ನಟಿ ಅನಿತಾ ಹಸನಂದಾನಿ ಈಗ ಸಿಕ್ಕಾಪಟ್ಟೆ ಖುಷಿಯ ಮೂಡ್ನಲ್ಲಿದ್ದಾರೆ. ಕಾರಣವಿಷ್ಟೇ ಪ್ರವಾಸ ಪ್ರಿಯೆ ಅನಿತಾಗೆ ಮಗ ಆರವ್ ಕೂಡ ಜೊತೆಯಾಗಿದ್ದಾರೆ. ಪತಿ ರೋಹಿತ್ ರೆಡ್ಡಿ ಮತ್ತು ಮಗ ಆರವ್ ಜೊತೆ ಮಾಲ್ಡೀವ್ಸ್ನಲ್ಲಿ ಪ್ರವಾಸದ ಕ್ಷಣಗಳನ್ನು ಕಳೆಯುತ್ತಿರುವ ಹಲವಾರು ಫೋಟೋಗಳನ್ನು ಅನಿತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು, ಪ್ರಸ್ತುತ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಅನಿತಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ನೋಡುಗರ ಕಣ್ಣು ಕುಕ್ಕುವಂತಿದೆ.
ಮಗ ಆರವ್ ಮತ್ತು ಪತಿ ರೋಹಿತ್ ರೆಡ್ಡಿ ಜೊತೆಗಿನ ಈ ಕುಟುಂಬ ಪ್ರವಾಸದಿಂದ ಅನಿತಾ ಎಷ್ಟು ಖುಷಿಯಲ್ಲಿದ್ದಾರೆ ಎಂಬುದನ್ನು ಆ ಫೋಟೋಗಳು ಸಾರಿ ಹೇಳುತ್ತಿವೆ. ಇನ್ನೊಂದು ಪೋಸ್ಟ್ನಲ್ಲಿ, ಅನಿತಾ ತನ್ನ ಮತ್ತು ಆರವ್ನ ಮುದ್ದಾದ ಫೋಟೋ ಪೋಸ್ಟ್ ಮಾಡಿದ್ದಾರೆ. ತಾಯಿ ತನ್ನನ್ನು ಎತ್ತಿಕೊಂಡಿರುವಾಗ ಆರವ್ ಮುಖದಲ್ಲಿ ಮಿಂಚುತ್ತಿರುವ ಸಂತಸದ ನಗು ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಿದೆ. ಈ ಚಿತ್ರಕ್ಕೆ ಅನಿತಾ ಆಪ್ತ ಗೆಳತಿ ಸುರಭಿ ಜ್ಯೋತಿ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಪೋಸ್ಟ್ ಮಾಡಿರುವ ಮತ್ತೊಂದು ಫೋಟೋ ತನ್ನ ಪತಿಯೊಂದಿಗೆ ಇರುವಂತದ್ದು. ಆ ಚಿತ್ರದಲ್ಲಿ, ಕಾಟೇಜ್ ಸಾಲುಗಳ ಪಕ್ಕ, ಸಮುದ್ರದ ನೀರಿಗೆ ಕಾಲು ಇಳಿ ಬಿಟ್ಟು ಕುಳಿತಿರುವ ರೋಹಿತ್ ಮನಸಾರೆ ನಗುತ್ತಿದ್ದರೆ, ಪತಿಯ ನಗುವನ್ನು ಮತ್ತಷ್ಟು ಹಸನ್ಮುಖಿಯಾಗಿ ನೋಡುತ್ತಿದ್ದಾರೆ ಅನಿತಾ.
View this post on Instagram
ಫೆಬ್ರವರಿಯಲ್ಲಿ ಆರವ್ ಜನನವಾಯಿತು. ಈ ವಿಷಯವನ್ನು ದಂಪತಿ ಇನ್ಸ್ಟಾಗ್ರಾಂನಲ್ಲಿ ಮಜವಾದ ವಿಡಿಯೋ ಮೂಲಕ ಎಲ್ಲರಿಗೂ ತಿಳಿಸಿದ್ದರು. ಆ ವಿಡಿಯೋದಲ್ಲಿ ತುಂಬು ಗರ್ಭಿಣಿ ಅನಿತಾ , ಬಾಂಬ್ ಚಿತ್ರವಿರುವ ತನ್ನ ಹೊಟ್ಟೆಯನ್ನು ತೋರಿಸುತ್ತಿದ್ದಾರೆ. ರೋಹಿತ್ ಆ ಬಾಂಬ್ಗೆ ಬೆಂಕಿ ಇಡುತ್ತಾರೆ, ಮತ್ತದು ಸ್ಫೋಟಗೊಳ್ಳುತ್ತದೆ. ಮರುಕ್ಷಣವೇ ಅವರ ಬಾಹುಗಳಲ್ಲಿ ಆರವ್ ಇರುತ್ತಾನೆ. “ಮತ್ತು ನಮ್ಮ ಮಗು ಬಂದಿದ್ದಾನೆ” ಎಂದು ಅನಿತಾ ಆ ವಿಡಿಯೋಗೆ ಅಡಿಬರಹ ನೀಡಿದ್ದಾರೆ. ಜೊತೆಗೆ ಆ ಪೋಸ್ಟ್ನಲ್ಲಿ ಮಗುವಿನ ಜನನ ದಿನಾಂಕ ಫೆಬ್ರವರಿ 9,2021 ಎಂದು ಕೂಡ ಬರೆದುಕೊಂಡಿದ್ದಾರೆ.
ಬಾಲಿವುಡ್ ಮತ್ತು ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿರುವ ಅನಿತಾ ಹಸನಂದಾನಿ, ಹಿಂದಿ ಕಿರುತೆರೆಯಲ್ಲೂ ಅತ್ಯಂತ ಜನಪ್ರಿಯತೆ ಪಡೆದಿದ್ದಾರೆ. ಆಪ್ತ ಸ್ನೇಹಿತೆ ಏಕ್ತಾ ಕಪೂರ್ ನಿರ್ಮಾಣದ ಧಾರಾವಾಹಿಗಳಲ್ಲಿ ಅನಿತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಅಧಿಕ ಖ್ಯಾತಿ ತಂದುಕೊಟ್ಟ ಧಾರಾವಾಹಿಗಳೆಂದರೆ ಕಾವ್ಯಾಂಜಲಿ, ಯೇ ಹೆ ಮೊಹಬ್ಬತೆ ಮತ್ತು ನಾಗಿಣಿ. ಕಾವ್ಯಾಂಜಲಿ ಧಾರಾವಾಹಿಯಲ್ಲಿ ಅನಿತಾ ನಿರ್ವಹಿಸಿದ್ದ ಅಂಜಲಿ ಪಾತ್ರವನ್ನು ಕಿರುತೆರೆ ವೀಕ್ಷಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಯೇ ಹೆ ಮೊಹಬ್ಬತೆಯ ಖಳ ನಾಯಕಿ ಪಾತ್ರವನ್ನು ಕೂಡ ಅನಿತಾ ವೀಕ್ಷಕರ ಮನ ಗೆಲ್ಲುವಂತೆ ನಿರ್ವಹಿಸಿದ್ದಾರೆ. 2013ರಲ್ಲಿ ಉದ್ಯಮಿ ರೋಹಿತ್ ರೆಡ್ಡಿರನ್ನು ನಟಿ ಅನಿತಾ ಮದುವೆಯಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ