ರಾಜಕಾರಣಿಗಳ ಬೆನ್ನಲ್ಲೀಗ ಅಧಿಕಾರಿಗಳ ಸರದಿ: ಕೋವಿಡ್​​​-19 ನಿಯಮ ಗಾಳಿಗೆ ತೂರಿದ ಬಾಗಲಕೋಟೆ ಜಿಲ್ಲಾ ಪಂಚಾಯತ್​​​​ ಸಿಇಓ

ಏನೇ ಆಗಲಿ ಇನ್ಮೇಲಾದರೂ ಸಿಇಓ ಗಂಗೂಬಾಯಿ ಮಾನಕರ್ ಕೊರೋನಾ ಸುರಕ್ಷಿತ ನಿಯಮ ಪಾಲಿಸುವತ್ತ ಗಮನ ಹರಿಸಬೇಕಿದೆ. ಇಲ್ಲವಾದರೆ ಪ್ರಜ್ಞಾವಂತ ನಾಗರಿಕರ ಕೆಂಗಣ್ಣಿಗೆ ಗುರಿಯಾಗುವದರಲ್ಲಿ ಎರಡು ಮಾತಿಲ್ಲ.

news18-kannada
Updated:June 7, 2020, 7:46 PM IST
ರಾಜಕಾರಣಿಗಳ ಬೆನ್ನಲ್ಲೀಗ ಅಧಿಕಾರಿಗಳ ಸರದಿ: ಕೋವಿಡ್​​​-19 ನಿಯಮ ಗಾಳಿಗೆ ತೂರಿದ ಬಾಗಲಕೋಟೆ ಜಿಲ್ಲಾ ಪಂಚಾಯತ್​​​​ ಸಿಇಓ
ಬಾಗಲಕೋಟೆ ಜಿಲ್ಲಾ ಪಂಚಾಯತ್​ ಸಿಇಓ
  • Share this:
ಬಾಗಲಕೋಟೆ (ಜೂ.07): ಕೊರೋನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜನರಿಗೆ ತಿಳಿ ಹೇಳಬೇಕಿದ್ದ ಬಾಗಲಕೋಟೆ  ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ಅವರೇ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ನಡೆದಿದೆ.

ಇತ್ತೀಚೆಗೆ ಸರ್ಕಾರ ರೂಪಿಸಿದ ನಿಯಮಾವಳಿಗಳನ್ನು ಸ್ವತಃ ಆರೋಗ್ಯ ಸಚಿವ ಬಿ ಶ್ರೀರಾಮುಲು, ಶಿಕ್ಷಣ ಸಚಿವ ಸುರೇಶ್ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದ ಪ್ರವಾಸದಲ್ಲಿ ಸಾಮಾಜಿಕ ಅಂತರ ಉಲ್ಲಂಘಿಸಿದ ಘಟನೆಗಳು ನಡೆದಿದ್ದವು. ಈ ಬೆನ್ನಲ್ಲೀಗ ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಮಾಜಿಕ ಅಂತರ ಮರೆತು ಬೇಜವಾಬ್ದಾರಿ ತೋರಿದ್ದಾರೆ. ಈಗ ಸಿಇಓ ನಡೆಗೆ ಸಾಮಾಜಿಕ ಜಾಲತಾಣ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ಅಲ್ಲಲ್ಲಿ ಕಾಮಗಾರಿಗಳು ನಡೆಯುತ್ತಿವೆ‌. ಬಾಗಲಕೋಟೆ ಜಿಲ್ಲೆಗೆ ವಲಸೆ ಹೋಗಿದ್ದ ಅಂದಾಜು 30 ಸಾವಿರ ಕೂಲಿ ಕಾರ್ಮಿಕರು ವಾಪಸ್ಸಾಗಿದ್ದಾರೆ. ದುಡಿಯುವ ಕೈಗೆ ಉದ್ಯೋಗ ಕೊಡುವ ಕೆಲಸ ನಡೆಯುತ್ತಿರುವುದು ಒಂದೆಡೆ ಸಂತಸವಿದ್ದರೆ, ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ವೇಳೆ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ, ಮಾಸ್ಕ್ ಸುರಕ್ಷಿತ ನಿಯಮ ಪಾಲಿಸಿ, ಕಾಮಗಾರಿ ನಡೆಸಬೇಕೆಂದು ಸರ್ಕಾರದ ಸೂಚನೆಯಿದೆ.

ಇದನ್ನೂ ಓದಿ: Chiranjeevi Sarja Passed Away: ಸ್ಯಾಂಡಲ್​ವುಡ್​ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವು

ಆದರೀಗ, ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ನಿನ್ನೆ ಗುಳೇದಗುಡ್ಡ ತಾಲೂಕಿನ ಲಿಂಗಾಪೂರ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯ ಕೂಲಿ ಕಾರ್ಮಿಕರಿಗೆ ಸಾಕ್ಷರತಾ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಸಿಇಓ ಗಂಗೂಬಾಯಿ ಮಾನಕರ್ ಸಾಮಾಜಿಕ ಅಂತರ ಮರೆತಿದ್ದ ಘಟನೆ ನಡೆದಿತ್ತು. ಕೂಲಿ ಕಾರ್ಮಿಕರನ್ನು ಗುಂಪು ಗುಂಪಾಗಿ ಕುಳ್ಳಿರಿಸಿಕೊಂಡು ಕಾರ್ಯಕ್ರಮ ಮಾಡುವ ಮೂಲಕ ಸಾಮಾಜಿಕ ಅಂತರ ಉಲ್ಲಂಘಿಸಿದ್ದರು. ಸರ್ಕಾರದ ಆದೇಶ ಪಾಲಿಸಬೇಕಾಗಿದ್ದ ಜವಾಬ್ದಾರಿಯುತ ಅಧಿಕಾರಿಯಿಂದ ಕೊರೋನಾ ಸುರಕ್ಷಿತ ನಿಯಮ ಪಾಲನೆಯಾಗದಿರುವುದು ದುರದೃಷ್ಟಕರವೆನ್ನುವಂತಾಗಿತ್ತು. ತಮ್ಮ ಕಣ್ಣೇದುರೆ ನೂರಾರು ಕಾರ್ಮಿಕರು ಗುಂಪು ಗುಂಪಾಗಿ ಕುಳಿತುಕೊಂಡಿದ್ದರೂ ಸಿಇಓ ಸಾಕ್ಷರತಾ ಕಾರ್ಯಕ್ರಮದಲ್ಲಿ ಅದೆಂತಹ ಸಾಕ್ಷರತಾ ಪಾಠ ಮಾಡಿದರು ಎನ್ನುವುದು ಯಕ್ಷ ಪ್ರಶ್ನೆಯಾಗಿತ್ತು.ಇಂದೂ ಅದೇ ರೀತಿ ಎಡವಟ್ಟಿಗೆ ಮತ್ತೆ ಬಾಗಲಕೋಟೆ ಸಿಇಓ ಗಂಗೂಬಾಯಿ ಮಾನಕರ್ ಸಾಕ್ಷಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ನಡೆಯುತ್ತಿದ್ದ ಉದ್ಯೋಗ ಖಾತರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಕೂಲಿ ಕಾರ್ಮಿಕರೊಂದಿಗೆ ಸಮಾಲೋಚನೆ ನೆಪದಲ್ಲಿ ಗುಂಪು ಗುಂಪಾಗಿ ನಿಂತು ಫೋಟೋ ತೆಗೆಯಿಸಿ ಕೊಂಡಿದ್ದಾರೆ. ಅಲ್ಲದೆ ಗಂಗೂಬಾಯಿ ಮಾನಕರ್ ಕನಿಷ್ಠ ಪಕ್ಷ ಮಾಸ್ಕ್ ಹಾಕಿಕೊಂಡಿಲ್ಲ. ಹಾಗೆಯೇ  ಕೂಲಿ ಕಾರ್ಮಿಕರು ಮಾಸ್ಕ್ ಹಾಕಿಕೊಂಡಿಲ್ಲ. 460ಕ್ಕೂ ಹೆಚ್ಚು ಕೂಲಿ ಕಾರ್ಮಿಕರೊಂದಿಗೆ ಗುಂಪು ಗುಂಪಾಗಿ ನಿಂತಿರುವ ಫೋಟೋ ಇದೀಗ ವೈರಲ್ ಆಗಿದೆ.ಕೆಲ ಕೂಲಿ ಕಾರ್ಮಿಕರು ಮಾಸ್ಕ್ ಹಾಕಿಕೊಂಡಿದ್ದು ಬಿಟ್ಟರೇ ಬಹುತೇಕ ಕಾರ್ಮಿಕರು ಮಾಸ್ಕ್ ಹಾಕಿಕೊಂಡಿಲ್ಲ.ಕೊರೋನಾ ಸಂಕಷ್ಟದಲ್ಲೂ ಸಿಇಓ ಗಂಗೂಬಾಯಿ ಮಾನಕರ್ ಕಾಮಗಾರಿ ಪರಿಶೀಲನೆ ನೆಪದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಈ ರೀತಿ ಫೋಟೋ ತೆಗೆಸಿಕೊಂಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಉದ್ಯೋಗ ಖಾತರಿ ಯೋಜನೆ ಕೂಲಿ ಕಾರ್ಮಿಕರಿಗೆ ಕೆಲಸದ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಆಗಾಗ ಕೈತೊಳೆದುಕೊಳ್ಳುವ ಬಗ್ಗೆ ಸುರಕ್ಷಿತ ಕ್ರಮಗಳ ಬಗ್ಗೆ ತಿಳಿ ಹೇಳಬೇಕಿತ್ತು. ಕೊರೋನಾ ಸೋಂಕು ಹರಡುವುದು ಹೇಗೆ, ತಡೆಯಲು ಏನು ಮಾಡಬೇಕು. ಜೊತೆಗೆ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಅಂತರದೊಂದಿಗೆ ಕೆಲಸ ಮಾಡುವದರ ಬಗ್ಗೆ ಅರಿವು ಮೂಡಿಸುವತ್ತ ಗಮನ ಹರಿಸಬೇಕಿತ್ತು. ಆದರೆ ಪದೇ ಪದೇ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ಗೊತ್ತಿದ್ದರೂ ಜವಾಬ್ದಾರಿ ಸ್ಥಾನದಲ್ಲಿದ್ದು,ಮಾದರಿಯಾಗಬೇಕಿದ್ದ ಅಧಿಕಾರಿ ಹೀಗೇಕೆ ಪದೇ ಪದೇ ಕೊರೊನಾ ಸುರಕ್ಷಿತ ನಿಯಮ ಉಲ್ಲಂಘಿಸುತ್ತಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ.

ಏನೇ ಆಗಲಿ ಇನ್ಮೇಲಾದರೂ ಸಿಇಓ ಗಂಗೂಬಾಯಿ ಮಾನಕರ್ ಕೊರೋನಾ ಸುರಕ್ಷಿತ ನಿಯಮ ಪಾಲಿಸುವತ್ತ ಗಮನ ಹರಿಸಬೇಕಿದೆ. ಇಲ್ಲವಾದರೆ ಪ್ರಜ್ಞಾವಂತ ನಾಗರಿಕರ ಕೆಂಗಣ್ಣಿಗೆ ಗುರಿಯಾಗುವದರಲ್ಲಿ ಎರಡು ಮಾತಿಲ್ಲ.
First published: June 7, 2020, 7:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading