ಟಾಲಿವುಡ್ನ ವಿಡಂಸಿ (ವಿಜಯ ಮಾರುತಿ ಕ್ರಿಯೇಟೀವ್ಸ್) ಬ್ಯಾನರ್ ಹೆಸರಿನಲ್ಲಿ ತೆಲುಗಿನಲ್ಲಿ ಯಶಸ್ವಿಯಾಗಿ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದ ಖ್ಯಾತ ನಿರ್ಮಾಪಕ ವಿ ದೊರಸ್ವಾಮಿ ರಾಜು ಇನ್ನಿಲ್ಲ. ಇಂದು ಬೆಳಿಗ್ಗೆ ಹೃದಯಾಘಾತದಿಂದ ದೊರಸ್ವಾಮಿ ರಾಜು ಸಾವನ್ನಪ್ಪಿದ್ದಾರೆ. ನಿರ್ಮಾಪಕರಾಗಿ ಮಾತ್ರವಲ್ಲದೇ ವಿತರಕರಾಗಿಯೂ ವಿಎಂಸಿ ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆಯ ಮೂಲಕ ಸಾಕಷ್ಟು ಸಿನಿಮಾಗಳ ವಿತರಣೆ ಮಾಡಿದ್ದಾರೆ. 1978ರಲ್ಲಿ ವಿಎಂಸಿ ಸಂಸ್ಥೆಯನ್ನು ಆರಂಭಿಸಿದ ದೊರಸ್ವಾಮಿ ಅವರು, ತಮ್ಮ ಸಂಸ್ಥೆಗೆ ಮೇರುನಟ ಎಂಟಿಆರ್ ಅವರ ಕೈಯಲ್ಲಿ ಉದ್ಘಾಟನೆ ಮಾಡಿಸಿದ್ದರು. ಗುರುಶಿಷ್ಯುಲು, ಜಾನಕಿ ರಾಮುಡು, ಪ್ರೇಮಾಭಿಷೇಕಂನಂತಹ 750 ಸಿನಿಮಾಗಳ ವಿತರಕರಾಗಿದ್ದರು. ಟಾಲಿವುಡ್ನಲ್ಲಿ ರಾಯಲಸೀಮೆಯ ರಾಜು ಎಂಬ ಖ್ಯಾತಿ ಗಳಿಸಿದ್ದರು. ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಮಾಪಕ ದೊರಸ್ವಾಮಿ ರಾಜು ಅವರು ಬಂಜಾರಾ ಹಿಲ್ಸ್ನಲ್ಲಿರುವ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಸಿನಿ ರಂಗದಲ್ಲಿ ವಿತರಕರಾಗಿ ಕಾಲಿಟ್ಟ ದೊರಸ್ವಾಮಿ ರಾಜು ಅವರ ಪಯಣ ನಂತರ ವಿಯಂಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಪಕರಾಗಿ ಬಡ್ತಿ ಹೊಂದಿದರು. ಮೊದಲ ಬಾರಿಗೆ ಕೃಷ್ಣಂರಾಜು, ನಾಗಾರ್ಜುನ ನಾಯಕರಾಗಿ ನಟಿಸಿರುವ ಕಿರಾಯಿದಾದ ಸಿನಿಮಾವನ್ನು ವಿಯಂಸಿ ಬ್ಯಾನರ್ ಅಡಿ ನಿರ್ಮಿಸಿದರು. ಎ. ಕೋದಂರಾಮಿರೆಡ್ಡಿ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಹಿಟ್ ಆಗಿತ್ತು.
ನಂತರ ಅಕ್ಕಿನೇನಿ ನಾಗೇಶ್ವರ ರಾವ್ ಹಾಗೂ ಮೀನಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೀತಾರಾಮಯ್ಯಗಾರಿ ಮನವರಾಲು ಎಂಬ ಚಿತ್ರವನ್ನೂ ನಿರ್ಮಿಸಿ ಮತ್ತಷ್ಟು ಖ್ಯಾತಿ ಗಳಿಸಿದರು. ಆಮೇಲೆ ಕೋದಂಡರಾಮಿರೆಡ್ಡಿ ನಿರ್ದೇಶನದಲ್ಲಿ ಮೀನಾ ನಾಯಕಿಯಾಗಿ ನಟಿಸಿರುವ ಪ್ರೆಸಿಡೆಂಟ್ ಗಾರಿ ಪೆಳ್ಳಾಂ ಚಿತ್ರದ ಮೂಲಕ ಯಶಸ್ಸುಗಳಿಸಿದರು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಅಭಿನಯದ ತಾಂಡವ್ ವೆಬ್ ಸರಣಿ ವಿರುದ್ಧ ಎಫ್ಐಆರ್ ದಾಖಲು..!
ಮಾಧವಯ್ಯಗಾರಿ ಮನವಡು, ಅನ್ನಮಯ್ಯ, ಸಿಂಹಾದ್ರಿಯಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿ ಸ್ಟಾರ್ ನಿರ್ಮಾಪಕ ಎನಿಸಿಕೊಂಡರು. ದೊರಸ್ವಾಮಿ ರಾಜು ಅವರು ಹೆಚ್ಚಾಗಿ ಅಕ್ಕಿನೇನಿ ನಾಗೇಶ್ವರ ರಾವು ಹಾಗೂ ನಾಗಾರ್ಜುನ ಅವರ ಜೊತೆಯೇ ಸಿನಿಮಾಗಳನ್ನು ಮಾಡಿದ್ದು ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ