Mandya Ravi: ಸಹ ನಟ ಮಂಡ್ಯ ರವಿ ಬಗ್ಗೆ ನಟಿ ನಂದಿನಿ ಭಾವುಕ ಬರಹ

ಖ್ಯಾತ ಕಿರುತೆರೆ ನಟಿ ನಂದಿನಿ ಗೌಡ ಅವರು ನಟ ಮಂಡ್ಯ ರವಿ ಬಗ್ಗೆ ಭಾವುಕ ಬರಹವನ್ನು ಹಂಚಿಕೊಂಡಿದ್ದಾರೆ. ಅವರ ಬರಹ ಈಗ ವೈರಲ್ ಆಗಿದೆ.

ನಂದಿನಿ ಗೌಡ - ಮಂಡ್ಯ ರವಿ

ನಂದಿನಿ ಗೌಡ - ಮಂಡ್ಯ ರವಿ

  • Share this:
ಕನ್ನಡದ ಖ್ಯಾತ ಕಿರುತೆರೆ ನಟ ಮಂಡ್ಯ ರವಿ (Mandya Ravi) ಅವರ ಸಾವು (Death) ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಟಿ.ಎನ್ ಸೀತಾರಾಮ್ ಅವರ ಧಾರವಾಹಿಗಳಲ್ಲಿ (Serial) ಮಿಂಚಿ ಪ್ರೇಕ್ಷಕರ ರಂಜಿಸಿದ ಖ್ಯಾತ ಕಲಾವಿದನ ಸಾವಿಗೆ ಕನ್ನಡಿಗರು ಕಂಬನಿ ಮಿಡಿದಿದ್ದಾರೆ. ಇಂದಿಗೂ ಬೇಡಿಕೆ ಉಳಿಸಿದಕೊಂಡಿದ್ದ ಖ್ಯಾತ ನಟನ ಸಾವು ನಿಜಕ್ಕೂ ಆಘಾತಕಾರಿಯಾಗಿತ್ತು. ಇದೀಗ ಮಂಡ್ಯ ರವಿ ಅವರ ಸಹ ನಟಿ, ಖ್ಯಾತ ಕಿರುತೆರೆ ಕಲಾವಿದೆ ನಂದಿನಿ ಗೌಡ (Nandhini Gowda) ಅವರು ಮಂಡ್ಯ ರವಿ ಕುರಿತು ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಫೇಸ್​ಬುಕ್​ನಲ್ಲಿ ನಂದಿನಿ (Nandhini) ಅವರು ಪೋಸ್ಟ್ ಹಂಚಿಕೊಂಡಿದ್ದು ಮಂಡ್ಯ ರವಿ ಅವರ ಕುರಿತು ಬರೆದಿದ್ದಾರೆ.

ನಟಿ ನಂದಿನಿ ಅವರ ಫೇಸ್​ಬುಕ್ ಪೋಸ್ಟ್ ಹೀಗಿದೆ. ರವಿ ಪ್ರಸಾದ್ ಮಂಡ್ಯ, ಕೆಲವರ ಪಾಲಿಗೆ "ರವಿ", ಇನ್ನು ಕೆಲವರ ಪಾಲಿಗೆ "ಮಂಡ್ಯ" ಆದ್ರೆ ನನಗೆ ನೀನು ಯಾವತ್ತಿದ್ರು "ಮಗಾ..." ಅಷ್ಟೆ. ನಿನ್ನ ಜೊತೆ ಮಾತ್ರ ನಾನು ಪಕ್ಕ ಮಂಡ್ಯ ಸೊಗಡಲ್ಲಿ ಮಾತಾಡ್ತಿದ್ದೆ, ಹಾಗೆ ಮಾತಾಡಿದ್ರೆ ಇಬ್ಬರಿಗೂ ಸಮಾಧಾನ... ಬಹುಶಃ ನನ್ನ ಲೈಫ್'ಅಲ್ಲಿ ಯಾರನ್ನಾದ್ರೂ ಹೋಗೋ, ಬಾರೋ ಅಂತ ಮಾತಾಡಿಸಿದ್ರೆ ಅದು ನಿನ್ನ ಮಾತ್ರ. ನಾನು ನಿನ್ನ ಸೀನಿಯರ್ ಅಂತ ಯಾವಾಗಲೂ ಜೋರು ಮಾಡ್ತಿದ್ದೆ. ನಾವಿಬ್ಬರೂ mutual admiration society members.... ನನ್ನ most favorite Co-artist ನೀನು. ನಾನು ನೀನು ಮತ್ತೆ ಒಟ್ಟಿಗೆ act ಮಾಡಬೇಕು ಅನ್ನೋದು ಹಾಗೆ ಉಳಿದುಹೋಯಿತು ನೋಡು.

ನಿನ್ನ ಹುಟ್ಟಿದಹಬ್ಬಕ್ಕೆ ಎಷ್ಟು ಜನ ಪೋಸ್ಟ್ ಹಾಕಿದ್ರು ನೆನಪಿಲ್ಲ, ಆದ್ರೆ ಇವತ್ತು FB ತುಂಬಾ ನೀನೆ... ಹಿಂಸೆ ಕಣೋ ನಿನ್ನ ಈ ರೀತಿ ನೋಡಕ್ಕೆ. ನಿನ್ನ ಎಷ್ಟು ಜನ ಇಷ್ಟಪಡ್ತಾರೆ, ಮೆಚ್ಚಿಕೊಂಡಿದ್ದಾರೆ ಅಂತ ನೋಡಕ್ಕಾದ್ರು ನೀನು ಇರಬೇಕಿತ್ತು. ನಿನ್ನ ಬಗ್ಗೆ ಬರೆಯೋದಕ್ಕೆ ಶುರು ಮಾಡಿದಾಗ ಕಾಡಿದ್ದು ನಿನ್ನ ಬಗ್ಗೆ ಏನು ಬರೀಲಿ ಅನ್ನೋದು ಅಲ್ಲ, ಏನೆಲ್ಲಾ ಬರೀಲಿ ಅನ್ನೋದು... ನಿನ್ನ ಜೊತೆ ಕಳೆದ ದಿನಗಳು, ಪದಬಂಧಕ್ಕೆ ನಾವು ಜಗಳ ಆಡಿದ್ದು, ಇಬ್ಬರೂ ಜೀವನದ low phase ಅಲ್ಲಿ ಇದ್ದಾಗ ಒಬ್ಬರಿಗೊಬ್ಬರು ಕಾಳಜಿ ತೋರಿಸಿದ್ದು, scene ಮಧ್ಯದಲ್ಲಿ ಮಾಡಿದ ತರಲೆಗಳು, ನಗು, ಮಾತು, ಕಿತ್ತಾಟ... ಎಲ್ಲಾ show reel ತರ ಕಣ್ಮುಂದೆ ಬರ್ತಿದೆ ಮಗಾ.

"ಮಿಂಚು" ಸೀರಿಯಲ್ ಮಾಡುವಾಗ ನಿನ್ನ ಮದುವೆ ನಿಶ್ಚಯ ಆಗಿದ್ದು, ಹುಡುಗಿ ನೋಡಿಕೊಂಡು ಬಂದ ಮೇಲೆ ನೀನು ನನ್ನ ಹತ್ರ ಹೇಳಿದ್ದೆ "ನಂದು ಏನು ಗೊತ್ತಾ?! ಮಾಲತಿ ನೋಡಿದ ತಕ್ಷಣ ನನ್ನ ಮನಸ್ಸಿಗೆ ಒಂದು ಹಾಡು ಬಂತು -

"ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ
ಕಾಯುವೆನು ಕಣ್ಣಲ್ಲಿ, ಜೊತೆಗಿರುವೆ ಚಿತೆಯಲ್ಲಿ.... "

ಅವತ್ತು ನೀನು ಇದು ಹೇಳಿದಾಗ ನನಗೆ ಸಿಕ್ಕಾಪಟ್ಟೆ ಖುಷಿ ಆಗಿತ್ತು... ಇವತ್ತು ಮಾಲತಿ "ನಾನು ಯಾರಿಗಾಗಿ ಬದುಕಿರಲಿ" ಅಂತ ಪ್ರಶ್ನೆ ಮಾಡಿದಾಗ... ಮತ್ತೆ ಈ ಹಾಡು ನೆನಪಾಯ್ತು... ಸಿಟ್ಟು, ಅಸಹಾಯಕತೆ, ದುಃಖ ಉಮ್ಮಳಸಿ ಬಂತು... ಅಷ್ಟು ಆತುರ ಏನಿತ್ತು ನಿನಗೆ?? ಇನ್ನಷ್ಟು ವರ್ಷ ಇವಳ ಜೊತೆ ಇರಬಹುದಿತ್ತು ಅಲ್ವಾ, ಕನಸಿನ ಜೋಕಾಲಿ ಜೊತೆಯಾಗಿ ಜೀಕ್ತಾ??!!!!!!! ಯಾಕೋ ಹೀಗೆ ಮಾಡಿದೆ.........

PS : ಕಡೆದೂಂದು ಮಾತು, ಅರ್ಥ ಆಗತ್ತೆ ನಿಮ್ಮ ಅಭಿಮಾನ, ಆಘಾತ ಎಲ್ಲಾ... ಆದರೆ ವಿಷಯ ಪೂರ್ತಿಯಾಗಿ ತಿಳಿದುಕೊಳ್ಳದೆ ಆತುರಕ್ಕೆ ಪೋಸ್ಟ್ ಹಾಕಬೇಡಿ.... ಇವತ್ತು ಸಂಜೆ 6:10 ಕ್ಕೆ ರವಿ ಎಲ್ಲರನ್ನೂ ಬಿಟ್ಟು ಹೋಗಿದ್ದು... ಬೆಳಿಗ್ಗೆಯಿಂದ ಎಲ್ಲಾ ಕಡೆ ಹರಿದಾಡ್ತಿದ್ದ ಸುದ್ದಿ ಅವರ ಮನೆಯವರಿಗೆ ಇನ್ನಷ್ಟು ನೋವುಕೊಟ್ಟಿದೆ... ದಯವಿಟ್ಟು ಅತ್ಯಾಪ್ತರ ಹತ್ರ confirm ಮಾಡಿಕೊಂಡು ಪೋಸ್ಟ್ ಹಾಕಿ... ಪೋಸ್ಟ್ ನೋಡಿಕೊಂಡು ಮನೆಯವರಿಗೆ ಬರ್ತಾ ಇದ್ದ ಕರೆಗಳು ಅವರ ಆತ್ಮಸ್ಥೈರ್ಯವನ್ನ ಇನ್ನಷ್ಟು ಕುಗ್ಗಿಸ್ತಿತ್ತು.... ಎಂದು ನಟಿ ಪೋಸ್ಟ್​ನಲ್ಲಿ ವಿವರವಾಗಿ ಬರೆದಿದ್ದಾರೆ.

ಇದನ್ನೂ ಓದಿ: Mandya Ravi Death: ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ಮಂಡ್ಯ ರವಿ ಇನ್ನಿಲ್ಲ

ಮಗಳು ಜಾನಕಿ ಧಾರಾವಾಹಿ ಮೂಲಕ ಕನ್ನಡಿಗರ ಮನಸು ಗೆದ್ದಿದ್ದ ಖ್ಯಾತ ಕಿರುತೆರೆ ಕಲಾವಿದ ಮಂಡ್ಯ ರವಿ ಅವರು ನಿಧನರಾಗಿದ್ದಾರೆ. ಟಿ.ಎನ್ ಸೀತಾರಾಮ್ ಅವರ ಪ್ರಸಿದ್ಧ ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದಿರುವ ಹಿರಿಯ ಕನ್ನಡ ಕಿರುತೆರೆ ಕಲಾವಿದ ಮಂಡ್ಯ ರವಿ ಅವರು ನಟನೆಯಿಂದ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು. ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟರಾಗಿದ್ದ ಅವರು ಇಂದಿಗೂ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಾ ಕಿರುತೆರೆಯಲ್ಲಿ  ಡಿಮ್ಯಾಂಡ್ ಉಳಿಸಿಕೊಂಡಿದ್ದರು.

ಪ್ರಸಿದ್ಧ ಧಾರವಾಹಿಗಳು

ನಟ ರವಿ ಅನೇಕ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಚಿತ್ರಲೇಖ, ಮಿಂಚು, ಮುಕ್ತ ಮುಕ್ತ, ವರಲಕ್ಷ್ಮೀ ಸ್ಟೋರ್ಸ್ ಮುಂತಾದ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಫೈಲ್ ಕಾರ್ಯಕ್ರಮವನ್ನು ರವಿಪ್ರಸಾದ್ ನಿರೂಪಣೆ ಮಾಡಿದ್ದರು.
Published by:Divya D
First published: