Jayanthi Funeral: ಬನಶಂಕರಿಯ ಚಿತಾಗಾರದಲ್ಲಿ ನೆರವೇರಿತು ಅಭಿನಯ ಶಾರದೆ ಜಯಂತಿ ಅಂತ್ಯಕ್ರಿಯೆ

ಅಭಿನಯ ಶಾರದೆ ನಟಿ ಜಯಂತಿ ಅವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ಬನಶಂಕರಿಯ ಚಿತಾಗಾರದಲ್ಲಿ ಪೊಲೀಸ್​ ಗೌರವದೊಂದಿಗೆ ನೆರವೇರಿಸಲಾಯಿತು. ಮಗ ಕೃಷ್ಣ ಕುಮಾರ್ ಅವರು ಅಗ್ನಿ ಸ್ಪರ್ಶ ಮಾಡಿದರು.

ನಟಿ ಜಯಂತಿ

ನಟಿ ಜಯಂತಿ

  • Share this:
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್​ನ ಹಿರಿಯ ನಟಿ ಜಯಂತಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ನಟಿಯ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಂತರ ಜಯಂತಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಹಿಂದೂ ಸಂಪ್ರದಾಯದಂತೆ ಬನಶಂಕರಿಯ ಚಿತಾಗಾರದಲ್ಲಿ ಪೊಲೀಸ್​ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಜಯಂತಿ ಅವರ ಮಗ ಕೃಷ್ಣ ಕುಮಾರ್​ ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಕೃಷ್ಣ ಕುಮಾರ್ ಅವರೇ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಜಯಂತಿ ಅವರ ಅಂತ್ಯಕ್ರಿಯೆಯಲ್ಲಿ ಕುಟುಂಬದವರು, ಸಿನಿ ರಂಗದವರು ಹಾಗೂ ಅಭಿಮಾನಿಗಳು ಭಾಗಿಯಾಗಿದ್ದರು. ಇನ್ನು ಜಯಂತಿ ಅವರ ಅಂತ್ಯಕ್ರಿಯೆಗೂ ಮುನ್ನ ಜಯಂತಿ ಅವರ ಕಣ್ಣುಗಳನ್ನು ದಾನ ಮಾಡಲಾಯಿತು.

ನಾರಾಯಣ ನೇತ್ರಾಲಯದಲ್ಲಿರುವ ಡಾ. ರಾಜ್​  ಕುಮಾರ್​ ಐ ಬ್ಯಾಂಕ್​ಗೆ ಜಯಂತಿ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ನಾಳೆ ಬೆಳಿಗ್ಗೆ ಇಬ್ಬರಿಗೆ ಈ ಕಣ್ಣುಗಳನ್ನು ನೀಡಲಾಗುವುದು. ಜಯಂತಿ ಅವರ ಕಣ್ಣುಗಳಿಂದ ಈಗ ಇಬ್ಬರು ಅಂಧರ ಬದುಕಿನಲ್ಲಿ ಬೆಳಕು ಮೂಡಲಿದೆ.

Actress Jayanthi last rites performed in Bengaluru by his son Krishna Kumar ae
ನಟಿ ಜಯಂತಿ


1945, ಜನವರಿ 6ರಂದು ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ ಆಗಿತ್ತು. 60ರಿಂದ 80ರ ದಶಕಗಳವರೆಗೆ ಸ್ಯಾಂಡಲ್​ವುಡ್​ನಲ್ಲಿ ನಾಯಕನಟಿಯಾಗಿ ಜನರನ್ನ ಪುಳಕಿತಗೊಳಿಸಿದ್ದ ಜಯಂತಿ ಅವರು ಕನ್ನಡ ಮಾತ್ರವಲ್ಲದೆ ಇನ್ನೂ ಐದು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ರಂಜಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂಗ್ಲೀಷ್ ಭಾಷೆಯ ಒಂದು ಚಿತ್ರದಲ್ಲೂ ಅವರು ನಟಿಸಿದ್ದರು. ಅನೇಕ ಬಾರಿ ಅತ್ಯುತ್ತಮ ನಟನೆಗೆ ಪ್ರಶಸ್ತಿ ಪುರಸ್ಕಾರಗಳನ್ನ ಪಡೆದಿದ್ದಾರೆ. ಕನ್ನಡ ಚಿತ್ರರಂಗದ ಅತ್ಯಂತ ದಿಟ್ಟ ಮತ್ತು ಸುಂದರಿ (ಬೋಲ್ಡ್ ಅಂಡ್ ಬ್ಯೂಟಿಫುಲ್) ಎಂದು ಖ್ಯಾತರಾಗಿದ್ದ ಅವರಿಗೆ ಅಭಿನಯ ಶಾರದೆ ಬಿರುದು ಕೂಡ ಚಿತ್ರರಂದವರು ನೀಡಿದ್ದರು.

ಇದನ್ನೂ ಓದಿ: Bigg Boss Kannada Season 8: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಶುಭಾ ಪೂಂಜಾ: ಏನಿದು ಮಿಡ್​ ವೀಕ್ ಟ್ವಿಸ್ಟ್..!

1963ರಲ್ಲಿ ಬಿಡುಗಡೆಯಾದ ಜೇನು ಗೂಡು ಸಿನಿಮಾ ಜಯಂತಿ ಅವರ ಚೊಚ್ಚಲ ಕನ್ನಡ ಚಿತ್ರ. ಅದಕ್ಕೆ ಮೊದಲು ಅವರು 1960ರಲ್ಲಿ ಬಿಡುಗಡೆಯಾದ ಯಾನೈ ಪಾಗನ್ ತಮಿಳು ಚಿತ್ರ ಅವರ ಮೊದಲ ಸಿನಿಮಾ ಆಗಿದೆ. ಆ ಬಳಿಕ ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿ ಆನಂತರ ಸ್ಯಾಂಡಲ್​ವುಡ್​ನ ಜೇನುಗೂಡಿಗೆ ಕೈ ಹಾಕಿದರು. ಸ್ಯಾಂಡಲ್​ವುಡ್​ನಲ್ಲಿ ತಮ್ಮ ಅದ್ಭುತ ನಟನೆಯಿಂದ ಎರಡು ದಶಕಗಳ ಕಾಲ ಮೋಡಿ ಮಾಡಿದ್ದಾರೆ. ಎಂಬತ್ತರ ದಶಕದ ನಂತರ ಅವರು ಪೋಷಕ ಪಾತ್ರಗಳಲ್ಲಿ ನಟಿಸತೊಡಗಿದ್ದರು. 2011ರಲ್ಲಿ ಅವರು ಕೊನೆಯ ಸಿನಿಮಾ ನಟಿಸಿದ್ದು. ನಮಿತಾ ಐ ಲವ್ ಯೂ ಬಳಿಕ ಅವರು ಮತ್ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಕಿರುತೆರೆಯಲ್ಲೂ ಅವರು ಕಾಣಿಸಲಿಲ್ಲ. ಆಗಾಗ ಸಭೆ ಸಮಾರಂಭಗಳಿಗೆ ಕಾಣಿಸಿಕೊಳ್ಳುತ್ತಿದ್ದರು ಅಷ್ಟೇ.

ಜೇನು ಗೂಡು, ಕಲಾವತಿ, ಮರ್ಯಾದೆ ರಾಮಣ್ಣ. ಮಿಸ್ ಲೀಲಾವತಿ, ಎಡಕಲ್ಲು ಗುಡ್ಡದ ಮೇಲೆ, ಕಲ್ಲು ಸಕ್ಕರೆ, ಮಿಸ್ ಬೆಂಗಳೂರು, ಇಮ್ಮಡಿ ಪುಲಿಕೇಶಿ, ರೌಡಿ ರಂಗಣ್ಣ, ಶ್ರೀ ಕೃಷ್ಣ ದೇವರಾಯ, ದೇವರ ಮಕ್ಕಳು, ಕುಲ ಗೌರವ, ನಂದ ಗೋಕುಲ ಮೊದಲಾದವರು ಅವರು ನಟಿಸಿದ ಕೆಲ ಪ್ರಮುಖ ಚಿತ್ರಗಳು. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಅವರ ಅದ್ಭುತ ಅಭಿನಯಕ್ಕೆ 1973-74ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಮನಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತು, ಮಸಣದ ಹೂವು ಚಿತ್ರದಲ್ಲೂ ಅತ್ಯುತ್ತಮ ನಟಿ ಎಂಬ ಪ್ರಶಸ್ತಿ ಬಂದಿವೆ. ಆನಂದ್, ಟುವ್ವಿ ಟುವ್ವಿ ಟುವ್ವಿ ಚಿತ್ರದಲ್ಲಿ ಪೋಷಕ ಪಾತ್ರಕ್ಕೆ ಪ್ರಶಸ್ತಿ ಬಂದಿದೆ. 2005ರಲ್ಲಿ ರಾಜಕುಮಾರ್ ಜೀವಿತಾವಧಿ ಸಾಧನೆ ಪ್ರಶಸ್ತಿ ಗೌರವ ಅವರಿಗೆ ಸಿಕ್ಕಿದೆ.

ಇದನ್ನೂ ಓದಿ: RIP Jayanthi: ನೇತ್ರ ದಾನ: ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿರುವ ನಟಿ ಜಯಂತಿ..!

ಪೇಕಟಿ ಶಿವರಾಮ್ ಅವರನ್ನ ವಿವಾಹವಾಗಿದ್ದ ಜಯಂತಿಗೆ ಕೃಷ್ಣ ಕುಮಾರ್ ಎಂಬ ಮಗ ಇದ್ದಾರೆ. ಅನು ಪ್ರಭಾಕರ್ ಸೊಸೆಯಾಗಿದ್ದರು. ಕುಟುಂಬದಲ್ಲಿ ಸಾಕಷ್ಟು ತೊಂದರೆ ಇದ್ದರೂ ಜಯಂತಿ ಕಷ್ಟಕಾಲದಲ್ಲೂ ನಗುನಗುತ್ತಾ ಇದ್ದರೆಂದು ಅನೇಕ ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Published by:Anitha E
First published: