ಅದೊಂದು ಕಾಲವಿತ್ತು ಬಾಲಿವುಡ್ (Bollywood) ಚಿತ್ರಗಳೇ ಸಿನಿ ಇಂಡಸ್ಟ್ರಿಯನ್ನು ಆಳ್ವಿಕೆ ಮಾಡುತ್ತಿತ್ತು ಹಾಗೂ ಅವುಗಳ ಆರ್ಭಟದ ನಡುವೆ ದಕ್ಷಿಣದ (South) ಅದೆಷ್ಟೋ ಅತ್ಯುತ್ತಮ ಚಿತ್ರಗಳು ಮೂಲೆ ಗುಂಪಾಗುತ್ತಿತ್ತು. ಆದರೆ 2022 ರ ವರ್ಷ ದಕ್ಷಿಣದ ಚಿತ್ರಗಳ (Movies) ಭವಿಷ್ಯವನ್ನೇ ಬದಲಾಯಿಸಿದ ವರ್ಷ ಎಂದೇ ಹೇಳಬಹುದು. ಬಾಕ್ಸ್ ಆಫೀಸ್ನಲ್ಲಿ ಈ ಬಾರಿ ಘರ್ಜಿಸಿದ್ದು ದಕ್ಷಿಣದ ಚಿತ್ರಗಳೇ!
ದಕ್ಷಿಣದ ಚಿತ್ರಗಳಲ್ಲಿ ಉತ್ತಮ ಕಥಾ ಹಂದರವಿರುವುದಿಲ್ಲ ಹಾಗೂ ನಟಿಸುವವರಿಗೆ ನಟನೆಯ ಗಂಧಗಾಳಿ ಗೊತ್ತಿರುವುದಿಲ್ಲ ಎಂಬ ಆರೋಪಗಳನ್ನೆಲ್ಲಾ ಧೂಳೀಪಟಗೈದು ದಕ್ಷಿಣದ ಚಿತ್ರಗಳು ವಿಶ್ವದಾದ್ಯಂತ ರಾರಾಜಿಸಿವೆ.
ಕೆಜಿಎಫ್ ಚಾಪ್ಟರ್ 2, ಕಾಂತಾರ, ಆರ್ಆರ್ಆರ್, ಸೀತಾ ರಾಮಮ್, ಹೀಗೆ ವಿಭಿನ್ನ ಕಥಾ ಹಂದರಗಳುಳ್ಳ ಚಿತ್ರಗಳು ವೀಕ್ಷಕ ಪ್ರಭುವಿಗೆ ಮೆಚ್ಚುಗೆಯಾಗಿದ್ದು ಮಾತ್ರವಲ್ಲದೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡು ಖ್ಯಾತಿಯನ್ನು ಪಡೆದುಕೊಂಡಿವೆ.
ದಕ್ಷಿಣದ ಚಿತ್ರಗಳಲ್ಲಿ ಮಿಂಚಿರುವ ಬಾಲಿವುಡ್ ಕಲಾವಿದರು
ಆಶ್ಚರ್ಯಕರವಾಗಿ ಹೆಚ್ಚಿನ ಬಾಲಿವುಡ್ ಖ್ಯಾತ ಕಲಾವಿದರು ಕೂಡ ದಕ್ಷಿಣದ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ ಹಾಗೂ ತಮ್ಮ ವಿಭಿನ್ನ ಪಾತ್ರಗಳಿಂದ ಇಲ್ಲಿನವರಿಗೂ ಪ್ರಿಯರಾಗಿದ್ದಾರೆ.
ಇನ್ನೇನು 2023 ಕ್ಕೆ ನಾವು ಕಾಲಿಡುತ್ತಿದ್ದೇವೆ. ಈ ಸಮಯದಲ್ಲಿ ಯಾವ್ಯಾವ ಬಾಲಿವುಡ್ ನಟ ನಟಿಯರು ದಕ್ಷಿಣದ ಚಿತ್ರಗಳಲ್ಲಿ ತಮ್ಮ ಕಲಾತ್ಮಕತೆಯನ್ನು ಒರೆಗೆ ಹಚ್ಚಿದ್ದಾರೆ ಹಾಗೂ ಸಿನಿ ಪ್ರೇಕ್ಷಕರ ಮೋಸ್ಟ್ ಫೇವರೇಟ್ ಆಗಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.
ಶೋಭಿತಾ ಧುಲಿಪಲ
ಮಣಿ ರತ್ನಂ ಚಿತ್ರವಾದ ಪೊನಿಯನ್ ಸೆಲ್ವನ್ – 1 ರಲ್ಲಿ ಶೋಭಿತಾ ವನಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಹಾನ್ ಕಲಾವಿದರಾದ ಐಶ್ವರ್ಯಾ ರೈ ಬಚ್ಚನ್, ತ್ರಿಶಾ, ವಿಕ್ರಮ್, ಕಾರ್ತಿ ಮೊದಲಾದ ಧೀಮಂತರೇ ಬಣ್ಣ ಹಚ್ಚಿದ್ದರೂ ಶೋಭಿತಾ ತಮ್ಮ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ ಹಾಗೂ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Aamir Khan-NTR: ಸೌತ್ ಸಿನಿಮಾದತ್ತ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್! NTR ಸಿನಿಮಾದಲ್ಲಿ ಆಮಿರ್ ಖಾನ್ ವಿಲನ್!?
ಅಜಯ್ ದೇವಗನ್
ಎಸ್ಎಸ್ ರಾಜಮೌಳಿಯವರ RRR ಚಿತ್ರ ಮಾರ್ಚ್ನಲ್ಲಿ ಬಿಡುಗಡೆಗೊಂಡಿದ್ದರೂ ಇನ್ನೂ ಅದರ ಅಬ್ಬರ ಕಡಿಮೆಯಾಗಿಲ್ಲ. ಜೂನಿಯರ್ ಎನ್ಟಿಆರ್ ಹಾಗೂ ರಾಮ್ಚರಣ್ರೊಂದಿಗೆ ಅಜಯ್ ದೇವಗನ್ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದು, ಚಿತ್ರವನ್ನು ಇನ್ನಷ್ಟು ಪವರ್ಫುಲ್ ಆಗಿ ರೂಪಿಸಿದ್ದಾರೆ.
ಬಾಲಿವುಡ್ನ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಹಿಟ್ ಕಲಾವಿದ ಎಂದೆನಿಸಿಕೊಂಡಿರುವ ಅಜಯ್, ದಕ್ಷಿಣದ ಚಿತ್ರಗಳಲ್ಲಿ ಕೂಡ ತಮ್ಮ ಅಭಿನಯ ಸಾಮರ್ಥ್ಯವನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂಜಯ್ ದತ್
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಕೆಜಿಎಫ್ ಚಾಪ್ಟರ್ 2 ನಲ್ಲಿ ಸಂಜಯ್ ದತ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅಧೀರ ಪಾತ್ರದಲ್ಲಿ ಮಿಂಚಿದ ಸಂಜಯ್, ವೀಕ್ಷಕರ ಗಮನ ಸೆಳೆಯುವಲ್ಲಿ ಸೈ ಎನಿಸಿದ್ದಾರೆ.
ಚಿತ್ರದ ಪಾತ್ರಕ್ಕೆ ತಕ್ಕಂತೆ ತಮ್ಮ ಸಂಪೂರ್ಣ ಹಾವಭಾವವನ್ನೇ ಬದಲಾಯಿಸಿಕೊಂಡ ಸಂಜಯ್, ರಗಡ್ ಲುಕ್ನಲ್ಲಿ ವೀಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಆಲಿಯಾ ಭಟ್
ಎಸ್ಎಸ್ ರಾಜಮೌಳಿಯವರ RRR ಚಿತ್ರದಲ್ಲಿ ಟಾಲಿವುಡ್ಗೆ ಆಲಿಯಾ ಪಾದಾರ್ಪಣೆಗೈದಿದ್ದಾರೆ. ಸರಳವಾದ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿ ಸೈ ಎನಿಸಿದ ಆಲಿಯಾ ಯಾವುದೇ ಪಾತ್ರಕ್ಕೂ ಜೀವ ತುಂಬಿ ನಟಿಸುವ ಪ್ರತಿಭಾವಂತೆ ಎಂದೆನಿಸಿಕೊಂಡಿದ್ದಾರೆ.
ಸಂಪೂರ್ಣ ಹಳ್ಳಿಗೆ ನೀಡಿದ ಭರವಸೆಯನ್ನು ಪೂರ್ಣಗೊಳಿಸಿದ ನಂತರ ಮರಳಿ ಬರುವ ಪ್ರೇಮಿಗಾಗಿ ಕಾಯುವ ಪಾತ್ರದಲ್ಲಿ ಆಲಿಯಾ ವೀಕ್ಷಕರ ಪ್ರಭುವಿನ ಮನಗೆದ್ದಿದ್ದಾರೆ. ಆಲಿಯಾರ ಪಾತ್ರ ಚಿತ್ರದಲ್ಲಿ ಅತಿ ಕಡಿಮೆ ಸಮಯದ್ದಾಗಿದ್ದರೂ ಆಕೆ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ.
ಮೃಣಾಲ್ ಠಾಕೂರ್
ಅತ್ಯುತ್ತಮ ಪ್ರೇಮಕಥೆ ಸೀತಾರಾಮಮ್ನಲ್ಲಿ ಸೀತೆಯಾಗಿ ಮನಕದ್ದ ಬೆಡಗಿ ಮೃಣಾಲ್ ಠಾಕೂರ್ ದುಲ್ಕರ್ ಸಲ್ಮಾನ್ಗೆ ನಾಯಕಿಯಾಗಿ ಕಾಣಿಸಿಕೊಂಡರು.
ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿ ದೇಶದೆಲ್ಲೆಡೆ ಸಿನಿ ಪ್ರೇಕ್ಷಕರನ್ನು ಆಕರ್ಷಿಸಿತು. ಈ ಚಿತ್ರದ ಮೂಲಕ ತೆಲುಗು ಇಂಡಸ್ಟ್ರೀಗೆ ಮೃಣಾಲ್ ಪಾದಾರ್ಪಣೆ ಮಾಡಿದ್ದಾರೆ. ಹೀಗೆ ಬಾಲಿವುಡ್ನ ನಟ ನಟಿಯರು ದಕ್ಷಿಣದ ಚಿತ್ರಗಳಲ್ಲೂ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ