ಸತೀಶ್ ನೀನಾಸಂ (Sathish Ninasam) ಯಾವಾಗಲೂ ವಿಭಿನ್ನ ಕಥೆಯ ಮೂಲಕ ಜನರ ಎದುರಿಗೆ ಬಂದವರು. ತೆರೆಯ ಮೇಲೆ ಮನರಂಜನೆಗೆ (Entertainment) ಯಾವುದೇ ರೀತಿಯಲ್ಲಿ ಕಡಿಮೆಯಾಗದಂತೆ ನೋಡಿಕೊಂಡವರು ಇವರು. ಅವರ ಸಿನಿಮಾ (Film) ಎಂದರೆ ಅದೇನೋ ಕುತೂಹಲ ಹಾಗೂ ನಿರೀಕ್ಷೆ ಅಭಿಮಾನಿಗಳಲ್ಲಿ ಇರುತ್ತದೆ. ಈಗಂತೂ ಸತೀಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮೊನ್ನೆಯಷ್ಟೇ ಅವರ ಅಭಿನಯದ ಡಿಯರ್ ವಿಕ್ರಮ್ (dear Vikram) ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಅವರ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಈ ಸಿನಿಮಾ ಪ್ರಚಾರವನ್ನು ವಿಶಿಷ್ಟವಾಗಿ ಮಾಡುತ್ತಿದ್ದಾರೆ ನಟ.
ಡೆಲಿವರಿ ಬಾಯ್ ಆದ ನಟ
ಹೌದು, ಡೆಲಿವರಿ ಬಾಯ್ ಆಗಿ ಸತೀಶ್ ನೀನಾಸಂ ಪುಡ್ ಸರ್ವಿಸ್ ಮಾಡುತ್ತಿದ್ದು, ಬಹಳ ವಿಭಿನ್ನವಾಗಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಪೆಟ್ರೋಮ್ಯಾಕ್ಸ್ ಚಿತ್ರದ ಪ್ರಚಾರಕ್ಕಾಗಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದು, ಬುಲೆಟ್ ಏರಿ ಲಗ್ಗೇರೆಯ ಆಸರೆ ಅನಾಥಶ್ರಮಕ್ಕೆ ನಟ ಊಟ ತಂದು ನೀಡಿದ್ದಾರೆ. ಆಸರೆ ಅನಾಥಶ್ರಮದಲ್ಲಿರುವ ಎಲ್ಲರಿಗೂ ನಾನ್ ವೆಜ್ ಊಟದ ವ್ಯವಸ್ಥೆಯನ್ನು ನಟ ಮಾಡಿಸಿದ್ದು, ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಸತೀಶ್ ನೀನಾಸಂ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಇದರಲ್ಲಿ ಅನಾಥನ ಪಾತ್ರ ಮಾಡಿದ್ದು, ಈ ಕಾರಣದಿಂದ ಅನಾಥಶ್ರಮಕ್ಕೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಗಂಭೀರವಾದ ವಿಷಯವೂ ಇದೆ. ಈ ಹಿಂದೆಯೇ ರಿಲೀಸ್ ಆಗಬೇಕಿದ್ದ ಈ ಸಿನಿಮಾದ ಟ್ರೈಲರ್ ಬಹಳಷ್ಟು ಸದ್ದು ಮಾಡಿತ್ತು. ನೀರ್ ದೋಸೆ ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಅವರ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಪೆಟ್ರೋಮ್ಯಾಕ್ಸ್.
ಇದನ್ನೂ ಓದಿ: ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡ್ತಾರಾ ಸಮಂತಾ? ಏನಿದು ಹೊಸ ಮ್ಯಾಟರ್?
ಸಿನಿಮಾದಲ್ಲಿ ಡಬಲ್ ಮೀನಿಂಗ್ ಜೋಕ್ಸ್ ಜೊತೆಗೆ ಒಂದು ಗಂಭೀರ ವಿಷಯ ಇದೆ ಅನ್ನೋ ಸುಳಿವು ಸಿಗುತ್ತದೆ. ಆದರೆ ಡಬಲ್ ಮೀನಿಂಗ್ ಜೋಕ್ಸ್ ಕೆಲವರಿಗೆ ನಗು ತರಿಸಿದೆ. ಈ ಸಿನಿಮಾದಲ್ಲಿ ಚೇಷ್ಠೆಯೇ ಮುಖ್ಯ ಕಥಾಹಂದರ. ಆ ಹಿನ್ನೆಲೆಯನ್ನಿಟ್ಟುಕೊಂಡೆ ಸಿನಿಮಾ ನೋಡಿಸಿಕೊಂಡು ಹೋಗುತ್ತಂತೆ. ನನ್ನ ಸಿನಿಮಾಗೆ ಈ ಟೈಟಲ್ ಇಡಲು ಮುಖ್ಯವಾದ ಕಾರಣ ಅದರ ಕಥೆ. ಪೆಟ್ರೋಮ್ಯಾಕ್ಸ್ ಎಂದರೆ ಬದುಕು ಮತ್ತು ಬೆಳಕು ಎಂಬ ಅರ್ಥದಲ್ಲಿ ಈ ಟೈಟಲ್ ಬಳಸಿದ್ದೇವೆ. ಅನಾಥ ಮಕ್ಕಳ ಮತ್ತು ಒಬ್ಬ ತಾಯಿಯ ಕಥೆಯನ್ನು ಈ ಸಿನಿಮಾದಲ್ಲಿ ಹೇಳಿದ್ದೇನೆ. ಇಲ್ಲಿ ಸಾಮಾನ್ಯರ ಬದುಕಿನಲ್ಲಿ ನಡೆಯುವ ಕಥೆಯನ್ನು ತೋರಿಸಲಿದ್ದೇವೆ ಎಂದು ನಟ ಸತೀಶ್ ತಿಳಿಸಿದ್ದಾರೆ.
ಸತೀಶ್ ನೀನಾಸಂಗೆ, ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಹಾಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾರುಣ್ಯ ರಾಮ್ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ ನಟಿಸಿದ್ದಾರೆ. ಅಂದ ಹಾಗೆಯೇ, ಒಟ್ಟು 36 ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡಿರುವ ಪೆಟ್ರೋಮ್ಯಾಕ್ಸ್ ಚಿತ್ರತಂಡ, ಮೈಸೂರಿನಲ್ಲಿಯೇ ಶೂಟಿಂಗ್ ಶುರುಮಾಡಿ, ಅಲ್ಲಿಯೇ ಮುಗಿಸಿದೆ.
ಇದನ್ನೂ ಓದಿ: ನಯನತಾರಾ ಮದುವೆ ಲುಕ್ ರೀ ಕ್ರಿಯೇಟ್ ಮಾಡಿದ ಗೌತಮಿ ಜಾದವ್, ಹೇಗಿದೆ ನೀವೂ ನೋಡಿ
ಸಿನಿಮಾ ನಿರ್ಮಾಣ ಮಾಡಿದ್ದಾರೆ ಸತೀಶ್
ವಿಶೇಷ ಏನೆಂದರೆ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ಸತೀಶ್ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಸತೀಶ್ ಪಿಕ್ಚರ್ ಹೌಸ್ ಅಡಿ ಬಂಡವಾಳ ಹೂಡಿದ್ದಾರೆ ಸತೀಶ್ ನೀನಾಸಂ. ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಜೊತೆಯಾಗಿದೆ. ಕತೆ, ಚಿತ್ರಕತೆ, ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮೆರಾ ನಿರಂಜನ್ಬಾಬು, ಸಂಕಲನ ಸುರೇಶ್ ಅರಸ್, ಹೊಸ್ಮನೆ ಮೂರ್ತಿ ಕಲೆ, ವಿನಯ್ ಸಹ ನಿರ್ದೇಶನ ಚಿತ್ರಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ