ತುನಿಶಾ ಶರ್ಮಾ (Tunisha Sharma) ಆತ್ಮಹತ್ಯೆ ಪ್ರಕರಣ (Suicide Case) ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಟಿಯ ಆತ್ಮಹತ್ಯೆಯ ಬೆನ್ನಲ್ಲೇ ಆಕೆಯ ಗೆಳೆಯ ಶೀಜಾನ್ ಖಾನ್ರನ್ನು (Sheezan Khan) ಪೊಲೀಸರು ಬಂಧಿಸಿದ್ದು, ತುನಿಶಾ ಶರ್ಮ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದೇ ಶೀಜಾನ್ ಎಂಬುದು ಅವರ ಮೇಲಿರುವ ಆರೋಪವಾಗಿದೆ.
ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿರುವ ತುನಿಶಾ ತಾಯಿ
ತುನಿಶಾ ಶರ್ಮಾ ತಾಯಿ ವನಿತಾ ತನ್ನ ಮಗಳು ಸಾಯುವುದಕ್ಕೆ ಶೀಜಾನ್ ಖಾನ್ ಕಾರಣ ಹಾಗಾಗಿ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದರು. ಇದೀಗ ಶೀಜಾನ್ ಖಾನ್ ಕುಟುಂಬಸ್ಥರು ಖಾನ್ ಬಗ್ಗೆ ತುನಿಶಾ ತಾಯಿ ವನಿತಾ ತಪ್ಪು ಹೇಳಿಕೆಯನ್ನು ನೀಡಿದ್ದು ಈ ಕೊಲೆಗೂ ಶೀಜಾನ್ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ತುನಿಶಾಗೆ ಸ್ವಾತಂತ್ರ್ಯವಿರಲಿಲ್ಲ
ಶೀಜಾನ್ ತಾಯಿ ಹಾಗೂ ಸಹೋದರಿ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ತಿಳಿಸಿದ್ದು, ತುನಿಶಾ ನಮ್ಮ ಮನೆಯ ಸದಸ್ಯಳಂತೆಯೇ ಇದ್ದರು ಎಂದು ಹೇಳಿದ್ದು, ತುನಿಶಾ ತಾಯಿ ತುನಿಶಾರಿಗೆ ಸ್ವಾತಂತ್ರ್ಯ ನೀಡುತ್ತಿರಲಿಲ್ಲ ಹಾಗೂ ಆಕೆ ತನ್ನಿಷ್ಟದಂತೆ ಜೀವಿಸಬೇಕು ಎಂದು ಬಯಸಿದಾಗ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಮಗಳನ್ನು ಬಲವಂತವಾಗಿ ಮತಾಂತರ ಮಾಡಲು ಬಯಸಿದ್ದರು
'ಅಲಿ ಬಾಬಾ: ದಾಸ್ತಾನ್-ಇ-ಕಾಬೂಲ್ ಟಿವಿ ಸರಣಿಯಲ್ಲಿ ಬಣ್ಣ ಹಚ್ಚಿದ್ದ 21 ರ ಹರೆಯದ ನಟಿ ತುನಿಶಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿರುವ ಧಾರಾವಾಹಿ ಸೆಟ್ನಲ್ಲಿಯೇ ತುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದರು ಹಾಗೂ ಮಾನಸಿಕ ಒತ್ತಡದಿಂದ ಆಕೆ ಈ ಕೃತ್ಯವೆಸಗಿದ್ದಾರೆ ಎಂಬ ಮಾಹಿತಿ ಕೂಡ ದೊರಕಿದೆ. ತುನಿಶಾ ಶರ್ಮಾ ತಾಯಿ ವನಿತಾ ತಮ್ಮ ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ತಿಳಿಸಿದ್ದು ಶೀಜಾನ್ ಹಾಗೂ ಆತನ ಮನೆಯವರು ತಮ್ಮ ಮಗಳನ್ನು ಮತಾಂತರ ಮಾಡಲು ಬಯಸಿದ್ದರು ಎಂದು ಆರೋಪಿಸಿದ್ದಾರೆ.
ಬೇರೆ ಮಹಿಳೆಯೊಂದಿಗೆ ಚ್ಯಾಟ್ ಮಾಡಿದ್ದ ಶೀಜಾನ್
ತುನಿಶಾ ಶೀಜಾನ್ನೊಂದಿಗೆ ಬ್ರೇಕಪ್ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿಸಿದ್ದ ವನಿತಾ ಆತ ಬೇರೊಬ್ಬ ಮಹಿಳೆಯೊಂದಿಗೆ ವಾಟ್ಸ್ಆ್ಯಪ್ ಚಾಟ್ ಮಾಡುತ್ತಿದ್ದುದನ್ನು ನೋಡಿದ್ದಾಳೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ತುನಿಶಾ ಶೀಜಾನ್ ಅನ್ನು ಪ್ರಶ್ನಿಸಿದ್ದು ಆತ ಕೆನ್ನೆಗೆ ಹೊಡೆದಿದ್ದಾಗಿಯೂ ವನಿತಾ ಆರೋಪಿಸಿದ್ದಾರೆ.
ಶೀಜಾನ್ ಖಾನ್ ತಾಯಿ ಪತ್ರಕರ್ತರಿಗೆ ತುನಿಶಾ ತಾಯಿ ವನಿತಾರ ಬಗ್ಗೆ ದೋಷಾರೋಪಣೆಗಳನ್ನು ಮಾಡಿದ್ದು ಶ್ರೀಮತಿ ಶರ್ಮಾ ತುನಿಶಾಗೆ ದಿನಕ್ಕೆ ಹಲವಾರು ಬಾರಿ ಕರೆಮಾಡುತ್ತಿದ್ದರು ಹಾಗೂ ಆ ಫೋನ್ ಕರೆ ಹೇಗಿತ್ತು ಎಂಬುದು ನಮಗೆಲ್ಲರಿಗೂ ತಿಳಿದಿದೆ ಎಂದು ಆರೋಪಿಸಿದ್ದಾರೆ.
ತುನಿಶಾ ಪ್ರಕರಣ:ನ್ಯಾಯ ದೊರಕಲಿ
ತುನಿಶಾ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯ ದೊರಕಬೇಕು ಆದರೆ ಶೀಜಾನ್ ಅನ್ನು ತುನಿಶಾ ತಾಯಿ ಬೇಕೆಂದೇ ಸಿಲುಕಿಸುತ್ತಿದ್ದಾರೆ ಇದು ಸರಿಯಲ್ಲ ಎಂದು ನಾಜ್ ಪತ್ರಕರ್ತರಿಗೆ ತಿಳಿಸಿದ್ದಾರೆ. ಶೀಜಾನ್ ಸಹೋದರಿ ನಾಜ್ ಕೂಡ ಸಹೋದರನನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ತಿಳಿಸುತ್ತಿದ್ದು ತುನಿಶಾ ನಮ್ಮ ಕುಟುಂಬದಲ್ಲಿ ಓರ್ವ ಸದಸ್ಯರಾಗಿದ್ದರು ಹಾಗೂ ನಮಗೆಲ್ಲರಿಗೂ ಪ್ರೀತಿಯ ಸಹೋದರಿಯಾಗಿದ್ದರು ಎಂದು ತಿಳಿಸಿದ್ದಾರೆ.
ಆಕೆಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಪಾರ್ಟಿ ಆಯೋಜನೆ
ಆಕೆಯ ಹುಟ್ಟುಹಬ್ಬದಂದು ಸರ್ಪ್ರೈಸ್ ಪಾರ್ಟಿ ಆಯೋಜಿಸಬೇಕೆಂದು ನಾವೆಲ್ಲರೂ ಅಂದುಕೊಂಡಿದ್ದೆವು. ತುನಿಶಾ ಜೊತೆ ಆರು ತಿಂಗಳ ಕಾಲ ಕಳೆದಿದ್ದು ಆ ಸಮಯ ತುಂಬಾ ಆನಂದಮಯವಾಗಿದೆ ಎಂದು ತಿಳಿಸಿದ್ದಾರೆ.
ಸ್ಕಾರ್ಫ್ ಕಟ್ಟಿರುವ ತುನಿಶಾ ಫೋಟೋ ವೈರಲ್
ತುನಿಶಾರಿಗೆ ಹಿಜಾಬ್ ಧರಿಸಿ ದರ್ಗಾಕ್ಕೆ ಭೇಟಿ ನೀಡುವಂತೆ ಒತ್ತಾಯಿಸಲಾಗಿತ್ತು ಎಂಬ ಆರೋಪವನ್ನು ತಳ್ಳಿಹಾಕಿರುವ ಶೀಜಾನ್ ತಾಯಿ ಹಾಗೂ ಸಹೋದರಿಯರು ನಾವು ಆಕೆಗೆ ಏನೂ ಮಾಡುವಂತೆ ಹೇಳಿರಲಿಲ್ಲ ಎಂದು ತಿಳಿಸಿದ್ದಾರೆ. ಇದೀಗ ತುನಿಶಾ ತಲೆಗೆ ಸ್ಕಾರ್ಫ್ ಕಟ್ಟಿರುವ ಚಿತ್ರವೊಂದು ವೈರಲ್ ಆಗಿದ್ದು ಇದು ಶೂಟಿಂಗ್ಗಾಗಿ ತುನಿಶಾ ಧರಿಸಿದ್ದು ಎಂದು ಶೀಜಾನ್ ಸಹೋದರಿ ತಿಳಿಸಿದ್ದಾರೆ. ತುನಿಶಾ ನಮ್ಮ ಕುಟುಂಬದ ಸದಸ್ಯರಾಗಿದ್ದರು ಹಾಗೂ ನಾವೆಲ್ಲರೂ ಆಕೆಯನ್ನು ಬಹುವಾಗಿ ಪ್ರೀತಿಸುತ್ತಿದ್ದೆವು ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೆವು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ