55ರ ಹರೆಯದಲ್ಲೂ ಆ್ಯಕ್ಷನ್ ಚಿತ್ರಗಳಲ್ಲಿ ಮಿಂಚುತ್ತಿರುವ ಅಕ್ಷಯ್ ಕುಮಾರ್ (Akshay Kumar) ಅಭಿಮಾನಿಗಳ ಮೋಸ್ಟ್ ಫೇವರೇಟ್ ಹೀರೋ ಕೂಡ ಹೌದು. ತಮ್ಮ ವರ್ಕೌಟ್, ಫಿಟ್ನೆಸ್ ಬಗ್ಗೆ ಇನ್ಸ್ಟಾದಲ್ಲಿ ಆಗಾಗ್ಗೆ ಮಾಹಿತಿ ಹಂಚಿಕೊಳ್ಳುವ ಅಕ್ಷಯ್ ಪಕ್ಕಾ ಫ್ಯಾಮಿಲಿ ಮ್ಯಾನ್ (Family Man) ಎಂದೇ ಕರೆಯಿಸಿಕೊಂಡವರು. ಅಕ್ಷಯ್ ಇದೀಗ ನಿರ್ಮಾಪಕ-ನಿರ್ದೇಶಕ ಆನಂದ್ ಎಲ್ ರೈ ಸಹಭಾಗಿತ್ವದಲ್ಲಿ ಆ್ಯಕ್ಷನ್ ಚಿತ್ರವೊಂದರಲ್ಲಿ ನಟಿಸಲಿದ್ದು, ಗೋರ್ಖಾ (Gorkha ) ಚಿತ್ರ ಅಪ್ರತಿಮ ಯೋಧ ಮೇಜರ್ ಜನರಲ್ ಇಯಾನ್ ಕಾರ್ಡೋಜೊ ಜೀವನ ಚರಿತ್ರೆಯನ್ನು ಆಧರಿಸಿದೆ ಎನ್ನಲಾಗಿದೆ.
ಆನಂದ್ ಎಲ್ ರೈ ಹಾಗೂ ಅಕ್ಷಯ್ ಕಾಂಬಿನೇಶನ್ನಲ್ಲಿ ಹೊಸ ಚಿತ್ರವೊಂದು ಮೂಡಿಬರಲಿದೆ ಎಂದು 2021ರ ದಸರಾ ಸಂದರ್ಭದಲ್ಲಿಯೇ ಸ್ವತಃ ಭೂಲ್ ಭುಲಯ್ಯಾ ನಟ ಘೋಷಿಸಿದ್ದರು. ಇದೀಗ ಅನೇಕ ವದಂತಿಗೆ ನಿರ್ದೇಶಕರು ತೆರೆ ಎಳೆದಿದ್ದಾರೆ
ಜನರಲ್ ಇಯಾನ್ ಜೀವನ ಚರಿತ್ರೆ
ಜನರಲ್ ಇಯಾನ್ ಭಾರತೀಯ ಸೇನೆಯ ಗೋರ್ಖಾ ರೆಜಿಮೆಂಟ್ನ ಯುದ್ಧ ವೀರ ಎಂದೇ ಖ್ಯಾತಿ ಪಡೆದುಕೊಂಡವರು ಹಾಗೂ ಅಂಗವಿಕಲನಾಗಿದ್ದುಕೊಂಡೇ ಭಾರತೀಯ ಸೇನೆಯನ್ನು ಮುನ್ನಡೆಸಿದ ಅಧಿಕಾರಿ ಎಂಬ ಮನ್ನಣೆಗೆ ಪಾತ್ರರಾಗಿದ್ದರು.
ಫಸ್ಟ್ ಲುಕ್ನಲ್ಲಿ ಮಿಂಚಿರುವ ಅಕ್ಷಯ್
ಜನರಲ್ ಇಯಾನ್ ಆಗಿ ಕಾಣಿಸಿಕೊಳ್ಳಲಿರುವ ಅಕ್ಷಯ್ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪೋಸ್ಟರ್ಗಳಲ್ಲಿ ಧೀರೋದಾತ್ತ ನಾಯಕನಾಗಿ ಮಿಂಚಿದ್ದಾರೆ. ಯುದ್ಧಕ್ಕೆ ತೆರಳಲು ಸಜ್ಜಾಗಿರುವ ಶತ್ರುಗಳೊಂದಿಗೆ ಕಾದಾಡಲಿರುವ ಒಬ್ಬ ಉಗ್ರ ಯೋಧನಂತೆ ಪೋಸ್ಟರ್ಗಳಲ್ಲಿ ಬಿಂಬಿತವಾಗಿದ್ದಾರೆ.
ಚಿತ್ರೀಕರಣದಿಂದ ಅಕ್ಕಿ ಹೊರನಡೆದಿದ್ದಾರೆಯೇ?
ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ ಕಾರಣಾಂತರಗಳಿಂದ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದ್ದು ಅಕ್ಷಯ್ ಚಿತ್ರೀಕರಣದಿಂದ ಹೊರನಡೆದಿದ್ದಾರೆ ಎಂಬ ಗುಮಾನಿ ಕೂಡ ಕೇಳಿಬರುತ್ತಿದೆ. ಇದೀಗ ಆನಂದ್ ಎಲ್ ಸ್ಪಷ್ಟೀಕರಣ ನೀಡಿದ್ದು ಚಿತ್ರ ನಿರ್ಮಾಣಗೊಳ್ಳಲಿದ್ದು ತನ್ನ ಚಿತ್ರದಲ್ಲಿ ಅಕ್ಷಯ್ ಕುಮಾರ್ ಲೀಡ್ ರೋಲ್ನಲ್ಲಿ ಮಿಂಚಲಿದ್ದಾರೆ ಎಂದು ತಿಳಿಸಿದ್ದಾರೆ.
ತಾಂತ್ರಿಕ ಸಮಸ್ಯೆಗಳಿಂದ ಚಿತ್ರೀಕರಣ ಮುಂದೂಡಿರುವ ಆನಂದ್ ಎಲ್ ರೈ
ಇದೀಗ ಗೋರ್ಖಾ ಚಿತ್ರದ ನಿರ್ಮಾಪಕ ಆನಂದ್ ಎಲ್ ರೈ ಚಿತ್ರವನ್ನು ಕೆಲವೊಂದು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದೆ ಎಂದು ಖಚಿತಪಡಿಸಿದ್ದಾರೆ. ಸಿನಿಮಾ ನಿರ್ಮಾಣಕ್ಕೂ ಮುನ್ನ ಕೆಲವೊಂದು ತಾಂತ್ರಿಕ ಅಂಶಗಳತ್ತ ಗಮನರಿಸಬೇಕಾಗಿದೆ. ಚಿತ್ರದ ವಾಸ್ತವಿಕ ವಿವರಗಳ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಬೇಕಾಗಿದೆ. ಹಾಗಾಗಿ ಇದೆಲ್ಲವನ್ನೂ ನಡೆಸಲು ಕೊಂಚ ಕಾಲಾವಕಾಶ ಬೇಕು ಮತ್ತು ಈ ಸಮಯದಲ್ಲಿ ಆತುರದಿಂದ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬುದು ಆನಂದ್ ರೈ ಮಾತಾಗಿದೆ.
ಚಿತ್ರದಿಂದ ಅಕ್ಷಯ್ ಹೊರನಡೆದಿಲ್ಲ ಆನಂದ್ ಹೇಳಿಕೆ
ಅಕ್ಷಯ್ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ವರದಿ ನಿಜವಲ್ಲ ಎಂದು ತಿಳಿಸಿರುವ ಆನಂದ್ ಸದ್ಯಕ್ಕೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಚಿತ್ರವನ್ನು ಮುಂದೂಡಲಾಗಿದೆ ಎಂಬ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಮೂಲಗಳ ಪ್ರಕಾರ ಸಿನಿಮಾದಲ್ಲಿ ಜನರಲ್ ಕಾರ್ಡೊಜೊ ಪಾತ್ರ ಮಾಡಲಿರುವ ಅಕ್ಷಯ್ಗೆ ಚಿತ್ರಕಥೆಯ ಬಗ್ಗೆ ಕೆಲವೊಂದು ಸಂದೇಹಗಳು ವ್ಯಕ್ತವಾಗಿವೆ ಎನ್ನಲಾಗಿದೆ. ಅದೂ ಅಲ್ಲದೆ ಚಿತ್ರವು ಹಲವಾರು ವಿವಾದಗಳನ್ನು ಹುಟ್ಟುಹಾಕಿದೆ ಎಂಬ ಸುದ್ದಿ ಕೂಡ ದೊರೆತಿದೆ. ಹೀಗಾಗಿ ಅಕ್ಷಯ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಸುದ್ದಿ ಬಾಲಿವುಡ್ನಲ್ಲಿ ಹಬ್ಬಿದೆ.
ಸೇನಾ ಅಧಿಕಾರಿಯ ಸೂಚನೆ ಪಾಲಿಸಿದ ಅಕ್ಷಯ್
ಅಕ್ಷಯ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಾಗ ನಿವೃತ್ತಾ ಸೇನಾ ಅಧಿಕಾರಿ ಪೋಸ್ಟರ್ನಲ್ಲಿನ ದೋಷವನ್ನು ಗುರುತಿಸಿ ಅಕ್ಷಯ್ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಅಕ್ಷಯ್ ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದ ಖುಕ್ರಿಯ ತೀಕ್ಷ್ಣ ಅಂಚು ಇನ್ನೊಂದು ಬದಿಯಲ್ಲಿದೆ ಅದನ್ನು ಸರಿಯಾಗಿ ಹಿಡಿದುಕೊಳ್ಳುವಂತೆ ಸೂಚಿಸಿದ್ದರು. ಇದು ಕತ್ತಿಯಲ್ಲ ಎಂದು ತಿಳಿಸಿರುವ ಮಾಜಿ ಅಧಿಕಾರಿ, ಆಯುಧದ ಒಳಭಾಗದಲ್ಲಿರುವ ಬ್ಲೇಡ್ನಿಂದ ಖುಕ್ರಿ ದಾಳಿಮಾಡುತ್ತದೆ ಎಂದು ಆಯುಧದ ಮಾಹಿತಿ ನೀಡಿದ್ದರು.
ಅಧಿಕಾರಿಗೆ ಪ್ರತಿಕ್ರಿಯೆ ನೀಡಿದ್ದ ಅಕ್ಷಯ್
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಕ್ಷಯ್ ಅಧಿಕಾರಿಗೆ ಧನ್ಯವಾದ ತಿಳಿಸಿದ್ದರು ಹಾಗೂ ಚಿತ್ರೀಕರಣದ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸುವುದಾಗಿ ಭರವಸೆ ನೀಡಿದ್ದರು. ಗೋರ್ಖಾದಲ್ಲಿ ಪಾತ್ರ ಮಾಡುವುದೇ ನನ್ನ ಸುಕೃತ ಎಂದು ಬರೆದುಕೊಂಡಿರುವ ಅಕ್ಷಯ್, ನಿಮ್ಮಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲು ನಾನು ಸಿದ್ಧ ಎಂದು ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ