HOME » NEWS » Entertainment » AJAY DEVGAN WILL ACTED IN GOBAR MOVIE RHHSN ASTV

ಈ ಸಿನಿಮಾ ಹೆಸರೇ `ಸಗಣಿ!ಇನ್ನೂ ಏನೇನ್ ಟೈಟಲ್ ನೋಡಬೇಕೋ ಏನೋ...? 

ಇನ್ನು ಭುಜ್ ದಿ ಫ್ರೆಂಡ್ ಆಫ್ ಇಂಡಿಯಾ ಕೂಡ ಪೂರ್ಣಗೊಂಡಿದ್ದು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಮೈದಾನ್ ಹಾಗೂ ಥ್ಯಾಂಕ್ ಗಾಡ್ ಚಿತ್ರಗಳ ಚಿತ್ರೀಕರಣ ಸದ್ಯ ಭರದಿಂದ ಸಾಗಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಹಲವು ಸಿನಿಮಾಗಳಲ್ಲಿ ಅಜಯ್ ದೇವಗನ್ ಬ್ಯುಸಿಯಾಗಿದ್ದು, ಅದರ ನಡುವೆಯೇ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

news18-kannada
Updated:April 17, 2021, 6:14 PM IST
ಈ ಸಿನಿಮಾ ಹೆಸರೇ `ಸಗಣಿ!ಇನ್ನೂ ಏನೇನ್ ಟೈಟಲ್ ನೋಡಬೇಕೋ ಏನೋ...? 
ಗೋಬರ್ ಸಿನಿಮಾದ ನಿರ್ದೇಶಕ, ನಟ ಹಾಗೂ ನಿರ್ಮಾಪಕ.
  • Share this:
ಸಿನಿಮಾ ಟೈಟಲ್‌ಗಳ ವಿಷಯಕ್ಕೆ ಬಂದರೆ ಒಂಟಿ ಅಕ್ಷರಗಳು, ಸಂಖ್ಯೆಗಳು, ಚಿಹ್ನೆಗಳು, ಹಾಡಿನ ಸಾಹಿತ್ಯ, ಸಿನಿಮಾ ಡೈಲಾಗ್ಸ್, ಊರಿನ ಹೆಸರು, ಪ್ರಾಣಿಯ ಹೆಸರು, ಡಬಲ್ ಮೀನಿಂಗ್ ಪದಗಳು... ಹೀಗೆ ಇನ್ನೂ ನಾನಾ ಬಗೆಯ ಶೀರ್ಷಿಕೆಗಳನ್ನು ನೋಡಿದ್ದೇವೆ. ಆದರೆ ಈಗ ಮತ್ತೊಂದು ಹೊಚ್ಚ ಹೊಸ ಸಿನಿಮಾ ಘೋಷಣೆಯಾಗಿದೆ. ಅದರ ಹೆಸರು ಗೋಬರ್ ಅರ್ಥಾತ್ ಸಗಣಿ ಅಂತ...!

ಹೌದು, ಬಾಲಿವುಡ್ ಆಕ್ಷನ್ ಕಿಂಗ್ ಅಜಯ್ ದೇವಗನಗ, ಸಿದ್ಧಾರ್ಥ್ ರಾಯ್ ಕಪೂರ್ ಇಬ್ಬರೂ ಸೇರಿ ನಿರ್ಮಿಸುತ್ತಿರುವ ಹೊಸ ಸಿನಿಮಾ ಹೆಸರು ಗೋಬರ್ ಅಂತ ಫಿಕ್ಸ್ ಮಾಡಲಾಗಿದೆ. ಈ ಚಿತ್ರಕ್ಕೆ ಸಬಲ್ ಶೇಖಾವತ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಕುರಿತು ಖುದ್ದು ಸೂಪರ್ ಸ್ಟಾರ್ ಅಜಯ್ ದೇವಗನ್ ಅವರೇ ತಮ್ಮ ಟ್ವಿಟರ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. 1990ರ ದಶಕದಲ್ಲಿ ನಡೆಯುವ ಕಥೆ ಇದಾಗಿದ್ದು, ಒಬ್ಬ ದಕ್ಷ, ಪ್ರಾಮಾಣಿಕ ಸರ್ಕಾರಿ ಆಸ್ಪತ್ರೆಯ ಪಶು ವೈದ್ಯ, ಭ್ರಷ್ಟಾಚಾರದಲ್ಲಿ ಮುಳುಗಿರುವ ಆಸ್ಪತ್ರೆ ಸಿಬ್ಬಂದಿ ಹಾಗೂ ವ್ಯವಸ್ಥೆಯ ವಿರುದ್ಧ ಹೇಗೆಲ್ಲಾ ಹೋರಾಡುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಎನ್ನಲಾಗಿದೆ.

ಒಬ್ಬ ಸಾಮಾನ್ಯ ವ್ಯಕ್ತಿ ಭ್ರಷ್ಟಾಚಾರದ ವಿರುದ್ಧ ನಡೆಸುವ ಸಾಹಸಮಯ ಹೋರಾಟವನ್ನೇ ಹಾಸ್ಯದ ಸ್ಪರ್ಶ ನೀಡುವ ಮೂಲಕ ಪ್ರೇಕ್ಷಕರಿಗೆ ಕಚಗುಳಿ ನೀಡುವ ಪ್ರಯತ್ನವೇ ಗೋಬರ್ ಎಂದು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ರಾಯ್ ಕಪೂರ್ ಫಿಲ್ಮ್​ನ ಸಿದ್ಧಾರ್ಥ್ ರಾಯ್ ಕಪೂರ್ ಹೇಳಿಕೊಂಡಿದ್ದಾರೆ. ಈ ಸಿನಿಮಾ ಜನರನ್ನು ಥಿಯೇಟರ್‌ಗಳಿಗೆ ಕೇವಲ ಕರೆದುಕೊಂಡು ಬರುವುದಷ್ಟೇ ಅಲ್ಲ, ನಗಿಸುತ್ತೆ, ರಿಲ್ಯಾಕ್ಸ್ ಮಾಡಿಸುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಯೋಚಿಸುವಂತೆ ಮಾಡುತ್ತೆ. ಅಷ್ಟರ ಮಟ್ಟಿಗೆ ಈ ಸಿನಿಮಾ ವಿಷಯದ ಬಗ್ಗೆ ನನಗೆ ಆತ್ಮವಿಶ್ವಾಸವಿದೆ ಎಂದು ಖುದ್ದು ಅಜಯ್ ದೇವಗನ್ ಕೂಡ ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Sonu Sood: ಸೋನು ಸೂದ್​ಗೆ ಕೋವಿಡ್​; ದೇಶಕ್ಕೆ ನಿಮ್ಮ ಅಗತ್ಯವಿದೆ, ಹೆಚ್ಚಿನ ಕಾಳಜಿವಹಿಸಿ ಎಂದ ಅಭಿಮಾನಿಗಳು

ಇನ್ನು ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ನಿರ್ದೇಶಕ ಸಬಲ್ ಶೇಖಾವತ್, ಕೆಲ ನೈಜ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಈ ಚಿತ್ರದ ಕಥೆ ಬರೆದಿದ್ದೇನೆ. ಹಸುಗಳನ್ನು, ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುವ ಒಬ್ಬ ಸಾಮಾನ್ಯ ಸರ್ಕಾರೀ ಪಶು ಆಸ್ಪತ್ರೆಯ ಪಶು ವೈದ್ಯ, ಭ್ರಷ್ಟಾಚಾರವನ್ನು ಹತ್ತಿಕ್ಕಲು ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ, ಆತನ ಹೋರಾಟದ ಪಯಣ ಹೇಗಿರುತ್ತೆ, ಕೊನೆಯಲ್ಲಿ ಆತ ಜಯಶಾಲಿಯಾಗುತ್ತಾನಾ ಅಥವಾ ಖುದ್ದು ಅವನೇ ವ್ಯವಸ್ಥೆಯ ಜತೆ ಕೈಜೋಡಿಸಿ ಭ್ರಷ್ಟನಾಗಿಬಿಡುತ್ತಾನಾ ಎಂಬುದನ್ನು ಕುತೂಹಲಕಾರಿಯಾಗಿ ಅಷ್ಟೇ ಹಾಸ್ಯಭರಿತವಾಗಿ ಜನರ ಮುಂದಿಡಲು ನಾನೂ ಉತ್ಸುಕನಾಗಿದ್ದೇನೆ, ಎಂದು ಗೋಬರ್ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ ನಿರ್ದೇಶಕ ಸಬಲ್ ಶೇಖಾವತ್. ಇನ್ನು ಇದೇ ವರ್ಷದಾಂತ್ಯಕ್ಕೆ ಗೋಬರ್ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಸದ್ಯ ಚಿತ್ರದ ನಾಯಕನ ಪಾತ್ರಕ್ಕಾಗಿ ಹಾಗೂ ಉಳಿದ ತಾರಾಗಣಕ್ಕಾಗಿ ಆಯ್ಕೆ ಭರದಿಂದ ಸಾಗಿದೆ.

ಕಳೆದ ವರ್ಷ ಕೊರೋನಾ ಲಾಕ್‌ಡೌನ್ ನಡುವೆಯೂ ತಾವೇ ನಾಯಕನಾಗಿ ನಟಿಸಿ, ನಿರ್ಮಿಸಿದ್ದ ತಾನಾಜಿ ದಿ ಅನ್‌ಸಂಗ್ ಹೀರೋ ಹಾಗೂ ನಿರ್ಮಿಸಿದ್ದ ಛಲಾಂಗ್ ಸಿನಿಮಾಗಳನ್ನು ರಿಲೀಸ್ ಮಾಡಿದ್ದರು ಅಜಯ್ ದೇವಗನ್. ಇನ್ನು ಈ ವರ್ಷವಂತೂ ಅವರು ಬ್ಯಾಕ್ ಟು ಬ್ಯಾಕ್ ಹಲವು ಸಿನಿಮಾಗಳಲ್ಲಿ ಬ್ಯುಸಿ. ಅವರು ನಿರ್ಮಿಸಿರುವ ತ್ರಿಭಂಗಾ ಹಾಗೂ ದಿ ಬಿಗ್ ಬುಲ್ ಚಿತ್ರಗಳು ಅದಾಗಲೇ ರಿಲೀಸ್ ಆಗಿವೆ. ಅದರ ಜೊತೆಗೆ ಸೂರ್ಯವಂಸಿ ಹಾಗೂ ಗಂಗೂಬಾಯಿ ಕಾಥ್ಯಾವಾಡಿ ಚಿತ್ರಗಳಲ್ಲಿ ಸ್ಪೆಷಲ್ ರೋಲ್‌ಗಳಲ್ಲಿ ಅಜಯ್ ದೇವಗನ್ ನಟಿಸಿದ್ದು, ಸದ್ಯ ಆ ಎರಡೂ ಚಿತ್ರಗಳೂ ತೆರೆಗೆ ಬರಲು ರೆಡಿಯಿವೆ. ಹಾಗೇ ಆರ್‌ಆರ್‌ಆರ್ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅದೂ ಕೂಡ ಇನ್ನು ಕೆಲವೇ ದಿನಗಳಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ. ಇನ್ನು ಭುಜ್ ದಿ ಫ್ರೆಂಡ್ ಆಫ್ ಇಂಡಿಯಾ ಕೂಡ ಪೂರ್ಣಗೊಂಡಿದ್ದು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಮೈದಾನ್ ಹಾಗೂ ಥ್ಯಾಂಕ್ ಗಾಡ್ ಚಿತ್ರಗಳ ಚಿತ್ರೀಕರಣ ಸದ್ಯ ಭರದಿಂದ ಸಾಗಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಹಲವು ಸಿನಿಮಾಗಳಲ್ಲಿ ಅಜಯ್ ದೇವಗನ್ ಬ್ಯುಸಿಯಾಗಿದ್ದು, ಅದರ ನಡುವೆಯೇ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
Published by: HR Ramesh
First published: April 17, 2021, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories