'ಗೋದ್ರಾ'ದಲ್ಲಿ ಸೌಂಡ್ ಮಾಡಲು 4ನೇ ಮ್ಯೂಸಿಕ್ ಡೈರೆಕ್ಟರ್ ಎಂಟ್ರಿ..!

ಜೇಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಸದ್ಯ ಗಾಂಧಿನಗರದಲ್ಲಿ ಗೋದ್ರಾ ಸದ್ದು ಮಾಡಲಾರಂಭಿಸಿದ್ದು, ನೀನಾಸಂ ಸತೀಶ್ ಖಾತೆಗೆ ಮತ್ತೊಂದು ಹಿಟ್ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

godra

godra

  • Share this:
'ಗೋದ್ರಾ'..ಸದ್ಯ ಸ್ಯಾಂಡಲ್​ವುಡ್​ ಭಾರೀ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ. ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಟೀಸರ್​ನಲ್ಲಿ 'ಹುಟ್ಟು ದರಿದ್ರ ಆಗಿದ್ರೂ ಸಾವು ಚರಿತ್ರೆ ಆಗ್ಬೇಕು'...ಈ ಖಡಕ್ ಡೈಲಾಗ್​ನೊಂದಿಗೆ ನಟ ನೀನಾಸಂ ಸತೀಶ್ ಮಿಂಚಿದ್ದರು. ಸದಾ ವಿಭಿನ್ನ ಸಿನಿಮಾಗಳನ್ನು ನೀಡುವ ಅಭಿನಯ ಚತುರ ಈ ಬಾರಿ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ಮೆಟ್ಟಿ ನಿಲ್ಲಲಿದ್ದಾರೆ ಎಂಬ ಮಾತುಗಳು  ಟೀಸರ್ ಬೆನ್ನಲ್ಲೇ ಕೇಳಿ ಬಂದಿತ್ತು.

ಇದೀಗ ಮತ್ತೊಮ್ಮೆ ಗ್ರೋದ್ರಾ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಚಿತ್ರದಲ್ಲಿ ಗಾನ ಬಜಾಯಿಸಲು ಎಂಟ್ರಿ ಕೊಟ್ಟಿರುವ ಸಂಗೀತ ನಿರ್ದೇಶಕ. ಹೌದು, ಗೋದ್ರಾ ಚಿತ್ರಕ್ಕೆ ನಾಲ್ಕನೇ ಮ್ಯೂಸಿಕ್ ಡೈರೆಕ್ಟರ್ ಎಂಟ್ರಿ ಕೊಟ್ಟಾಗಿದೆ. ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಒಬ್ಬರು ಸಂಗೀತ ನೀಡುವುದು ವಾಡಿಕೆ. ಇದರ ಹೊರತಾಗಿ ಇಬ್ಬರು, ಮೂವರು...ಏಳು ಮಂದಿ ಒಂದು ಸಿನಿಮಾಗೆ ಸಂಗೀತ ನೀಡಿರುವುದಕ್ಕೆ ಸ್ಯಾಂಡಲ್​ವುಡ್ ಸಾಕ್ಷಿಯಾಗಿದೆ. ಇದೀಗ ಇಂತಹದ್ದೇ ಒಂದು ಪ್ರಯೋಗವನ್ನು ಮಾಡಲು ಗೋದ್ರಾ ತಂಡ ಹೊರಟಿದೆ.

ಗೋದ್ರಾ ಚಿತ್ರ ಆರಂಭವಾಗಿದ್ದಾಗ ಜೂಡ್ ಸ್ಯಾಂಡಿ ಒಬ್ಬರೇ ಮ್ಯೂಸಿಕ್ ಡೈರೆಕ್ಟರ್ ಆಗಿದ್ದರು. ಅದಾದ ಮೇಲೆ ಮಾಸ್ ಹಾಡೊಂದಕ್ಕೆ ನವೀನ್ ಸಜ್ಜು ರಾಗ ಸಂಯೋಜಿಸಿ ಎಂಟ್ರಿ ಕೊಟ್ಟಿದ್ದರು. ಇದರ ಬೆನ್ನಲ್ಲೇ ಟೋನಿ ಜೋಸೆಫ್ ಒಂದಷ್ಟು ಟ್ಯೂನ್​ಗಳನ್ನು ಮಾಡಿ ಗೋದ್ರಾಗೆ ನೀಡಿದ್ದರು. ಇದೀಗ ಚಿತ್ರದ ಬ್ಯಾಕ್​ಗ್ರೌಂಡ್​ ಮ್ಯೂಸಿಕ್​ ಅನ್ನು ಮತ್ತಷ್ಟು ರಗಡ್​ ಆಗಿಸಲು ಕೆಪಿ ಅಲಿಯಾಸ್ ಕೃಷ್ಣ ಪ್ರಸಾದ್​ ಅವರನ್ನು ಕರೆ ತರಲಾಗಿದೆ.

'ಗೋದ್ರಾ ಚಿತ್ರವು ಪೊಲಿಟಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಇದರ ಹಿನ್ನೆಲೆ ಕೂಡ ರಾ ಆಗಿ ಮೂಡಿಬರಬೇಕು. ಅಂದರೆ ರಾಮ್ ಗೋಪಾಲ್ ವರ್ಮಾರ ಸರ್ಕಾರ್ ಮಾದರಿಯಲ್ಲಿರಬೇಕು ಎಂಬುದು ನಮ್ಮ ಪ್ಲ್ಯಾನ್. ಹೀಗಾಗಿ ಆ ಜವಾಬ್ದಾರಿಯನ್ನು ಕೆ.ಪಿ ಅವರಿಗೆ ವಹಿಸಿದ್ದೇವೆ' ಎಂದಿದ್ದಾರೆ ಚಿತ್ರದ ನಿರ್ದೇಶಕ ಕೆ.ಎಸ್. ನಂದೀಶ್.

ಇನ್ನು 'ಚಂಬಲ್' ಚಿತ್ರದಲ್ಲಿ ಪವರ್ ಫುಲ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದ ಸತೀಶ್ ಗೋದ್ರಾ ದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಬಣ್ಣ ಹಚ್ಚಿದ್ದಾರೆ. ಅಂದರೆ ಈ ಸಿನಿಮಾ ಸಾಮಾನ್ಯ ಪತ್ರಿಕೋದ್ಯಮದ ಸುತ್ತ ಸುತ್ತುವ ಕಥೆ ಹೊಂದಿರಲಿದೆಯೇ ಅಥವಾ ಹತ್ಯಾಕಾಂಡದ ಕಹಾನಿ ತಿಳಿಸಲಿದೆಯೇ ಎಂದು ಕೇಳಿದರೆ ಖಂಡಿತ ಇಲ್ಲ. ಏಕೆಂದರೆ ಇಲ್ಲಿ ಸತೀಶ್ ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದೇಳುವ ಹೋರಾಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.

"ಇಲ್ಲಿ ಬಲಾಢ್ಯ ಬದುಕಿ, ಬಡವ ಮಾತ್ರ ನಿತ್ಯ ಸಾಯ್ತನೆ ಅಂದರೆ ವ್ಯವಸ್ಥೆಯಲ್ಲಿ ದೋಷವಿರಬೇಕು". "ಫ್ರೀಡಂ ಯಾವಾಗಲೂ ಫ್ರಿಯಾಗಿ ಸಿಗಲ್ಲ ರಕ್ತ ಹರಿಸಬೇಕು..." ಇಂತಹ ಖಡಕ್ ಡೈಲಾಗ್​ಗಳ ಮೂಲಕ ಕಿಚ್ಚು ಹಚ್ಚಿರುವ ಗೋದ್ರಾ ಟೀಸರ್ ಪ್ರೇಕ್ಷಕರ​ ಮನ ಸೆಳೆಯುತ್ತಿದೆ.

ಗೋದ್ರಾದಲ್ಲಿ ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ, ಅಚ್ಯುತ್ ಕುಮಾರ್ ರಾಜಕಾರಣಿಯಾಗಿ, ವಸಿಷ್ಠ ಸಿಂಹ ವಿದ್ಯಾರ್ಥಿ/ಪೈಲೆಟ್ ಆಗಿ ಮಿಂಚಿದ್ದಾರೆ.

ಯುವ ನಿರ್ದೇಶಕ ಕೆ.ಎಸ್.ನಂದೀಶ್ ಈ ಬಹುನಿರೀಕ್ಷಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಚೊಚ್ಚಲ ಪ್ರಯತ್ನದ ಟೀಸರ್​ ಮೂಲಕ ಸಿನಿಪ್ರಿಯರನ್ನು ಸೆಳೆಯಲು ಯಶಸ್ವಿಯಾಗಿದ್ದಾರೆ. ಇನ್ನು ಜೇಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಸದ್ಯ ಗಾಂಧಿನಗರದಲ್ಲಿ ಗೋದ್ರಾ ಸದ್ದು ಮಾಡಲಾರಂಭಿಸಿದ್ದು, ನೀನಾಸಂ ಸತೀಶ್ ಖಾತೆಗೆ ಮತ್ತೊಂದು ಹಿಟ್ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
First published: