ದೊಡ್ಡ ಬಜೆಟ್​ ಸಿನಿಮಾಗಳಿಗೆ ನಮ್ಮ ಚಿತ್ರಗಳು ಬಲಿ; ಸಾಹೋ ವಿರುದ್ಧ ಕನ್ನಡ ನಟರ ಬೇಸರ

ಬಹುಭಾಷಾ ನಟ ಕಿಶೋರ್, ಪ್ರಿಯಾಮಣಿ, ಮಯೂರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನನ್ನ ಪ್ರಕಾರ ಸಿನಿಮಾಗೆ ವಿನಯ್ ಬಾಲಾಜಿ ಎಂಬ ಯುವ ನಿರ್ದೇಶಕ ಆ್ಯಕ್ಷನ್, ಕಟ್ ಹೇಳಿದ್ದಾರೆ. ಈ ಸಿನಿಮಾಗೆ ಈಗಾಗಲೇ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Sushma Chakre | news18-kannada
Updated:August 31, 2019, 2:01 PM IST
ದೊಡ್ಡ ಬಜೆಟ್​ ಸಿನಿಮಾಗಳಿಗೆ ನಮ್ಮ ಚಿತ್ರಗಳು ಬಲಿ; ಸಾಹೋ ವಿರುದ್ಧ ಕನ್ನಡ ನಟರ ಬೇಸರ
ನನ್ನ ಪ್ರಕಾರ ಸಿನಿಮಾ ಪೋಸ್ಟರ್
  • Share this:
ಬೆಂಗಳೂರಿನಲ್ಲಿ ಕನ್ನಡಿಗರಿಗೆ ಸರಿಸಮವಾಗಿ ಬೇರೆ ಭಾಷಿಕರೂ ವಾಸವಾಗಿದ್ದಾರೆ ಎಂಬುದು ಹೊಸ ವಿಷಯವೇನಲ್ಲ. ಇಲ್ಲಿನ ಅನೇಕ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳೇ ಓಡುತ್ತವೆ. ಬೇರೆ ಭಾಷೆಯ ಸಿನಿಮಾಗಳಿಗಾಗಿ ಕನ್ನಡ ಸಿನಿಮಾಗಳ ಶೋಗಳನ್ನು ತೆಗೆಯುವುದರ ವಿರುದ್ಧ ಹಲವಾರು ಬಾರಿ ಕನ್ನಡ ಚಿತ್ರರಂಗದವರು ಧ್ವನಿಯೆತ್ತಿದ್ದಾರೆ.  'ಸಾಹೋ' ಸಿನಿಮಾ ತೆರೆಕಂಡಿರುವುದರಿಂದ ಇದೀಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. 

ಟಾಲಿವುಡ್​ನ ಬಹುನಿರೀಕ್ಷಿತ 'ಸಾಹೋ' ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಕರ್ನಾಟಕದ ಬಹುತೇಕ ಥಿಯೇಟರ್​ಗಳಲ್ಲಿ ಕನ್ನಡ ಸಿನಿಮಾಗಳ ಶೋಗಳನ್ನು ಕಡಿಮೆ ಮಾಡಲಾಗಿದೆ. ಇನ್ನೂ ಕೆಲವು ಥಿಯೇಟರ್​ಗಳಲ್ಲಿ ಕನ್ನಡ ಸಿನಿಮಾಗಳನ್ನೇ ಎತ್ತಂಗಡಿ ಮಾಡಲಾಗಿದೆ. ಹೆಚ್ಚೇನೂ ಪ್ರಚಾರ ಗಿಟ್ಟಿಸಿಕೊಳ್ಳದೆ ತೆರೆಕಂಡಿದ್ದ 2 ವಾರಗಳ ಹಿಂದೆ ತೆರೆಕಂಡಿದ್ದ 'ನನ್ನ ಪ್ರಕಾರ' ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು.

ಟ್ರೈಲರ್ ಮೂಲಕವೇ ಭರವಸೆ ಮೂಡಿಸಿದ್ದ 'ನನ್ನ ಪ್ರಕಾರ' ಸಿನಿಮಾಗೆ ಹೆಚ್ಚು ಪ್ರಚಾರ ನೀಡಿರಲಿಲ್ಲ. ಪ್ರಿಯಾಮಣಿ, ಕಿಶೋರ್, ಮಯೂರಿ ಮುಂತಾದ ಸ್ಟಾರ್​ಗಳಿರುವ ಈ ಸಸ್ಪೆನ್ಸ್​- ಥ್ರಿಲ್ಲರ್ ಸಿನಿಮಾ ಬಿಡುಗಡೆಯಾದ ಮಾರನೇ ದಿನದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ಉತ್ತಮ ರೇಟಿಂಗ್ ನೀಡಿದ್ದರು. ವಿನಯ್ ಬಾಲಾಜಿ ನಿರ್ದೇಶಿಸಿರುವ 'ನನ್ನ ಪ್ರಕಾರ' ಸಿನಿಮಾ ಇತ್ತೀಚೆಗೆ ತೆರೆಕಂಡ ಕನ್ನಡದ ಸಸ್ಪೆನ್ಸ್​ ಸಿನಿಮಾಗಳಲ್ಲೇ ಬೆಸ್ಟ್​ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ನನ್ನ ಪ್ರಕಾರ ಇದು ಸೂಪರ್; ಸಸ್ಪೆನ್ಸ್​ ಸಿನಿಮಾ ಟ್ರೈಲರ್​ಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಮೆಚ್ಚುಗೆ

ಆದರೆ, ಬಿಡುಗಡೆಯಾಗಿ ಒಂದೇ ವಾರಕ್ಕೆ 'ಸಾಹೋ' ಸಿನಿಮಾ ತೆರೆಕಂಡ ಕಾರಣ ಬಹುತೇಕ ಚಿತ್ರಮಂದಿರಗಳಿಂದ 'ನನ್ನ ಪ್ರಕಾರ' ಸಿನಿಮಾವನ್ನು ಎತ್ತಂಗಡಿ ಮಾಡಲಾಗಿದೆ. ಕನ್ನಡ ನೆಲದಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿರುವ ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ತೆಲುಗು ಸಿನಿಮಾಗೆ ಮಣೆ ಹಾಕುತ್ತಿರುವುದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ನನ್ನ ಪ್ರಕಾರ' ಸಿನಿಮಾ ನೋಡಬೇಕೆಂದುಕೊಂಡವರಿಗೂ ಥಿಯೇಟರ್​ಗಳಲ್ಲಿ ಅವಕಾಶ ಸಿಗದಂತಾಗಿದೆ. ಕಳೆದ ಶುಕ್ರವಾರ ತೆರೆಕಂಡಿದ್ದ 'ನನ್ನ ಪ್ರಕಾರ' ಈ ಗುರುವಾರದ ವೇಳೆಗೆ ಸರಿಯಾದ ಶೋಗಳಿಲ್ಲದೆ ಹಲವು ಥಿಯೇಟರ್​ಗಳಿಂದ ಹೊರಬಿದ್ದಿದೆ.

ಈ ಬಗ್ಗೆ ಸಿನಿಮಾ ತಂಡದವರು ವಿಡಿಯೋ ಮೂಲಕ ತಮ್ಮ ಬೇಸರ ಹಂಚಿಕೊಂಡಿದ್ದಾರೆ. ಕನ್ನಡದ ಪ್ರತಿಭಾವಂತ ನಟ ಕಿಶೋರ್ ತಮ್ಮ ಸಿನಿಮಾಗೆ ಆಗಿರುವ ಅನ್ಯಾಯದ ವಿರುದ್ಧ ಮಾತನಾಡಿದ್ದು, 'ಚಿತ್ರರಂಗವೆಂಬುದು ಒಂದು ಬಿಸಿನೆಸ್​ ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ, ನಮ್ಮ ಕನ್ನಡ ನೆಲಕ್ಕೆ ಬಂದು ನೀವು ವ್ಯಾಪಾರ ಮಾಡುತ್ತಿದ್ದೀರಿ ಎಂಬುದನ್ನು ಮರೆಯಬೇಡಿ.  ದೊಡ್ಡ ಬಜೆಟ್​ ಸಿನಿಮಾಗಳಿಗೆ ಕಡಿಮೆ ಬಜೆಟ್​ನ ಉತ್ತಮ ಸಿನಿಮಾಗಳು ಬಲಿಯಾಗುತ್ತಿರುವುದು ಬೇಸರದ ಸಂಗತಿ' ಎಂದಿದ್ದಾರೆ.

'ನಮ್ಮ ಪ್ರಕಾರ 'ನನ್ನ ಪ್ರಕಾರ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ನೋಡಿದವರು ಮತ್ತೊಮ್ಮೆ ಚಿತ್ರರಂಗದತ್ತ ಹೋಗುತ್ತಿದ್ದಾರೆ. ನೋಡದವರು ನೋಡಬೇಕೆಂದು ಬಯಸುತ್ತಿದ್ದಾರೆ. ಮಲ್ಟಿಫ್ಲೆಕ್ಸ್​ಗಳಲ್ಲಿ ಕನ್ನಡ ಸಿನಿಮಾಗಳನ್ನು ಕಡಿಮೆ ಮಾಡಿ ಬೇರೆ ಭಾಷೆಯ ಸಿನಿಮಾಗಳನ್ನು ಹಾಕುತ್ತಿದ್ದಾರೆ. ಚೆನ್ನಾಗಿ ಓಡುತ್ತಿರುವ ಸಿನಿಮಾಗೆ ಇನ್ನಷ್ಟು ಶೋಗಳನ್ನು ನೀಡಿ ಕನ್ನಡ ಸಿನಿಮಾಗಳನ್ನು ಉಳಿಸಿ ಎಂದು ಚಿತ್ರಮಂದಿರದ ಮಾಲೀಕರಲ್ಲಿ ಕೇಳಿಕೊಳ್ಳುತ್ತಿದ್ದೇವೆ' ಎಂದು ಪ್ರಿಯಾಮಣಿ ಮನವಿ ಮಾಡಿದ್ದಾರೆ.


'ಥಿಯೇಟರ್​ ಸಮಸ್ಯೆಗಳಿಂದ ನಮ್ಮ ಸಿನಿಮಾಗೆ ಶೋ ಸಿಗುತ್ತಿಲ್ಲ. ಉತ್ತಮ ಕತೆಯನ್ನಿಟ್ಟುಕೊಂಡು ಜನರ ಮೆಚ್ಚುಗೆಯನ್ನೂ ಪಡೆದಿದ್ದರೂ ನಮಗಾದ ಈ ಸೋಲಿನಿಂದ ನಮ್ಮ ಇಡೀ ತಂಡ ನೊಂದಿದೆ. ಪರಭಾಷಾ ಸಿನಿಮಾಗಳು ನಮ್ಮ ರಾಜ್ಯದಲ್ಲಿ ತೆರೆಕಾಣುತ್ತಿರುವುದು ಖುಷಿಯ ಸಂಗತಿ. ಎಲ್ಲ ಭಾಷೆಯ ಸಿನಿಮಾಗಳನ್ನೂ ಪ್ರೋತ್ಸಾಹಿಸಬೇಕು. ಆದರೆ, ಮಲ್ಟಿಫ್ಲೆಕ್ಸ್​ಗಳಲ್ಲಿ ಕನ್ನಡ ಸಿನಿಮಾಗೆ ಇನ್ನಷ್ಟು ಶೋ ಸಿಗುವಂತಾದರೆ ಕನ್ನಡ ಚಿತ್ರಂಗ ಉಳಿಯುತ್ತದೆ. ಒಳ್ಳೆಯ ಸಿನಿಮಾಗಳು ಹೆಚ್ಚು ಜನರನ್ನು ತಲುಪುತ್ತವೆ' ಎಂದು ಸಿನಿಮಾದ ನಾಯಕಿ ಮಯೂರಿ ಹೇಳಿದ್ದಾರೆ.


ಈ ಸಿನಿಮಾ ಮೂಲಕ ನಟಿ ಪ್ರಿಯಾಮಣಿ 2 ವರ್ಷದ ಬಳಿಕ ಮತ್ತೆ ಕನ್ನಡ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಡಾ. ಅಮೃತಾ ಎಂಬ ವೈದ್ಯೆಯ ಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಬಹುಭಾಷಾ ನಟ ಕಿಶೋರ್ ತೆರೆ ಹಂಚಿಕೊಂಡಿದ್ದಾರೆ. ಪೊಲೀಸ್​ ಅಧಿಕಾರಿಯಾಗಿರುವ ಕಿಶೋರ್ ಒಂದು ಕೊಲೆಯ ತನಿಖೆ ನಡೆಸುವಾಗ ಯಾವೆಲ್ಲ ರೀತಿಯ ತಿರುವುಗಳು ಸಿಗುತ್ತವೆ, ಕೊನೆಗೆ ಸತ್ಯಾಂಶವನ್ನು ಪೊಲೀಸ್​ ಅಧಿಕಾರಿ ಬಯಲಿಗೆಳೆಯುತ್ತಾನಾ? ಎಂಬುದು 'ನನ್ನ ಪ್ರಕಾರ' ಸಿನಿಮಾದ ಕತೆ.


'ಕೃಷ್ಣಲೀಲಾ' ಖ್ಯಾತಿಯ ಮಯೂರಿ ಈ ಸಿನಿಮಾದ ಮುಖ್ಯ ಪಾತ್ರಧಾರಿ. ವಿಸ್ಮಯ ಎಂಬ ಹೆಸರಿನ ಹುಡುಗಿ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದು, ಕೊಲೆಯಾಗಿರುವ ಅವರ ಪಾತ್ರದ ಸುತ್ತವೇ ಇಡೀ ಕತೆ ಹೆಣೆದುಕೊಂಡಿದೆ. ಉಳಿದಂತೆ ನಿರಂಜನ್ ದೇಶಪಾಂಡೆ, ಅರ್ಜುನ್ ಯೋಗಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೂರು ವಿಭಿನ್ನ ಕತೆಗಳು ಹೇಗೆ ಒಂದು ಕೊಲೆಯಿಂದಾಗಿ ಕನೆಕ್ಟ್​ ಆಗುತ್ತವೆ ಎಂಬ ಕುತೂಹಲವನ್ನು ಈ ಸಿನಿಮಾ ಹೊಂದಿದೆ.

 
First published:August 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ