Anitha EAnitha E
|
news18-kannada Updated:February 26, 2021, 4:17 PM IST
ಸುದ್ದಿಗೋಷ್ಠಿಯಲ್ಲಿ ರಾಗಿಣಿ ದ್ವಿವೇದಿ
ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ರಾಗಿಣಿ ದ್ವಿವೇದಿ, ಅಲ್ಲಿಂದ ಬಂದ ನಂತರ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಈ ಹಿಂದೆ ಪ್ರತ್ಯೇಕವಾಗಿ ಕೆಲವೇ ಕೆಲವು ಖಾಸಗಿ ವಾಹಿನಿಗಳಿಗೆ ಸಂದರ್ಶನ ನೀಡಿದ್ದ ರಾಗಣಿ, ಇತ್ತೀಚೆಗಷ್ಟೆ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಅಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ, ತಮ್ಮ ಮನಸ್ಸಿನಲ್ಲಿದ್ದ ನೋವು ಹಾಗೂ ತಮಗೆ ಎದುರಾದಕಷ್ಟದ ಬಗ್ಗೆ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದರು. ಅಲ್ಲದೆ ಶೀಘ್ರದಲ್ಲೇ ಮಾಧ್ಯಮಗಳ ಮುಂದೆ ಬಂದು ಕೆಲವು ಮುಖ್ಯವಾದ ವಿಚಾರಗಳ ಬಗ್ಗೆ ಮಾತನಾಡುವುದಾಗಿಯೂ ಹೇಳಿಕೊಂಡಿದ್ದರು. ಇದೇ ಕಾರಣದಿಂದಾಗಿ ಇಂದು ರಾಗಿಣಿ ಮಾಧ್ಯಮಗಳ ಮುಂದೆ ಬಂದಾಗ ಎಲ್ಲರಲ್ಲೂ ಕುತೂಹಲ ಮನೆ ಮಾಡಿತ್ತು. ಕರ್ನಾಟಕ ರಾಜ್ಯ ಫಿಸಿಕಲಿ ಚಾಲೆಂಜ್ಡ್ ಕ್ರಿಕೆಟ್ ಅಸೋಸಿಯೇಶನ್ ಆಯೋಜಿಸುತ್ತಿರುವ ಪಂದ್ಯಾವಳಿಗೆ ರಾಗಿಣಿ ರಾಯಭಾರಿಯಾಗಿದ್ದು, ಈ ವಿಷಯವಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಇಂದು ಭಾಗವಹಿಸಿದ್ದರು.
ದೇಶದಲ್ಲೇ ಮೊದಲ ಬಾರಿಗೆ ವಿಶೇಷ ಚೇತನರ ಟಿ10 ಪಂದ್ಯಾವಳಿ ಆಯೋಜಿಸಲಾಗಿದ್ದು, ಟಿ10 ಟೂರ್ನಮೆಂಟ್ ಗೆ ನಟಿ ರಾಗಿಣಿ ರಾಯಭಾರಿಯಾಗಿದ್ದಾರೆ. ಈ ವಿಷಯವಾಗಿ ಮಾತನಾಡಲು ರಾಗಿಣಿ ಇಂದು ಮಾಧ್ಯಮಗಳ ಮುಂದೆ ಬಂದಿದ್ದರು.

ಸುದ್ದಿಗೋಷ್ಠಿಯಲ್ಲಿ ರಾಗಿಣಿ ದ್ವಿವೇದಿ
'ಈ ಟೂರ್ನಿಯಲ್ಲಿ 28 ತಂಡಗಳು ಭಾಗವಹಿಸಲಿದ್ದು, ಮಾರ್ಚ್ 11ರಿಂದ ಪಂದ್ಯಾವಳಿ ಆರಂಭವಾಗುತ್ತಿದೆ. ಈ ರೀತಿಯ ಟೂರ್ನಮೆಂಟ್ ಆಗೋದು ತುಂಬಾನೇ ಮುಖ್ಯ. ಈ ರೀತಿಯ ವಿಶೇಷ ಚೇತನರನ್ನ ಪ್ರೋತ್ಸಾಹಿಸೋ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ. ಈ ಬಾರಿ ಕೂಡ ಸಾಮಾಜಿಕ ಕಾರ್ಯ ಮಾಡೋ ಯೋಚನೆ ಇದೆ. ಶಿಕ್ಷಣ ಮತ್ತು ಮಹಿಳಾ ಸಬಲೀಕರಣದಲ್ಲಿ ತೊಡಗಿಸಿಕೊಳ್ಳೊ ಪ್ರಯತ್ನದಲ್ಲಿದ್ದೇನೆ. ಈಗ 3ರಿಂದ 4 ಸಿನಿಮಾಗಳು ಮಾಡುತ್ತಿದ್ದೇನೆ. ಅವುಗಳ ಬಗ್ಗೆ ಮುಂದೆ ಮಾಹಿತಿ ನೀಡುತ್ತೇನೆ' ಎಂದರು ರಾಗಿಣಿ.
ತಮ್ಮ ಹೊಸ ಸಿನಿಮಾ ಕರ್ವ 3 ಕುರಿತಾಗಿಯೂ ಮಾತನಾಡಿರುವ ರಾಗಿಣಿ, ಆ ಚಿತ್ರದಲ್ಲಿನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಪಾತ್ರ ತುಂಬಾ ಚೆನ್ನಾಗಿದೆ. ನಾನೆ ನೆಕ್ಸ್ಟ್ ಸಿಎಂ ಸಿನಿಮಾ ಒಂದು ವರ್ಷದಿಂದ ಶೂಟಿಂಗ್ ಆಗ್ತಿದೆ. 2020ಯಲ್ಲಿ ನಾನೇನು ಮಿಸ್ ಮಾಡಿಕೊಂಡಿಲ್ಲ. ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಆರಾಮಾಗಿದ್ದೆ ಎಂದಿದ್ದಾರೆ.
ಕರ್ವ 3 ವಿಶಾಲ್ ಶೇಖರ್ ನಿರ್ದೇಶನ ಮಾಡುತ್ತಿರುವ ಸಿನಿಮಾ. ಇದರಲ್ಲಿ ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಿಲಕ್ ಹಾಗೂ ಮೇಘನಾ ಗಾವ್ಕಂರ್ ಸಹ ತಾರಾಗಣದಲ್ಲಿ ಇದ್ದಾರೆ.
ಡ್ರಗ್ಸ್ ಪ್ರಕರಣದ ಕುರಿತು
ಈ ಹಿಂದೆ ಜೈಲಿನಿಂದ ಹೊರ ಬಂದ ನಂತರ ಮಾಧ್ಯಮಗಳ ಮುಂದೆ ಬಂದು ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡುತ್ತೇನೆ ಎಂದಿದ್ದರು. ಆದರೆ ಇಂದು ಸುದ್ದಿಗೋಷ್ಠಿಯಲ್ಲಿ ಡ್ರಗ್ಸ್ ಪ್ರಕರಣದ ಬಗ್ಗೆ ಪ್ರಶ್ನೆಗಳು ಎದುರಾದಾಗ ಮಾತೇ ಹೊರಡದಂತಾಯಿತು. 'ಈ ಪ್ರಕರಣದ ಬಗ್ಗೆ ನಾನೇನೂ ಹೇಳಲ್ಲ. ಈ ಕೇಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ರಾಗಿಣಿ ಏನು ಅಂತ ಎಲ್ಲರಿಗೂ ಗೊತ್ತು. ನಾನು ಅದನ್ನ ಸಮರ್ಥಿಸಿಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ಕೇಸ್ ಬಗ್ಗೆ ಮಾತಾಡೋಕೆ ಇಷ್ಟ ಇಲ್ಲ' ಎಂದು ಹೇಳಿದರು.
Published by:
Anitha E
First published:
February 26, 2021, 4:17 PM IST