ಸದ್ಯ ಸ್ಯಾಂಡಲ್ವುಡ್ನಲ್ಲಿ (Sandalwood) ಎಲ್ಲಿ ನೋಡಿದರೂ ಚಾರ್ಲಿ ಹವಾ, 777 ಚಾರ್ಲಿ (777 Charlie) ಯಾವ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದೆ ಎಂದರೆ ಎಲ್ಲರ ಸ್ಟೇಟಸ್ಗಳಲ್ಲಿ ಕೂಡ ಚಾರ್ಲಿ, ಕೆಲವು ಕಡೆ ನಾಯಿಗೆ ಚಾರ್ಲಿ ಎಂದು ನಾಮಕರಣ ಮಾಡಲಾಗಿದೆ. ಒಟ್ಟಾರೆಯಾಗಿ ಚಾರ್ಲಿ ಮೇನಿಯಾ ಎನ್ನಬಹುದು. ಈ ಅದ್ಭುತ ಚಿತ್ರ (Movie) ತಯಾರಾಗಲು ಸರಿ ಸುಮಾರು ಮೂರು ವರ್ಷಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದೆ. ಚಿತ್ರತಂಡದ ಪರಿಶ್ರಮ ಈ ಚಿತ್ರವನ್ನು ಈ ರೀತಿ ಸಕ್ಸಸ್ ಆಗಲು ಕಾರಣವಾಗಿದೆ. ಇದೀಗ ಈ ಚಿತ್ರ ಸಕ್ಸಸ್ ಆಗುತ್ತಿರುವಂತೆ, ಸಿನಿಮಾದ ಹಿಂದಿ ರಿಮೇಕ್ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಹೌದು, ಈ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಬೇಡಿಕೆ ಹೆಚ್ಚಾಗಿದೆಯಂತೆ.
ಹಿಂದಿಗೆ ರಿಮೇಕ್ ಆಗುತ್ತಾ 777 ಚಾರ್ಲಿ
ಪ್ಯಾನ್ ಇಂಡಿಯಾ ಚಿತ್ರವಾಗಿರುವ ಚಾರ್ಲಿ, ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದೆ. ಎಲ್ಲ ಕಡೆ ಸಹ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಹಾಗಾಗಿ ಈಗ ಈ ಸಿನಿಮಾದ ಹಿಂದಿ ರಿಮೇಕ್ ಮಾಡುವಂತೆ ಬೇಡಿಕೆ ಕೇಳಿ ಬಂದಿದೆ. ಆದರೆ ಸದ್ಯ ಹುಟ್ಟಿಕೊಂಡಿರುವ ಪ್ರಶ್ನೆ ಎಂದರೆ ಈಗಾಗಲೇ ಚಾರ್ಲಿ ಸಿನಿಮಾ ಹಿಂದಿಯಲ್ಲಿ ಡಬ್ ಆಗಿದೆ. ಆದರೆ ರಿಮೇಕ್ ಏಕೆ ಎಂಬುದು. ಆದರೆ ಚಾರ್ಲಿ ಸಿನಿಮಾದ ರಿಮೇಕ್ ರೈಟ್ಸ್ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆಯಂತೆ.
ಇದನ್ನೂ ಓದಿ: ಸಮಂತಾ ಮೊದಲು ನಾಗ ಚೈತನ್ಯ ಇವರನ್ನು ಲವ್ ಮಾಡ್ತಿದ್ರಂತೆ, ಕಾಲೇಜ್ ಲವ್ ಸ್ಟೋರಿ ಬಿಚ್ಚಿಟ್ಟ ನಟ!
ಹೌದು ಸಿನಿಮಾ ಬಿಡುಗಡೆಯಾಗಿ ಸರಿ ಸುಮಾರು 3 ವಾರಗಳಾಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಕಲೆಕ್ಷನ್ ಕೂಡ ಒಳ್ಳೆಯ ರೀತಿಯಲ್ಲಿ ಆಗಿದೆ. ಈ ಸಿನಿಮಾ ನೋಡಿದ ಜನರು ಭಾವುಕರಾಗಿದ್ದಾರೆ. ಹಾಗಾಗಿ ಹಿಂದಿಯಲ್ಲಿ ರಿಮೇಕ್ ಮಾಡಲು ಸಿದ್ದತೆಯಾಗಿದ್ದು, ರಿಮೇಕ್ ರೈಟ್ಸ್ ಬಗ್ಗೆ ಸಹ ಚರ್ಚೆಯಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಾರ್ಲಿ ಸಿನಿಮಾ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ ಚಾರ್ಲಿ ಸಿನಿಮಾ ಸದ್ಯ 80 ಕೋಟಿ ಗಳಿಕೆ ಮಾಡಿದೆ. ಕೆಲವೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರುವ ಸನಿಹದಲ್ಲಿದ್ದು, ಎಲ್ಲೆಡೆ ಈ ಸಿನಿಮಾ ಬಗ್ಗೆ ಮಾತು ಕೇಳಿಬರುತ್ತಿದೆ. ಅಲ್ಲದೇ ಚಾರ್ಲಿ ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ಹೊಸ ದಾಖಲೆ ಬರೆಯಲು ಸಿದ್ದವಾಗಿದ್ದಾರೆ.
ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ ರಕ್ಷಿತ್
ಇನ್ನು ಚಾರ್ಲಿ ಸಿನಿಮಾದ ಸಕ್ಸಸ್ನಲ್ಲಿ ತೇಲುತ್ತಿರುವ ರಕ್ಷಿತ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರಂತೆ. ನಟನಾಗಿ ಮತ್ತು ನಿರ್ದೇಶಕನಾಗಿ ನಾನು ಮೂರು ವರ್ಷಗಳ ಕಾಲ ಬ್ಯುಸಿ ಇದ್ದೇನೆ. ನಾಲ್ಕು ವಿಭಿನ್ನ ಚಿತ್ರಗಳು ತಯಾರಿಕೆಯ ವಿವಿಧ ಹಂತಗಳಲ್ಲಿವೆ ಎಂದಿದ್ದಾರೆ. ಮೊದಲನೆಯದು ಅವರ ಹೋಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಶೂಟಿಂಗ್ ನಡಿಯುತ್ತಿದ್ದು, ನಂತರ ,ಈ ಡಿಸೆಂಬರ್ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಾನು ರಿಚರ್ಡ್ ಆಂಟನಿ ಸಿನಿಮಾ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದ್ದೇನೆ. ಸಪ್ತ ಸಾಗರದಾಚೆ ಎಲ್ಲೋ ಮುಗಿದ ತಕ್ಷಣ, ನನಗೆ ಎರಡು ಅಥವಾ ಮೂರು ತಿಂಗಳ ಪ್ರಿ-ಪ್ರೊಡಕ್ಷನ್ಗೆ ಸಮಯದ ಅಗತ್ಯವಿದೆ, ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಾರ್ಲಿಗೆ ಟ್ರೈನಿಂಗ್ ಕೊಟ್ಟ ಆ ದಿನಗಳು ಹೇಗಿತ್ತು ಗೊತ್ತಾ? ಘಾಟಿ ನಾಯಿಗೆ ಬುದ್ದಿ ಕಲಿಸೋಕೆ ಬಂದಿದ್ದರು ಸ್ಪೆಷಲ್ ಟ್ರೈನರ್!
ಈ ಸಿನಿಮಾಗಳ ಮಧ್ಯೆ ಬಹು ನಿರೀಕ್ಷಿತ ಕಿರಿಕ್ ಪಾರ್ಟಿಯ ಸೀಕ್ವೆಲ್ ಕೂಡ ಮಾಡುತ್ತಿದ್ದು, ನನಗೆ ಕಿರಿಕ್ ಪಾರ್ಟಿ 2 ಮಾಡುವ ಐಡಿಯಾ ಇದೆ ಮತ್ತು ಆ ಚಿತ್ರ ಹೇಗಿರುತ್ತದೆ ಎಂಬುದು ನನಗೆ ತಿಳಿದಿದೆ. ನನ್ನ ಪಾತ್ರದ ಪ್ರಯಾಣದ ಬಗ್ಗೆ ನನಗೆ ತಿಳಿದಿದೆ. ಮೊದಲ ಭಾಗದಂತೆಯೇ ಮುಂದಿನ ಭಾಗವು ತಮಾಷೆಯಾಗಿರಬೇಕು. ನಾವು ಎಲ್ಲವನ್ನೂ ಸ್ಕ್ರಿಪ್ಟ್ನಿಂದ ಆರಂಭಿಸಬೇಕು. ಮೊದಲಿನಿಂದ ಕೆಲಸವನ್ನು ಆರಂಭಿಸಿ, ಸಿದ್ದತೆಗಳನ್ನು ಮಾಡಿಕೊಂಡು ಸಿನಿಮಾ ಮಾಡಬೇಕು. ರಿಚರ್ಡ್ ಆಂಟನಿ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸವನ್ನು ನಾವು ಪ್ರಾರಂಭಿಸಿದ ನಂತರ ಇದನ್ನು ಪ್ರಾರಂಭಿಸುವ ಆಲೋಚನೆ ಇದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ