Amitabh Bachchan: ಬಿಗ್‍ಬಿ ಕಿರೀಟಕ್ಕೆ ಮತ್ತೊಂದು ಗರಿ; ಅಮಿತಾಬ್​ಗೆ ಶರಣು ಶರಣೆಂದ ಹಾಲಿವುಡ್ ದಿಗ್ಗಜರು

ಅಮಿತಾಬ್​​ ಬಚ್ಚನ್ ಅವರ ಕಲಾಸೇವೆಯನ್ನ ಗುರುತಿಸಿ ಹಲವು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರೆತಿವೆ. ಆ ಸಾಲಿಗೆ ಹೊಸ ಸೇರ್ಪಡೆ, ಇಂಟರ್​ ನ್ಯಾಷನಲ್​  ಫೆಡರೇಷನ್ ಆಫ್ ಫಿಲ್ಮ್ ಆರ್ಕೈವ್ಸ್ ಪ್ರಶಸ್ತಿ.

ಅಮಿತಾಬ್​ ಬಚ್ಚನ್​

ಅಮಿತಾಬ್​ ಬಚ್ಚನ್​

  • Share this:
 ಬಿಗ್‍ಬಿ ಅಮಿತಾಬ್​ ಬಚ್ಚನ್​  ಬಾಲಿವುಡ್ ಮಾತ್ರವಲ್ಲದೇ, ವಿಶ್ವ ಸಿನಿಮಾ ಇತಿಹಾಸದಲ್ಲೇ ಸರ್ವಶ್ರೇಷ್ಠ ಕಲಾವಿದರ ಪೈಕಿ ನಿಲ್ಲುವ ಭಾರತೀಯ ದಿಗ್ಗಜ. ವಿಶೇಷ ಅಂದರೆ ವಯಸ್ಸು 60 ದಾಟಿದ ಬಳಿಕ ಹೀರೋ ಪಾತ್ರಗಳಲ್ಲಿ ನಟಿಸುವುದು ಕಷ್ಟಸಾಧ್ಯ. ಆದರೂ ನಾಯಕನಾಗಿ ಮಾತ್ರವಲ್ಲದೇ ಚಾಲೆಂಜಿಂಗ್ ಎನಿಸುವ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿದ ಹಾಗೂ ಮಿಂಚುತ್ತಿರುವ ಖ್ಯಾತಿ ಬಿಗ್‍ಬಿಗೆ ಸಲ್ಲುತ್ತದೆ. 1969ರಲ್ಲಿ ಸಾತ್ ಹಿಂದುಸ್ತಾನಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಅಮಿತಾಬ್​ ಬಚ್ಚನ್ ಅವರು ಕಳೆದ 52 ವರ್ಷಗಳಲ್ಲಿ ಬರೋಬ್ಬರಿ 230ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಬಹುತೇಕ ಸಿನಿಮಾಗಳು ನಾಯಕನಾಗಿ ಮಿಂಚಿದ್ದಾರೆ. ಹಿಂದಿ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಭೋಜಪುರಿ ಹಾಗೇ ಹಾಲಿವುಡ್ ಸಿನಿಮಾಗಳಲ್ಲೂ ನಟಿಸಿ ವಿಶ್ವವಿಖ್ಯಾತಿ ಗಳಿಸಿದ್ದಾರೆ. 

ಇಂತಹ ಅಮಿತಾಬ್​​ ಬಚ್ಚನ್ ಅವರ ಕಲಾಸೇವೆಯನ್ನ ಗುರುತಿಸಿ ಹಲವು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರೆತಿವೆ. ಆ ಸಾಲಿಗೆ ಹೊಸ ಸೇರ್ಪಡೆ, ಇಂಟರ್​ ನ್ಯಾಷನಲ್​  ಫೆಡರೇಷನ್ ಆಫ್ ಫಿಲ್ಮ್ ಆರ್ಕೈವ್ಸ್ ಪ್ರಶಸ್ತಿ. ಕೊರೋನಾ ಕಾರಣದಿಂದಾಗಿ ಇತ್ತೀಚೆಗಷ್ಟೇ ಆನ್‍ಲೈನ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಲಿವುಡ್‍ನ ಆಸ್ಕರ್ ವಿಜೇತ ನಿರ್ದೇಶಕರಾದ ಕ್ರಿಸ್ಟೋಫರ್ ನೊಲಾನ್ ಹಾಗೂ ಮಾರ್ಟಿನ್ ಸ್ಕಾರ್ಸೀಸ್ ಬಿಗ್‍ಬಿ ಅಮಿತಾಬ್​ ಬಚ್ಚನ್‍ರನ್ನು ಕೊಂಡಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಎಫ್‍ಐಎಫ್ ವಿಶ್ವದ ಹಲವೆಡೆಗಳಲ್ಲಿ ಸಿನಿಮಾ ಸಂರಕ್ಷಿಸುವ ಕೆಲಸ ಮಾಡುತ್ತಿದ್ದು ಹಲವಾರು ಕಡೆಗಳಲ್ಲಿ ಸಿನಿಮಾ ಮ್ಯೂಸಿಯಮ್‍ಗಳನ್ನು ಹೊಂದಿದೆ.



ಭಾರತೀಯ ಸಿನಿಮಾರಂಗಕ್ಕೆ ಅವರು ಸಲ್ಲಿಸಿರುವ ಸೇವೆ ಅಪಾರ, ಚಿತ್ರರಂಗ ಉಳಿಯುವಲ್ಲಿ, ಬೆಳೆಯುವಲ್ಲಿ ಅವರ ಶ್ರಮವೂ ಸಾಕಷ್ಟಿದೆ ಎಂದು ಫಿಲ್ಮ್ ಹೆರಿಟೇಜ್ ಫೌಂಡೇಷನ್‍ನ ಸಂಸ್ಥಾಪಕ ಶಿವೇಂದರ್ ಸಿಂಗ್ ಡುಂಗಾರ್‍ಪುರ್ ಎಫ್‍ಐಎಫ್ ಪ್ರಶಸ್ತಿಯನ್ನು ಬಿಗ್‍ಬಿ ಅಮಿತಾಬ್​​ ಬಚ್ಚನ್‍ರಿಗೆ ಪ್ರಧಾನ ಮಾಡಿದ್ದಾರೆ.

ಇದನ್ನು ಓದಿ: ಮತ್ಸಕನ್ಯೆಯಾದ ಆಲಿಯಾ ಭಟ್​; ಮನಸೊರೆಗೊಳ್ಳುತ್ತಿದೆ ಬಾಲಿವುಡ್​ ಬೆಡಗಿಯ ಅದ್ಭುತ ಚಿತ್ರಗಳು

ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಕ್ರಿಸ್ಟೋಫರ್ ನೊಲಾನ್, 2018ರಲ್ಲಿ ಮುಂಬೈನ ಕಾರ್ಯಕ್ರಮವೊಂದರಲ್ಲಿ ಅಮಿತಾಬ್​ ಬಚ್ಚನ್‍ರನ್ನು ಭೇಟಿಯಾದ ಸಂದರ್ಭವನ್ನು ಸ್ಮರಿಸಿಕೊಂಡರು. ಹಾಗೇ ಮಾರ್ಟಿನ್ ಸ್ಕಾರ್ಸೀಸ್ ಸಹ ಅಮಿತಾಬ್​ ಬಚ್ಚನ್ ಒಬ್ಬ ಲೆಜೆಂಡ್ ಎಂದು ಕೊಂಡಾಡಿದ್ದಾರೆ.

ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ 78 ವರ್ಷದ ಹರೆಯದರಲ್ಲೂ ಬಿಗ್‍ಬಿ ಅಮಿತಾಬ್​​ ಬಚ್ಚನ್ ಬಳಿ ಕೈತುಂಬಾ ಆಫರ್‍ಗಳಿವೆ. ಇತ್ತೀಚೆಗಷ್ಟೇ ಕಣ್ಣಿನ ಸರ್ಜರಿಗೆ ಒಳಗಾಗಿದ್ದ ಅವರು ಕೆಲ ದಿನಗಳ ಕಾಲ ರೆಸ್ಟ್ ಪಡೆದು ಮತ್ತೆ ಸಿನಿಮಾ ಕೆಲಸಗಳತ್ತ  ಮುಖ ಮಾಡಿದ್ದಾರೆ. ಕಳೆದ ವರ್ಷ 'ಗುಲಾಬೋ ಸಿತಾಬೋ' ಚಿತ್ರದಲ್ಲಿ ಮಿಂಚಿದ್ದ ಅಮಿತಾಬ್​ ಬಚ್ಚನ್ ಈ ವರ್ಷ 'ಚೆಹ್ರೇ' ಚಿತ್ರದಲ್ಲಿ ವೀರ್ ಸಹಾಯ್ ಎಂಬ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಳಿಕ ಮರಾಠಿ ಚಿತ್ರ ಸಾಯ್ರಾಟ್ ಖ್ಯಾತಿಯ ನಿರ್ದೇಶಕ ನಾಗರಾಜ್ ಮಂಜುಳೆ ನಿರ್ದೇಶನದ ಸ್ಲಂ ಸಾಕರ್ ಎನ್‍ಜಿಒ ಸ್ಥಾಪಕ ವಿಜಯ್ ಬರ್ಸೇ ಜೀವನಾಧಾರಿತ 'ಝುಂಡ್' ಚಿತ್ರದಲ್ಲಿ ವಿಜಯ್ ಬರ್ಸೇ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಅಯಾನ್ ಮುಖರ್ಜಿ ನಿರ್ದೇಶನದ ರಣಬೀರ್ ಕಪೂರ್, ಆಲಿಯಾ ಭಟ್ ನಟಿಸುತ್ತಿರುವ ಬಹುನಿರೀಕ್ಷಿತ 'ಬ್ರಹ್ಮಾಸ್ತ್ರ' ಚಿತ್ರದಲ್ಲೂ ಬಚ್ಚನ್ ನಟಿಸುತ್ತಿದ್ದಾರೆ. ಹೀಗೆ ಈ ಹರೆದಯ ವಯಸ್ಸಿನಲ್ಲೂ ಲೆಜೆಂಡರಿ ಬಿಗ್‍ಬಿ ಬ್ಯುಸಿಯಾಗಿದ್ದಾರೆ. .
Published by:Seema R
First published: