Dali Dananjay : ಲೂಸ್ಮಾದ ಯೋಗೀಶ್ ಸ್ವಲ್ಪ ಬ್ರೆಕ್ ನಂತರ ಚಿತ್ರರಂಗಕ್ಕೆ ಮರಳಿದ್ದು, ಅವರ ನಟನೆಯ ‘ಲಂಕೆ’ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ನಟ ಡಾಲಿ ಧನಂಜಯ್ ಮುಖ್ಯ ಅತಿಥಿಯಾಗಿ ಆಗಮಿಸಿ ಆಡಿಯೋ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಇನ್ನು ಯೋಗಿ ನನ್ನ ಸ್ನೇಹಿತ. ಸ್ನೇಹಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ನಾನು ಹಾಗೂ ಯೋಗಿ 'ಹೆಡ್ ಬುಷ್' ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದೇವೆ. ಸರ್ಕಾರ ಆದಷ್ಟು ಬೇಗ ಶೇ.100 ಆಸನ ಭರ್ತಿಗೆ ಅವಕಾಶ ನೀಡಲಿ. ಕೊರೊನಾ ಕಡಿಮೆಯಾಗಿ ಚಿತ್ರಮಂದಿರ ತುಂಬುವ ದಿನಗಳು ಬೇಗ ಬರಲಿ ಎಂದು ಧನಂಜಯ್ ಹಾರೈಸಿದ್ದಾರೆ.
ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಕೃಷಿ ತಾಪಂಡ, ಎಸ್ತಾರ್ ನರೋನ್ಹ, ಕಾವ್ಯ ಶೆಟ್ಟಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ರಾಮ್ ಪ್ರಸಾದ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಲೂಸ್ ಮಾದ ಯೋಗೀಶ್, ಆಡಿಯೋ ರಿಲೀಸ್ ಮಾಡಿಕೊಟ್ಟ ಗೆಳೆಯ ಡಾಲಿ ಧನಂಜಯ ಅವರಿಗೆ ಧನ್ಯವಾದ. ನಾನು ಈ ಚಿತ್ರದಲ್ಲಿ ಇಷ್ಟು ಚೆನ್ನಾಗಿ ನೃತ್ಯ ಮಾಡಲು ಸಾಧ್ಯವಾಗಿದ್ದು ನೃತ್ಯ ನಿರ್ದೇಶಕ ಧನು ಅವರಿಂದಲೇ ಎಂದಿದ್ದಾರೆ.
ಟಿ.ಎಸ್. ನಾಗಾಭರಣ ಅವರ ನಿರ್ದೇಶನದ 'ನೀಲ' ಹಾಗೂ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರೊಂದಿಗೆ 'ಸ್ವಾಮಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ, ಗಾಯತ್ರಿ ಜಯರಾಮ್ ಈ ಚಿತ್ರದಲ್ಲಿಸಹ ನಟಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಂಬಾ ದಿನಗಳ ನಂತರ ನಟನೆ ಮಾಡುತ್ತಿದ್ದೇನೆ. ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಸಿನಿಮಾ ರಂಗವನ್ನು ಬೆಚ್ಚಿಬೀಳಿಸಿದ 9 ವಿವಾದಾತ್ಮಕ ಫೋಟೋಗಳಿವು!
ನಾಯಕಿ ಕೃಷಿ ತಾಪಂಡ ಮಾತನಾಡಿ, 'ಚಿತ್ರದ ಹಾಡುಗಳನ್ನು ಕೇಳಿದೆ. ಈಗ ನೋಡಿ ಖುಷಿಯಾಗಿದೆ. ನನಗೆ ಡ್ಯಾನ್ಸ್ ಮಾಡಲು ಬರುವುದಿಲ್ಲ, ಧನು ಮಾಸ್ಟರ್ ಚನ್ನಾಗಿ ಹೇಳಿಕೊಟ್ಟಿದ್ದಾರೆ ಎಂದರು.
ಈ ಚಿತ್ರಕ್ಕೆ ರಾಮಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಬಗ್ಗೆ ಇಲ್ಲಿಯವರೆಗೆ ಸಾಕಷ್ಟು ಮಾಹಿತಿ ನೀಡಿದ್ದೀನಿ. ಇನ್ನೂ ಏನಿದ್ದರೂ ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿ, ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡಿದ್ದಾರೆ.
ದಿ ಗ್ರೇಟ್ ಎಂಟರ್ ಟೈನರ್ ಸಂಸ್ಥೆಯ ಪಟೇಲ್ ಶ್ರೀನಿವಾಸ್ ಹಾಗೂ ಸುರೇಖಾ ರಾಮಪ್ರಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಮಾಡಿದ್ದು, ಇದು ಬಹು ತಾರಂಗಣದ ಚಿತ್ರವಾಗಿದೆ. ಈ ಚಿತ್ರದ ಇನ್ನೊಂದು ವಿಶೇಷತೆ ಎಂದರೆ ಇತ್ತೀಚೆಗಷ್ಟೇ ಅಪಘಾತದಲ್ಲಿ ನಿಧನರಾದ, ಸಂಚಾರಿ ವಿಜಯ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ಹಿರಿಯ ಶರತ್ ಲೋಹಿತಾಶ್ವ, ಶೋಭರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್ ಸೇರಿದಂತೆ ಅದ್ಭುತ ನಟ ನಟಿಯರ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ