ಕಾಂತಾರ ಸಿನಿಮಾ (Kantara Movie) ನೋಡಿದವರು ನಟ ಕಿಶೋರ್ ಪಾತ್ರ ಮರೆಯುವುದಿಲ್ಲ. ಕಾಂತಾರ ಸಿನಿಮಾ ಮೂಲಕ ಕಿಶೋರ್ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ. ಕನ್ನಡ ಅಷ್ಟೇ ಅಲ್ಲ ಇತರ ಭಾಷೆಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಿಶೋರ್ (Kishore) ಬ್ಯುಸಿ ಆಗಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ (Social Media) ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯ ವಿಷಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸುತ್ತಾರೆ. ಆದ್ರೆ ಇತ್ತೀಚಿಗೆ ಅವರ ಟ್ವಿಟರ್ ಅಕೌಂಟ್ (Twitter Account) ಸಸ್ಪೆಂಡ್ ಸುದ್ದಿ ಸಖತ್ ಸದ್ದು ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ.
ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಲು ಕಾರಣ ಏನು?
ನಟ ಕಿಶೋರ್ ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಲು ಅವರು ಮಾಡಿದ ದೈವದ ಕುರಿತ ಪೋಸ್ಟ್ ಎಂದು ಸುದ್ದಿ ಹಬ್ಬಿತ್ತು. ಈ ಬಗ್ಗೆ ಸ್ವತಃ ಕಿಶೋರ್ ಅವರೇ ಈಗ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಅವರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಪೋಸ್ಟ್ ಗಳಿಂದ ನನ್ನ ಖಾತೆಯನ್ನು ಸಸ್ಪೆಂಡ್ ಮಾಡಿಲ್ಲ ಬದಲಿಗೆ ನನ್ನ ಟ್ವಿಟರ್ ಖಾತೆ ಮೇಲೆ ಹ್ಯಾಕರ್ಗಳ ಕಣ್ಣು ಬಿದ್ದಿದೆ ಎಂದು ಹೇಳಿದ್ದಾರೆ. ಅಕೌಂಟ್ ಸಸ್ಪೆಂಡ್ ಆಗಲು ಇದು ಮುಖ್ಯ ಕಾರಣ ಎಂದು ಅವರು ತಿಳಿಸಿದ್ದಾರೆ.
ದೈವದ ಬಗ್ಗೆ ಪೊಸ್ಟ್ ಮಾಡಿದ್ದಕ್ಕೆ ಸಸ್ಪೆಂಡ್ ಮಾಡಿಲ್ಲ
ದೈವಕ್ಕೆ ಅಪಮಾನ ಮಾಡಿದ ಯುವಕನೊಬ್ಬ ರಕ್ತಕಾರಿ ಸತ್ತಿದ್ದಾನೆ ಎಂಬ ಸುದ್ದಿಗೆ ಕಿಶೋರ್ ಅವರು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು. ಆದ್ದರಿಂದ ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಎಂದೇ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಅದು ನಿಜವಲ್ಲ ಎಂದು ಕಿಶೋರ್ ಈಗ ಪ್ರತಿಕ್ರಿಯಿಸಿದ್ದಾರೆ.
ನಟ ಕಿಶೋರ್ ಪೋಸ್ಟ್
ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೆ. ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು ನನ್ನ ಯಾವ ಪೋಸ್ಟಿನಿಂದಲೂ ಅಲ್ಲ. ಡಿಸೆಂಬರ್ 20ನೇ ತಾರೀಕು 2022ರಂದು ಹ್ಯಾಕ್ ಮಾಡಲಾಗಿದ್ದರಿಂದ ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಕಿಶೋರ್ ಈಗ ಪೋಸ್ಟ್ ಮಾಡಿದ್ದಾರೆ.
ದೈವದ ಬಗ್ಗೆ ನಟ ಕಿಶೋರ್ ಮಾತು
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್
ಇತ್ತೀಚೆಗಷ್ಟೇ ಕಾಂತಾರ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸತ್ತ ಅನ್ನೋ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿರುವ ಕಿಶೋರ್ ಅವರು, ನಂಬಿಕೆ ಇರಲಿ ಮೂಢನಂಬಿಕೆ ಬೇಡ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕೊಲ್ಲುವ ದೈವಕ್ಕೆ ಮನಃಪರಿವರ್ತನೆ ಮಾಡುವ ಶಕ್ತಿ ಇಲ್ವಾ!?
ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೋ ವಾಟ್ಸ್ಆ್ಯಪ್ನಲ್ಲಿ ವೈರಲ್ ಆಗಿದೆ. ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೋ, ದೆವ್ವವೋ ಒಂದು ಸಾಧನವಷ್ಟೆ. ಸಿನಿಮಾವಾಗಲಿ ಪುರಾಣವಾಗಲಿ’ ಎಂದು ಬರಹ ಕಿಶೋರ್ ಬರೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕಾಂತಾರದಲ್ಲಿ ಫಾರೆಸ್ಟ್ ಆಫೀಸರ್ ಆಗಿ ಮಿಂಚಿದ್ದ ನಟ
ಕಿಶೋರ್ ಅವರು ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಸಖತ್ತಾಗಿ ಮಿಂಚಿದ್ದರು. ಅವರ ಖಡಕ್ ಲುಕ್, ಕೊನೆಗೆ ಮನಸು ಬದಲಾಗುವ ರೀತಿ ಎಲ್ಲವೂ ಸುಂದರವಾಗಿ ಮೂಡಿಬಂದಿದೆ. ನ್ಯಾಯದ ಪರವಾಗಿ ನಿಲ್ಲುವ ದಕ್ಷ ಅಧಿಕಾರಿಯಾಗಿ ತಮ್ಮ ಪಾತ್ರಕ್ಕೆ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ