ಕೆಲವರಿಗೆ ಮಾಂಸಾಹಾರ ಎಷ್ಟು ಇಷ್ಟ ಎಂದರೆ ಒಂದು ದಿನವೂ ಅದನ್ನು ಸವಿಯದೆ ಅವರ ದಿನ ಕಳೆಯುವುದಿಲ್ಲ. ಇಂತಹ ವ್ಯಕ್ತಿಗಳೂ ಈಗ ಸಸ್ಯಾಹಾರಿಗಳಾಗುತ್ತಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣಗಳು ಸಾಕಷ್ಟಿರಬಹುದು. ಆದರೆ, ಇತ್ತೀಚೆಗೆ ಹಾಲಿವುಡ್, ಬಾಲಿವುಡ್ ಹಾಗೂ ಇತರೆ ಸಿನಿರಂಗದ ತಾರೆಯರು ಸಸ್ಯಾಹಾರಿಗಳಾಗುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಹಾಲಿವುಡ್ ಸಿನಿಮಾ ಜೋಕರ್ನ ಹೀರೋ ಸಹ ಸಸ್ಯಾಹಾರಿ. ಅವರು ಪ್ರಾಣಿ ಜನ್ಯ ಉತ್ಪನ್ನಗಳನ್ನೂ ಸೇವಿಸುವುದಿಲ್ಲ. ಹೀಗೆ ಹಾಲಿವುಡ್ನಲ್ಲಿ ಸಾಕಷ್ಟು ಮಂದಿ ಸಸ್ಯಾಹಾರಿಗಳಾಗಿ ಬದಲಾಗಿದ್ದಾರೆ. ಈ ಹಿಂದೆ ಜೆನಿಲಿಯಾ, ರಿತೇಶ್ ದೇಶಮುಖ್, ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಸಹ ಸಸ್ಯಾಹಾರಿಗಳಾಗಿದ್ದಾರೆ. ಈ ವಿಷಯವನ್ನು ಈ ಹಿಂದೆ ಶಿಲ್ಪಾ ಶೆಟ್ಟಿ ಹಾಗೂ ಜೆನಿಲಿಯಾ ಪ್ರತ್ಯೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಸಸ್ಯಾಹಾರಿಗಳಾದ ನಂತರ ತಮ್ಮ ಅನುಭವ ಹೇಗಿತ್ತು ಎಂದು ಅವರು ಹಂಚಿಕೊಂಡಿದ್ದಾರೆ. ಈಗ ಈ ತಾರೆಯರ ಪಟ್ಟಿಗೆ ಕನ್ನಡದ ಮೋಹಕ ತಾರೆ ರಮ್ಯಾ ಸಹ ಸೇರಿಕೊಂಡಿದ್ದಾರೆ.
ನಟಿ ರಮ್ಯಾ (Divya Spandana) ಸಹ ಈ ವರ್ಷದ ಆರಂಭದಲ್ಲೇ ಮಾಂಸಾಹಾರವನ್ನು ತ್ಯಜಿಸಿದ್ದಾರಂತೆ. ಹೀಗೆಂದು ಇನ್ಸ್ಟಾಗ್ರಾಂನಲ್ಲಿ ತಮ್ಮ ಹಳೇ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಬರೆದುಕೊಂಡಿದದ್ದಾರೆ.
ನಾನು ಈ ವರ್ಷದ ಆರಂಭದಲ್ಲೇ ಸಸ್ಯಾಹಾರಿಯಾಗಿ ಬದಲಾಗಿದ್ದೇನೆ. ಇದು ನಾನು ತೆಗೆದುಕೊಂಡ ಉತ್ತಮ ನಿರ್ಧಾರ. ದೇಹಕ್ಕೆ ಪ್ರೊಟೀನ್ ಬೇಕು. ಅದಕ್ಕೆ ಮಾಂಸಾಹಾರ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಆದರೆ ಅದು ನಿಜವೆಂದು ನನಗನಿಸುವುದಿಲ್ಲ. ಮಾಂಸಾಹಾರ ಇಲ್ಲದೆ ನಾನು ಚೆನ್ನಾಗಿಯೇ ಮ್ಯಾನೇಜ್ ಮಾಡಿದ್ದೇನೆ. ಈಗ ನಾನು ಪ್ರಾಣಿ ಜನ್ಯ ಉತ್ಪನ್ನಗಳ ಸೇವನೆಯನ್ನೂ ಬಿಡುವ ಯೋಚನೆ ಮಾಡುತ್ತಿದ್ದೇನೆ. ನನಗೆ ಐಸ್ ಕ್ರೀಮ್ ತುಂಬಾ ಇಷ್ಟ. ಆದರೆ ಇದು ಪ್ರಾಣಿ ಜನ್ಯ ಉತ್ಪನ್ನ. ಇದನ್ನು ಬಿಡುವುದು ತುಂಬಾ ಕಷ್ಟ. ಆದರೂ ನಿರ್ಧಾರ ಗಟ್ಟಿಯಾಗಿರಬೇಕಷ್ಟೆ ಎಂದು ರಮ್ಯಾ ಸಸ್ಯಾಹಾರಿಯಾದ ಕತೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಮ್ಯಾ, ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಷಯಗಳನ್ನು ಈಗ ಅಭಿಮಾನಿಗಳೊಂದಿಗೆ ಶೇರ್ ಮಾಡಲಾರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ