ಕಲಾವಿದರ ಶ್ರದ್ಧಾಂಜಲಿ ವೇಳೆ ಸಂಚಾರಿ ವಿಜಯ್ ಫೋಟೋ ಇಡದೆ ಅಗೌರವ ಆರೋಪ: ವಾಣಿಜ್ಯ ಮಂಡಳಿ ಸ್ಪಷ್ಟನೆ

ಶ್ರದ್ಧಾಂಜಲಿ ಸಭೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಫೋಟೋ ಇಡದೇ, ಅವರ ಬಗ್ಗೆ ಪ್ರಸ್ತಾಪಿಸದೇ ಅಗೌರವ ತೋರಲಾಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟ ಸಂಚಾರಿ ವಿಜಯ್​

ನಟ ಸಂಚಾರಿ ವಿಜಯ್​

  • Share this:
ಕಳೆದ ಒಂದು ವರ್ಷದಿಂದ ವಿಧಿವಶರಾದ ಕನ್ನಡ ಚಿತ್ರರಂಗದ ನಟ, ನಟಿಯರು, ಕಲಾವಿದರು, ತಂತ್ರಜ್ಞರು ಹಾಗೂ ಅವರ ಕುಟುಂಬದವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಶ್ರದ್ದಾಂಜಲಿ ಸಭೆ ಆಯೋಜಿಸಲಾಗಿತ್ತು. ಅದರಲ್ಲಿ ಕಳೆದ 15 ತಿಂಗಳಿನಿಂದ ಮರೆಯಾದ 47 ಮಂದಿ ಕಲಾವಿದರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಫಿಲ್ಮ್ ಚೇಂಬರ್ ಪಕ್ಕದಲ್ಲೇ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಟಿ ತಾರಾ, ಹಿರಿಯ ನಟಿ ಜಯಮಾಲ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹಿರಿಯ ನಿರ್ದೇಶಕ ಟಿಎಸ್ ನಾಗಾಭರಣ ಸೇರಿದಂತೆ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಾಗೂ ವಿಧಿವಶರಾದ ಕುಟುಂಬದವರು ಭಾಗವಹಿಸಿದ್ದರು.

ಆದರೆ ಶ್ರದ್ಧಾಂಜಲಿ ಸಭೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಫೋಟೋ ಇಡದೇ, ಅವರ ಬಗ್ಗೆ ಪ್ರಸ್ತಾಪಿಸದೇ ಅಗೌರವ ತೋರಲಾಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತು ನ್ಯೂಸ್ 18 ಕನ್ನಡಕ್ಕೆ ಸ್ಪಷ್ಟನೆ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಮ್ಮಿಂದ ಯಾವುದೇ ಪ್ರಮಾದ ನಡೆದಿಲ್ಲ. ಸುಮ್ಮನೇ ಯಾರೋ ಕೆಲವರು ವಿನಾ ಕಾರಣ ವಿವಾದ ಮಾಡುತ್ತಿದ್ದಾರೆ ಎಂದು ಅಲ್ಲಗಳೆದಿದ್ದಾರೆ.

ಇದೇ ಬುಧವಾರ ಹಿರಿಯ ನಿರ್ದೇಶಕ ಕೆಸಿಎನ್ ಚಂದ್ರು ಅವರಿಗೆ ಸೌತ್ ಇಂಡಿಯಾ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ನಲ್ಲಿ ಆನ್‌ಲೈನ್ ಮೂಲಕವೇ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ, ತಮಿಳು ನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಚಿತ್ರರಂಗಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಕೆಸಿಎನ್ ಚಂದ್ರಶೇಖರ್ ಅವರ ಸಿನಿಮಾ ಪಯಣ, ಸಾಧನೆಗಳ ಬಗ್ಗೆ ಚರ್ಚಿಸಲಾಗಿದೆ. ಆ ಬಳಿಕ ಅಗಲಿದ ಚಿತ್ರರಂಗದ ಚೇತನಗಳಿಗೆ ಶ್ರದ್ಧಾಂಜಲಿ ಸಭೆಯನ್ನು ಮಾರನೇ ದಿನವೇ ಅರ್ಥಾತ್ ಗುರುವಾರವೇ ನಡೆಸಲು ತೀರ್ಮಾನಿಸಲಾಯಿತು. ಆದರೆ ಈ ಶ್ರದ್ಧಾಂಜಲಿ ಸಭೆಯಲ್ಲಿ ನಟ ಸಂಚಾರಿ ವಿಜಯ್ ಅವರಿಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಸಂಚಾರಿ ವಿಜಯ್​​ರಂತೆ ನಾನೂ ನೋವು ಅನುಭವಿಸಿದ್ದೆ : ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟ ಅನಿರುದ್ಧ್!

ಈ ಕುರಿತು ನ್ಯೂಸ್ 18 ಕನ್ನಡಕ್ಕೆ ಮತ್ತಷ್ಟು ಮಾಹಿತಿ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎಂಎನ್ ಸುರೇಶ್, ಗುರುವಾರ ಶ್ರದ್ಧಾಂಜಲಿ ಸಭೆ ನಡೆಸಲು ಬುಧವಾರವೇ ನಿರ್ಧರಿಸಿದ್ದು. ಕೇವಲ ಒಂದೇ ದಿನದಲ್ಲಿ ಫೋಟೋ ಫ್ರೇಮ್ ಮಾಡಿಸುವುದು ಕಷ್ಟ. ನಿರ್ಮಾಪಕ ರಾಮು, ಅಣ್ಣಯ್ಯ ಚಂದ್ರಶೇಖರ್ ಹಾಗೂ ಕೆಸಿಎನ್ ಚಂದ್ರಶೇಖರ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಯ ವಿವಿಧ ಹುದ್ದೆಗಳಲ್ಲಿ ಇದ್ದವರು. ಹೀಗಾಗಿ ಅವರ ಫೋಟೋ ಫ್ರೇಮ್ ನಮ್ಮ ಬಳಿಯಿತ್ತು. ಮೂವರ ಫೋಟೋಗಳನ್ನು ಜೊತೆಯಲ್ಲಿಟ್ಟು ಪಕ್ಕದಲ್ಲಿ ಒಂದು ಟಿವಿ ಇಟ್ಟಿದ್ದೆವು, ಅದರಲ್ಲಿ ನಮ್ಮನ್ನಗಲಿದ ಎಲ್ಲ 47 ಜನರ ಫೋಟೋಗಳನ್ನೂ ಪ್ರಸಾರ ಮಾಡಿದ್ದಲ್ಲದೇ, ಎಲ್ಲರ ಹೆಸರುಗಳನ್ನೂ ಓದಿ ಹೇಳಿ ನಂತರ ಸಭೆಯಲ್ಲಿ ಇದ್ದವರು ಎಲ್ಲರೂ ಎದ್ದು ನಿಂತು ಶ್ರದ್ಧಾಂಜಲಿ ಕೋರಿದ್ದೇವೆ. ಆದರೆ ಇದೇ ದೊಡ್ಡ ಪ್ರಮಾದ ಎನ್ನುವಂತೆ ಸುಖಾ ಸುಮ್ಮನೇ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕುತ್ತಾರೆ ಎಂಎನ್ ಸುರೇಶ್.

ಇನ್ನು ಹಿರಿಯ ನಿರ್ದೇಶಕರೊಬ್ಬರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸತ್ತು ಹೋಗಿದೆ ಎಂದಿದ್ದಾರೆ. ಎಂತೆಂತಹ ಹಿರಿಯರು ವಾಣಿಜ್ಯ ಮಂಡಳಿಯನ್ನು ಕಟ್ಟಿ ಬೆಳೆಸಿದ್ದಾರೆ. ಹೀಗಿರುವಾಗ ಅಂತಹ ಕಠೋರ ಮಾತುಗಳನ್ನಾಡುವುದರಲ್ಲಿ ಅರ್ಥ ಇದೆಯಾ? ಕನ್ನಡ ಚಿತ್ರರಂಗದವರು ಮಾತ್ರವಲ್ಲ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಹಾಗೂ ಬಂಡಾಯ ಕವಿ ಸಿದ್ದಲಿಂಗಯ್ಯನವರಿಗೂ ನಮ್ಮ ಶ್ರದ್ಧಾಂಜಲಿ ಸಭೆಯಲ್ಲಿ ಗೌರವ ಅರ್ಪಿಸಿದ್ದೇವೆ.

ಹೀಗಿರುವಾಗ ಸಿನಿಮಾದಲ್ಲಿ ಸಕ್ರಿಯರಾಗಿದ್ದವರಿಗೆ ಅಗೌರವ ತೋರಿದ್ದೇವೆ ಅಂದರೆ ಹೇಗೆ? ವಾಣಿಜ್ಯ ಮಂಡಳಿ ದೊಡ್ಡ ಪ್ರಮಾದ ಮಾಡಿದೆ ಅಂತ ದೂಷಣೆ ಮಾಡಿದರೆ ಹೇಗೆ? ಇದು ಉದ್ದೇಶಪೂರ್ವಕವಾಗಿ ಮಾಡಿರುವುದಲ್ಲ. ನನಗೂ ಸಂಚಾರಿ ವಿಜಯ್ ಆತ್ಮೀಯ ಸ್ನೇಹಿತನೇ. ರಾಷ್ಟ್ರ ಪ್ರಶಸ್ತಿ ಸಿಕ್ಕ ತಕ್ಷಣ ಸಂಚಾರಿ ವಿಜಯ್ ಅವರನ್ನು ಕರೆದು ಮೊದಲು ಸನ್ಮಾನ ಮಾಡಿದ್ದು ನಾವೇ... ಅವರ ಅಗಲಿಕೆಯಿಂದ ನಮಗೂ ನೋವಾಗಿದೆ. ಆದರೆ ಸುಮ್ಮನೆ ವಿವಾದ ಮಾಡುವುದರಲ್ಲಿ ಅರ್ಥವಿಲ್ಲ' ಎಂದು ಸ್ಪಷ್ಟನೆ ನೀಡುತ್ತಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎಂಎನ್ ಸುರೇಶ್.
Published by:Kavya V
First published: