ಕಾಂಗ್ರೆಸ್ ಮೇಲೆ ನಿಜವಾದ ಅಭಿಮಾನ ಹೊಂದಿದ್ದಾರೋ ಅವರು ಮಾತ್ರ ನಮ್ಮ ಕೋರಿಕೆಯನ್ನು ಬೆಂಬಲಿಸಿದ್ದಾರೆ,” ಎಂದು ಗುಲಾಬ್ ನಬಿ ಆಜಾದ್ ತಿಳಿಸಿದ್ದಾರೆ.
ಐದು ಮಾಜಿ ಸಿಎಂಗಳು, ಕಾಂಗ್ರೆಸ್ ಕಾರ್ಯ ಸಮಿತಿಯ ಸದಸ್ಯರು, ಸಂಸದರು, ಮಾಜಿ ಕೇಂದ್ರ ಸಚಿವರು ಸೇರಿ 23 ಕಾಂಗ್ರೆಸ್ ನಾಯಕರು ಈ ಬಗ್ಗೆ ಒಟ್ಟಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಪಕ್ಷದ ಪ್ರತಿ ಹಂತದಲ್ಲೂ ಬದಲಾವಣೆ ತರುವಂತೆ ನಾಯಕರು ಮನವಿ ಮಾಡಿದ್ದರು. "ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕನ ಅಗತ್ಯವಿದೆ. ಹೀಗಾಗಿ ಉನ್ನತ ಮಟ್ಟದ ಹುದ್ದೆಯಲ್ಲಿ ಜನರಿಗೆ ಹೆಚ್ಚು ಪರಿಚಯವಾಗಿರುವ ಹಾಗೂ ಪಕ್ಷದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ನಾಯಕನನ್ನು ಆಯ್ಕೆ ಮಾಡಬೇಕು ," ಎಂಬುದು 23 ನಾಯಕರು ಕೋರಿಕೆ ಆಗಿತ್ತು.
ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್, ಸಂಸದ ಹಾಗೂ ಮಾಜಿ ಸಚಿವ ಆನಂದ್ ಶರ್ಮಾ, ಕಪಿಲ್ ಸಿಬಾಲ್, ಮನೀಶ್ ತಿವಾರಿ, ಶಶಿ ತರೂರ್, ವಿವೇಕ್ ತನ್ಖಾ, ಸಿಡಬ್ಲ್ಯು ಸದಸ್ಯ ಮುಕುಲ್ ವಾನ್ಸಿಕ್ ಮತ್ತು ಜಿತಿನ್ ಪ್ರಸಾದ್, ಮಾಜಿ ಸಿಎಂ ಮತ್ತು ಮಾಜಿ ಕೇಂದ್ರ ಸಚಿವ ಭೂಪೇಂದ್ರ ಸಿಂಗ್ ಹೂಡಾ, ರಾಜೆಂದ್ರ ಕೌರ್, ಎಂ ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚೌಹಾಣ್ ಪತ್ರ ಬರೆದವರಲ್ಲಿ ಪ್ರಮುಖರು.
Published by:
Rajesh Duggumane
First published:
August 28, 2020, 8:42 AM IST