ವಿಧಾನಸಭಾ ಚುನಾವಣಾ (Assembly Election 2023) ಅಖಾಡ ರಂಗೇರಿದೆ. ನಟ ಸುದೀಪ್ (Sudeep) ಬಿಜೆಪಿ (BJP) ಪರವಾಗಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಬಿಜೆಪಿ ಸ್ಟಾರ್ ಪ್ರಚಾರಕರಾಗಿ ಅಖಾಡಕ್ಕೆ ಇಳಿದಿದ್ದಾರೆ. ಇತ್ತ ಕಾಂಗ್ರೆಸ್ ವರಿಷ್ಠರು ಕೂಡ ರಮ್ಯಾ (Ramya) ಮನವೊಲಿಕೆ ಮಾಡಿ ಕೈ ನಾಯಕರ ಪರ ಪ್ರಚಾರಕ್ಕೆ ಒಪ್ಪಿಸಿದ್ದಾರೆ. ರಮ್ಯಾ ಕಾಂಗ್ರೆಸ್ನ ಸ್ಟಾರ್ ಪ್ರಚಾರಕಿ ಆಗಿದ್ದಾರೆ. ಸಂದರ್ಶನವೊಂದರಲ್ಲಿ ರಮ್ಯಾ, ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಸುದೀಪ್ ಬಗ್ಗೆ ಕೂಡ ಮಾತಾಡಿದ್ದಾರೆ.
ಸುದೀಪ್ ನಿರ್ಧಾರದ ಬಗ್ಗೆ ನಟಿ ರಮ್ಯಾ ಮಾತು!
ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ಒಪ್ಪಿ ಬಿಜೆಪಿ ಪರ ಪ್ರಚಾರಕ್ಕಿಳಿದಿರುವ ನಟ ಸುದೀಪ್ ಬಗ್ಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ ಮಾತಾಡಿದ್ದಾರೆ. ಸುದೀಪ್ ಹಾಗೂ ನಾನು ಒಳ್ಳೆಯ ಸ್ನೇಹಿತರು. ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸುವ ಮೊದಲು ಅವರು ನನ್ನೊಟ್ಟಿಗೂ ಕೂಡ ಚರ್ಚಿಸಿದ್ದರು ಎಂದು ರಮ್ಯಾ ಹೇಳಿದ್ದಾರೆ.
ಸಿಎಂ ಪರ ಪ್ರಚಾರ ಕಿಚ್ಚನ ವೈಯಕ್ತಿಕ ನಿರ್ಧಾರ
ಈ ಬಗ್ಗೆ ಚರ್ಚೆ ಮಾಡಿ ಇದು ಸರಿಯೋ ತಪ್ಪೊ ಎಂಬ ಚರ್ಚೆಯನ್ನು ಕೂಡ ಅವರು ಮಾಡಿದ್ದರು. ಬಿಜೆಪಿ ಅಷ್ಟೇ ಅಲ್ಲದೇ ಇತರೆ ಪಕ್ಷಗಳು ಕೂಡ ಸುದೀಪ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಸುದೀಪ್ ಕೂಡ ಬೇರೆ ಬೇರೆ ಪಕ್ಷಗಳ ಮುಖಂಡರ ಸಲಹೆ ಪಡೆದಿದ್ದರು. ಆದರೆ ಅವರಿಗೆ ಸಿಎಂ ಬೊಮ್ಮಾಯಿ ಅವರು ಬಹಳ ಆಪ್ತರು ಅವರನ್ನು ಬೊಮ್ಮಾಯಿ ಮಾಮ ಎಂದೇ ಸುದೀಪ್ ಕರೆಯುತ್ತಾರೆ. ಹಾಗಾಗಿ ಕೊನೆಗೆ ಸಿಎಂ ಪರವಾಗಿ ಅವರು ಪ್ರಚಾರಕ್ಕೆ ಇಳಿಯುವ ನಿರ್ಧಾರ ಮಾಡಿದರು. ಅದು ಅವರ ವೈಯಕ್ತಿಕ ನಿರ್ಧಾರವಾಗಿದೆ ಎಂದು ರಮ್ಯಾ ಹೇಳಿದ್ದಾರೆ.
ಸುದೀಪ್ ರಾಜಕೀಯಕ್ಕೆ ಬರಬೇಕು
ಸುದೀಪ್ ಬಗ್ಗೆ ಮಾತಾಡುತ್ತಾ ರಮ್ಯಾ, ಸುದೀಪ್ ಅವರಂಥ ವ್ಯಕ್ತಿ ರಾಜಕೀಯಕ್ಕೆ ಬರಬೇಕು ಎಂದ್ರು. ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ, ಯುಕ್ತಿ ಸುದೀಪ್ ಅವರಿಗೆ ಇದೆ ಎಂದು ರಮ್ಯಾ ಹೇಳಿದ್ದಾರೆ. ಆ ಮೂಲಕ ಸುದೀಪ್ ರಾಜಕೀಯಕ್ಕೆ ಬರಬಹುದೆಂಬ ಸುಳಿವನ್ನು ಕೂಡ ನಟಿ ರಮ್ಯಾ ನೀಡಿದ್ದಾರೆ.
ಬಿಜೆಪಿ ಕೊಟ್ಟಿದೆ ಸಚಿವೆ ಮಾಡುವ ಆಫರ್
ಸಂದರ್ಶನದಲ್ಲಿ ಮಾತಾಡಿದ ನಟಿ ರಮ್ಯಾ ಬಿಜೆಪಿಯಿಂದಲೂ ಆಫರ್ ಬಂದಿತ್ತು ಎಂದಿದ್ದಾರೆ. ಬಿಜೆಪಿಯಿಂದಲೂ ಟಾಪ್ ಹಂತದ ವ್ಯಕ್ತಿಯೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದರು. ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿತ್ತು ಎಂದು ರಮ್ಯಾ ಹೇಳಿದ್ದಾರೆ.
ಬಿಜೆಪಿ ನಾಯಕರಿಂದ ರಮ್ಯಾಗೆ ಆಹ್ವಾನ
ನಾನು ಕೆಲವು ಬಾರಿ ಕಾಂಗ್ರೆಸ್ನ ಕೆಲ ನಡೆಗಳನ್ನು ಟೀಕಿಸಿದ್ದಾಗ, ನನಗೂ ಕಾಂಗ್ರೆಸ್ಗೂ ಭಿನ್ನಮತ ಇದೆ ಎಂದು ಅವರು ಭಾವಿಸಿದ್ದರು ಹಾಗಾಗಿ ಬಿಜೆಪಿ ನಾಯಕರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು ಎಂದು ರಮ್ಯಾ ಹೇಳಿದ್ದಾರೆ.
ಜೆಡಿಎಸ್ನಿಂದಲೂ ಬಂದಿತ್ತು ರಮ್ಯಾಗೆ ಆಫರ್
ಜೆಡಿಎಸ್ ಪಕ್ಷದಿಂದಲೂ ನನಗೆ ಆಫರ್ ಬಂದಿತ್ತು ಎಂದು ರಮ್ಯಾ ಹೇಳಿದ್ದಾರೆ. ಕುಮಾರಸ್ವಾಮಿ ಹಾಗೂ ನಾನೂ ಆಕಸ್ಮಿಕವಾಗಿ ಸೆಲೂನ್ ಒಂದರಲ್ಲಿ ಭೇಟಿಯಾದೆವು. ಪ್ರೀತಿಯಿಂದ ಮಾತಾಡಿಸಿದ ಕುಮಾರಸ್ವಾಮಿ ಅವರು ರಾಜಕೀಯದ ಬಗ್ಗೆ ಮಾತಾಡಿದ್ರು. ನೀವು ರಾಜಕೀಯದಿಂದ ದೂರ ಇರಬಾರದು, ನಿಮಗೆ ಶಕ್ತಿ, ಬುದ್ಧಿ ಇದೆ ನೀವು ಹೀಗೆ ಸುಮ್ಮನೆ ಕೂರುವುದು ಸರಿಯಲ್ಲ ಎಂದು ಹೇಳಿದ್ರು. ಕುಮಾರಸ್ವಾಮಿ ಅವರು ಕೂಡ ಸಕ್ರಿಯರಾಗುವಂತೆ ಒತ್ತಿ ಒತ್ತಿ ಹೇಳುತ್ತಿದ್ದರು ಎಂದು ರಮ್ಯಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ