ನನ್ನ ತಟ್ಟೆಯಲ್ಲಿರುವ ಅನ್ನವನ್ನು ಒದೆಯುವ ಕೆಲಸ ಮಾಡಬೇಡಿ: ವಿನೋದ್ ಪ್ರಭಾಕರ್ ನೋವಿನ ಮಾತು

ಅಪಪ್ರಚಾರ ಮಾಡಬೇಡಿ, ಊಹಾಪೋಹಗಳನ್ನು ಹಬ್ಬಿಸಬೇಡಿ ಎಂದು ತಮ್ಮ ಕುರಿತು ಗಾಂಧಿನಗರದಲ್ಲಿ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ ಮರಿ ಟೈಗರ್.

ನಟ ವಿನೋದ್​ ಪ್ರಭಾಕರ್​

ನಟ ವಿನೋದ್​ ಪ್ರಭಾಕರ್​

  • Share this:
ಮರಿ ಟೈಗರ್ ವಿನೋದ್ ಪ್ರಭಾಕರ್ ಗಾಂಧಿನಗರದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಹರಿ ಹಾಯ್ದಿದ್ದಾರೆ. ನನ್ನ ಅನ್ನ ಒದೆಯುವ ಕೆಲಸ ಮಾಡಬೇಡಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಬರ್ಟ್ ಸಿನಿಮಾ ಆದ ಮೇಲೆ ನಾನೇನೂ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿಲ್ಲ ಎಂದು ಝಾಡಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಉದಯ್ ಪ್ರಕಾಶ್ ನಿರ್ದೇಶನದ ವರದ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಕಾರ್ಯಕ್ರಮದಲ್ಲಿ ಫೇಕ್ ಸುದ್ದಿ ಹರಡುವವರ ವಿರುದ್ಧ ಮರಿ ಟೈಗರ್ ವಿನೋದ್ ಪ್ರಭಾಕರ್ ಗರ್ಜಿಸಿದ್ದಾರೆ.

ಹೌದು, ಕೆಲ ದಿನಗಳಿಂದೀಚೆಗೆ ಗಾಂಧಿನಗರದಲ್ಲಿ ಲೀಡಿಂಗ್ ಸ್ಟಾರ್ ವಿನೋದ್ ಪ್ರಭಾಕರ್ ಅವರ ಸಂಭಾವನೆ ಕುರಿತ ಸುದ್ದಿಗಳು ರೆಕ್ಕೆ ಬಿಚ್ಚಿ ಹಾರಾಡುತ್ತಿವೆಯಂತೆ. ಅದೂ ಎಷ್ಟರ ಮಟ್ಟಿಗೆ ಅಂದರೆ ಖುದ್ದು ಮರಿ ಟೈಗರ್​​ಗೇ ಇರುಸು ಮುರುಸು ಆಗುವಷ್ಟು. ಹೀಗಾಗಿಯೇ ಈ ಬಗ್ಗೆ ಖುದ್ದು ವಿನೋದ್ ಸ್ಪಷ್ಟನೆ ನೀಡಿದ್ದಾರೆ. `ನನಗೆ ಒಳ್ಳೆ ಸಬ್ಜೆಕ್ಟ್ ಕೊಡಿ, ಒಳ್ಳೆ ಟೀಮ್ ಕೊಡಿ, ಒಳ್ಳೆ ಮೇಕಿಂಗ್ ಮಾಡಿ ಅನ್ನೋ ಡಿಮ್ಯಾಂಡ್ ಇರುತ್ತೆಯೇ ಹೊರತು, ನನಗೆ ಇಷ್ಟೇ ಕೊಡಬೇಕು, ಅಷ್ಟೇ ಕೊಡಬೇಕು ಅಂತ ಡಿಮ್ಯಾಂಡ್ ಮಾಡುವುದಿಲ್ಲ.

ರಾಬರ್ಟ್ ದರ್ಶನ್ ಸರ್ ಸಿನಿಮಾ, ವಿನೋದ್ ಪ್ರಭಾಕರ್ ಅದರಲ್ಲಿ ನಟಿಸಿದ್ದಾನಷ್ಟೇ. ನನ್ನ ಯೋಗ್ಯತೆ, ನನ್ನ ಸ್ಟೇಟಸ್ ಎಲ್ಲಿದೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಜೊತೆ ಸಿನಿಮಾ ಮಾಡುವ ನಿರ್ಮಾಪಕರು ಎಷ್ಟು ಬಂಡವಾಳ ಹಾಕುತ್ತಾರೆ. ಅದಕ್ಕೆ ನಾನೆಷ್ಟು ರಿಟನ್ರ್ಸ್ ಕೊಡಲು ಸಾಧ್ಯ, ಇವತ್ತಿಗೂ ನಾನು ಯಾರೇ ಒಬ್ಬ ನಿರ್ಮಾಪಕರು ಹೊಸ ಕಥೆ ಹೇಳೋಕೆ ಬಂದರೂ, ಫಸ್ಟ್ ನಾನು ಕೇಳುವ ಪ್ರಶ್ನೆಯೇ ಬಜೆಟ್ ಏನು ಅಂತ. ನನ್ನ ಒಂದು ಬಜೆಟ್ ಎಷ್ಟು ಎಂಬುದರ ಬಗ್ಗೆ ನನಗೆ ಗೊತ್ತಿದೆ. ನನ್ನ ಸಿನಿಮಾಗಳಿಗೆ ಹಿಂದಿ ಡಬ್ಬಿಂಗ್ ರೈಟ್ಸ್ ಎಷ್ಟಿದೆ ಅಂತ ಗೊತ್ತಿದೆ. ಟಿವಿ ಸ್ಯಾಟಲೈಟ್ ರೈಟ್ಸ್, ಥಿಯೇಟರ್ ಕಲೆಕ್ಷನ್ಸ್, ತೆಲುಗು ಡಬ್ಬಿಂಗ್ ರೈಟ್ಸ್ ಎಷ್ಟು ಬರುತ್ತೆ ಎಂಬುದು ನನಗೆ ಗೊತ್ತಿದೆ. ನನಗೆ ನನ್ನ ಚೌಕಟ್ಟು ಎಷ್ಟಿದೆ ಎಂಬುದು ಗೊತ್ತು' ಎಂದು ತಮ್ಮ ಮಾರ್ಕೆಟ್ ಎಷ್ಟಿದೆ, ತಮ್ಮ ಸಿನಿಮಾಗಳಿಗೆ ಎಷ್ಟು ಬಂಡವಾಳ ಹಾಕಬೇಕು, ಅದರಿಂದ ರಿಟನ್ರ್ಸ್ ಎಷ್ಟು ಎಂಬ ಪ್ರತಿಯೊಂದು ವಿಷಯವನ್ನೂ ನಿರ್ಮಾಪಕರಿಗೆ ತಿಳಿಸುತ್ತಾರಂತೆ ನಟ ವಿನೋದ್ ಪ್ರಭಾಕರ್.

ಅದಕ್ಕೆ ಕಾರಣವನ್ನೂ ಖುದ್ದು ವಿನೋದ್ ಪ್ರಭಾಕರ್ ಅವರೇ ತಿಳಿಸುತ್ತಾರೆ. `ಈಗ ಒಬ್ಬ ನಿರ್ಮಾಪಕರು ಹತ್ತು ಕೋಟಿ ಹಾಕಿ ಸಿನಿಮಾ ಮಾಡುತ್ತಾರೆ ಅಂತಂದುಕೊಳ್ಳಿ. ನನ್ನ ಚೌಕಟ್ಟು ಐದು ಕೋಟಿ ಅಂತಿರುತ್ತೆ ಅಂತಿಟ್ಟುಕೊಳ್ಳಿ. ಸಿನಿಮಾ ಬಂದ ಬಳಿಕ ಆ ಐದು ಕೋಟಿ ಮಾತ್ರ ಬಂದು, ಇನ್ನೈದು ಕೋಟಿ ಲಾಸ್ ಆದರೂ, ಹೊರಗಡೆ ವಿನೋದ್ ಪ್ರಭಾಕರ್‍ನ ಹಾಕಿಕೊಂಡು ಸಿನಿಮಾ ಮಾಡಿ ಹತ್ತು ಕೋಟಿ ರೂಪಾಯಿಯೂ ಲಾಸ್ ಅನ್ನೋ ಮಾತು ಬರುತ್ತೆ. ಆದರೆ ಇದು ನನ್ನ ಪ್ರಾರಂಭ ಅಲ್ಲವಲ್ಲಾ... ಇದೇ ನನ್ನ ಕರಿಯರ್, ನಾನು ಇಲ್ಲೇ ಇರೋಕೆ ಬಂದಿರೋನು. ಇದೊಂದೇ ಸಿನಿಮಾ ಮಾಡೋಕೆ ಅಂತ ಬಂದವನಲ್ಲ. ಇನ್ನೂ ನನ್ನ ಕರಿಯರ್ ತುಂಬಾ ಇದೆ. ಈಗ ಒಬ್ಬ ನಿರ್ಮಾಪಕರು ಉಳಿದುಕೊಂಡರು ಅಂದರೆ ಮುಂದೆ ಇನ್ನೂ ಹೆಚ್ಚು ಸಿನಿಮಾಗಳನ್ನು ಮಾಡುತ್ತಾರೆ. ಈಗ ನನ್ನ ಸಿನಿಮಾಗೆ ಅವರು ಐದು ಕೋಟಿ ರೂಪಾಯಿ ಬಂಡವಾಳ ಹಾಕಿದರೆ, ನಾನು ಅವರಿಗೆ ಐದೂವರೆ ಕೋಟಿ ರೂಪಾಯಿ ವಾಪಸ್ ತಂದುಕೊಟ್ಟರೂ ಸಾಕು. ಅವರು ಇನ್ನೂ ಹಲವು ಸಿನಿಮಾಗಳನ್ನು ಮಾಡುತ್ತಾರೆ.

ಇದನ್ನೂ ಓದಿ : ದಿಲೀಪ್ ಕುಮಾರ್​​ರ 2ನೇ ಮದುವೆ ಕಥೆ: ಇಬ್ಬರೂ ಮೊದಲ ಹೆಂಡತಿ, ಮೊದಲ ಗಂಡನ ಬಳಿಗೆ ಮರಳಿದ್ದರು!

ನನ್ನನ್ನೇ ಹಾಕಿಕೊಂಡು ಆ ಸಿನಿಮಾಗಳನ್ನು ಮಾಡಬೇಕು ಅಂತನೂ ಇಲ್ಲ. ಆದರೆ ಅವರು ಸಿನಿಮಾ ಮಾಡುತ್ತಾ ಹೋದಂತೆ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತೆ, ಸಾವಿರಾರು ಕುಟುಂಬಗಳು ಬದುಕುತ್ತವೆ. ಹೀಗಾಗಿಯೇ ನಾನು ನನ್ನ ಸಿನಿಮಾದ ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ವ್ಯವಹಾರದಲ್ಲೂ ತೊಡಗಿಸಿಕೊಳ್ಳುತ್ತೇನೆ' ಎನ್ನುತ್ತಾರೆ ವಿನೋದ್. ಹೀಗಾಗಿಯೇ ಅವರನ್ನು ಮಿನಿಮಮ್ ಗ್ಯಾರಂಟಿ ಹೀರೋ, ಪ್ರೊಡ್ಯೂಸರ್ಸ್ ಹೀರೋ ಅಂತಲೂ ಕರೆಯುತ್ತಾರೆ ಸ್ಯಾಂಡಲ್‍ವುಡ್ ಮಂದಿ.

ಹೀಗಾಗಿಯೇ ಅಪಪ್ರಚಾರ ಮಾಡಬೇಡಿ, ಊಹಾಪೋಹಗಳನ್ನು ಹಬ್ಬಿಸಬೇಡಿ ಎಂದು ತಮ್ಮ ಕುರಿತು ಗಾಂಧಿನಗರದಲ್ಲಿ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ ಮರಿ ಟೈಗರ್. ನನ್ನ ತಟ್ಟೆಯಲ್ಲಿರುವ ಅನ್ನವನ್ನು ಒದೆಯುವ ಕೆಲಸ ಮಾಡಬೇಡಿ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದರೆ ಇಷ್ಟೊಂದು ಕೇಳುತ್ತಾನಂತೆ ಅಂತ ಬರುವವರೂ ಬರುವುದಿಲ್ಲ. ಈ ಕೊರೊನಾ ಕಾಲದಲ್ಲಿ ನಿರ್ಮಾಪಕರು ಹೊರಗೆ ಬಂದು ಸಿನಿಮಾ ಮಾಡುವುದೇ ಕಷ್ಟವಾಗಿದೆ. ಆದರೂ ನಾನು ನನ್ನ ನಿರ್ಮಾಪಕರಿಗೆ ಎಷ್ಟು ಸಹಾಯ ಆಗುತ್ತೋ ಅಷ್ಟು ಮಾಡುತ್ತೇನೆ.

ನಿರ್ಮಾಪಕರು ಚೆನ್ನಾಗಿರಬೇಕು, ಅವರು ಚೆನ್ನಾಗಿದ್ದರೆ ಮಾತ್ರ ನಾವೂ ಚೆನ್ನಾಗಿರಲು ಸಾಧ್ಯ. ಇಷ್ಟು ಕೇಳುತ್ತಾನಂತೆ, ಅಷ್ಟು ಕೇಳುತ್ತಾನಂತೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸಬೇಡಿ. ವಿನೋದ್ ಪ್ರಭಾಕರ್ ಇನ್ನೂ ಇಲ್ಲೇ ಇದ್ದಾನೆ. ನನ್ನ ಕಾಲೂ ನೆಲದ ಮೇಲೇ ಇದೆ, ನನ್ನ ತಲೆಯೂ ಇಲ್ಲೇ ಇದೆ. ಎಲ್ಲಿಯೂ ಹೋಗಿಲ್ಲ, ಇಲ್ಲಿಯೇ ಇರುತ್ತೇನೆ' ಎಂದು ಸೋಲು ತನ್ನನ್ನು ಕುಗ್ಗಿಸಿಲ್ಲ, ಗೆಲುವು ತನ್ನನ್ನು ಹಿಗ್ಗಿಸಿಲ್ಲ ಎಂದು ಹೇಳಿಕೊಳ್ಳುತ್ತಾರೆ ನಟ ವಿನೋದ್ ಪ್ರಭಾಕರ್.
Published by:Kavya V
First published: