ಬೆಂಗಳೂರು(ಆ.26): ಹಿರಿಯ ನಟ ದೊಡ್ಡಣ್ಣನವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಬೆಳಗ್ಗೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾವುದೇ ತೊಂದರೆ ಇಲ್ಲ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭಿಸಿದೆ. ನಟ ದೊಡ್ಡಣ್ಣ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಸೂಕ್ತ ಚಿಕಿತ್ಸೆ ಪಡೆಯಲು ಬುಧವಾರ ಬೆಳಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೃದಯ ಬಡಿತ ದರ(ಹಾರ್ಟ್ ಬೀಟ್ ರೇಟ್) ಕಡಿಮೆಯಾದ ಹಿನ್ನೆಲೆ, ನಟ ದೊಡ್ಡಣ್ಣಗೆ ಹಾರ್ಟ್ ಪೇಸ್ ಮೇಕರ್ ಚಿಕತ್ಸೆ ಮಾಡಲಾಗುತ್ತಿದೆ. ಇನ್ನೂ ಮೂರು ದಿನಗಳ ಕಾಲ ಚಿಕಿತ್ಸೆ ಮುಂದುವರಿಯಲಿದೆ. ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಜಯದೇವ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:Actor Doddana: ಹಿರಿಯ ನಟ ದೊಡ್ಡಣ್ಣಗೆ ಅನಾರೋಗ್ಯ; ಇನ್ನೂ 3 ದಿನ ಚಿಕಿತ್ಸೆ ಮುಂದುವರಿಕೆ
ನಟ ದೊಡ್ಡಣ್ಣವರ ಆರೋಗ್ಯ ಕುರಿತಾಗಿ ನ್ಯೂಸ್ 18 ಕನ್ನಡ ವಾಹಿನಿಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಎಂಡಿ ಡಾ.ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ‘‘ದೊಡ್ಡಣ್ಣ ಅವರ ಹೃದಯ ಬಡಿತದಲ್ಲಿ ಏರುಪೇರಾಗುತ್ತಿತ್ತು. ಹೃದಯ ಬಡಿತ 70ರಿಂದ 80ರ ಬದಲಾಗಿ 20-30ಕ್ಕೆ ಇಳಿದು ಬಿಡುತ್ತಿತ್ತು. ಹೀಗಾಗಿ ಅವರ ಹೃದಯಕ್ಕೆ ಪೇಸ್ ಮೇಕರ್ ಅಳವಡಿಸಿದ್ದೇವೆ. ಅವರು ಚಿಕಿತ್ಸೆಗೆ ಸ್ಪಂದಿಸಿ, ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಮೂರು ದಿನ ಚಿಕಿತ್ಸೆ ಮುಂದುವರೆಯಲಿದೆ. ಇದೇ ಭಾನುವಾರ ಅವರನ್ನು ಡಿಸ್ಚಾರ್ಜ್ ಮಾಡಲಿದ್ದೇವೆ’’ ಎಂದು ಹೇಳಿದರು.
ಈ ಹಿಂದೆ ನಟ ದೊಡ್ಡಣ್ಣ ಬಗ್ಗೆ ಅನೇಕ ಊಹಾಪೋಹಾಗಳು ಹಬ್ಬಿದ್ದವು. ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಕೆಲವು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದರು.
ಈ ಎಲ್ಲಾ ವದಂತಿಗಳಿಗೆ ನಟ ದೊಡ್ಡಣ್ಣ ತೆರೆ ಎಳೆದಿದ್ದರು. ನಾನು ಎಲ್ಲರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನನ್ನ ಸಾವಿನ ಸುದ್ದಿ ಸುಳ್ಳು. ಇಂತಹ ಊಹಾಪೋಹಗಳನ್ನು ದಯವಿಟ್ಟು ಯಾರೂ ಹಬ್ಬಿಸಬೇಡಿ. ಬದುಕುವವರನ್ನು ಬದುಕಲು ಬಿಡಿ ಎಂದು ಮನವಿ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ