news18-kannada Updated:September 17, 2020, 1:15 PM IST
ದಿಗಂತ್
ದಿಗಂತ್ ಮತ್ತು ಐಂದ್ರಿತಾ ಇಬ್ಬರೂ ವಿಚಾರಣೆಗೆ ಬಂದು ಹಾಗೆಯೇ ಹೋಗಿದ್ದಾರೆ. ವಿಚಾರಣೆ ಮುಗಿಸಿ ಮನೆಗೆ ವಾಪಸ್ಸಾದ ಖುಷಿಯಿದ್ದರೂ, ಮತ್ತೊಂದೆಡೆ ಸಿಸಿಬಿ ಅಧಿಕಾರಿಗಳು ಮತ್ತೆ ಯಾವಾಗ ವಿಚಾರಣೆಗೆ ಕರೆಯುತ್ತಾರೋ, ಮುಂದೇನಾಗುತ್ತೋ ಎಂಬ ಆತಂಕವಿದೆ. ಅದರ ನಡುವೆ ಇವತ್ತು ಇದೇ ಮೊದಲ ಬಾರಿಗೆ ಐಂದ್ರಿತಾ ಕೂಡ ತುಟಿಬಿಚ್ಚಿದ್ದಾರೆ. ಪ್ರಕರಣ ವಿಚಾರಣೆ ಹಂತದಲ್ಲಿದ್ದು ಇನ್ನೂ ತನಿಖೆ ನಡೆಯುತ್ತಿರುವ ಕಾರಣ ಈಗಲೇ ಏನೂ ಮಾತನಾಡುವಂತಿಲ್ಲ ಎಂದು ಮೌನಕ್ಕೆ ಜಾರಿದ್ದಾರೆ.
ಹಾಗೇ ದೂದ್ಪೇಡಾ ದಿಗಂತ್ ಸಹ ಗೊಂದಲದಲ್ಲೇ ಇದ್ದಾರೆ. ಯಾಕೆಂದರೆ ನಾಳೆ ಅರ್ಥಾತ್ ಸೆಪ್ಟೆಂಬರ್ 18ರಿಂದ ಅವರು ನಟಿಸುತ್ತಿರುವ ಮಾರಿಗೋಲ್ಡ್ ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆ. ಈಗಾಗಲೇ ಒಂದು ಶೆಡ್ಯೂಲ್ ಪೂರ್ಣಗೊಂಡಿದ್ದು, ನಾಳೆಯಿಂದ ಎರಡನೇ ಶೆಡ್ಯೂಲ್ ಶುರುವಾಗಲಿದೆ. ಲಾಕ್ಡೌನ್ನಿಂದಾಗಿ ಐದಾರು ತಿಂಗಳಿನಿಂದ ಚಿತ್ರೀಕರಣ ಮಾಡಲಾಗದೇ ಈಗ ಮತ್ತೆ ಅಖಾಡಕ್ಕೆ ಇಳಿಯಲು ಮಾರಿಗೋಲ್ಡ್ ಚಿತ್ರತಂಡ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಹಲವು ದಿನಗಳ ಕಾಲ ಪ್ಲ್ಯಾನ್ ಮಾಡಿ, ಎಲ್ಲ ಕಲಾವಿದರ ಡೇಟ್ಸ್ ಪಡೆದು ಶೂಟಿಂಗ್ ಪ್ರಾರಂಭಿಸಲು ರೆಡಿಯಾಗಿದೆ. ಅದರ ನಡುವೆಯೇ ಸಿಸಿಬಿ ಶಾಕ್ ಕೊಟ್ಟಿರೋದು ಚಿತ್ರತಂಡವನ್ನೂ ಗೊಂದಲಕ್ಕೀಡು ಮಾಡಿದೆ..
ಸಿನಿಮಾ ಚಿತ್ರೀಕರಣದ ಮಧ್ಯದಲ್ಲಿ ಸಿಸಿಬಿ ವಿಚಾರಣೆಗೆ ನೋಟೀಸ್ ನೀಡಿದರೆ ಏನು ಮಾಡುವುದು? ಒಂದು ದಿನ ಶೂಟಿಂಗ್ ಸ್ಥಗಿತಗೊಂಡರೂ ಲಕ್ಷ ಲಕ್ಷ ರೂಪಾಯಿ ನಷ್ಟವಾಗುವ ಆತಂಕ ಚಿತ್ರತಂಡದ್ದು. ಆದರೆ ನಟ ದಿಗಂತ್ ಅದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ಶೂಟಿಂಗ್ಗೆ ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ಇರುವ ಕಾರಣ, ಸಿಸಿಬಿ ಅಧಿಕಾರಿಗಳು ಯಾವಾಗ ನೊಟೀಸ್ ನೀಡಿದರೂ ಹೋಗಬಹುದು ಅನ್ನೋ ಲೆಕ್ಕಾಚಾರ ಅವರದು.
ಇದನ್ನೂ ಓದಿ: ದೂದ್ ಪೇಡ ದಿಗಂತ್ ಹುಟ್ಟು ಹಬ್ಬಕ್ಕೂ ಅಡ್ಡಿಯಾದ ಸಿಸಿಬಿ ನೋಟಿಸ್!
ಈ ಟೆನ್ಶನ್ ನಡುವೆಯೇ ದಿಗಂತ್ ಮನೆಯಲ್ಲೇ ವರ್ಕೌಟ್ ಮಾಡುತ್ತಿದ್ದಾರೆ. ಆ ಮೂಲಕ ನಾಳೆಯ ಶೂಟಿಂಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದ ಡಂಬಲ್ಗಳನ್ನು ತಾವೇ ಬಂದು ತೆಗೆದುಕೊಂಡು ಮನೆಗೆ ಹೋಗಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ದಿಗಂತ್ ಸೈಕ್ಲಿಂಗ್ ಮಾಡುತ್ತಾರೆ, ಟ್ರೆಕ್ಕಿಂಗ್ ಸೇರಿದಂತೆ ಹಲವು ಅಡ್ವೆಂಚರಸ್ ಸ್ಪೋರ್ಟ್ಸ್ ಬಗ್ಗೆ ಹೆಚ್ಚು ಒಲವು ಹೊಂದಿರುವ ನಟ ದಿಗಂತ್. ಹೀಗಾಗಿಯೇ ಮನೆಯಲ್ಲೇ ಕಸರತ್ತು ಪ್ರಾರಂಭಿಸಿದ್ದಾರೆ.
ಅದರ ಬೆನ್ನಲ್ಲೇ ಗಾಳಿಪಟ 2 ಚಿತ್ರೀಕರಣ ಸಹ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ. ಜೊತೆಗೆ ಇನ್ನೂ ಎರಡು, ಮೂರು ಸಿನಿಮಾಗಳಿಗೆ ದಿಗಂತ್ ಡೇಟ್ಸ್ ನೀಡಿದ್ದು, ಅವುಗಳ ಶೂಟಿಂಗ್ ಕೂಡ ಒಂದಾದ ಮೇಲೊಂದರಂತೆ ಶೆಡ್ಯೂಲ್ ಮಾಡಿಕೊಂಡಿವೆ ಎನ್ನಲಾಗಿದೆ. ಆದರೆ ಸದ್ಯ ಎಲ್ಲವೂ ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಪ್ರಕರಣದ ದಿಗಂತ್ ಕ್ಲೀನಾಗಿ ಹೊರಬರುತ್ತಾರಾ ಎಂಬುದರ ಮೇಲೆ ಅವಲಂಬಿಸಿದೆ.
Published by:
Rajesh Duggumane
First published:
September 17, 2020, 1:15 PM IST