ಸಂಚಾರಿ ವಿಜಯ್​​ರಂತೆ ನಾನೂ ನೋವು ಅನುಭವಿಸಿದ್ದೆ : ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟ ಅನಿರುದ್ಧ್!

ನಾನು ಕೂಡ ಅನುಭವಿಸಿದ್ದೇನೆ. ನಿಮ್ಮ ಸಿನಿಮಾ ಹಾಗೂ ಅನುಭವ ತುಂಬಾ ಚೆನ್ನಾಗಿದೆ ಅಂತ ಜನ ಹೇಳುತ್ತಾರೆ. ಆದರೆ ಅಷ್ಟೊಂದು ಅವಕಾಶ ಸಿಗೋದಿಲ್ಲ. ಮಾರುಕಟ್ಟೆಯಲ್ಲೂ ಅದೇ ಮಾತು ಕೇಳಿಬರುತ್ತದೆ.

ಸಂಚಾರಿ ವಿಜಯ್​​ - ಅನಿರುದ್ಧ್​​

ಸಂಚಾರಿ ವಿಜಯ್​​ - ಅನಿರುದ್ಧ್​​

  • Share this:
ನಟ ಸಂಚಾರಿ ವಿಜಯ್ ಅವರ ಅಕಾಲಿಕ ಮರಣ ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದೆ. ಚಿಕ್ಕ ವಯಸ್ಸಿನಲ್ಲೇ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಗೆದ್ದು, ಭರವಸೆ ಮೂಡಿಸಿದ್ದ ನಟ ಸಂಚಾರಿ ವಿಜಯ್ ಅವರಿಗೆ ನಂತರ ಕನ್ನಡ ಚಿತ್ರರಂಗದಲ್ಲಿ ಅಂತಹ ಹೇಳಿಕೊಳ್ಳುವಂತಹ ಅವಕಾಶಗಳೇನೂ ಸಿಗಲಿಲ್ಲ. ಆದರೂ ಛಲ ಬಿಡದೇ ಸಿಕ್ಕ ಅವಕಾಶಗಳನ್ನೇ ಸದುಪಯೋಗ ಪಡಿಸಿಕೊಂಡು ಸಾಗಿದ್ದ ಸಂಚಾರಿ ವಿಜಯ್ ಅವರು ಇತ್ತೀಚೆಗಷ್ಟೇ ಬೈಕ್ ಅಪಘಾತಕ್ಕೀಡಾಗಿ ವಿಧಿವಶರಾಗಿದ್ದರು. ಈಗ ಹಿರಿತೆರೆ ಹಾಗೂ ಕಿರುತೆರೆ ಎರಡೂ ಕಡೆಗಳಲ್ಲೂ ಸ್ಟಾರ್ ಪಟ್ಟಕ್ಕೇರಿರುವ ನಟ ಅನಿರುದ್ಧ್ ಇದೇ ಮೊದಲ ಬಾರಿಗೆ ಸಂಚಾರಿ ವಿಜಯ್ ಅವರ ಸಾವು, ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭೆಗಳಿಗೆ ಸಿಗಬೇಕಾದ ಗೌರವ, ಚಿತ್ರರಂಗದಲ್ಲಿ ಆಗಬೇಕಾದ ಕೆಲಸಗಳು, ಜವಾಬ್ದಾರಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಸಂಚಾರಿ ವಿಜಯ್ ಅವರು ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋಗಿದ್ದು ತುಂಬಾ ನೋವು ತಂದಿದೆ. ಆದರೆ ತಮ್ಮ ಸಿನಿಮಾಗಳ ಮೂಲಕ, ಸಾಮಾಜಿಕ ಕೆಲಸಗಳು ಮತ್ತು ಅಂಗಾಂಗಗಳ ದಾನ ಮಾಡುವ ಮೂಲಕ ಈಗಲೂ ನಮ್ಮ ಜೊತೆ ಇದ್ದಾರೆ. ಆದರೆ ಅಪಘಾತದ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸದೇ ಇದ್ದದ್ದು ನನಗೆ ಬೇಸರ. ಕೈಮುಗಿದು ಕೇಳಿಕೊಳ್ಳುತ್ತೇನೆ, ಬೈಕ್ ಸವಾರರು ಮತ್ತು ಹಿಂಬದಿ ಸವಾರರು ದಯಮಾಡಿ ಹೆಲ್ಮೆಟ್ ಧರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ ಅನಿರುದ್ಧ್.

ಇನ್ನು ಸಂಚಾರಿ ವಿಜಯ್ ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಕನ್ನಡ ಚಿತ್ರರಂಗದಲ್ಲಿ ಸಿಕ್ಕಿಲ್ಲ ಎಂಬ ನೋವು ಅವರನ್ನೂ ಕಾಡಿದೆ. ಸಂಚಾರಿ ವಿಜಯ್ ತುಂಬಾ ಪ್ರತಿಭಾವಂತ ಕಲಾವಿದರು, ರಾಷ್ಟ್ರಪ್ರಶಸ್ತಿ ವಿಜೇತರು. ಆದರೆ ಅವರಿಗೆ ಅಷ್ಟೊಂದು ಅವಕಾಶ, ಸಿನಿಮಾಗಳು ಇರಲಿಲ್ಲ. ಆ ಒಂದು ಹಂತ ನಾನೂ ಕೂಡ ನೋಡಿದ್ದೀನಿ, ನಾನು ಕೂಡ ಅನುಭವಿಸಿದ್ದೇನೆ. ನಿಮ್ಮ ಸಿನಿಮಾ ಹಾಗೂ ಅನುಭವ ತುಂಬಾ ಚೆನ್ನಾಗಿದೆ ಅಂತ ಜನ ಹೇಳುತ್ತಾರೆ. ಆದರೆ ಅಷ್ಟೊಂದು ಅವಕಾಶ ಸಿಗೋದಿಲ್ಲ. ಮಾರುಕಟ್ಟೆಯಲ್ಲೂ ಅದೇ ಮಾತು ಕೇಳಿಬರುತ್ತದೆ. ನೀವು ಒಬ್ಬ ಒಳ್ಳೆಯ ಕಲಾವಿದರು ಆದರೆ ನಿಮ್ಮ ಮೇಲೆ ಅಷ್ಟೊಂದು ಹೂಡಿಕೆ ಹಾಕೋಕೆ ಆಗಲ್ಲ, ನಿಮ್ಮನ್ನ ನಾಯಕ ನಟನಾಗಿ ಹಾಕಿಕೊಂಡು ಸಿನಿಮಾ ಮಾಡೋದಕ್ಕೆ ಆಗಲ್ಲ ಅಂತ ಹೇಳುತ್ತಾರೆ. ಈ ರೀತಿಯ ಮಾತುಗಳ ಜೊತೆಗೆ ಸಾಕಷ್ಟು ಅವಮಾನಗಳೂ ಆಗುತ್ತವೆ. ಈ ರೀತಿಯ ದುಸ್ಥಿತಿ ಆದಷ್ಟು ಬೇಗ ನಿಲ್ಲಬೇಕು ಎಂದೂ ನಟ ಅನಿರುದ್ಧ್ ಕೇಳಿಕೊಂಡಿದ್ದಾರೆ.

ಇನ್ನು ಮಲಯಾಳಂ ಚಿತ್ರರಂಗಕ್ಕೆ ಹೋಲಿಕೆ ಮಾಡಿರುವ ನಟ ಅನಿರುದ್ಧ್, ನಾವು ಬೇರೆ ಚಿತ್ರರಂಗಗಳನ್ನ ನೋಡಿದಾಗ, ಆದರೆ ಬೇರೆ ಚಿತ್ರರಂಗಗಳಿಗೆ ಹೋಲಿಸುವ ಅವಶ್ಯಕತೆಯಿಲ್ಲ. ಆದರೆ ಕೆಲವೊಮ್ಮೆ ಕಲಿಯುವಂಥದ್ದು ಇದ್ದರೆ ಕಲಿಯಬೇಕು. ಮಲಯಾಳಂ ಚಿತ್ರರಂಗವನ್ನು ನೋಡಿದಾಗ ಅವರು ಸಾಕಷ್ಟು ಮುಂದುವರೆದಿದ್ದಾರೆ. ನಾವು ಕೂಡ ಮುಂದುವರೆಯಬೇಕು. ಅವರ ಕಲಾವಿದರನ್ನು ನೋಡಿದಾಗ ಜನರು ಅಂದುಕೊಳ್ಳುವಂತೆ ಸೌಂದರ್ಯ, ಲಕ್ಷಣ ಇರುವುದಿಲ್ಲ. ಆದರೆ ಅವರಲ್ಲಿ ಪ್ರತಿಭೆ ಇದೆ. ಆ ಪ್ರತಿಭೆಗೆ ತಕ್ಕ ಅವಕಾಶಗಳು ಅವರಿಗೆ ಸಿಗುತ್ತವೆ. ಆ ರೀತಿಯ ಒಂದು ಸುಸ್ಥಿತಿ ನಮ್ಮ ಚಿತ್ರರಂಗದಲ್ಲೂ ನಿರ್ಮಾಣ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: America America: ಅಮೆರಿಕಾ ಅಮೆರಿಕಾ ಚಿತ್ರಕ್ಕೆ 25ರ ಸಂಭ್ರಮ: ಸುದೀಪ್​ ಕೈ ತಪ್ಪಿತ್ತು ಈ ಚಿತ್ರದಲ್ಲಿ ನಟಿಸುವ ಅವಕಾಶ..!

ಇನ್ನು ಈ ಬಗ್ಗೆ ಸರ್ಕಾರಗಳು ಏನು ಮಾಡಬೇಕು ಎಂದೂ ಅನಿರುದ್ಧ್ ಅವರೇ ತಿಳಿಸಿದ್ದಾರೆ. ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಸರ್ಕಾರಗಳು ಒಂದಷ್ಟು ಗೌರವಧನವನ್ನು ನೀಡುತ್ತವೆ. ಆದರೆ ಅದು ಸಾಕಾಗುವುದಿಲ್ಲ. ಇವತ್ತಿನ ಕಾಲದಲ್ಲಂತೂ ಅದು ಸಾಕಾಗೋದಿಲ್ಲ. ಒಂದು ಪಿಂಚಣಿ ರೀತಿ ಅವರಿಗೆ ಗೌರವ ಧನವನ್ನು ನೀಡಬೇಕು. ಹಾಗೇ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಾದ ಎಫ್‌ಟಿಐಐ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆಗಿರಬಹುದು ಅಥವಾ ಎನ್‌ಎಸ್‌ಡಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಆಗಿರಬಹುದು, ಅಂತಹ ಹಲವು ಶಾಲೆಗಳು, ಶಿಕ್ಷಣ ಸಂಸ್ಥೆಗಳಿಗೆ ಇವರನ್ನು ಕರೆಸಿಕೊಂಡು, ಇವರ ಅನುಭವಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟು, ಇವರಿಗೆ ಗೌರವ ಧನ ನೀಡಿದರೆ, ಅದರಿಂದಲೂ ಸಹ ಇವರಿಗೆ ಸಹಾಯ ಆಗುತ್ತದೆ ಎಂದು ಕಿವಿಮಾತು ಹೇಳಿದರು.

ಇನ್ನು ಚಿತ್ರರಂಗದ ಚುಕ್ಕಾಣಿ ಹಿಡಿದಿರುವ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಕಲಾವಿದರ ಸಂಘಗಳೂ ಸಹ ಶಿಬಿರಗಳನ್ನು ನಡೆಸಿ, ಪ್ರತಿಭಾವಂತರನ್ನು ಪ್ರಶಸ್ತಿ ವಿಜೇತರನ್ನು ಕರೆಸಿ ಅನುಭವ ಹಂಚಿಕೊಳ್ಳಲು ಅವಕಾಶ ಕೊಟ್ಟು, ಗೌರವ ಧನ ನೀಡಬೇಕು. ಅದರಿಂದ ಅವರಲ್ಲಿ ಮಾನಸಿಕ ಸ್ಥೈರ್ಯ ಬೆಳೆಯುತ್ತೆ, ಜನಮನ್ನಣೆ ಕೂಡ ಹೆಚ್ಚಾಗುತ್ತದೆ. ಇದೇ ರೀತಿ ಪ್ರತಿ ವರ್ಷ ನಿರ್ಮಾಪಕರೂ ಶಿಬಿರಗಳನ್ನು ನಡೆಸಬೇಕು. ಸಿನಿಮಾ ಮಾಡಬೇಕು ಅಂತ ಉತ್ತರ ಕರ್ನಾಟಕದಿಂದ ಮಂಗಳೂರು ಕಡೆಯಿಂದ ಜನ ಬರುತ್ತಾರೆ. ಆದರೆ ಅವರಿಗೆ ಸರಿಯಾದ ದಾರಿ ಗೊತ್ತಿರುವುದಿಲ್ಲ. ಸಾಕಷ್ಟು ಜನರಿಗೆ ಕೆಟ್ಟ ಅನುಭವಗಳಾಗಿ ವಾಪಸ್ ಹೋಗಿ ಮತ್ತೆ ಬರುವುದೇ ಇಲ್ಲ. ಅದೂ ಕೂಡ ನಿಲ್ಲಬೇಕು. ಅಂಥವರಿಗೆ ಶಿಬಿರಗಳ ಮೂಲಕ ಸಿನಿಮಾ ನಿರ್ಮಾಣ, ವಿತರಣೆ ಬಗ್ಗೆ ಮಾಹಿತಿ ನೀಡಬೇಕು. ಸಿನಿಮಾ ಬಗ್ಗೆ ಗಾಂಭೀರ್ಯತೆ ಮೂಡುತ್ತೆ ಎಂದು ಐಡಿಯಾ ನೀಡಿದ್ದಾರೆ ಅನಿರುದ್ಧ್.
ಓಟಿಟಿಗಳೂ ಸಹ ಪ್ರತಿಭಾವಂತರನ್ನು ಗುರುತಿಸಿ, ಅವಕಾಶ ನೀಡಬೇಕು. ಕಡಿಮೆ ಬಜೆಟ್ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವಿತರಕರು, ಪ್ರದರ್ಶಕರು ಲೋ ಬಜೆಟ್ ಸಿನಿಮಗಳ ವಿಶೇಷ ಪ್ರದರ್ಶನ ಏರ್ಪಡಿಸಬೇಕು. ವೀಕ್ಷಕರೂ ಸಹ ಕೈ ಮುಗಿದುಕೊಳ್ಳುತ್ತೇನೆ, ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಆಶೀರ್ವದಿಸಿ. ಮುಂದೆ ಈ ರೀತಿಯ ಪ್ರಯತ್ನಗಳು ಆಗುತ್ತವೆ ಎಂಬ ಭರವಸೆ ನನಗಿದೆ. ಈ ರೀತಿಯ ಪ್ರಯತ್ನಗಳು ಆದರೆ ಸಂಚಾರಿ ವಿಜಯ್ ಅವರಂತ ಕಲಾವಿದರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತೆ ಎಂದು ಹೇಳಿದ್ದಾರೆ ನಟ ಅನಿರುದ್ಧ್.
Published by:Kavya V
First published: