• Home
  • »
  • News
  • »
  • district
  • »
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಕ್ರಾಂತಿ; ಸಿಟಿಯಿಂದ ಹಳ್ಳಿಗೆ ಬಂದು ಕೃಷಿ ಮಾಡುತ್ತಿರುವ ಯುವಕರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಕ್ರಾಂತಿ; ಸಿಟಿಯಿಂದ ಹಳ್ಳಿಗೆ ಬಂದು ಕೃಷಿ ಮಾಡುತ್ತಿರುವ ಯುವಕರು

ಕೃಷಿಯಲ್ಲಿ ತೊಡಗಿರುವ ಯುವಕರು.

ಕೃಷಿಯಲ್ಲಿ ತೊಡಗಿರುವ ಯುವಕರು.

ಹೀಗಾಗಿ ಹಲವಾರು ದಿನಗಳಿಂದ ಮನೆಯಲ್ಲೇ ಇದ್ದ ಯುವಕರ ತಂಡ ಗದ್ದೆಗಿಳಿದು ಕೃಷಿ ಮಾಡುತ್ತಿದ್ದಾರೆ ಮನೆಯ ಹಿರಿಯರ ಮಾರ್ಗದರ್ಶನದಂತೆ ಕೋಣಗಳನ್ನು ಹಿಡಿದು ಎಕರೆಗಟ್ಟಲೇ ಗದ್ದೆಯನ್ನು ಹೂಳುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಇದರ ಜೊತೆಗೆ ಪೈರು ನೆಟ್ಟು ಸಮೃದ್ದ ಕೃಷಿಗೆ ಮುನ್ನುಡಿ ಬರೆದಿದ್ದಾರೆ.

ಮುಂದೆ ಓದಿ ...
  • Share this:

ಅವರೆಲ್ಲಾ ಹಳ್ಳಿಯಿಂದ ನಗರಕ್ಕೆ ಬಂದು ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದವರು. ಇನ್ನು ಕೆಲವರು ಸ್ವಂತ ಉದ್ಯೋಗದ ಹೆಸರಲ್ಲಿ ಜೀವನ ಸಾಗಿಸುತ್ತಿದ್ದ ಯುವಕರು. ಆದ್ರೆ ಈ ಬಾರಿ ಜಗತ್ತನ್ನೇ ಕಾಡಿದ ಮಹಾಮಾರಿ ಕೊರೋನಾ ಕಾರಣದಿಂದ ಹಲವರ ಉದ್ಯೋಗಕ್ಕೆ ಕುತ್ತು ಬಂದ್ರೆ, ಇನ್ನೊಂದಷ್ಟು ಜನರ ಉದ್ಯಮವೇ ನಷ್ಟಕ್ಕೆ ಸಿಲುಕಿ ತತ್ತರಿಸಿದೆ. ಹೀಗಾಗಿ ಅವ್ರೆಲ್ಲಾ ಮತ್ತೆ ಕೃಷಿ ಬದುಕಿನತ್ತ ಮುಖ ಮಾಡಿದ್ದಾರೆ. ಹಳ್ಳಿಯಲ್ಲಿ ರೈತನಾಗಿಯೇ ಇರೋದು ವಾಸಿ ಅಂತ ಗದ್ದೆ ಕೆಲಸಕ್ಕೆ ಇಳಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಗ್ರಾಮದ ನೂರ್ತಾಡಿ ಗುತ್ತಿನ ಮನೆ. ಹಲವಾರು ವರ್ಷಗಳಿಂದ ಇಲ್ಲಿನ ಹತ್ತಾರು ಕುಟುಂಬಗಳಿಗೆ ಕೃಷಿಯೇ ಜೀವನದ ಆಧಾರ. ಆದ್ರೆ ಮನೆಯ ಮಕ್ಕಳು ಮಾತ್ರ ಆಧುನಿಕತೆಗೆ ಮನ ಸೋತು ಕೃಷಿ ಬದುಕಿನತ್ತ ಮನಸ್ಸು ಮಾಡದೇ ನಗರ ಜೀವನ ಹರಸಿ ಸಿಟಿಯತ್ತ ಹೊರಟವರು. ರೈತರ ಮನೆಯಲ್ಲೇ ಹುಟ್ಟಿದರೂ ಉದ್ಯೋಗ, ಉದ್ಯಮ ಅಂತ ಹೋದವರು. ಹೀಗಾಗಿ ಎಕರೆಗಟ್ಟಲೇ ಕೃಷಿ ಭೂಮಿಯಲ್ಲಿ ಆ ಊರಿನ ಹಿರಿಯರೇ ಇಂದಿಗೂ ಕೃಷಿ ಮಾಡಿಕೊಂಡು ಬರ್ತಿದ್ದಾರೆ.

ಆದರೆ, ಈ ಬಾರಿ ಮಾತ್ರ ಕೃಷಿ ಗದ್ದೆಗಳಲ್ಲಿ ಮನೆಯ ಹಿರಿಯರ ಜೊತೆ ಯುವಕರ ದಂಡು ಕೂಡ ಇತ್ತು. ಗದ್ದೆಯನ್ನ ಹೂಳೂತ್ತಾ, ಕೆಸರಿನಲ್ಲಿ ಕೃಷಿ ಕಾರ್ಯ ಮಾಡ್ತಾ ಹತ್ತಾರು ಯುವಕರ ತಂಡ ಅಕ್ಷರಶಃ ರೈತರಾಗಿ ಬದಲಾಗಿದ್ರು. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಜಗತ್ತನ್ನೇ ಕಾಡ್ತಿರೋ ಮಾರಕ ರೋಗ ಕೊರೋನಾ. ಯುವಕರು ಕೃಷಿಯಿಂದ ವಿಮುಖರಾಗ್ತಿರೋ ಕಾಲದಲ್ಲಿ ನೂರ್ತಾಡಿಯ ಯುವಕರು ಮತ್ತೆ ಗದ್ದೆಗೆ ಇಳಿದ್ದಾರೆ. ಮನೆಯ ಹಿರಿಯರ ಜೊತೆ ಸೇರಿಕೊಂಡು ಕೃಷಿ ಕಾರ್ಯ ‌ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಬೇರೆ ಉದ್ಯೋಗ, ಸ್ವಂತ ಉದ್ಯಮ ಅಂತ ಹೋಗ್ತಿದ್ದ ಯುವಕರಲ್ಲಿ ಕೃಷಿಯತ್ತ ಒಲವು ಮೂಡಿದೆ.

ಇನ್ನು ಈ ಯುವಕರಲ್ಲಿ ಹಲವರು ಕೃಷಿ ಭೂಮಿಯಿದ್ದರೂ ಬದುಕು ಸಾಗಿಸೋಕೆ ಇತರೆ ಕೂಲಿ ಕೆಲಸ, ಕಟ್ಟಡ ಕಾಂಟ್ರಾಕ್ಟ್ ಸೇರಿದಂತೆ ಬೇರೆ ಬೇರೆ ಉದ್ಯೋಗಗಳನ್ನ ಮಾಡಿಕೊಂಡು ಇದ್ದವರು. ಊರಲ್ಲಿ ಕೃಷಿ ಭೂಮಿ ಇದ್ದರು ಅದರತ್ತ ಒಲವು ಕೊಂಚ ಕಡಿಮೆಯೇ ಇತ್ತು. ಪರಿಣಾಮ ಕೃಷಿ ಭೂಮಿಗಳಲ್ಲಿ ಸಂಪ್ರದಾಯದಂತೆ ಮನೆಯ ಹಿರಿಯರೇ ಕೆಲಸ ಮಾಡುತ್ತಿದ್ದರು. ಆದರೆ, ಸದ್ಯ ನಗರದಲ್ಲಿ ಕೆಲಸವಿಲ್ಲ, ಈ ಮಧ್ಯೆ ಕೊರೋನಾ ಭೀತಿಯ ಕಾರಣಕ್ಕೆ ನಗರಗಳಿಗೆ ಬಂದು ಕೆಲಸ ಮಾಡೋದು ಕೂಡ ಆತಂಕ.

ಹೀಗಾಗಿ ಹಲವಾರು ದಿನಗಳಿಂದ ಮನೆಯಲ್ಲೇ ಇದ್ದ ಯುವಕರ ತಂಡ ಗದ್ದೆಗಿಳಿದು ಕೃಷಿ ಮಾಡುತ್ತಿದ್ದಾರೆ ಮನೆಯ ಹಿರಿಯರ ಮಾರ್ಗದರ್ಶನದಂತೆ ಕೋಣಗಳನ್ನು ಹಿಡಿದು ಎಕರೆಗಟ್ಟಲೇ ಗದ್ದೆಯನ್ನು ಹೂಳುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಇದರ ಜೊತೆಗೆ ಪೈರು ನೆಟ್ಟು ಸಮೃದ್ದ ಕೃಷಿಗೆ ಮುನ್ನುಡಿ ಬರೆದಿದ್ದಾರೆ. ಈ ಮೂಲಕ ಅಪ್ಪಟ ರೈತನಿಗೆ ಕೃಷಿಯೇ ಜೀವನಕ್ಕೆ ಆಧಾರ ಅಂತ ತೋರಿಸಿಕೊಟ್ಟಿದ್ದಾರೆ

Published by:MAshok Kumar
First published: