ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ (JEE Main Result) ಹೊರ ಬಿದ್ದಿದೆ. ಅಸ್ಸಾಂನ ಸ್ನೇಹಾ ಪರೀಖ್ (Sneha Pareekh) ಅವರು ಜೆಇಇ ಮೇನ್ 2022 ರಲ್ಲಿ ಫಸ್ಟ್ ಱಂಕ್ (Rank) ಪಡೆದಿದ್ದಾರೆ. ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಸ್ನೇಹಾ 300 ರಲ್ಲಿ 300 ಅಂಕಗಳನ್ನು ಪಡೆದಿದ್ದಾಳೆ. ಸೆಷನ್ 1 ಫಲಿತಾಂಶಗಳಲ್ಲಿ ಅಗ್ರಸ್ಥಾನ ಪಡೆದ ಏಕೈಕ ಯುವತಿಯಾಗಿದ್ದರಿಂದ ಸೆಷನ್ 2 ಪರೀಕ್ಷೆಗಳಿಗೆ ಹಾಜರಾಗಲಿಲ್ಲ. ಈಗ, ಐಐಟಿ ಪ್ರವೇಶಕ್ಕಾಗಿ ಜೆಇಇ ಅಡ್ವಾನ್ಸ್‌ಡ್‌ಗೆ ತಯಾರಿ ನಡೆಸುತ್ತಿರುವ 18 ವರ್ಷ ವಯಸ್ಸಿನ ಸ್ನೇಹ ತಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಹುಡುಗಿಯರು ತಮ್ಮನ್ನು ತಾವು ನಂಬಿದರೆ ಮಾತ್ರ ಯಾವುದೇ ಯಾವುದೇ ಸಾಧನೆಯನ್ನು ಮಾಡಬಹುದು ಎಂದು ಹೇಳಿದ್ದಾರೆ. ಜೆಇಇ ಮೇನ್‌ನಲ್ಲಿ 1 ರ ್ಯಾಂಕ್ ಪಡೆದ 24 ವಿದ್ಯಾರ್ಥಿಗಳ ಪೈಕಿ ಇಬ್ಬರು ಮಾತ್ರ ಯುವತಿಯರಿದ್ದಾರೆ.
ಈ ಕ್ಷೇತ್ರದಲ್ಲಿ ಯುವತಿಯರೇ ವಿರಳ
ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಕಡಿಮೆ ಮಹಿಳೆಯರು ತೇರ್ಗಡೆಯಾಗುತ್ತಿರುವ ಬಗ್ಗೆ ಮಾತನಾಡಿದ ಸ್ನೇಹಾ, ಕೋಚಿಂಗ್ ತರಗತಿಗಳಲ್ಲಿ ಕಡಿಮೆ ಹುಡುಗಿಯರಿದ್ದಾರೆ. ಇದು ಹುಡುಗಿಯರ ಸಾಮರ್ಥ್ಯದ ಬಗ್ಗೆ ಅಲ್ಲ. ಜೆಇಇಗೆ STEM ಮತ್ತು ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳುವ ಹುಡುಗಿಯರ ಸಂಖ್ಯೆಯು ಹುಡುಗರಂತೆಯೇ ಇದ್ದರೆ, ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚಿನ ಹುಡುಗಿಯರು ರ್ಯಾಂಕ್ ಪಡೆಯುವುದನ್ನು ನೀವು ನಿರೀಕ್ಷಿಸಬಹುದು. ಈ ಬಗ್ಗೆ ಸಲಹೆ ನೀಡಿದ ಸ್ನೇಹ, ಒಂದು ಹುಡುಗಿಗೆ ವಿಷಯದ ಬಗ್ಗೆ ಉತ್ಸಾಹವಿದ್ದರೆ , ಅವಳು ಅದನ್ನು ಅನುಸರಿಸಬೇಕು. ಇಂಜಿನಿಯರಿಂಗ್ ತರಗತಿಗಳು ಹುಡುಗರಿಂದ ತುಂಬಿರುವುದರಿಂದ ಅಥವಾ ಉದ್ಯೋಗಗಳು ಹೆಚ್ಚು ಪುರುಷ-ಆಧಾರಿತವಾದ ಕಾರಣ ಮಾತ್ರ ನಾನು ಹಿಂದೆ ಉಳಿಯಬೇಕು ಎಂದು ನನಗೆ ಎಂದೂ ಅನಿಸಿಲ್ಲ ಎಂದರು.
ಇದನ್ನೂ ಓದಿ: JEE Main Result 2022: ಜೆಇಇ ಮೇನ್ ಫಲಿತಾಂಶ ಬಿಡುಗಡೆ; ವೆಬ್ಸೈಟ್ ಲಿಂಕ್, ಟಾಪರ್ ಲಿಸ್ಟ್ ಇಲ್ಲಿದೆ
ಸ್ನೇಹ ಕನಸು ಶುರುವಾಗಿದ್ದು ಹೀಗೆ
ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನ ಆಕಾಂಕ್ಷಿಯಾಗಿರುವ ಸ್ನೇಹ, ಗೂಗಲ್ ನಮಗೆ ಪರಿಚಯವಾದಾಗ ನಾನು ಚಿಕ್ಕವಳಾಗಿದ್ದೆ. ಇದು ಕಂಪ್ಯೂಟರ್‌ನಲ್ಲಿ ನನ್ನ ಆಸಕ್ತಿಯನ್ನು ಹುಟ್ಟುಹಾಕಿತು. ಅಂದಿನಿಂದ ವಿಜ್ಞಾನವನ್ನು ಅಧ್ಯಯನ ಮಾಡಲು ಬಯಸುತ್ತೇನೆ. ಇಂಟರ್ನೆಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಹಿಂದಿನ ವಿಜ್ಞಾನ ಏನು ಎಂದು ತಿಳಿಯಲು ನಾನು ಬಯಸುತ್ತೇನೆ ಎಂದು ತಮ್ಮ ಕನಸ್ಸಿನ ಬಗ್ಗೆ ಸ್ನೇಹ ಹಂಚಿಕೊಂಡರು.
ಸ್ನೇಹನೇ ಕುಟುಂಬದಲ್ಲಿ ಮೊದಲಿಗಳು
ಕುಟುಂಬದಲ್ಲಿ ವಿಜ್ಞಾನವನ್ನು ತೆಗೆದುಕೊಂಡ ಮೊದಲ ಯುವತಿ ಸ್ನೇಹ. ಆಕೆಯ ಅಕ್ಕ ಬಿಕಾಂ ವಿದ್ಯಾರ್ಥಿನಿ ಮತ್ತು ತಾಯಿ ಗೃಹಿಣಿ ಮತ್ತು ಆಕೆಯ ತಂದೆ ಉದ್ಯಮಿ. ಸ್ನೇಹ ತನ್ನ ಕುಟುಂಬದೊಂದಿಗೆ ಗುವಾಹಟಿಯಲ್ಲಿ ವಾಸಿಸುತ್ತಿದ್ದಾರೆ, ಆದರೆ ಆಕೆಯ ತವರು ರಾಜಸ್ಥಾನದಲ್ಲಿದೆ. ಗಣಿತವು ತನ್ನ ನೆಚ್ಚಿನ ವಿಷಯ ಎಂದರು. ಆದಾಗ್ಯೂ, ತಾನು ಭೌತಶಾಸ್ತ್ರದಲ್ಲಿ ಸ್ವಲ್ಪ ಹಿಂದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಅದೇನೇ ಇದ್ದರೂ, ಆಕೆ ಆ ವಿಷಯದಲ್ಲೂ ಪೂರ್ಣ ಅಂಕಗಳನ್ನು ಪಡೆದಿದ್ದಾಳೆ. ಅವರು ಗುವಾಹಟಿಯ ಅಲೆನ್ ಕೋಚಿಂಗ್ ಸೆಂಟರ್‌ನಲ್ಲಿ ಓದಿದ್ದಾರೆ.
ಇದನ್ನೂ ಓದಿ: Studying in Abroad: ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳು ಎದುರಿಸುವ 5 ಸಮಸ್ಯೆಗಳಿವು; ಇದಕ್ಕೆ ತಯಾರಾಗಿರಿ
ಪರೀಕ್ಷೆಗೆ ಹೇಗಿತ್ತು ತಯಾರಿ?
ಪರೀಕ್ಷೆಗೆ ತಯಾರಿ ನಡೆಸುವಾಗ, ಸ್ನೇಹ ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಅಧ್ಯಯನ ಮಾಡಲು ಪ್ರಾರಂಭಿಸುತ್ತಿದ್ದರಂತೆ. ತನ್ನ ದಿನವನ್ನು ಪ್ರಾರಂಭಿಸುವ ಮೊದಲು, ಅವಳು ಒಂದು ದಿನದ ಮೊದಲು ಕಲಿಸಿದ ಎಲ್ಲವನ್ನೂ ಪರಿಷ್ಕರಿಸುತ್ತಿದ್ದಳು. ನಂತರ 12:30 ರವರೆಗೆ ಸಾಮಾನ್ಯ ತರಗತಿಗಳಿಗೆ ಹಾಜರಾಗುತ್ತಿದ್ದಳು. ಸ್ವಯಂ-ಅಧ್ಯಯನದ ಮೇಲೆ ಕೇಂದ್ರೀಕರಿಸಿದಳು ಮತ್ತು ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಹೊಸ ಪರಿಕಲ್ಪನೆಗಳಿಗಾಗಿ ಆಳವಾಗಿ ಅಧ್ಯಯನ ಮಾಡಲು ಕೋಚಿಂಗ್ ಸೆಂಟರ್‌ನಲ್ಲಿ ಇರುತ್ತಿದ್ದಳು. ಅವರು ಯಾವುದೇ ಹೆಚ್ಚುವರಿ ಪುಸ್ತಕಗಳನ್ನು ಉಲ್ಲೇಖಿಸಿಲ್ಲ ಮತ್ತು NCERT ಗಳು ಮತ್ತು ಅವರ ಶಿಕ್ಷಕರು ಒದಗಿಸಿದ ಟಿಪ್ಪಣಿಗಳನ್ನು ಅಧ್ಯಯನ ಮಾಡಿಯೇ ಫಸ್ಟ್ ಱಂಕ್ ಬಂದಿದ್ದಾರೆ.
ದೂರಿದವರೇ ಈಗ ಶಹಬ್ಬಾಶ್ ಎನ್ನುತ್ತಿದ್ದಾರೆ..
ಈಗ ನಾನು ಫಸ್ಟ್ ಱಂಕ್ ಬಂದಿರುವುದಕ್ಕೆ ನನ್ನ ಅನೇಕ ಗೆಳೆಯರು, ಕುಟುಂಬಸ್ಥರು ಕರೆ ಮಾಡಿ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಅದರೆ ಇದೇ ಜನ ತಾನು ಅವರ ಯಾವುದೇ ಬರ್ತ್ ಡೇ, ಫ್ಯಾಮಿಲಿ ಫಂಕ್ಷನ್ಗಳಿಗೆ ಹಾಜರಾಗುತ್ತಿಲ್ಲ ಎಂದು ದೂರುತ್ತಿದ್ದರು. ನನ್ನ ಶ್ರಮ ಈಗ ಫಲ ನೀಡಿದೆ ಎಂದು ನಿಟ್ಟುಸಿರು ಬಿಡುತ್ತಾರೆ ಸಾಧಕಿ ಸ್ನೇಹ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ