ವಿಷ್ಣುವರ್ಧನ್... ಕೋಟಿ ಕೋಟಿ ಕನ್ನಡಿಗರ ಹೃದಯಗೆದ್ದ ನಟ. ಅಭಿಮಾನಿಗಳ ಪಾಲಿನ ಸಾಹಸಸಿಂಹ. ವಿಷ್ಣುವರ್ಧನ್ ಅವರಿಗೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಸಹ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟನ ಸ್ಮರಣೆಗಾಗಿ ಅಭಿಮಾನಿಗಳು ಪ್ರತಿಮೆ ಸ್ಥಾಪಿಸಿ ಪ್ರೀತಿ ಅಭಿಮಾನ ತೋರಿದ್ದರು. ಆದರೆ ರಾತ್ರೋರಾತ್ರಿ ಕಿಡಿಗೇಡಿಗಳ ಗುಂಪು ಡಾ. ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿ ವಿಕೃತಿ ಮರೆದಿದ್ದಾರೆ. ಶುಕ್ರವಾರ ರಾತ್ರಿ ಟೋಲ್ಗೇಟ್ ಬಳಿ ಇರುವ ವೃತ್ತದಲ್ಲಿ ಈ ಘಟನೆ ನಡೆದಿದೆ. ಈವಿಷಯ ತಿಳಿಯುತ್ತಿದ್ದಂತೆಯೇ ವಿಷ್ಣು ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟೆಗಳು ಪ್ರತಿಭಟನೆಗಿಳಿದಿದ್ದರು. ನಂತರ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ನಿರತರಾದರು. ಇನ್ನು ಸೆಲೆಬ್ರಿಟಿಗಳು ಸಹ ನಡೆದ ಘಟನೆಯನ್ನು ಖಂಡಿಸುತ್ತಾ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಡ ಹೇರಲಾರಂಭಿಸಿದ್ದರು.
ವಿಷ್ಣು ಅವರ ಪುತ್ಥಳಿ ಧ್ವಂಸ ಕುರಿತಂತೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಲಾಗಿತ್ತು. ಈಗ ಅದೇ ಟೋಲ್ಗೇಟ್ ಸರ್ಕಲ್ನಲ್ಲಿ ವಿಷ್ಣುವರ್ಧನ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದೆ. ಟೋಲ್ಗೇಟ್ ಸರ್ಕಲ್ನಲ್ಲಿ ಈ ಹಿಂದೆ ಪ್ರತಿಮೆ ಇದ್ದ ಕಡೆಯ ಬದಲಾಗಿ ಮತ್ತೊಂದು ಕಡೆ ವಿಷ್ಣುವರ್ಧನ್ ಪುತ್ಥಳಿ ಸ್ಥಾಪನೆಗೆ ಅವಕಾಶ ನೀಡಲಾಗಿದೆ.
ಈ ಹಿಂದೆ ವಿಷ್ಣುವರ್ಧನ್ ಪುತ್ಥಳಿಯಿದ್ದ ಜಾಗದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಸ್ಥಾಪನೆಗೆ ನಿರ್ಧರಿಸಲಾಗಿದ್ದು. ಅದೇ ವೃತ್ತದ ಮತ್ತೊಂದು ಭಾಗದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ ಸ್ಥಾಪನೆಗೆ ಇಂದು ಗುದ್ದಲಿ ಪೂಜೆ ನೆರವೇರಿತು. ಇದರಲ್ಲಿ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಭಾಗಿಯಾಗಿದ್ದರು. ಡಿ. 30ಕ್ಕೆ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ದಿಗಂತ್: ಶುಭ ಕೋರಿದ ಮಡದಿ ಐಂದ್ರಿತಾ ರೇ..!
ಟೋಲ್ಗೇಟ್ನ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ಡಾ. ವಿಷ್ಣುವರ್ಧನ್ ಸೇನಾ ಸಮಿತಿಯಿಂದ ಒಂದೂವರೆ ವರ್ಷದ ಹಿಂದೆ ಪ್ರತಿಮೆಯನ್ನ ಪ್ರತಿಷ್ಠಾಪಿಸಲಾಗಿತ್ತು. ಆದ್ರೆ ಪ್ರತಿಮೆ ಸ್ಥಾಪನೆ ಆದಾಗಿನಿಂದಲೂ ಒಂದಲ್ಲ ಒಂದು ವಿವಾದ ಪ್ರತಿಮೆ ವಿಚಾರಕ್ಕೆ ಉದ್ಭವವಾಗುತ್ತಲ್ಲೆ ಇತ್ತಂತ್ತೆ. ವಿಷ್ಣು ಪ್ರತಿಮೆ ಇದ್ದ ಸ್ಥಳದಲ್ಲಿ ಬಾಲಗಂಗಾಧರನಾಥ ಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗಿದ್ದರಂತೆ. ಅದಕ್ಕಾಗಿ ಕೆಲವು ಸಿದ್ದತೆಗಳು ಸಹ ನಡೆದಿದ್ದವು ಎನ್ನಲಾಗುತ್ತಿದೆ.
ಈ ಬಗ್ಗೆ ಕೆಲ ಹಿರಿಯ ಜೊತೆ ಮಾತುಕತೆ ನಡೆಸಿ ವಿಷ್ಣು ಪ್ರತಿಮೆ ಅದೇ ವೃತ್ತದ ಬೇರೆಡೆ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿತ್ತಂತೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರತಿಮೆ ಸ್ಥಳಾಂತರ ಮಾಡಲು ಚಿಂತನೆ ನಡೆಸಿದ್ದಾಗಲೇ ದುಷ್ಕರ್ಮಿಗಳು ವಿಷ್ಣುವರ್ಧನ್ ಪುತ್ಥಳಿಯನ್ನ ಧ್ವಂಸಗೊಳಿಸಿ ವಿಕೃತಿ ಮೆರೆದರು.
View this post on Instagram
ಘಟನೆ ನಡೆದ ಕೂಡಲೇ ಅನಿರುದ್ಧ್ ಹಾಗೂ ಇತರೆ ಸೆಲೆಬ್ರಿಟಿಗಳು ನಡೆದ ಘಟನೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು, ದರ್ಶನ್, ಕಿಚ್ಚ ಸುದೀಪ್, ನೀನಾಸಂ ಸತೀಶ್ ಹೀಗೆ ಹಲವಾರು ಮಂದಿ ಟ್ವೀಟ್ ಮಾಡಿದ್ದರು.
ಕನ್ನಡದ ನಮ್ಮ ತ್ರಿಮೂರ್ತಿಗಳಲ್ಲಿ ಒಬ್ಬರು ವಿಷ್ಣು ಸಾರ್.
ಈ ರೀತಿ ಅವರ ಮೂರ್ತಿ ಕೆಡಗಿ ಅವಮಾನಿಸಿರುವುದು,ನಮ್ಮೆಲ್ಲರಿಗೂ ಮಾಡಿದ ಅವಮಾನ.
ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕು ಕ್ಷಮಿಸಬಾರದು... pic.twitter.com/waod0e0Ydn
— Sathish Ninasam (@SathishNinasam) December 26, 2020
ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು.
ನಿಮ್ಮ ದಾಸ ದರ್ಶನ್ pic.twitter.com/eJ5nGFd6oa
— Darshan Thoogudeepa (@dasadarshan) December 26, 2020
ಕನ್ನಡಿಗರನ್ನ 45ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ?
ಆತನ ಆತ್ಮ ಈ ರಾಕ್ಷಸಿ ಕೃತ್ಯ ಗಮನಿಸದೆ ಇರಬಹುದು!
ಆದರೆ ನೆನಪಿಡಿ ರಕ್ಕಸರೆ ನೀವು ಅಪಮಾನಿಸಿದ್ದು ನಿಮ್ಮ ರಂಜಿಸಿ ನಿರ್ಗಮಿಸಿದ ನಟನ ಅಲ್ಲಾ!
ಬದಲಾಗಿ ನಿಮ್ಮ ಕನ್ನಡನೆಲದ ಮೆಚ್ಚಿನ ಮಗನನ್ನ!
ನಿಮ್ಮ ತಂದೆತಾಯಿವಂಶ ಮೆಚ್ಚಿದ ಆತ್ಮ ಅದು!
ನಿಮ್ಮಕೃತ್ಯ ಯಾವದೇವರು ಕ್ಷಮಿಸನು!ನತದೃಷ್ಟರೆ.! pic.twitter.com/g9K2OWMDbI
— ನವರಸನಾಯಕ ಜಗ್ಗೇಶ್ (@Jaggesh2) December 26, 2020
ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು ವಿಷ್ಣು ಅಭಿಮಾನಿಗಳ ಮನವೊಲಿಸಲಾಗಿದೆ. ಇತ್ತ ಪುತ್ಥಳಿ ಧ್ವಂಸಗೊಳಿಸಿದ ಕಿಡಿಗೇಡಿಗಳು ಯಾರು ಅನ್ನೋ ಬಗ್ಗೆ ಕುತೂಹಲ ಉಂಟಾಗಿದ್ದು, ಅವರನ್ನ ಪೊಲೀಸರು ಬಂಧಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ