news18-kannada Updated:February 22, 2021, 3:32 PM IST
ಧ್ರುವ ಸರ್ಜಾ
ಪೊಗರು... ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿರುವ ಸಿನಿಮಾ. ಕಳೆದ ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಕಲೆಕ್ಷನ್ ವಿಷಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಪೊಗರು ಚಿತ್ರದ ಆಟಕ್ಕೆ ವಿವಾದವೊಂದು ಬ್ರೇಕ್ ಹಾಕುವ ಆತಂಕ ಎದುರಾಗಿದೆ. ಹೌದು, ಪೊಗರು ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರ ಮೊದಲ ದಿನ 10.25 ಕೋಟಿ, ಎರಡನೇ ದಿನ 10.75 ಕೋಟಿ ಸೇರಿದಂತೆ ಎರಡು ದಿನಗಳಲ್ಲಿ ಬರೋಬ್ಬರಿ 21 ಕೋಟಿ ಕಲೆಕ್ಷನ್ ಮಾಡಿಕೊಂಡಿದ್ದು, ಭಾನುವಾರವೂ ಭರ್ಜರಿ ಬಾಕ್ಸಾಫಿಸ್ನಲ್ಲಿ ಲೂಟಿ ಹೊಡೆದಿದೆ. ಹೀಗೆ ಮೊದಲ ವಾರಾಂತ್ಯದ ಮೂರು ದಿನಗಳಲ್ಲೇ ಬರೋಬ್ಬರಿ 30 ಕೋಟಿ ರೂಪಾಯಿ ಗಳಿಕೆ ದಾಟಿದೆ. ಅದರ ನಡುವೆಯೇ ಪೊಗರು ಚಿತ್ರದ ವಿರುದ್ಧ ಬ್ರಾಹ್ಮಣ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿಂದೆಯೂ ಸಹ ಸಿನಿಮಾದ ಖರಾಬು ಹಾಡು ರಿಲೀಸ್ ಆಗಿದ್ದಾಗಲೂ ಮಹಿಳಾ ಸಂಘನೆಗಳು ಈ ಚಿತ್ರದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಪೊಗರು ಚಿತ್ರದಲ್ಲಿ ಹೋಮ ಮಾಡುತ್ತಿದ್ದ ಪುರೋಹಿತನ ಹೆಗಲ ಮೇಲೆ ಶೂ ಧರಿಸಿರುವ ಕಾಲನ್ನು ಇಡುವ ದೃಶ್ಯವಿದ್ದು, ಹಾಗೆಯೇ ಕೆಲ ಪುರೋಹಿತರನ್ನು ಜೆಸಿಬಿಗೆ ನೇತು ಹಾಕುವ ಸೀನ್ಗಳಿವೆ. ಮಾತ್ರವಲ್ಲ ಬ್ರಾಹ್ಮಣ, ಪುರೋಹಿತ ಹಾಗೂ ಅರ್ಚಕರನ್ನು ಅವಹೇಳನ ಮಾಡುವ ಕೆಲ ಡೈಲಾಗ್ಗಳೂ ಇವೆ. ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಆ ಸೀನ್ಗಳನ್ನು ತೆಗೆಯಬೇಕು ಹಾಗೂ ಡೈಲಾಗ್ಗಳನ್ನು ಮ್ಯೂಟ್ ಮಾಡಬೇಕು ಎಂದು ತಾಕೀತು ಮಾಡಿದೆ.

ಪೊಗರು ಸಿನಿಮಾದಲ್ಲಿ ಧ್ರವ ಸರ್ಜಾ
ಈ ಕುರಿತು ಇದೇ ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮನವಿ ಸಲ್ಲಿಸುವುದಾಗಿ ತಿಳಿಸಿರುವ ಅವರು, ಹಾಗೇನಾದರೂ ಚಿತ್ರತಂಡ ಎಚ್ಚೆತ್ತುಕೊಳ್ಳದಿದ್ದಲ್ಲಿ, ಬುಧವಾರ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆಯನ್ನೂ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ನೀಡಿದ್ದಾರೆ.
ಅಖಿಲ ಕರ್ನಾಟಕ ಮಧ್ವಮಹಾಸಭಾ ಅಸಮಾಧಾನ!
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಜೊತೆಗೆ ಅಖಿಲ ಕರ್ನಾಟಕ ಮಧ್ವ ಮಹಾಸಭಾ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಅಖಿಲ ಕರ್ನಾಟಕ ಮಧ್ವಮಹಾಸಭಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಪಂ. ಶ್ರೀ. ಪ್ರಸನ್ನಚಾರ್ಯ ಕಟ್ಟಿ, ಪೊಗರು ಸಿನಿಮಾದ ಸೀನ್ಗಳನ್ನು ಕಟ್ ಮಾಡುವುದರ ಜೊತೆಗೆ ಮುಂದೆ ಸಿನಿಮಾಗಳಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ, ವಿವಿಧ ಸಮುದಾಯಗಳನ್ನು ಅವಹೇಳನ ಮಾಡುವ ಸನ್ನಿವೇಶಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸೆನ್ಸಾರ್ ಮಂಡಳಿಯವರೂ ವಿಶೇಷ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ಪೊಗರು ಚಿತ್ರದ ಅವಹೇಳನಕಾರಿ ದೃಶ್ಯದ ಬಗ್ಗೆ ಈಗಾಗಲೇ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಚ್. ಸಚ್ಚಿದಾನಂದಮೂರ್ತಿ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಬಳಿಯೂ ಮಾತನಾಡಿರುವುದಾಗಿ ಹೇಳಿದ್ದಾರೆ
Published by:
Anitha E
First published:
February 22, 2021, 3:27 PM IST