Animation Course: ಅನಿಮೇಷನ್‌ ಕೋರ್ಸ್‌ ಮಾಡುವ ಆಸಕ್ತಿ ನಿಮಗಿದ್ಯಾ? ಹಾಗಿದ್ರೆ ಈ ಬಗ್ಗೆ ಡೀಟೇಲ್ ಆಗಿ ತಿಳ್ಕೊಳ್ಳಿ

ಇಂದು ಮನರಂಜನಾ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರಮುಖವಾದ ಕ್ಷೇತ್ರ ಎಂದರೆ ಅದು ಅನಿಮೇಷನ್‌ ಕ್ಷೇತ್ರ. ಸೃಜನಶೀಲ ಮನಸ್ಸು ಹೊಂದಿರುವವರಿಗೆ ಈ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಉದ್ಯೋಗವನ್ನು ನೀಡುತ್ತದೆ. ಚಿಕ್ಕಪುಟ್ಟ ಜಾಹೀರಾತುಗಳಿಂದ ಹಿಡಿದು, ದೊಡ್ಡ ಸಿನಿಮಾದವರೆಗೂ ಅನಿಮೇಷನ್ ಅನಿವಾರ್ಯವಾಗಿದೆ.

 ಅನಿಮೇಷನ್‌

ಅನಿಮೇಷನ್‌

 • Share this:
ಅನಿಮೇಷನ್ (Animation) ಎಂಬ ಮಾಯಲೋಕವು ಇಂದು ಸೃಷ್ಟಿಸುತ್ತಿರುವ ಅದ್ಭುತಗಳಿಗೆ ತನಗೆ ತಾನೇ ಸರಿಸಾಟಿ ಎಂದು ಹೇಳಬಹುದು. ಇಂದು ಮನರಂಜನಾ ಉದ್ಯಮದಲ್ಲಿ (entertainment industry) ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರಮುಖವಾದ ಕ್ಷೇತ್ರ ಎಂದರೆ ಅದು ಅನಿಮೇಷನ್‌ ಕ್ಷೇತ್ರ. ಸೃಜನಶೀಲ ಮನಸ್ಸು ಹೊಂದಿರುವವರಿಗೆ ಈ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಉದ್ಯೋಗವನ್ನು (Employments) ನೀಡುತ್ತದೆ. ಚಿಕ್ಕಪುಟ್ಟ ಜಾಹೀರಾತುಗಳಿಂದ (Advertisement) ಹಿಡಿದು, ದೊಡ್ಡ ಸಿನಿಮಾದವರೆಗೂ ಅನಿಮೇಷನ್ ಅನಿವಾರ್ಯವಾಗಿದೆ. ಕಾಲ್ಪನಿಕ ಜಗತ್ತನ್ನೇ ಕಟ್ಟಿಕೊಡುವ ಈ ಅನಿಮೇಷನ್ ಶಿಕ್ಷಣ Animation Education), ಉದ್ಯೋಗ ಕ್ಷೇತ್ರದಲ್ಲೂ ಸಂಚಲನ ಸೃಷ್ಟಿಸಿದೆ. ಇಂದು ದೃಶ್ಯ ಮಾಧ್ಯಮದ ಬಹುಮುಖ್ಯವಾದ ಭಾಗವಾಗಿ ಮಾರ್ಪಟ್ಟಿದೆ.

ಪರಿಚಯ :
ಕುಂಗ್ ಫೂ ಪಾಂಡಾ, ದಿ ಕ್ರಾನಿಕಲ್ಸ್ ಆಫ್ ನಾರ್ನಿಯಾ, ವಾಲ್-ಇ, ಕೋರಲೈನ್, ಅಪ್, ಬೋಲ್ಟ್, ಐಸ್ ಏಜ್ ಮತ್ತು ಮಾನ್ಸ್ಟರ್ಸ್ ವರ್ಸಸ್ ಏಲಿಯನ್ಸ್‌ನಂತಹ ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ನೋಡದವರಿಗೆ ಅದರಲ್ಲಿನ ಅನಿಮೇಷನ್ ಎಂಬ ಮ್ಯಾಜಿಕ್‌ ಅನ್ನು ಮರೆಯಲು ಸಾಧ್ಯವೇ ಇಲ್ಲ. ಇಂತಹ ಮ್ಯಾಜಿಕ್ ರಚಿಸಲು ಇಷ್ಟಪಡುವವರಿಗೆ ಅನಿಮೇಷನ್ ಉದ್ಯಮವು ಮಿತಿಯಿಲ್ಲದ ಉದ್ಯೋಗ ಅವಕಾಶಗಳನ್ನು ನೀಡುತ್ತದೆ.

ಅನಿಮೇಷನ್ ಕೈತುಂಬಾ ಕೆಲಸ ಮತ್ತು ಹಣ ನೀಡುವ ಕ್ಷೇತ್ರ. ಇಲ್ಲಿ ಕೆಲಸಕ್ಕೆ ದುಪ್ಪಟ್ಟು ಹಣವಿದೆ. ಪಿಯುಸಿ ಅನುತ್ತೀರ್ಣರಾದವರಿಂದ ಹಿಡಿದು ಪದವಿಯಲ್ಲಿ ರ್‍ಯಾಂಕ್ ಪಡೆದವರವರೆಗೆ ಎಲ್ಲರಿಗೂ ಕೋರ್ಸ್‌ ಪ್ರವೇಶಕ್ಕೆ ಅವಕಾಶ ಇದೆ. ಮನರಂಜನಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಈ ಕ್ಷೇತ್ರ, ಪ್ರಸಕ್ತ ಟಿವಿ ಜಾಹೀರಾತು, ಚಲನಚಿತ್ರ, ಗೇಮ್‌ ಮೊದಲಾದ ಕಡೆ ಅನಿವಾರ್ಯ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಅಪಾರ ಸಂಖ್ಯೆಯ ಮಾನವ ಸಂಪನ್ಮೂಲ ಬಯಸುತ್ತಿರುವ ಈ ಕ್ಷೇತ್ರ ಉತ್ತಮ ವೇತನವನ್ನೂ ಒದಗಿಸುವುದರಿಂದ ಯುವಕರ ಪಾಲಿಗೆ ಇದೊಂದು ಸೂಕ್ತ ಆಯ್ಕೆ ಎಂದೇ ಹೇಳಬಹುದು.

ಇದನ್ನೂ ಓದಿ: ITBP Recruitment: ತಿಂಗಳಿಗೆ 69,000 ರೂ. ವೇತನ: ಕಾನ್​ಸ್ಟೇಬಲ್​​ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

ಇತ್ತೀಚಿನ ಜಾಗತಿಕ ಆರ್ಥಿಕ ಬಿಕ್ಕಟ್ಟುಗಳ ನಡುವೆಯೂ, ಪ್ರಪಂಚದಾದ್ಯಂತ ಅನಿಮೇಷನ್ ಉದ್ಯಮವು ಕ್ಷಿಪ್ರ ಗತಿಯಲ್ಲಿ ಬೆಳವಣಿಗೆಯನ್ನು ಮುಂದುವರೆಸಿದೆ. ಭಾರತದಲ್ಲಿಯೂ ಅನಿಮೇಷನ್ ಉದ್ಯಮವು ವಿಸ್ತರಣೆಯ ಹಾದಿಯಲ್ಲಿದೆ ಮತ್ತು ದೀರ್ಘಾವಧಿಯ ಬೆಳವಣಿಗೆ ಹೊಂದಲು ಸಿದ್ಧವಾಗಿದೆ. ಹೆಚ್ಚು ರೋಮಾಂಚನಕಾರಿ ಸಂಗತಿಯೆಂದರೆ, ಈ ಉದ್ಯಮವು ಪ್ರತಿ ವರ್ಷ ಸಾವಿರಾರು ನಿರೀಕ್ಷಿತ 2-D ಮತ್ತು 3-D ಆನಿಮೇಟರ್‌ಗಳಿಗೆ ಉದ್ಯೋಗವನ್ನು ನೀಡುತ್ತದೆ. ಇದರ ಪರಿಣಾಮ ಭಾರತಕ್ಕೆ ಡಿಸ್ನಿ ಮತ್ತು ಇತರ ಅನಿಮೇಷನ್ ದೈತ್ಯ ಕಂಪನಿಗಳಿಂದ ಅನಿಮೇಷನ್ ಪ್ರಾಜೆಕ್ಟ್ ಕೆಲಸದ ಹೊರಗುತ್ತಿಗೆಗಳು ಸಾಕಷ್ಟು ದೊರಕುತ್ತಿವೆ.

ಅನಿಮೇಷನ್‌ ಎಂದರೇನು?
ಅನಿಮೇಷನ್ ಎಂದರೆ ವಿವಿಧ ಆಧುನಿಕ ಕಂಪ್ಯೂಟರ್ ಆಧಾರಿತ ಅನುಕ್ರಮ ತಂತ್ರಗಳ ಸಹಾಯದಿಂದ ನಿರ್ಜೀವ ವಸ್ತುಗಳನ್ನು ಜೀವಂತಗೊಳಿಸುವ ಕಲೆಯಾಗಿದೆ. ಇದು ಮನುಷ್ಯನ ಸೃಜನಶೀಲ ಕಲೆಯನ್ನು ಬೇಡುವ ವಿದ್ಯೆ ಎಂದರೆ ತಪ್ಪಾಗಲಾರದು.

ಅನಿಮೇಷನ್‌ನಲ್ಲಿ ವೃತ್ತಿಜೀವನ ಆರಂಭಿಸುವುದು ಹೇಗೆ? ಅದಕ್ಕೆ ಯಾವೆಲ್ಲ ಪದವಿ ಪಡೆದಿರಬೇಕು?
ಅನಿಮೇಷನ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಉತ್ತಮ ಮಾರ್ಗವೆಂದರೆ ಅನಿಮೇಷನ್‌ನಲ್ಲಿ ಪದವಿ ಅಥವಾ ಅನಿಮೇಷನ್‌ನಲ್ಲಿ ಡಿಪ್ಲೊಮಾ ಪಡೆಯುವುದು ಅನಿವಾರ್ಯ. ಆದರೆ ಅನಿಮೇಷನ್‌ನಲ್ಲಿ ಪದವಿ ಪಡೆಯುವುದು ಭಾರತದಲ್ಲಿ ಇನ್ನೂ ಹೆಚ್ಚು ಜನಪ್ರಿಯವಾಗಿಲ್ಲ. ಪ್ರಸ್ತುತ ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಈ ಕೋರ್ಸ್ ಅನ್ನು ನೀಡುತ್ತಿವೆ. ಮತ್ತೊಂದೆಡೆ, ಹಲವಾರು ಸಂಸ್ಥೆಗಳು ಅನಿಮೇಷನ್‌ನಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತಿವೆ.

ಬ್ಯಾಚುಲರ್ ಇನ್ ಫೈನ್ ಆರ್ಟ್ಸ್ (ಬಿಎಫ್‌ಎ) ಕೂಡ ಅನಿಮೇಷನ್ ರಂಗದಲ್ಲಿ ಹೆಜ್ಜೆ ಹಾಕಲು ಬಹಳ ಮುಖ್ಯವಾದ ಕೋರ್ಸ್ ಆಗಿದೆ. ಅನಿಮೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಫ್‌ಎ ಮೂರು ವರ್ಷಗಳ ಕೋರ್ಸ್‌ಗಳಾಗಿದ್ದರೆ ಅನಿಮೇಷನ್‌ನಲ್ಲಿ ಡಿಪ್ಲೊಮಾ ಕೋರ್ಸ್ ಆರು ತಿಂಗಳಿಂದ ಒಂದೂವರೆ ವರ್ಷಗಳವರೆಗೆ ಇರುತ್ತದೆ.

ಈ ಕೋರ್ಸ್‌ ಪಡೆಯಲು ಇರಬೇಕಾದ ಇತರ ಆಸಕ್ತಿಗಳೇನು?
ಈ ಹಂತದಲ್ಲಿ ಅಧ್ಯಯನ ಮಾಡಲು ಯಾವುದೇ ವಿಶೇಷ ವಿಷಯಗಳಿಲ್ಲ. ಆದರೆ ಅನಿಮೇಷನ್ ಉದ್ಯಮಕ್ಕೆ ಪ್ರವೇಶ ಪಡೆಯಲು ಸ್ಕೆಚಿಂಗ್, ಡ್ರಾಯಿಂಗ್ ಮತ್ತು ಕಂಪ್ಯೂಟರ್‌ಗಳಲ್ಲಿ ಆಳವಾದ ಆಸಕ್ತಿಯನ್ನು ಯಾವಾಗಲೂ ಅತ್ಯಗತ್ಯವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ:  Hospital Administrationನಲ್ಲಿ ವೃತ್ತಿ ಆರಂಭಿಸುವ ಆಸೆ ಇದ್ಯಾ? ಅದಕ್ಕೂ ಮುನ್ನ ಈ ಸ್ಟೋರಿ ಓದಿ

ಪಿಯುಸಿ ಅಥವಾ ಪದವಿಯಲ್ಲಿ ಫೈನ್‌ ಆರ್ಟ್‌ ಅಧ್ಯಯನ ಮಾಡುವುದು ಅನಿಮೇಷನ್‌ ವೃತ್ತಿಜೀವನದಲ್ಲಿ ಬಹಳ ಸಹಾಯಕಾರಿ ಎನಿಸುತ್ತದೆ.

ಇದು ಸೃಜನಶೀಲ ವ್ಯಕ್ತಿತ್ವ ಹೊಂದಿದ ವ್ಯಕ್ತಿಗೆ ಸರಿಯಾದ ವೃತ್ತಿ ಆಗಿದೆಯೇ?
ನೀವು ಸೃಜನಶೀಲತೆ ಹೊಂದಿರುವ ವ್ಯಕ್ತಿಯಾಗಿದ್ದರೆ ಇದಕ್ಕೆ ಉತ್ತರ ಹೌದು ಎನ್ನಬಹುದು. ಇದು ನಿಮಗೆ ಸರಿಯಾದ ವೃತ್ತಿ ಆಯ್ಕೆಯಾಗಿದೆ.

 • ಉತ್ತಮ ಆನಿಮೇಟರ್ ಆಗಲು ನೀವು ಹೆಚ್ಚಿನ ಉತ್ಸಾಹ ಮತ್ತು ಕಲ್ಪನೆಯನ್ನು ಹೊಂದಿರಬೇಕು.

 • ನೀವು ಡ್ರಾಯಿಂಗ್ ಮತ್ತು ಸ್ಕೆಚಿಂಗ್‌ ಮಾಡುವುದರಲ್ಲಿ ಪರ್ಫೆಕ್ಟ್‌ ಆಗಿರಬೇಕು.

 • ಮಾನವ, ಪಕ್ಷಿ ಮತ್ತು ಪ್ರಾಣಿಗಳ ಅಭಿವ್ಯಕ್ತಿಗಳು ಮತ್ತು ಚಲನೆಯ ತಿಳುವಳಿಕೆಯು ಅನಿಮೇಷನ್‌ನ ಅತ್ಯಂತ ಪ್ರಮುಖ ಭಾಗವಾಗಿದೆ ಏಕೆಂದರೆ ಇದು ನೀವು ರಚಿಸುವ ಪಾತ್ರಗಳನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.

 • ನಿಮ್ಮ ಕಲ್ಪನಾ ಶಕ್ತಿ ಅದ್ಭುತವಾಗಿರಬೇಕು.

 • ನೀವು ಉತ್ತಮ ದೃಶ್ಯೀಕರಣ ಕೌಶಲ್ಯ ಮತ್ತು ಬಣ್ಣಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದಿರಬೇಕು.

 • ತಾಳ್ಮೆ, ಕಠಿಣ ಪರಿಶ್ರಮ ಮತ್ತು ನಿಮ್ಮ ಕೆಲಸದ ಕಡೆಗೆ ಸಮರ್ಪಣೆ ಕೂಡ ಈ ಉದ್ಯೋಗ ಪ್ರೊಫೈಲ್‌ಗೆ ಅತ್ಯಗತ್ಯವಾಗಿರುತ್ತದೆ.

 • ಅನಿಮೇಷನ್ ಬಹುಕೆಲಸಗಳನ್ನು ಒಟ್ಟಿಗೆ ಮಾಡುವ ಕೆಲಸ ಆದ್ದರಿಂದ ನೀವು ತಂಡದಲ್ಲಿ ಕೆಲಸ ಮಾಡಬೇಕಾಗುತ್ತದೆ, ಆದ್ದರಿಂದ, ನೀವು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು.


ಆದ್ದರಿಂದ ನೀವು ಮೇಲಿನ ಕೌಶಲ್ಯಗಳನ್ನು ಹೊಂದಿದ್ದರೆ ಮತ್ತು ಈ ಸೃಜನಶೀಲ ಕಲೆಯನ್ನು ಅನ್ವೇಷಿಸಲು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರೆ, ಇದು ನಿಮಗೆ ಸೂಕ್ತ ವೃತ್ತಿ ಎಂದೇ ಹೇಳಬಹುದು.

ಈ ಕೋರ್ಸ್‌ ಮಾಡಲು ಬೇಕಾಗುವ ವೆಚ್ಚ ಎಷ್ಟು?
ಈ ಕೋರ್ಸ್‌ ಮಾಡಲು ತಗಲುವ ವೆಚ್ಚ, ನೀವು ಆಯ್ಕೆಮಾಡುವ ಸಂಸ್ಥೆ ಮತ್ತು ಕೋರ್ಸ್‌ಗೆ ಅನುಗುಣವಾಗಿ ಶುಲ್ಕವು ನಿಮಗೆ ರೂ.50,000 ರಿಂದ ರೂ.2,00,000 ವರೆಗೆ ವೆಚ್ಚವಾಗಬಹುದು.

ಈ ಕೋರ್ಸ್‌ ಮಾಡಲು ಯಾವುದಾದರೂ ಧನಸಹಾಯ/ವಿದ್ಯಾರ್ಥಿವೇತನ ಸಿಗುತ್ತದೆಯೇ?
ಭಾರತದಲ್ಲಿ ಅನಿಮೇಷನ್ ಉದ್ಯಮದಲ್ಲಿನ ಪ್ರಭಾವವು ವೃತ್ತಿಜೀವನದ ಭವಿಷ್ಯವನ್ನು ಹೆಚ್ಚಿಸಿದೆ ಮತ್ತು ಪ್ರತಿಭಾವಂತ ವ್ಯಕ್ತಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಅನೇಕ ಸಂಸ್ಥೆಗಳು ಮುಂದಾಗಿವೆ. ಆಪ್ಟೆಕ್ ಅರೆನಾ ಎಂಬ ಕಂಪನಿಯು ತನ್ನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಲಾ ಸೃಷ್ಟಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ನೀಡುತ್ತಿದೆ. ಯುಡಿ ಸ್ಕೂಲ್ ಆಫ್ ಅನಿಮೇಷನ್, ಹೈದರಾಬಾದ್, ಡೈವರ್ಸಿಟಿ ಇನ್ ಇಂಡಿಯಾ ಅನಿಮೇಷನ್ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ನೀಡುತ್ತದೆ, ಇದು ಮಹಿಳೆಯರು ಅನಿಮೇಷನ್‌ನಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡಲು ಸಹಾಯ ಮಾಡಿ, ಅವರಿಗೆ ಪ್ರೋತ್ಸಾಹವನ್ನು ನೀಡುತ್ತಿದೆ.

ಉದ್ಯೋಗ ಅವಕಾಶಗಳು ಎಲ್ಲೆಲ್ಲಿ ಇವೆ?
ಮನರಂಜನೆ ಮತ್ತು ಗೇಮಿಂಗ್ ಉದ್ಯಮದಲ್ಲಿನ ಪ್ರಭಾವಗಳಿಂದ ಆನಿಮೇಟರ್‌ಗಳಿಗೆ ಉದ್ಯೋಗದ ನಿರೀಕ್ಷೆಗಳು ಅತ್ಯಂತ ವೇಗದಲ್ಲಿ ಹೆಚ್ಚುತ್ತಿವೆ. ಅನಿಮೇಷನ್‌ ಎಂಬ ಮಾಯಾಲೋಕವು ಅನಿಮೇಷನ್ ಚಲನಚಿತ್ರಗಳು, ದೂರದರ್ಶನ ಮತ್ತು ಜಾಹೀರಾತು ಉದ್ಯಮಗಳ ಮೇಲೆ ಉತ್ತಮ ಹಿಡಿತವನ್ನು ಪಡೆದುಕೊಂಡಿದೆ. ಫುಲ್ ಲೆಂಥ್‌ ಅನಿಮೇಷನ್ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆಯಿದೆ. ಒಂದು ಪುಲ್‌ ಲೇಂಥ್‌ ಅನಿಮೇಷನ್ ಸಿನಿಮಾಗೆ 500 ಆನಿಮೇಟರ್‌ಗಳ ಅಗತ್ಯವಿದೆ. ಅಂದರೆ ದೊಡ್ಡ ಉದ್ಯೋಗಾವಕಾಶಗಳು. ಅನಿಮೇಷನ್ ಕೆಲಸಗಳು, ಹೀಗೆ ನೂರೆಂಟು ಉದ್ಯೋಗವಕಾಶಗಳು ಇಲ್ಲಿವೆ. ಈ ಅನಿಮೇಷನ್‌ ಕ್ಷೇತ್ರವು ಮನರಂಜನೆ ಮತ್ತು ಶಿಕ್ಷಣ (ಇ-ಲರ್ನಿಂಗ್) ಉದ್ಯಮಗಳಿಗೆ ಸಮಾನವಾಗಿ ಸೇವೆ ಸಲ್ಲಿಸುತ್ತದೆ.

ಇದನ್ನೂ ಓದಿ:  Capgemini Hiring: ಬೆಂಗಳೂರಿನ ಕ್ಯಾಪ್​ಜೆಮಿನಿ ಕಂಪನಿಯಲ್ಲಿ ನೇಮಕಾತಿ; ಬಿಇ ಆದವರಿಗೆ ಅವಕಾಶ

ಈ ಉದ್ಯೋಗದಿಂದ ಸಿಗುವ ವೇತನವೆಷ್ಟು?
ಅನಿಮೇಷನ್ ಒಂದು ತೃಪ್ತಿದಾಯಕ ಮತ್ತು ಲಾಭದಾಯಕ ವೃತ್ತಿಯಾಗಿದ್ದು, ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಈ ಉದ್ಯಮಕ್ಕೆ ಹೊಸ ವೃತ್ತಿಪರರು ಸಾಮಾನ್ಯವಾಗಿ ಅನಿಮೇಷನ್ ಸ್ಟುಡಿಯೋಗಳು ಮತ್ತು ಪ್ರೊಡಕ್ಷನ್ ಹೌಸ್‌ಗಳಲ್ಲಿ ಜೂನಿಯರ್ ಆನಿಮೇಟರ್‌ಗಳಾಗಿ ಕೆಲಸ ಮಾಡುತ್ತಾರೆ. ಈ ಆನಿಮೇಟರ್‌ಗಳ ಆರಂಭಿಕ ವೇತನವು ತಿಂಗಳಿಗೆ ರೂ.10,000 ರಿಂದ ರೂ.15,000 ಆಗಿರಬಹುದು. ಅದರ ನಂತರ ಮೂರರಿಂದ ಐದು ವರ್ಷಗಳಲ್ಲಿ ನೀವು ಹಿರಿಯ ಆನಿಮೇಟರ್ ಆಗಬಹುದು ಮತ್ತು ರೂ.30,000 ರಿಂದ ರೂ.40,000 ವರೆಗೆ ಮಾಸಿಕ ವೇತನವನ್ನು ಪಡೆಯಬಹುದು. ನೀವು ನಿಜವಾಗಿಯೂ ಸೃಜನಶೀಲರಾಗಿದ್ದರೆ ಮತ್ತು ಕೆಲವು ಹೊಸ ಯೋಜನೆಗಳ ಭಾಗವಾಗಿದ್ದರೆ ನೀವು ರೂ.55,000 ಕ್ಕಿಂತ ಹೆಚ್ಚಿನ ವೇತನವನ್ನು ಇಲ್ಲಿ ಪಡೆಯಬಹುದಾಗಿದೆ.

ಭಾರತದ ಅನಿಮೇಷನ್‌ ಕ್ಷೇತ್ರದತ್ತ ಅಂತರರಾಷ್ಟ್ರೀಯ ಗಮನ:
ಭಾರತೀಯ ಅನಿಮೇಷನ್ ಉದ್ಯಮವು ವೇಗವಾಗಿ ಬೆಳೆಯುತ್ತಿದೆ. ಪಾಶ್ಚಾತ್ಯ ಅನಿಮೇಷನ್ ಕಂಪನಿಗಳು ಹೊರಗುತ್ತಿಗೆ ಅನಿಮೇಷನ್‌ ಕೆಲಸಗಳನ್ನು ನೀಡಲು ಭಾರತವನ್ನು ಬೆಂಬಲಿಸುತ್ತಿವೆ ಏಕೆಂದರೆ ಭಾರತದ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಮಾಡುವ ಸಾಮರ್ಥ್ಯ, ವೆಚ್ಚದ ಪ್ರಯೋಜನಗಳು ಮತ್ತು ಅತ್ಯಾಧುನಿಕ ಸ್ಟುಡಿಯೊಗಳ ಉತ್ತಮ ಮೂಲಸೌಕರ್ಯ ಹೆಚ್ಚು ಸೂಕ್ತವಾಗಿರುವುದರಿಂದ ವಿದೇಶಿ ಕಂಪನಿಗಳು ಭಾರತಕ್ಕೆ ಕೆಲಸ ನೀಡಲು ಮುಂದಾಗುತ್ತಿವೆ. ಫನ್ ಬ್ಯಾಗ್ ಅನಿಮೇಷನ್, ವಾರ್ನರ್ ಬ್ರದರ್ಸ್, ಇಂಡಸ್ಟ್ರಿಯಲ್ ಲೈಟ್ ಮತ್ತು ಮ್ಯಾಜಿಕ್ ಮತ್ತು ಡಿಸ್ನಿ ಮುಂತಾದ ಅನಿಮೇಷನ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಕಂಪನಿಗಳು ಈಗ ತಮ್ಮ ಅನಿಮೇಷನ್ ಸಿನಿಮಾಗಳನ್ನು ನಿರ್ಮಾಣ ಮಾಡಲು ಭಾರತವನ್ನು ಆಶ್ರಯಿಸುತ್ತಿವೆ.

ಈ ಕ್ಷೇತ್ರದಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು:
ಸಕಾರಾತ್ಮಕ ಅಂಶಗಳು:

 • ಜಾಗತಿಕ ಅನಿಮೇಷನ್ ಉದ್ಯಮವು ಅತ್ಯಂತ ದೊಡ್ಡ ಉದ್ಯಮವಾಗಿ ಇಂದು ನಮ್ಮೆಲ್ಲರ ಮುಂದೆ ನಿಂತಿದೆ. ಅನಿಮೇಷನ್ ಕೋರ್ಸ್‌ ನೀವು ಅಧ್ಯಯನ ಮಾಡಿದ್ದೆ ಆದರೆ ನಿಮಗೆ ಎಲ್ಲೆ ಹೋದರೂ ಉತ್ತಮ ಉದ್ಯೋಗವಕಾಶ ಕಾಯುತ್ತಿರುತ್ತದೆ.

 • ವೃತ್ತಿಯಾಗಿ ಅನಿಮೇಷನ್ ಬಹಳ ಲಾಭದಾಯಕವಾಗಿದೆ.


ನಕಾರಾತ್ಮಕ ಅಂಶಗಳು:

 • ದೀರ್ಘ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ.

 • ಅನಿಮೇಟರ್ ತಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಸಮಯವನ್ನು ಈ ಕೆಲಸಕ್ಕೆ ನೀಡಬೇಕಾಗಿರುವುದರಿಂದ, ಒತ್ತಡ ಹೆಚ್ಚು ಅನಿಸಬಹುದು.


ಇದನ್ನೂ ಓದಿ:  IIT Recruitment: ಬೆಂಗಳೂರಿನ ಐಐಐಟಿಯಲ್ಲಿ ಮ್ಯಾನೇಜರ್​ ಹುದ್ದೆ ಖಾಲಿ; ಇಲ್ಲಿದೆ ಕೆಲಸದ ಸಂಪೂರ್ಣ ವಿವರ

ಕೊನೆಯ ಮಾತು:
ಅನಿಮೇಷನ್‌ ಕ್ಷೇತ್ರವು ತನ್ನದೇ ಆದ ಕೌಶಲ್ಯಗಳನ್ನು ಹೊಂದಿದೆ. ಇದರಲ್ಲಿ ಉದ್ಯೋಗವಕಾಶಗಳು ಹೆಚ್ಚು. ಕೆಲವು ಸಲ ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವುದು ಬಿಟ್ಟರೆ ಉಳಿದ ಎಲ್ಲ ಅಂಶಗಳು ಉತ್ತಮ ಎಂದು ಹೇಳಬಹುದು. ನಿಜವಾಗಿಯೂ ನೀವು ಈ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ ನೀವು ಈ ಕೋರ್ಸ್‌ ಅನ್ನು ಮಾಡಬಹುದು.
Published by:Ashwini Prabhu
First published: