Akshi Movie: ರಾಷ್ಟ್ರಪ್ರಶಸ್ತಿ ವಿಜೇತ ಅಕ್ಷಿ ಚಿತ್ರ ರಿಲೀಸ್‍ಗೆ ರೆಡಿ; ’ಅಕ್ಷಿ’ಗೆ ಅಣ್ಣಾವ್ರೇ ಕಾರಣ ಎಂದ ಚಿತ್ರತಂಡ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಅಕ್ಷಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಅವರಿಗೆ ಕಿರುತೆರೆಯ ಜನಪ್ರಿಯ ನಟಿ ಇಳಾ ವಿಟ್ಲಾ ನಾಯಕಿಯಾಗಿದ್ದಾರೆ. ಬಾಲನಟರಾಗಿ ಮಿಥುನ್, ನಾಗರಾಜ್, ಕಸ್ತೂರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಕ್ಷಿ ಕನ್ನಡ ಚಿತ್ರದ ಪೋಸ್ಟರ್-ಡಾ.ರಾಜ್​ಕುಮಾರ್

ಅಕ್ಷಿ ಕನ್ನಡ ಚಿತ್ರದ ಪೋಸ್ಟರ್-ಡಾ.ರಾಜ್​ಕುಮಾರ್

  • Share this:
67ನೇ ಸಾಲಿನ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾ ಅಕ್ಷಿ. ಬಹುತೇಕ ಹೊಸಬರೇ ಸೇರಿ ಮಾಡಿರುವುದು ಅಕ್ಷಿ ಸಿನಿಮಾದ ವಿಶೇಷತೆ. ನಿರ್ಮಾಪಕರಿಗೆ, ನಿರ್ದೇಶಕರಿಗೆ, ಹಲವು ಕಲಾವಿದರಿಗೆ ಇದು ಚೊಚ್ಚಲ ಪ್ರಯತ್ನ. ಹೀಗೆ ಮೊದಲ ಪ್ರಯತ್ನಕ್ಕೇ ಭಾರತದ ಅತ್ಯುನ್ನತ ರಾಷ್ಟ್ರಪ್ರಶಸ್ತಿ ದೊರೆತಿರುವುದು ಚಿತ್ರತಂಡಕ್ಕೆ ಹೊಸ ಚೈತನ್ಯ ತುಂಬಿದೆ. ಆ ಖುಷಿಯಲ್ಲಿಯೇ ಅಕ್ಷಿ ಚಿತ್ರತಂಡ ಸದ್ಯ ಸಿನಿಮಾ ರಿಲೀಸ್‍ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಿರೂಪಕ, ಗಾಯಕ, ಹಿನ್ನೆಲೆ ಧ್ವನಿ ಕಲಾವಿದ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕಲಾದೇಗುಲ ಶ್ರೀನಿವಾಸ್ ಅಕ್ಷಿ ಸಿನಿಮಾ ಮೂಲಕ ನಿರ್ಮಾಪಕರೂ ಆಗಿದ್ದಾರೆ. ಕಲಾದೇಗುಲ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಅವರು ರಮೇಶ್ ಹಾಗೂ ರವಿ ಎಂಬ ಇಬ್ಬರು ಗೆಳೆಯರ ಜೊತೆ ಸೇರಿ ಅಕ್ಷಿ ಸಿನಿಮಾ ನಿರ್ಮಿಸಿದ್ದಾರೆ. ಮಾತ್ರವಲ್ಲ ಚಿತ್ರಕ್ಕೆ ಸಾಹಿತ್ಯ, ಸಂಗೀತ ನಿರ್ದೇಶನವನ್ನೂ ತಾವೇ ಒದಗಿಸಿದ್ದು, ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ ಕೂಡ. ರಾಷ್ಟ್ರಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಕಲಾದೇಗುಲ ಶ್ರೀನಿವಾಸ್ ಆ ಖುಷಿಯನ್ನು ಹಂಚಿಕೊಳ್ಳಲು ಹಾಗೂ ಮುಂದಿನ ಯೋಜನೆಗಳನ್ನು ತಿಳಿಸಲು ಇತ್ತೀಚೆಗಷ್ಟೇ ಮಾಧ್ಯಮಗೋಷ್ಠಿ ಕರೆದಿದ್ದರು.

’ಆರಂಭದಲ್ಲಿ ನಮಗೆ ಒಂದು ಸದಭಿರುಚಿಯ ಚಿತ್ರ ಮಾಡಬೇಕು ಅನ್ನುವುದಷ್ಟೇ ಇತ್ತು. ಅದಕ್ಕೊಂದು ಒಳ್ಳೆಯ ಕಥೆ ಕೂಡ ಬೇಕು ಅಂತ ಯೋಚಿಸುತ್ತಿದ್ದಾಗಲೇ ಗೆಳೆಯರೂ ಆದ ನಿರ್ದೇಶಕ ಮನೋಜ್ ಕುಮಾರ್ ತಾವೇ ಬರೆದಿದ್ದ ಒಂದು ಕಥೆ ಹೇಳಿದರು. ಈ ಕಥೆಯನ್ನೇ ಸಿನಿಮಾ ಮಾಡಿದರೆ ಹೇಗೆ ಎಂದು ನನ್ನ ನಿರ್ಮಾಣದ ಮೊದಲ ಸಾಹಸಕ್ಕೆ ಇದೇ ಕಥೆ ಸೂಕ್ತ ಎನಿಸಿತು. ಆಗ ಪ್ರಾರಂಭವಾಗಿದ್ದೇ ಅಕ್ಷಿ ಸಿನಿಮಾ. ಇವತ್ತು ಅದೇ ಕಥೆಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಇದಕ್ಕೆ ನಿಜಕ್ಕೂ ನಾವು ಕಾರಣರಲ್ಲ. ಬದಲಾಗಿ ಅಕ್ಷಿಯ ಕಥೆ, ಆ ಕಥೆಯ ಪ್ರೇರಕರು ಆದ ವರನಟ ಡಾ. ರಾಜ್‍ಕುಮಾರ್ ಅವರು’ ಎಂದು ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್ ಅಕ್ಷಿ ಸಿನಿಮಾ ಪ್ರಾರಂಭಿಸಿದ ಬಗ್ಗೆ ಹಾಗೂ ರಾಷ್ಟ್ರಪ್ರಶಸ್ತಿ ದೊರಕಿದ ಬಗ್ಗೆ ಮಾಹಿತಿ ನೀಡಿದರು.

Coronavirus: ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ನಾಳೆ ಸಿಎಂ ನೇತೃತ್ವದಲ್ಲಿ ಸಭೆ; ಟಫ್ ರೂಲ್ಸ್​ ಜಾರಿ ಸಾಧ್ಯತೆ

ಇನ್ನು ನಿರ್ದೇಶಕ ಮನೋಜ್ ಕುಮಾರ್ ಅವರಿಗೂ ಅಕ್ಷಿ ಮೊದಲ ನಿರ್ದೇಶನದ ಚಿತ್ರ. ಎಂಟು ವರ್ಷಗಳ ಕಾಲ ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಜೊತೆ ಪಳಗಿ ಅನುಭವ ಪಡೆದಿರುವ ಅವರು ಕಳೆದ ಆರು ವರ್ಷಗಳಿಂದ ಅಕ್ಷಿ ಕಥೆಯನ್ನು ಸಿನಿಮಾ ಮಾಡಲು ಓಡಾಡುತ್ತಿದ್ದರಂತೆ. ಈಗ ಆ ಕನಸು ನನಸಾಗಿದೆ ಎಂದ ಮನೋಜ್ ಕುಮಾರ್ ಡಾ. ರಾಜ್‍ಕುಮಾರ್ ಅವರು ಈ ಸಿನಿಮಾಗೆ ಹೇಗೆ ಪ್ರೇರೇಪಣೆಯಾದರು ಎಂಬುದನ್ನು ವಿವರಿಸಿದರು.

`ಈ ಕಥೆ ಹುಟ್ಟಿದ್ದಕ್ಕೆ ಕಾರಣವೇ ನಟಸಾರ್ವಭೌಮ ಡಾ. ರಾಜ್‍ಕುಮಾರ್ ಅವರು, ನಾನು ಹಾಸನ ಜಿಲ್ಲೆಯ ಬೇಲೂರಿನವನು. ವರನಟ ಡಾ. ರಾಜ್‍ಕುಮಾರ್ ಅವರು ನಿಧನರಾದ ದಿನಗಳಲ್ಲಿ ನಾನು ಊರಿನಲ್ಲಿದ್ದೆ. ಅವರು ಇನ್ನಿಲ್ಲ ಅಂತ ಜನ ದುಃಖಪಡುತ್ತಿದ್ದ ಸಮಯದಲ್ಲೇ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದರಂತೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಈ ಸಂಬಂಧ ಹಲವಾರು ಸುದ್ದಿಗಳೂ ಬಂದಿದ್ದವು. ಅದು ನನಗೆ ಕಾಡತೊಡಗಿತ್ತು. ನೇತ್ರದಾನ ಎಂಬುದು ಹೇಗೆ ಇನ್ನೊಬ್ಬರ ಬದುಕಿನಲ್ಲಿ ಬೆಳಕು ನೀಡುತ್ತದೆ ಅಲ್ವಾ ಅಂತ ಕುತೂಹಲ ಮೂಡಿಸಿತು. ಅದರಿಂದ ಪ್ರೇರೇಪಿತನಾಗಿ ನಾನು ಅಕ್ಷಿ ಕಥೆ ಬರೆದೆ' ಎಂದು ವಿವರಿಸುತ್ತಾರೆ ನಿರ್ದೇಶಕ ಮನೋಜ್ ಕುಮಾರ್.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಅಕ್ಷಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಅವರಿಗೆ ಕಿರುತೆರೆಯ ಜನಪ್ರಿಯ ನಟಿ ಇಳಾ ವಿಟ್ಲಾ ನಾಯಕಿಯಾಗಿದ್ದಾರೆ. ಬಾಲನಟರಾಗಿ ಮಿಥುನ್, ನಾಗರಾಜ್, ಕಸ್ತೂರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಿಂದೇಗೌಡ ಹಾಗೂ ಇಳಾ ವಿಟ್ಲಾ ಎಲ್ಲ ಕ್ರೆಡಿಟ್‍ಅನ್ನೂ ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ನೀಡಿದರು. ನಾವು ಪಾತ್ರದಲ್ಲಿ ಅಭಿನಯಿಸಿದೆವು ಎನ್ನುವುದಕ್ಕಿಂತ ನಿರ್ದೇಶಕರು ಪಾತ್ರಕ್ಕೆ ನಮ್ಮಿಂದ ಅಭಿನಯ ತೆಗೆಸಿದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಗೆಯೇ ರಾಷ್ಟ್ರಪ್ರಶಸ್ತಿ ಬಂದಿದ್ದು ತುಂಬಾ ಖುಷಿ ಕೊಟ್ಟಿದೆ, ಹಾಗೂ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎಂದರು. ಇದೇ ಸಂದರ್ಭದಲ್ಲಿ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್ ಅವರ ಗೆಳೆಯರೂ ಆದ ನಟ ನೆನಪಿರಲಿ ಪ್ರೇಮ್ ಹಾಜರಿದ್ದು, ಅಕ್ಷಿ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದರು.
Published by:Latha CG
First published: