ಬಹುಭಾಷಾ ನಟ ಶರತ್ ಕುಮಾರ್ (Sarathkumar) ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಚೆನ್ನೈನ (Chennai) ಅಪೋಲೊ ಆಸ್ಪತ್ರೆಗೆ (Apollo Hospital) ದಾಖಲಾಗಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಶರತ್ ಕುಮಾರ್ ಪತ್ನಿ, ನಟಿ ರಾಧಿಕಾ, ಪುತ್ರಿ ವರಲಕ್ಷ್ಮಿ ಶರತ್ ಕುಮಾರ್ (Varalaxmi Sarathkumar) ಆಸ್ಪತ್ರೆಗೆ ಆಗಮಿಸಿದ್ದಾರೆ. ಶರತ್ ಕುಮಾರ್ ಅವರು ಡಯೆರಿಯಾ ಸಮಸ್ಯೆಯಿಂದ ಡಿಹೈಡ್ರೇಷನ್ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಅವರಿಗೆ ಚೆನ್ನೈ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದ ಕುರಿತು ಆಸ್ಪತ್ರೆ ಆಡಳಿತ ಮಂಡಳಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಪುನೀತ್ ರಾಜ್ಕುಮಾರ್ 'ರಾಜಕುಮಾರ' ಸಿನಿಮಾದಲ್ಲಿ ನಟಿಸಿದ್ದರು
1986ರಲ್ಲಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದ ಶರತ್ ಕುಮಾರ್ ಅವರು, ಇದುವರೆಗೂ ಕನ್ನಡ, ತೆಲುಗು, ತಮಿಳು ಭಾಷೆ ಸೇರಿದಂತೆ 130 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸಮಾಜಂಲೋ ಸ್ತ್ರೀ' ಸಿನಿಮಾ ಮೂಲಕ ಟಾಲಿವುಡ್ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದ ಶರತ್ ಕುಮಾರ್ ಅವರು, ಆ ಬಳಿಕ ಉತ್ತಮ ಪಾತ್ರಗಳೊಂದಿಗೆ ಹೀರೋ ಆಗಿ ಮಿಂಚಿದ್ದರು. ಇತ್ತೀಚೆಗಷ್ಟೇ ಶರತ್ ಕುಮಾರ್ ನಟಿಸಿದ್ದ 'ಪರಂಪರ' ವೆಬ್ ಸಿರೀಸ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇನ್ನು, ಕನ್ನಡದ 'ಮೈನಾ', 'ರಾಜಕುಮಾರ' ಸಿನಿಮಾದಲ್ಲಿ ಕೂಡ ಅವರು ನಟಿಸಿದ್ದರು.
ಬಾಡಿ ಬಿಲ್ಡಿಂಗ್ನಲ್ಲೂ ಟೈಟಲ್ ಗೆದ್ದಿದ್ದರು ಶರತ್ ಕುಮಾರ್
ಶರತ್ ಕುಮಾರ್ ಅವರಿಗೆ ತಮಿಳು ನಾಡು ರಾಜ್ಯ ಪ್ರಶಸ್ತಿ, ಮೂರು ಸೌತ್ ಫಿಲ್ಮ್ಫೇರ್ ಪ್ರಶಸ್ತಿಗಳು ನೀಡಿ ಗೌರವಿಸಲಾಗಿದೆ. ಆರಂಭದ ಜೀವನದಲ್ಲಿ ಬಾಡಿ ಬಿಲ್ಡರ್ ಆಗಿದ್ದ ಶರತ್ ಕುಮಾರ್ ಅವರು ಆ ಬಳಿಕ ಜರ್ನಲಿಸ್ಟ್ ಆಗಿಯು ಕೆಲಸ ಮಾಡಿದ್ದರು. 1974ರಲ್ಲಿ ಬಾಡಿ ಬಿಲ್ಡಿಂಗ್ನಲ್ಲಿ 'ಮಿಸ್ಟರ್ ಮದ್ರಾಸ್ ಯುನಿವರ್ಸಿಟಿ ಟೈಟಲ್' ವಿನ್ನರ್ ಆಗಿದ್ದರು.
ಸಿನಿ ಜೀವನದ ಆರಂಭದಲ್ಲಿ ನೆಗೆಟಿವ್ ಪಾತ್ರಗಳು ಸೇರಿದಂತೆ ಪೋಷಕ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಆ ಬಳಿಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸುಪ್ರೀಂ ಹೀರೋ ಆಫ್ ತಮಿಳು ಸಿನಿಮಾ ಎಂದು ಖ್ಯಾತಿ ಪಡೆದಿದ್ದರು.
ಸಿನಿಮಾ ಮಾತ್ರದಲ್ಲಿ ತಮಿಳುನಾಡು ರಾಜಕೀಯದಲ್ಲೂ ಸಕ್ರಿಯ
ಸಿನಿಮಾ ಕ್ಷೇತ್ರವಲ್ಲೇ ರಾಜಕೀಯದಲ್ಲೂ ಸಕ್ರಿಯರಾಗಿದ್ದ ಶರತ್ ಅವರು, 2007ರಲ್ಲಿ 'ಆಲ್ ಇಂಡಿಯಾ ಸಮತ್ವ ಮಕ್ಕಳ ಕಚ್ಚಿ' ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು. ಇದಕ್ಕೂ ಮುನ್ನ ಅಂದರೇ, 1998ರಲ್ಲಿ ಡಿಎಂಕೆ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. 2001ರ ಡಿಎಂಕೆ ಪಕ್ಷದಿಂದ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಆದರೆ 2006ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಐಎಂಡಿಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ಬಳಿಕ ತಮ್ಮ ಪಕ್ಷದ ಮೂಲಕ ಎರಡು ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದರು. 2017ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ನನ್ನನ್ನು ಎಐಎಂಡಿಕೆ ಪಕ್ಷದ ಆಪ್ತ ಎಂದೇ ಗುರುತಿಸಲಾಗಿದೆ. ಆದ್ದರಿಂದಲೇ ನನ್ನ ಪಕ್ಷ ಬೆಳವಣಿಗೆ ಆಗಲಿಲ್ಲ. ಇನ್ನು ಮುಂದೇ ಪಕ್ಷದ ಸಂಘಟನೆಯತ್ತ ಹೆಚ್ಚು ಗಮನ ನೀಡೋದಾಗಿ ತಿಳಿಸಿದ್ದರು.
ಶರತ್ಕುಮಾರ್ ಪುತ್ರಿ ಕೂಡ ಸಿನಿಮಾ ರಂಗದಲ್ಲಿ ಮಿಂಚು
ವೈಯಕ್ತಿಕ ಜೀವನಕ್ಕೆ ಬಂದರೇ, ಶರತ್ ಕುಮಾರ್ 1984ರಲ್ಲಿ ಚಯಾ ದೇವಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಎರಡು ಮಕ್ಕಳಿದ್ದಾರೆ. 2000ರಲ್ಲಿ ಚಯಾ ದೇವಿ ಅವರೊಂದಿಗೆ ವಿಚ್ಛೇದನ ಪಡೆದು, ಬಳಿಕ 2001ರಲ್ಲಿ ನಟಿ ರಾಧಿಕಾ ಅವರನ್ನು ಮದುವೆಯಾಗಿದ್ದರು. ರಾಧಿಕಾ, ಶರತ್ ಕುಮಾರ್ ದಂಪತಿಗೆ ಓರ್ವ ಮಗನಿದ್ದಾನೆ. ಶರತ್ಕುಮಾರ್ ಅವರ ಹಿರಿಯ ಪುತ್ರಿ ವರಲಕ್ಷ್ಮಿ ಸಿನಿಮಾ ರಂಗಕ್ಕೆ ಪ್ರವೇಶ ನೀಡಿದ್ದು, ದಕ್ಷಿಣ ಭಾರತ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ