ನಾಯಕನಟ ಸಹಾಯಕ್ಕೆ ಬರಲಿಲ್ಲ ಎಂದ ಫೈಟರ್ ರಂಜಿತ್ ಹೇಳಿಕೆಗೆ ಅಜಯ್ ರಾವ್ ಪ್ರತಿಕ್ರಿಯೆ ಇದು

ಚಿತ್ರೀಕರಣ ವೇಳೆ ಆಗಾಗ್ಗೆ ಸಣ್ಣಪುಟ್ಟ ಅವಘಡಗಳು ಆಗುತ್ತಿರುತ್ತವೆ. ಅಂಥದ್ದೇ ಒಂದು ಘಟನೆ ಎಂದು ಭಾವಿಸಿ ನಾನು ಸುಮ್ಮನೆ ನೋಡುತ್ತಾ ನಿಂತಿದ್ದೆ. ಘಟನೆ ಇಷ್ಟು ಗಂಭೀರ ಅಂತ ಗೊತ್ತಾಗಿದ್ದು ನನ್ನ ಸ್ಟಾಫ್ ಬಂದು ಹೇಳಿದಾಗ ಎಂದು ಲವ್ ಯೂ ರಚ್ಚು ನಾಯಕನಟ ಅಜಯ್ ರಾವ್ ತಿಳಿಸಿದ್ಧಾರೆ.

ವಿವೇಕ್​ ಸಾವಿನ ಕುರಿತಾಗಿ ಹೇಳಿಕೆ ಕೊಟ್ಟ ಅಜಯ್ ರಾವ್​

ವಿವೇಕ್​ ಸಾವಿನ ಕುರಿತಾಗಿ ಹೇಳಿಕೆ ಕೊಟ್ಟ ಅಜಯ್ ರಾವ್​

 • Share this:
  ಬೆಂಗಳೂರು, ಆ. 10: ನಿನ್ನೆ ಬಿಡದಿ ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ ದುರಂತದಲ್ಲಿ ಒಬ್ಬರು ಸಾವನ್ನಪ್ಪಿ, ಮತ್ತೊಬ್ಬರು ಗಾಯಗೊಂಡಿದ್ದರು. ಈ ವೇಳೆ ಚಿತ್ರದ ನಾಯಕನಟ ಅಜಯ್ ರಾವ್ ಘಟನಾ ಸ್ಥಳದಲ್ಲೇ ಇದ್ದರೂ ತಮ್ಮ ನೆರವಿಗೆ ಧಾವಿಸಿ ಬರಲಿಲ್ಲ. ಸುಮ್ಮನೆ ನೋಡಿ ನಿಂತುಕೊಂಡಿದ್ದರು ಎಂದು ಆಸ್ಪತ್ರೆಯಲ್ಲೇ ಗಾಯಾಳು ರಂಜಿತ್ ಹೇಳಿದ್ದರು. ಈ ಬಗ್ಗೆ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯಿಸಿದ ನಾಯಕನಟ ಅಜಯ್ ರಾವ್ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾನು ಸ್ಪಾಟ್​ನಲ್ಲಿ ಇರಲಿಲ್ಲ ಅಂತ ಎಲ್ಲೂ ನಾನು ಹೇಳಿಲ್ಲ. ನಾನು ಸ್ಥಳದಲ್ಲೇ ಇದ್ದೆ. ಆದರೆ, ಹತ್ತಿರದಲ್ಲಿ ಇರಲಿಲ್ಲ. 200 ಮೀಟರ್ ದೂರದಲ್ಲಿ ಕ್ಯಾನೋಪಿ ಹಾಕಿಕೊಂಡು ನನ್ನ ಪಾಡಿಗೆ ಮೊಬೈಲ್ ನೋಡಿಕೊಂಡು ಕೂತಿದ್ದೆ ಎಂದು ಅಜೇಯ ರಾವ್ ಹೇಳಿದ್ದಾರೆ.

  ಏನು ಘಟನೆ ನಡೆಯಿತು ಎಂದು ನನ್ನ ಗಮನಕ್ಕೆ ಬರಲಿಲ್ಲ. ಚಿತ್ರೀಕರಣದ ವೇಳೆ ಆಗಾಗ್ಗೆ ಅಕ್ಸಿಡೆಂಟ್ಸ್ ಆಗುತ್ತಿರುತ್ತೆ. ಅಂಥದ್ದೇ ಒಂದು ಘಟನೆ ಅಂದುಕೊಂಡು ನೋಡುತ್ತಾ ನಿಂತಿದ್ದೆ. ದುರ್ಘಟನೆ ಯಾವ ಮಟ್ಟಕ್ಕೆ ಆಗಿದೆ ಎಂದು ಗೊತ್ತಾಗಲಿಲ್ಲ. ನನ್ನ ಸ್ಟಾಫ್​ನವರು ಬಂದು ಹೇಳಿದಾಗ ಗೊತ್ತಾಯಿತು ಎಂದು ಸ್ಯಾಂಡಲ್ವುಡ್ ಹೀರೋ ವಿವರಿಸಿದ್ದಾರೆ.

  ನಾಯಕನಟ ಅಲ್ಲೇ ಇದ್ದರೂ ನಮ್ಮ ನೆರವಿಗೆ ಬರಲಿಲ್ಲ ಎಂದು ಗಾಯಾಳು ರಂಜಿತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಜಯ್ ರಾವ್, ಆತ ಹೇಳಿರುವುದರಲ್ಲಿ ತಪ್ಪಿಲ್ಲ. ಯಾರೇ ಆದರೂ ನಾಯಕನಟರಾದವರು ತಮ್ಮ ನೆರವಿಗೆ ಬರುತ್ತಾರೆಂದು ಅನಿಸುವುದು ಸ್ವಾಭಾವಿಕ. ನಮ್ಮ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂದು ಅವರಿಗೆ ಗೊತ್ತಿರುವುದಿಲ್ಲ. ರಂಜಿತ್ ಹಾಗೆ ಹೇಳಿದ್ದರಲ್ಲಿ ಏನು ತಪ್ಪು ಅನಿಸಿಲ್ಲ ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: ಲವ್ ಯೂ ರಚ್ಚು ದುರಂತ ಘಟನೆ: ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

  ನನಗೂ ಇಂಥದ್ದೇ ಚಿತ್ರೀಕರಣಗಳಲ್ಲಿ ಗಾಯಗಳಾಗಿವೆ. ನನ್ನ ಕಾಲಿಗೆ ಪೆಟ್ಟಾಗಿದೆ. ನನಗೆ ಎರಡು ವರ್ಷದಿಂದ ಓಡಲು ಆಗುವುದಿಲ್ಲ. ನಡೆದುಕೊಂಡೇ ಹೋಗಬೇಕು. ಎಲ್ಲೋ ಒಮ್ಮೆಮ್ಮೆ ಒಂದಷ್ಟು ದೂರ ಜಾಗಿಂಗ್ ಮಾಡುತ್ತೇನೆ. ಇದು ಚಿತ್ರರಂಗದ ಎಲ್ಲರಿಗೂ ಗೊತ್ತು. ಘಟನಾ ಸ್ಥಳದಲ್ಲಿ ನಾನು ಧಾವಿಸಿ ಓಡದೇ ನಿಂತುಕೊಂಡಿದ್ದಕ್ಕೆ ಇದೇ ಕಾರಣ. ಅಲ್ಲದೇ, ಗಾಯಗೊಂಡಾಗ ಅಲ್ಲಿ ಗುಂಪು ಹೆಚ್ಚು ಸೇರಬಾರದು. ಘಟನೆ ಸ್ಥಳದಲ್ಲಿ ಫೈಟ್ ಮಾಸ್ಟರ್ ಇದ್ದರಿಂದ ನಾನು ಸುಮ್ಮನೆ ಗುಂಪು ಸೇರಿಕೊಂಡರೆ ಯಾವ ಪ್ರಯೋಜನವೂ ಆಗದು ಎಂದು ದೂರದಲ್ಲೇ ನಿಂತು ಗಮನಿಸುತ್ತಿದ್ದೆ ಎಂದು ಅಜಯ್ ರಾವ್ ಹೇಳಿದ್ಧಾರೆ.

  ನಾನು ಘಟನಾ ಸ್ಥಳದಲ್ಲಿ ನೆರವಿಗೆ ಧಾವಿಸಿ ಹೋಗಲಿಲ್ಲ ಎಂಬುದು ನಿಜ. ಆದರೆ, ಘಟನೆ ನಂತರ ನಾನೊಬ್ಬನೇ ಎಲ್ಲಾ ಮಾಧ್ಯಮಗಳ ಪ್ರಶ್ನೆಗೂ ಉತ್ತರಿಸುತ್ತಿದ್ದೇನೆ. ಯಾವ ಫೋನ್ ಕಾಲನ್ನೂ ನಿರಾಕರಿಸುತ್ತಿಲ್ಲ. ನನಗೂ ನೋವಾಗಿದೆ. ವಿವೇಕ್ ಮೃತದೇಹವನ್ನೂ ನೋಡಲು ಸಾಧ್ಯವಾಗಲಿಲ್ಲ. ಅವರ ಕುಟುಂಬದವರನ್ನ ಭೇಟಿ ಮಾಡಲು ಸಮಯ ಸಿಕ್ಕಿಲ್ಲ. ನೀವೆಲ್ಲಾ ಬಿಟ್ಟರೆ ವಿವೇಕ್ ಕುಟುಂಬದವರಿಗೆ ಏನಾದರೂ ಸಹಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಅಜಯ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

  ಇದೇ ವೇಳೆ, ಈ ಘಟನೆ ಸಂಬಂಧ ವಿವೇಕ್ ಕುಟುಂಬದವರು ಇಂದು ದೂರು ದಾಖಲಿಸಿದ್ದಾರೆ. ರಾಮನಗರ ನ್ಯಾಯಾಲಯವೊಂದು ಮೂವರು ಆರೋಪಿಗಳಾದ ಚಿತ್ರದ ನಿರ್ದೇಶಕರು, ಫೈಟ್ ಮಾಸ್ಟರ್ ಹಾಗೂ ಕ್ರೇನ್ ಆಪರೇಟರ್ ಅವರನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: