ಈಗಂತೂ ಹೊಸಮುಖಗಲಳು ಒಂದೆರಡು ಚಿತ್ರಗಳನ್ನು ಮಾಡಿದರೆ ಸಾಕು ಅವರ ಬಳಿ ದುಡ್ಡು ತುಂಬಾನೇ ಇರುತ್ತದೆ ಮತ್ತು ಅವರು ಒಂದು ರೀತಿಯ ಐಷಾರಾಮಿ ಜೀವನ ನಡೆಸಲು ಶುರು ಮಾಡಿರುತ್ತಾರೆ. ಅದರಲ್ಲೂ ಈ ನಟ-ನಟಿಯರ ಮದುವೆ ದಿನಾಂಕ ಫಿಕ್ಸ್ ಆಯ್ತು ಅಂದ್ರೆ ಸಾಕು, ತಮ್ಮ ಮದುವೆ ವಿಭಿನ್ನವಾಗಿ ಆಗಬೇಕು ಅಂತ ಬೇರೆ ಊರಿನಲ್ಲಿ ಒಂದು ದೊಡ್ಡ ರೆಸಾರ್ಟ್ ಅನ್ನು ಅಥವಾ ಹೊಟೇಲ್ ಅನ್ನು ಬುಕ್ ಮಾಡಿಕೊಂಡು ಅಲ್ಲಿಗೆ ಹೋಗಿ ತುಂಬಾನೇ ದುಬಾರಿಯಾದಂತಹ ಮದುವೆ ಬಟ್ಟೆಗಳನ್ನು ಜನಪ್ರಿಯ ಡಿಸೈನರ್ ಗಳಿಂದ ಭಾರಿ ಸ್ಟೈಲಿಶ್ ಆಗಿರುವ ಬಟ್ಟೆಗಳನ್ನು ಆರ್ಡರ್ ಮಾಡಿ ತರಿಸಿಕೊಳ್ಳುವುದನ್ನು ನಾವೆಲ್ಲಾ ನೋಡಿರುತ್ತೇವೆ.
ಹೀಗೆ ನಟ-ನಟಿಯರು ತಮ್ಮ ಮದುವೆಗೆ ಖರ್ಚು ಮಾಡುವ ಹಣ ಅಷ್ಟಿಷ್ಟಲ್ಲ ಬಿಡಿ. ಹಾಗಂತ ಎಲ್ಲಾ ನಟ-ನಟಿಯರು ಹೀಗೆ ಇರುತ್ತಾರೆ ಅಂತ ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಕೆಲವರು ತುಂಬಾನೇ ಸಿಂಪಲ್ ಆಗಿರುತ್ತಾರೆ ಮತ್ತು ಅವರು ಸರಳವಾದ ಬದುಕನ್ನು ನಡೆಸಿಕೊಂಡು ಹೋಗಲು ಇಷ್ಟಪಡುತ್ತಿರುತ್ತಾರೆ.
ನಟಿ ಅಮೃತಾ ರಾವ್ ಸಹ ಆಗಿದ್ದು ತುಂಬಾನೇ ಸಿಂಪಲ್ ಮದುವೆಯಂತೆ
ನಟಿ ಅಮೃತಾ ರಾವ್ ಮತ್ತು ಅವರ ಪತಿ ರೇಡಿಯೋ ಜಾಕಿ ಅನ್ಮೋಲ್ ತಮ್ಮ ಮದುವೆಯ ಬಗ್ಗೆ ಕೆಲವು ವಿವರಗಳನ್ನು ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಚಾನೆಲ್, ಕಪಲ್ ಆಫ್ ಥಿಂಗ್ಸ್ ನಲ್ಲಿ ತಮ್ಮ ಮದುವೆ ವಾರ್ಷಿಕೋತ್ಸವದ ವಿಶೇಷ ವಿಡಿಯೋದಲ್ಲಿ, ಈ ಇಬ್ಬರೂ ಅಭಿಮಾನಿಗಳನ್ನು ನೆನಪುಗಳಲ್ಲಿ ಮುಂಬೈನಿಂದ ಪುಣೆಗೆ ಕರೆದುಕೊಂಡು ಹೋಗಿದ್ದಾರೆ ನೋಡಿ.
ಇದನ್ನೂ ಓದಿ: ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಸೀರೆಯುಟ್ಟು ಮಿಂಚಿದ ಖುಷ್ಬೂ, ದೇಶದ ಸಂಸ್ಕೃತಿ ಎತ್ತಿ ಹಿಡಿದ ನಟಿ
ಇವರಿಬ್ಬರು ಒಂಬತ್ತು ವರ್ಷಗಳ ಹಿಂದೆ ಇಸ್ಕಾನ್ ದೇವಸ್ಥಾನದಲ್ಲಿ ರಹಸ್ಯವಾಗಿ ವಿವಾಹವಾದರು. ಅಮೃತಾ ಮತ್ತು ಅನ್ಮೋಲ್ ತಮ್ಮ ಮದುವೆಗಾಗಿ ಕೇವಲ 1.5 ಲಕ್ಷ ರೂಪಾಯಿಗಳನ್ನು ಮಾತ್ರವೇ ಖರ್ಚು ಮಾಡಿದ್ದರಂತೆ ಎಂದು ಬಹಿರಂಗಪಡಿಸಿದ್ದಾರೆ. ಈ ಖರ್ಚಿನಲ್ಲಿ ಅವರ ಮದುವೆ ಉಡುಗೆಗಳು, ಮದುವೆ ಸ್ಥಳ ಮತ್ತು ಇನ್ನಿತರೆ ಮದುವೆ ವೆಚ್ಚಗಳು ಸೇರಿವೆ.
ನಟಿ ಅಮೃತಾ ಡಿಸೈನರ್ ಬಟ್ಟೆ ಧರಿಸಲು ಬಯಸಲಿಲ್ವಂತೆ
‘ಮೈ ಹೂ ನಾ’, ‘ಇಷ್ಕ್ ವಿಶ್ಕ್’ ಮತ್ತು ‘ಜಾಲಿ ಎಲ್ಎಲ್‌ಬಿ’ ಅಂತಹ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಅಮೃತಾ ರಾವ್ ಅವರು ತಮ್ಮ ಮದುವೆಗೆ ಡಿಸೈನರ್ ಬಟ್ಟೆಗಳನ್ನು ಧರಿಸಲು ಬಯಸಲಿಲ್ಲವಂತೆ, ಅಲ್ಲದೆ ಸಿಂಪಲ್ ಆಗಿರುವ ಸಾಂಪ್ರದಾಯಿಕ ಉಡುಗೆಯನ್ನು ಆಯ್ಕೆ ಮಾಡಿಕೊಂಡರಂತೆ.
3000 ರೂಪಾಯಿ ಬೆಲೆಯ ಸೀರೆಯನ್ನು ಈ ನಟಿ ಖರೀದಿಸಿದ್ದರಂತೆ. ಇತ್ತ ಅನ್ಮೋಲ್ ಸಹ ತನ್ನ ಮದುವೆಯ ಉಡುಗೆಯ ಬೆಲೆ ಸುಮಾರು ಇದೇ ಮೊತ್ತವಾಗಿದೆ ಎಂದು ಹೇಳಿದರು. ಮದುವೆಯ ಸ್ಥಳವನ್ನು 11,000 ರೂಪಾಯಿ ವೆಚ್ಚದಲ್ಲಿ ವ್ಯವಸ್ಥೆ ಮಾಡಲಾಗಿತ್ತು ಎಂದು ಈ ದಂಪತಿಗಳು ತಿಳಿಸಿದ್ದಾರೆ.
"ನಾನು ಸಾಂಪ್ರದಾಯಿಕ ಉಡುಪನ್ನು ಧರಿಸಲು ಬಯಸಿದ್ದೆ. ನನ್ನ ಸೀರೆಯ ಬೆಲೆ 3000 ರೂಪಾಯಿ ಆಗಿತ್ತು... ನಾನು ಡಿಸೈನರ್ ಬಟ್ಟೆಗಳನ್ನು ಧರಿಸಲು ಬಯಸಲಿಲ್ಲ. ನಾನು ಕೃತಕ ಆಭರಣಗಳನ್ನು ಧರಿಸಿದ್ದೆ. ನನ್ನ ಮಂಗಳಸೂತ್ರ ಕೇವಲ 18,000 ರೂಪಾಯಿ ಆಗಿತ್ತು" ಎಂದು ನಟಿ ಅಮೃತಾ ರಾವ್ ಅವರು ಹೇಳಿದರು.
"ಮದುವೆ ಎಂದರೆ ಪ್ರೀತಿ ಎಂದು ನಾವು ಯಾವಾಗಲೂ ನಂಬಿದ್ದೇವೆ. ಹಣವು ಒಂದು ಶೋಪೀಸ್ ಅಲ್ಲ. ನಮ್ಮ ಮದುವೆಯಲ್ಲಿ ನಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರು ಮಾತ್ರ ಇರಬೇಕೆಂದು ನಾವು ಬಯಸಿದ್ದೇವು... ನಾವು ಮದುವೆಗೆ ಹೆಚ್ಚು ಖರ್ಚು ಮಾಡಲು ಇಷ್ಟಪಡಲಿಲ್ಲ” ಎಂದು ನಟಿ ಹೇಳಿದರು.
ತಮ್ಮ ಸಿಂಪಲ್ ಮದುವೆಯ ಬಗ್ಗೆ ಏನ್ ಅಂದ್ರು ನೋಡಿ ಆರ್ ಜೆ ಅನ್ಮೋಲ್
ಆರ್ ಜೆ ಅನ್ಮೋಲ್ ಅವರು ತಮ್ಮ ಮದುವೆ ಬಗ್ಗೆ ಮಾತನಾಡುತ್ತಾ "ನಮ್ಮ ವಿವಾಹವು ನಮ್ಮ ವ್ಯಕ್ತಿತ್ವದ ಪ್ರತಿಬಿಂಬವಾಗಿದೆ, ಮತ್ತು ನಾವು ಅದನ್ನು ಪಾರದರ್ಶಕ ರೀತಿಯಲ್ಲಿ ಮಾಡಿಕೊಳ್ಳಲು ಬಯಸಿದ್ದೇವು. ನಮ್ಮ ವಿವಾಹವಾದ ರೀತಿ ನಮಗೆ ತುಂಬಾನೇ ತೃಪ್ತಿ ಕೊಟ್ಟಿತ್ತು" ಎಂದು ಹೇಳಿದರು.
ಅಮೃತಾ ರಾವ್ ಮತ್ತು ಆರ್ ಜೆ ಅನ್ಮೋಲ್ ಅವರ ಕಡಿಮೆ ವೆಚ್ಚದ ಮದುವೆ ಅನೇಕ ನೆಟ್ಟಿಗರನ್ನು ಆಶ್ಚರ್ಯಚಕಿತಗೊಳಿಸಿತು. ಬಜೆಟ್ ಸ್ನೇಹಿ, ಆದರೆ ಸ್ಮರಣೀಯ ವಿವಾಹವನ್ನು ಆಯ್ಕೆ ಮಾಡಿದ್ದಕ್ಕಾಗಿ ಯೂಟ್ಯೂಬ್ ನಲ್ಲಿ ಅನೇಕರು ಅವರನ್ನು ಶ್ಲಾಘಿಸಿದರು. ವೀಡಿಯೋ ನೋಡಿದ ನೆಟ್ಟಿಗರೊಬ್ಬರು "ನೀವು ಅದ್ಭುತವಾಗಿದ್ದೀರಿ ... ನಿಮ್ಮ ಮದುವೆ ತುಂಬಾನೇ ಚೆನ್ನಾಗಿ ನಡೆದಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು "ನೀವಿಬ್ಬರೂ ಎಲ್ಲರಿಗೂ ತುಂಬಾ ಸ್ಪೂರ್ತಿದಾಯಕರು. ತುಂಬಾ ಸರಳ, ಆದರೆ ತುಂಬಾ ಪ್ರೀತಿ ಮತ್ತು ವಿಶೇಷ" ಅಂತ ಕಾಮೆಂಟ್ ಮಾಡಿದ್ದಾರೆ.
"ನೀವು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದೀರಿ" ಅಂತ ಮೂರನೆಯವರು ಕಾಮೆಂಟ್ ಮಾಡಿದರೆ, ನಾಲ್ಕನೆಯವರು "ಸೆಲೆಬ್ರಿಟಿಗಳು ಸಹ ತುಂಬಾ ಸರಳವಾದ ರೀತಿಯಲ್ಲಿ ಮದುವೆಯಾಗಬಹುದು ಎಂದು ನೋಡಲು ನಿಜವಾಗಿಯೂ ಸಂತೋಷವಾಗಿದೆ. ಕೇವಲ ತೋರಿಕೆಗಾಗಿ ಮದುವೆಗಳಲ್ಲಿ ಬಹಳಷ್ಟು ಹಣ ವ್ಯರ್ಥ ಮಾಡುವ ಇತರರಿಗೆ ದೊಡ್ಡ ಸ್ಫೂರ್ತಿ” ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ